ಪ್ರಧಾನಿ ಮೋದಿಯನ್ನು ಟೀಕಿಸಿದ ಜನಪದ ಗಾಯಕ ಕೋವನ್ ಬಂಧನ, ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿನ ಮೂಲಕ ಟೀಕಿಸಿದ ಕಾರಣಕ್ಕಾಗಿ ತಮ್ಮನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿರುವ ತಮಿಳು ಜನಪದ ಗಾಯಕ ಕೋವನ್, ತಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ. ಏನಾಯಿತು? ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿನ ಮೂಲಕ ಟೀಕಿಸಿದ ಕಾರಣಕ್ಕಾಗಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಖಂಡಿಸಿರುವ ತಮಿಳು ಜನಪದ ಗಾಯಕ ಕೋವನ್ ತಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.

ಗುಂಪುಗಳ ನಡುವೆ ದ್ವೇಷ ಉಂಟುಮಾಡುವಂತಹ ಹಾಡನ್ನು ಕೋವನ್ ರಚಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಿರುಚ್ಚಿ ನಗರ ಪೊಲೀಸರು ಶುಕ್ರವಾರ ಕೋವನ್ ಅವರನ್ನು ಬಂಧಿಸಿದ್ದರು. ಕೆಲ ದಿನಗಳ ಹಿಂದೆ , ತಮಿಳುನಾಡಿನಲ್ಲಿ ಆಯೋಜಿಸಿದ್ದ ರಾಮರಾಜ್ಯ ರಥಯಾತ್ರೆಯ ಸಂದರ್ಭದಲ್ಲೂ ಕೋವನ್, ಮೋದಿ ಜೊತೆಗೆ ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ ಬಗ್ಗೆಯೂ ಟೀಕೆ ಮಾಡಿದ್ದರು. ತಮ್ಮ ಹಾಡಿನ ಮೂಲಕ ಟೀಕೆಗಳನ್ನು ವ್ಯಕ್ತಪಡಿಸುವ ಕೋವನ್, ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್ 153 (ದಂಗೆಗೆ ಪ್ರಚೋದನೆ), ಸೆಕ್ಷನ್ 503 (ಅಪರಾಧ ನಡೆಸುವ ಉದ್ದೇಶ), ಸೆಕ್ಷನ್ 504 (ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ಕೆಲವೇ ಗಂಟೆಗಳ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಮಾ.24ರಂದು ಕಾವೇರಿ ವಿಚಾರವಾಗಿ 'ಮಕ್ಕಲ್ ಅಥಿಕಾರಾಮ್' ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೋವನ್ ತಮ್ಮ ಹಾಡಿನ ಮೂಲಕ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ರಾಯಾಯಣವನ್ನು ಟೀಕಿಸಿದ್ದರು. ಇದು ಹಿಂಸಾಚಾರವನ್ನು ಪ್ರಚೋದಿಸುವಂತಿದ್ದು, ಕೋವನ್ ವಿರುದ್ಧ ಕ್ರಮ ಕೈಗೊಳ್ಳುವಂತೆ, ತಿರುಚ್ಚಿ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ ಎನ್ ಗೌತಮ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೋವನ್ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದರು.

ಇತ್ತೀಚೆಗೆ ವಿರೋಧಪಕ್ಷಗಳ ವಿರೋಧದ ನಡುವೆಯೂ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ರಥಯಾತ್ರೆಯ ವಿರುದ್ಧವೂ ಹಾಡಿನ ಮೂಲಕ ಕೋವನ್ ಟೀಕೆ ಮಾಡಿದ್ದರು. ಈ ಹಾಡು ಯೂಟ್ಯೂಬ್‌ನಲ್ಲಿ ವೈರಲ್ ಆಗಿತ್ತು. ತಮ್ಮ ಬಂಧನದ ಕುರಿತಂತೆ ಮಾಧ್ಯಮಗಳಿಗೆ ವಿವರಿಸಿರುವ ಕೋವನ್, “ನನ್ನ ಮನೆಯ ಸುತ್ತ ಪೊಲೀಸರು ಮಫ್ತಿಯಲ್ಲಿ ತಿರುಗಾಡುತ್ತಿದ್ದರು. ಈ ಬಗ್ಗೆ ಸುಳಿವು ಸಿಕ್ಕ ಕೂಡಲೇ ನನ್ನ ಮಡದಿ ಮನೆ ಬಾಗಿಲನ್ನು ಭದ್ರಪಡಿಸಿದರು. ಸ್ಥಳಕ್ಕೆ ನನ್ನ ವಕೀಲರು ಹಾಗೂ ಸ್ಥಳೀಯ ನಿವಾಸಿಗಳು ಕೂಡ ಆಗಮಿಸಿದರು. ಬಳಿಕ ಪೊಲೀಸರು ಬಾಗಿಲನ್ನು ತೆರೆದು ನನ್ನನ್ನು ಬಂಧಿಸಿ ಕರೆದೊಯ್ದರು,” ಎಂದು ವಿವರಿಸಿದ್ದಾರೆ. ಬಂಧನದ ವೇಳೆ ಕೋವನ್ ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವಿನ ವಾಗ್ವಾದದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಬಂಧನ ಬಳಿಕ ವಿಚಾರಣೆಗಾಗಿ ಕೆ ಕೆ ನಗರ ಪೊಲೀಸ್ ಠಾಣೆಗೆ ಕೋವನ್ ಅವರನ್ನುಕರೆದೊಯ್ಯಲಾಯಿತು. ಬಳಿಕ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ, ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತು.

ತಮಿಳುನಾಡಿನಲ್ಲಿ ಹೇಗೆ ರಾಮರಾಜ್ಯ ರಥಯಾತ್ರೆ ನಡೆಸಲಾಗುತ್ತದೆ ಎಂದು ತಮ್ಮ ಹಾಡಿನಲ್ಲಿ ಪ್ರಶ್ನಿಸಿರುವ ಕೋವನ್, ರಾಮರಾಜ್ಯ ರಥಯಾತ್ರೆ ಎಂದರೆ ಅದು ಮೋದಿ ರಾಜ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಅಂಬಾನಿ ಹಾಗೂ ಅದಾನಿಗೆ ಸಬ್ಸಿಡಿ ನೀಡುವ ಮೋದಿ, ಮುಗ್ಧ ಹಿಂದೂಗಳಿಗೆ ಮಾತ್ರ ಹಸುವಿನ ಮೂತ್ರ ಕೊಡುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ಹಾಡಿನ ಮೂಲಕ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಟೀಕಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2015ರ ಅಕ್ಟೋಬರ್‌ನಲ್ಲಿ ಕೋವನ್ ವಿರುದ್ಧ ಚೆನ್ನೈ ಸಿಟಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More