ಕಾಂಗ್ರೆಸ್‌ ಟಿಕೆಟ್‌ ಮಂತ್ರ: ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’

ವಾರವಿಡೀ ದೆಹಲಿಯತ್ತಲೇ ದೃಷ್ಟಿ ನೆಟ್ಟು ಚುನಾವಣಾ ಟಿಕೆಟ್‌ಗಾಗಿ ಕಾತರಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಕಾಯುವಿಕೆ ಅಂತೂ ಕೊನೆಗೊಂಡಿದೆ. ಸದ್ಯ 218 ಕ್ಷೇತ್ರಗಳಿಗೆ ಪ್ರಕಟವಾಗಿರುವ ಅಭ್ಯರ್ಥಿಗಳ ಈ ಪಟ್ಟಿಯು, ಪಕ್ಷದ ಎಲ್ಲ ಮುಖಂಡರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನದಂತೆ ಕಾಣುತ್ತಿದೆ

‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ...’ -ಇದು ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ‌ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನೋಡಿದೊಡನೆಯೇ ಮೇಲುನೋಟಕ್ಕೆ ಮೂಡುವ ಭಾವನೆ. ಇತ್ತೀಚಿನ ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷವು 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಪಟ್ಟಿಯನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ಜಿ ಪರಮೇಶ್ವರ್‌, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಿತ ರಾಜ್ಯದ ಬಹುತೇಕ ಹಿರಿಯ ಕಾಂಗ್ರೆಸ್‌ ನಾಯಕರು ಕಳೆದ ಕೆಲವು ದಿನಗಳಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್‌ ಚುನಾವಣಾ ಸಮಿತಿಯೊಟ್ಟಿಗೆ ನಡೆಸಿದ್ದ ಟಿಕೆಟ್‌ ಕಸರತ್ತು ಕಡೆಗೂ ಅಂತ್ಯ ಕಂಡಿದೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ರಾಜ್ಯದ ಯಾವುದೇ ಒಬ್ಬ ನಾಯಕರ ಕೈ ಮೇಲಾಗದಂತೆ ಎಚ್ಚರ ವಹಿಸಿದ ಹೈಕಮಾಂಡ್‌, ‘ಒಗ್ಗೂಡಿ ಹೆಜ್ಜೆ ಹಾಕಿದರೆ ಮಾತ್ರ ಗೆಲುವು ಸಾಧ್ಯ’ ಎನ್ನುವುದನ್ನು ಅರಿತು ಟಿಕೆಟ್‌ ಹಂಚಿಕೆ ವಿಷಯದಲ್ಲಿ ಸಾಕಷ್ಟು ಅಳೆದು ಸುರಿದು ಪಟ್ಟಿ ಅಂತಿಮಗೊಳಿಸಿದಂತೆ ಮೇಲುನೋಟಕ್ಕೆ ಕಾಣುತ್ತಿದೆ.

ಮೇಲುನೋಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಹೆಚ್ಚಿನ ಮನ್ನಣೆ ದೊರೆತಿದ್ದರೂ, ಸಂಪೂರ್ಣವಾಗಿ ಅವರ ಕೈ ಮೇಲಾಗಿಲ್ಲ. ಸ್ವತಃ ಸಿದ್ದರಾಮಯ್ಯನವರನ್ನು ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಿ ಚಾಮುಂಡೇಶ್ವರಿಯಿಂದ ಮಾತ್ರವೇ ಸ್ಪರ್ಧೆ ಮಾಡುವಂತೆ ಮನವೊಲಿಸಲಾಗಿದೆ. ಇನ್ನು, ಅವರ ಆಪ್ತ ಲೋಕೋಪಯೋಗಿ ಸಚಿವ ಎಚ್‌ ಸಿ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ಗೆ ಟಿಕೆಟ್‌ ನೀಡಿಕೆ ವಿಚಾರದಲ್ಲಿಯೂ ಹೈಕಮಾಂಡ್‌ ಮಣಿದಿಲ್ಲ. ಉಳಿದಂತೆ, ಜೆಡಿಎಸ್‌ನಲ್ಲಿ ಬಂಡಾಯವೆದ್ದು, ಪಕ್ಷ‌ ತೊರೆದು ಕಾಂಗ್ರೆಸ್ ಸೇರಿದ್ದ ಎಲ್ಲ ಏಳು ಬಂಡಾಯ ಶಾಸಕರಿಗೂ ಟಿಕೆಟ್‌ ನೀಡಲಾಗಿದೆ, ಅದೇ ರೀತಿ, ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದ ಬಳ್ಳಾರಿ ಗಣಿ ನಾಡಿನ ಮೂವರು ಶಾಸಕರಿಗೆ ಹಾಗೂ ಅಶೋಕ್ ಖೇಣಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಆ ಮೂಲಕ ಮುಖ್ಯಮಂತ್ರಿಯವರು ಈ ಎಲ್ಲ ಶಾಸಕರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಹೈಕಮಾಂಡ್‌ ಅನುವು ಮಾಡಿಕೊಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ, ಹಿರಿಯ ನಾಯಕರಾದ ಖರ್ಗೆ, ಪರಮೇಶ್ವರ್ ಅವರೇ ಆಗಲೀ, ಯಾರ ಕೈ ಕೂಡ ‘ಕೈ’ ಪಾಳೆಯದಲ್ಲಿ ಮೇಲಾಗಲು ಬಿಡದೆ, ಎಲ್ಲರಿಗೂ ತಮ್ಮ-ತಮ್ಮ ಸಾಮರ್ಥ್ಯ, ಮಿತಿಗಳ ಅನುಸಾರ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿದೆ. ಸಿದ್ದರಾಮಯ್ಯನವರ ಎರಡು ಕ್ಷೇತ್ರಗಳಲ್ಲಿನ ಸ್ಪರ್ಧೆಯ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಎದ್ದಿದ್ದ ಚರ್ಚೆಗಳನ್ನು ಸರಿಯಾಗಿ ಗ್ರಹಿಸಿದಂತೆ ಕಂಡ ಹೈಕಮಾಂಡ್‌, ಅವರನ್ನು ಅವರೇ ಇಚ್ಛೆ ಪಟ್ಟು ಸ್ಪರ್ಧಿಸಲು ಮುಂದಾದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೀಮಿತವಾಗುವಂತೆ ನೋಡಿಕೊಂಡಿದೆ. ಬಾದಾಮಿಯಿಂದ ಸ್ಪರ್ಧಿಸಿ ಸುಲಭಕ್ಕೆ ಗೆಲುವು ದಕ್ಕಿಸಿಕೊಳ್ಳಬಹುದು ಎನ್ನುವ ಚಿಂತನೆಗೆ ಮನ್ನಣೆ ನೀಡದೆ, ಮುಖ್ಯಮಂತ್ರಿಯಾದವರು ತಮ್ಮ ಜನಪ್ರಿಯತೆಯನ್ನು ಪಣಕ್ಕಿಟ್ಟು ಜಿದ್ದಾಜಿದ್ದಿನ ಕಣದಿಂದಲೇ ಸ್ಪರ್ಧಿಸಿ ಗೆಲ್ಲಬೇಕು ಎನ್ನುವ ಪಕ್ಷದೊಳಗಿನ ಹಿರಿಯ ನಾಯಕರ ಚಿಂತನೆಗೆ ಮನ್ನಣೆ ನೀಡಿದೆ. ಈವರೆಗೆ ಸಿದ್ದರಾಮಯ್ಯನವರನ್ನೇ ಕೇಂದ್ರವಾಗಿರಿಸಿಕೊಂಡು ಚುನಾವಣಾ ಯಾತ್ರೆಗಳನ್ನು ಕೈಗೊಂಡಿರುವುದಕ್ಕೂ, ಟಿಕೆಟ್‌ ಹಂಚಿಕೆ ವಿಚಾರಕ್ಕೂ ನೇರವಾಗಿ ಸಂಬಂಧ ಕಲ್ಪಿಸಬೇಕಿಲ್ಲ. ಆಡಳಿತದ ವಿಷಯದಲ್ಲಿ ರಾಜ್ಯ ಸರ್ಕಾರ ಸಾಧಿಸಿರುವ ಯಶಸ್ಸಿಗೆ ಹೇಗೆ ಮುಖ್ಯಮಂತ್ರಿ ವಾರಸುದಾರರೋ, ಅದೇ ರೀತಿ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಕಟ್ಟುವ ಹೈಕಮಾಂಡ್‌ನ ಚಿಂತನೆಗೇ ಮನ್ನಣೆ ಎನ್ನುವುದನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತವರ ತಂಡ ಸ್ಪಷ್ಟಪಡಿಸಿರುವಂತೆ ಕಾಣುತ್ತಿದೆ.

ಭಾನುವಾರ ಮೂರು ಗಂಟೆಯ ವೇಳೆಗೆಲ್ಲ ಪಕ್ಷವು ಟಿಕೆಟ್ ಹಂಚಿಕೆ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗಿತ್ತಾದರೂ, ಬಿಡುಗಡೆಯಾಗಿದ್ದು ಮಾತ್ರ ರಾತ್ರಿ 8ರ ನಂತರವೇ. ಮೊದಲಿಗೆ ಎಐಸಿಸಿ ಮಾಧ್ಯಮ ಕಚೇರಿಯಲ್ಲಿ ರಾಜ್ಯದ ಎಲ್ಲ ಹಿರಿಯ ನಾಯಕರನ್ನೊಳಗೊಂಡಂತೆ ಕೇಂದ್ರ ಚುನಾವಣಾ ಸಮಿತಿಯು ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸುತ್ತದೆ ಎನ್ನುವ ಮಾಹಿತಿ ಇತ್ತು. ಆದರೆ, ಒಮ್ಮೆ ರಾಹುಲ್‌ ಗಾಂಧಿಯವರೊಂದಿಗಿನ ಸಭೆ ಮುಗಿದು ಪಟ್ಟಿ ಅಂತಿಮಗೊಂಡ ನಂತರ, ಮುಖ್ಯಮಂತ್ರಿಯವರು ನೇರ ವಿಮಾನ ನಿಲ್ದಾಣದತ್ತ ಸಾಗುವುದರೊಂದಿಗೆ ವೇಳಾಪಟ್ಟಿ ಬದಲಾಯಿತು. ಮುಖ್ಯಮಂತ್ರಿಯವರು ಪಟ್ಟಿಯ ವಿಚಾರದಲ್ಲಿ ತಮಗೆ ಹಿನ್ನೆಡೆಯಾಗಿದೆ ಎಂದು ಭಾವಿಸಿದ್ದಾರೆ ಎಂದು ಅವರ ನಿರ್ಗಮನವನ್ನು ವ್ಯಾಖ್ಯಾನಿಸುವ ಪ್ರಯತ್ನ ಒಂದೆಡೆ ನಡೆದರೆ, ಅಮಾವಾಸ್ಯೆಯಾದ ಕಾರಣ ಭಾನುವಾರ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್‌ ಮನಸ್ಸು ಮಾಡುತ್ತಿಲ್ಲ ಎನ್ನುವ ಮತ್ತೊಂದು ವ್ಯಾಖ್ಯಾನವೂ ಕೇಳಿಬರತೊಡಗಿತ್ತು! ಅಂತಿಮವಾಗಿ, ತಡವಾಗಿಯಾದರೂ ಪಟ್ಟಿ ಪ್ರಕಟವಾಗುವ ಮೂಲಕ ಊಹಾಪೋಹಗಳಿಗೆ ತೆರೆ ಬಿತ್ತು.

ಇದನ್ನೂ ಓದಿ : ಕಾಂಗ್ರೆಸ್ ಪಟ್ಟಿ ಪ್ರಕಟ; ಒಂದು ಕ್ಷೇತ್ರದಲ್ಲಿ ಮಾತ್ರ ಸಿದ್ದರಾಮಯ್ಯ ಸ್ಪರ್ಧೆ

ಪಟ್ಟಿಯಲ್ಲಿ ಮೇಲುನೋಟಕ್ಕೆ ಗೋಚರಿಸುವ ಪ್ರಮುಖ ಅಂಶಗಳು

  • ಗೆಲುವನ್ನೇ ಮಾನದಂಡವಾಗಿಸಿಕೊಂಡಿರುವ ಹೈಕಮಾಂಡ್‌, ಗೆಲುವಿನ ಸಾಧ್ಯತೆ ಕ್ಷೀಣ ಎನಿಸಿರುವ 10 ಶಾಸಕರಿಗೆ ಟಿಕೆಟ್‌ ನಿರಾಕರಿಸಿದೆ.
  • ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯ ರಾಮಲಿಂಗಾ ರೆಡ್ಡಿ, ವಸತಿ ಸಚಿವ ಎಂ ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ, ಕಾನೂನು ಸಚಿವ ಜಯಚಂದ್ರ ಅವರ ಪುತ್ರ ಸಂತೋಷ್‌ ಹಾಗೂ ಈ ಹಿಂದಿನಂತೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ಟಿಕೆಟ್‌ ಪಡೆದಿರುವ ಪ್ರಮುಖ ಅಪ್ಪ-ಮಕ್ಕಳ ಜೋಡಿಯಾಗಿದ್ದಾರೆ. ಇಂತಹದೇ‌ ನಿರೀಕ್ಷೆಯಲ್ಲಿದ್ದ ಲೋಕೋಪಯೋಗಿ ಸಚಿವ ಎಚ್‌ ಸಿ ಮಹದೇವಪ್ಪ ಹಾಗೂ ಅವರ ಪುತ್ರ ಸುನಿಲ್‌ ಬೋಸ್‌ ಅವರ ಬೇಡಿಕೆಯನ್ನು ಹೈಕಮಾಂಡ್‌ ಪುರಸ್ಕರಿಸಿಲ್ಲ. ಸುನಿಲ್‌ ಬೋಸ್‌ಗೆ ಟಿಕೆಟ್‌ ನೀಡಲಾಗಿಲ್ಲ. ಉಳಿದಂತೆ ಹಿರಿಯ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೆ ಟಿಕೆಟ್‌ ನೀಡಲಾಗಿದೆ.
  • ಟಿಕೆಟ್‌ ಬೇಡ ಎಂದಿದ್ದ ಎಂ ಆರ್ ಸೀತಾರಾಂ, ಎಚ್ ಎಂ ರೇವಣ್ಣ ಅವರನ್ನು ಕ್ರಮವಾಗಿ ಮಲ್ಲೇಶ್ವರಂ ಹಾಗೂ ಚನ್ನಪಟ್ಟಣದಿಂದ ಕಣಕ್ಕಿಳಿಸಲಾಗಿದೆ. ಅಂಬರೀಶ್‌ ಅವರನ್ನು ಮಂಡ್ಯದಿಂದ ಸ್ಪರ್ಧಿಸಲು ಮನವೊಲಿಸಲಾಗಿದೆ.
  • ನಾಗಥಾಣ, ಸಿಂಧಗಿ, ರಾಯಚೂರ, ಕಿತ್ತೂರು, ಶಾಂತಿನಗರ, ಮೇಲುಕೋಟೆ ಕ್ಷೇತ್ರಗಳಲ್ಲಿ ಟಿಕೆಟ್‌ ಹಂಚಿಕೆ ಮಾಡಿಲ್ಲ. ನಾಗಥಾಣದಲ್ಲಿ ಹಾಲಿ ಶಾಸಕ ರಾಜು ಅಲಗೂರು ಅಂತಿಮ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತನಾಡಿರುವುದರಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ದಾಖಲೆ ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಒಂದೆರಡು ದಿನಗಳಲ್ಲಿ ಟಿಕೆಟ್‌ ಅಂತಿಮಗೊಳಿಸಲಾಗುವುದು ಎಂದು ತಿಳಿದುಬಂದಿದೆ. ರಾಯಚೂರಿನಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಭೋಸರಾಜ್‌ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಜಾಫರ್‌ ಷರೀಫ್‌ ಅವರ ಅಳಿಯ ಸಯದ್‌ ಯಾಸೀನ್‌ ಅವರ ನಡುವೆ ತುರುಸಿನ ಸ್ಪರ್ಧೆ ಇದೆ. ಇಲ್ಲಿಂದ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕು ಎನ್ನುವ ಬೇಡಿಕೆಯೂ ಇದೆ. ಹಾಗಾಗಿ, ಸದ್ಯಕ್ಕೆ ಈ ಕ್ಷೇತ್ರವನ್ನೂ ಆಖೈರು ಮಾಡಲಾಗಿಲ್ಲ. ಇನ್ನು ಶಾಂತಿನಗರದ ಹಾಲಿ ಶಾಸಕ ಹ್ಯಾರಿಸ್‌ ತಮ್ಮ ಪುತ್ರ ನಲಪಾಡ್‌‌ನ ಪಬ್‌ ದಾಂಧಲೆಗೆ ತಾವು ಬೆಲೆ ತೆತ್ತಂತೆ ತೋರುತ್ತಿದೆ. ಮೇಲುಕೋಟೆಯಲ್ಲಿ ದಿವಂಗತ ರೈತ ನಾಯಕ ಪುಟ್ಟಣ್ಣಯ್ಯ ಅವರ ಪುತ್ರ ಸ್ವರಾಜ್ ಇಂಡಿಯಾದಿಂದ ಸ್ಪರ್ಧಿಸುತ್ತಿರುವ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕಾಂಗ್ರೆಸ್‌ ಬೆಂಬಲಿಸಲಿದೆ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More