ಮಾಧ್ಯಮದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಇಲ್ಲಿವೆ ಹದಿನೈದು ಸೂತ್ರ

ತಮ್ಮ ಕಾರ್ಯಕ್ಷೇತ್ರ, ವ್ಯಾಪ್ತಿ ಮತ್ತು ಬದ್ಧತೆಯಿಂದ ವಿಮುಖಗೊಳ್ಳುತ್ತಿರುವ ಭಾರತೀಯ ಮಾಧ್ಯಮಗಳನ್ನು ಎಚ್ಚರಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಈ ಮಧ್ಯೆ, ಮಾಧ್ಯಮಗಳನ್ನು ಅಗ್ನಿಪರೀಕ್ಷೆಗೆ ಒಡ್ಡಿರುವ ಪೇಯ್ಡ್‌ ನ್ಯೂಸ್‌ ಪಿಡುಗನ್ನು ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ

ಸ್ವಸ್ಥ ಸಮಾಜದ ಕನಸು ಈಡೇರಬೇಕಾದರೆ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ, ಬದ್ಧತೆ, ಸಮಾಜಮುಖಿ ಧೋರಣೆ ಮುಖ್ಯವಾಗುತ್ತದೆ. ಇದು ಮಾಧ್ಯಮಕ್ಕೂ ಅನ್ವಯಿಸುವ ಮಾತು. ಜಗತ್ತಿನಾದ್ಯಂತ ನಾನಾ ಕಾರಣಗಳಿಂದ ವಿಶ್ವಾಸಾರ್ಹತೆ ಕೊರತೆ ಎದುರಿಸುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಸುಧಾರಣೆ ತರುವುದು ಅಷ್ಟು ಸುಲಭದ ಮಾತಲ್ಲ. ಅಪಾರ ತಾಂತ್ರಿಕ ಬೆಳವಣಿಗೆ, ಮಾಧ್ಯಮ ಸಂಸ್ಥೆಗಳ ಜಾಗತೀಕರಣ, ಸುದ್ದಿ ಪೂರೈಕೆದಾರರು ಮತ್ತು ಉತ್ಪಾದಕರು (ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಜಾಹೀರಾತುದಾರರು ಮತ್ತು ಹಿತಾಸಕ್ತಿ ಗುಂಪುಗಳು) ಮಾಧ್ಯಮ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಸಾಧಿಸಿರುವುದು ಮಾಧ್ಯಮ ಸುಧಾರಣೆಯ ಹಾದಿಯನ್ನು ಮತ್ತಷ್ಟು ಕ್ಲಿಷ್ಟವಾಗಿಸಿದೆ. ಅಂದಮಾತ್ರಕ್ಕೆ ಸುಧಾರಣೆ ಕಷ್ಟವಲ್ಲ.

ಹಿಂದೆಂದಿಗಿಂತಲೂ ವಿಭಿನ್ನ ಮತ್ತು ಪರೀಕ್ಷಾತ್ಮಕ ಸಂದರ್ಭಕ್ಕೆ ಮುಖಾಮುಖಿಯಾಗಿರುವ ಮಾಧ್ಯಮ ಸಂಸ್ಥೆಗಳು ಸ್ವನಿಯಂತ್ರಣ ಹೇರಿಕೊಳ್ಳುವುದರಿಂದ ಪೇಯ್ಡ್‌ ನ್ಯೂಸ್‌ ನಿರ್ಬಂಧಿಸಬಹುದು ಎಂದು ಹೇಳುವುದು ಪರಿಣಾಮಕಾರಿ ಎನಿಸುವುದಿಲ್ಲ ಎಂಬುದಾಗಿ ‘ಪೇಯ್ಡ್‌ ನ್ಯೂಸ್‌: ಹೌ ಕರಪ್ಷನ್‌ ಇನ್‌ ದಿ ಇಂಡಿಯನ್‌ ಮೀಡಿಯಾ ಅಂಡರ್‌ಮೈನ್ಸ್ ಡೆಮಾಕ್ರಸಿ’ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಜೊತೆಗೆ ಮಾಧ್ಯಮ, ಸಾಮಾಜಿಕ, ರಾಜಕೀಯ, ಚುನಾವಣಾ ಆಯೋಗ ಸೇರಿದಂತೆ ಸಮಾಜದ ವಿವಿಧ ಸ್ತರಗಳ ತಜ್ಞರ ಸಲಹೆ, ಸೂಚನೆಗಳನ್ನು ಆಧರಿಸಿ ಪೇಯ್ಡ್‌ ನ್ಯೂಸ್‌ನಿಂದ ಮಾಧ್ಯಮವನ್ನು ಬಿಡುಗಡೆಗೊಳಿಸುವುದು ಮತ್ತು ಅದನ್ನು ಮತ್ತಷ್ಟು ಪ್ರಜಾಸತ್ತಾತ್ಮಕಗೊಳಿಸುವ ಸಂಬಂಧ ಒಂದಷ್ಟು ಸಲಹೆಗಳನ್ನು ವರದಿಯಲ್ಲಿ ಚರ್ಚಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ಪೇಯ್ಡ್‌ ನ್ಯೂಸ್‌ ಸರಣಿಯಲ್ಲಿ ಚದುರಿದಂತೆ ಪ್ರಸ್ತಾಪಿಸಲಾಗಿದ್ದು, ಕೆಲವೊಂದನ್ನು ಚುನಾವಣಾ ಆಯೋಗ ಅಳವಡಿಸಿಕೊಂಡಿದೆ. ಆದರೆ, ಅವುಗಳನ್ನು ಮತ್ತಷ್ಟು ಪರಿಣಾಮಕಾರಿ ಆಗಿಸಬೇಕಿದೆ. ಪೇಯ್ಡ್‌ ನ್ಯೂಸ್‌ ನಿಯಂತ್ರಣ ಸಂಬಂಧ ವರದಿಯಲ್ಲಿ ಉಲ್ಲೇಖಿಸಿರುವ ಸಲಹೆಗಳತ್ತ ಮತ್ತೊಮ್ಮೆ ಗಂಭೀರ ನೋಟ ಹರಿಸುವುದು ಸೂಕ್ತ ಎಂಬ ನಿಟ್ಟಿನಲ್ಲಿ ಅವುಗಳನ್ನು ಕೆಳಗೆ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ : ಪೇಯ್ಡ್‌‌ ನ್ಯೂಸ್‌; ಇದುವರೆಗೂ ಅನರ್ಹ ಆಗಿದ್ದು ಕೇವಲ ಇಬ್ಬರು ಶಾಸಕರು!
 • ಸುದ್ದಿಯನ್ನು ಸಂಪೂರ್ಣವಾಗಿ ಪ್ರಜಾಸತ್ತಾತ್ಮಕಗೊಳಿಸಬೇಕು. ಸುದ್ದಿ ಮತ್ತು ಜಾಹೀರಾತನ್ನು ಪ್ರತ್ಯೇಕಿಸುವ ವಿಶೇಷ ಸೂಚನೆಗಳನ್ನು ಕಡ್ಡಾಯವಾಗಿ ಪ್ರತಿಯೊಂದು ಪತ್ರಿಕೆಯೂ ಪ್ರಕಟಿಸಬೇಕು ಎಂದು ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಕಡ್ಡಾಯವಾಗಿ ಜಾರಿಗೆ ಬರಬೇಕು. ಎಲ್ಲ ಸಂದರ್ಭದಲ್ಲೂ ಸುದ್ದಿಗೆ ಕ್ರೆಡಿಟ್‌ ಲೈನ್‌ ನೀಡುವ ಮೂಲಕ ಸುದ್ದಿ ಮತ್ತು ಜಾಹೀರಾತಿಗೆ ವ್ಯತ್ಯಾಸ ಇರುವಂತೆ ನೋಡಿಕೊಳ್ಳಬೇಕು.
 • ಪತ್ರಿಕೆ ಅಥವಾ ಟಿವಿಯಲ್ಲಿ ರಾಜಕಾರಣಿ/ರಾಜಕೀಯ ಪಕ್ಷ ಹೊಂದಿರುವ ಷೇರು ಅಥವಾ ಆರ್ಥಿಕ ಸಂಬಂಧಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ನಿರ್ದಿಷ್ಟ ಪತ್ರಿಕೆ ಅಥವಾ ಟಿವಿಯಲ್ಲಿ ರಾಜಕಾರಣಿಯ ಸಂದರ್ಶನ ಅಥವಾ ಸಕಾರಾತ್ಮಕ ವರದಿ ಪ್ರಕಟವಾದರೆ ಆತ ಆ ಪತ್ರಿಕೆ/ಟಿವಿಯ ಜೊತೆ ಹೊಂದಿರುವ ಸಂಬಂಧವನ್ನು ಬಹಿರಂಗಪಡಿಸಬೇಕು.
 • ಪ್ರಜಾಪ್ರತಿನಿಧಿ ಕಾಯ್ದೆ-೧೯೫೧ರ ಸೆಕ್ಷನ್‌ ೧೨೩ಕ್ಕೆ ಸಂಸತ್‌ನಲ್ಲಿ ತಿದ್ದುಪಡಿ ಮಾಡಿ, ಟಿವಿ ಅಥವಾ ಪತ್ರಿಕೆಯಲ್ಲಿ ಪ್ರಚಾರಕ್ಕಾಗಿ ಹಣ ನೀಡುವ ಪ್ರಕ್ರಿಯೆಯನ್ನು ಚುನಾವಣಾ ಅಕ್ರಮ ಅಥವಾ ಭ್ರಷ್ಟಾಚಾರ ಎಂದು ಪರಿಗಣಿಸಿ ಅದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಬೇಕು.
 • ಪೇಯ್ಡ್‌ ನ್ಯೂಸ್‌ ಬಗ್ಗೆ ಸ್ವಯಂಪ್ರೇರಿತವಾಗಿ ಅಥವಾ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೃತ್ತಿಪರ ಪತ್ರಕರ್ತರನ್ನೊಳಗೊಂಡ ಪತ್ರಕರ್ತರ ಸಮಿತಿ ‘ಪಿಸಿಐ’ ರಚಿಸಬೇಕು. ಸಮಿತಿಯ ಶಿಫಾರಸುಗಳನ್ನು ಚುನಾವಣಾ ಆಯೋಗ ಮತ್ತು ಸರ್ಕಾರಿ ಸಂಸ್ಥೆಗಳು ಜಾರಿಗೊಳಿಸುವಂತಾಗಬೇಕು.
 • ಚುನಾವಣಾ ಸಂದರ್ಭದಲ್ಲಿ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಅಧಿಕಾರಿಗಳು, ವೃತ್ತಿಪರರು ಮತ್ತು ಸ್ಥಳೀಯ ಗಣ್ಯರನ್ನೊಳಗೊಂಡ ಮಾಧ್ಯಮ ನಿಗಾ ಸಮಿತಿ ರಚಿಸಬೇಕು.
 • ಪೇಯ್ಡ್‌ ನ್ಯೂಸ್‌ ಸಂಬಂಧ ದೂರು ನೀಡಲು ಪತ್ರಕರ್ತರಿಗೆ ಪಿಸಿಐ ಸೂಕ್ತ ವೇದಿಕೆ ಕಲ್ಪಿಸಬೇಕು. ಶಿಳ್ಳೆಗಾರರಾಗಿ ಕೆಲಸ ಮಾಡುವವರ ಗೌಪ್ಯತೆ ಕಾಪಾಡುವ ಜವಾಬ್ದಾರಿಯನ್ನು ಪಿಸಿಐ ಹೊರಬೇಕು.
 • ಅರೆಕಾಲಿಕ ವರದಿಗಾರರು ಮತ್ತು ವರದಿಗಾರರು ಸಂಸ್ಥೆಗೆ ಜಾಹೀರಾತು ತರುವ ಪ್ರಕ್ರಿಯೆಯಲ್ಲಿ ತೊಡಗದಂತೆ ಮಾಧ್ಯಮ ಸಂಸ್ಥೆಗಳು ನೋಡಿಕೊಳ್ಳಬೇಕು.
 • ಕೆಲಸದ ಸ್ಥಳದಲ್ಲಿನ ವಾತಾವರಣ ಮತ್ತು ಪತ್ರಕರ್ತರ ಉದ್ಯೋಗ ಭದ್ರತೆ ಸುಧಾರಿಸುವುದರ ಜೊತೆಗೆ ಸಂಸ್ಥೆಯಲ್ಲಿ ಸಂಪಾದಕೀಯ ಬಳಗದ ಪಾವಿತ್ರ್ಯತೆ ಎತ್ತರಿಸಿದರೆ ಪೇಯ್ಡ್‌ ನ್ಯೂಸ್‌ ಅನ್ನು ಒಂದು ಮಟ್ಟಿಗೆ ತಹಬಂದಿಗೆ ತರಬಹುದು.
 • ಅರೆನ್ಯಾಯಿಕ ಮಂಡಳಿಯಾದ ಪಿಸಿಐಗೆ ತಪ್ಪಿತಸ್ಥ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಳ್ಳುವ ಅಧಿಕಾರವಿದೆಯೇ ವಿನಾ ಶಿಕ್ಷಿಸಿಸುವ ಅಧಿಕಾರವಿಲ್ಲ. ಅಲ್ಲದೆ, ಪಿಸಿಐ ವ್ಯಾಪ್ತಿಯು ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಪರ್ಯಾಯ ಸಂಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ಟಿವಿ, ರೇಡಿಯೋ ಮತ್ತು ವೆಬ್‌ಸೈಟ್‌ಗಳ ವಿರುದ್ಧ ದೂರು ಸ್ವೀಕರಿಸುವ ಅಧಿಕಾರವನ್ನು ಪಿಸಿಐಗೆ ನೀಡಬೇಕು. ಇದರ ಜೊತೆಗೆ ಅಕ್ರಮ ಮತ್ತು ವ್ಯಾಪ್ತಿ ಮೀರಿ ವರ್ತಿಸುವ ಪತ್ರಕರ್ತ ಅಥವಾ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನಾನ್ಮಕ ಅಧಿಕಾರವನ್ನು ಪಿಸಿಐಗೆ ನೀಡಬೇಕು.
 • ಪ್ರೆಸ್‌ ಕೌನ್ಸಿಲ್‌ ಕಾಯ್ದೆ-೧೯೭೮ರ ಸೆಕ್ಷನ್‌ ೧೫(೪)ಕ್ಕೆ ತಿದ್ದುಪಡಿ ತರುವ ಪ್ರಸ್ತಾವವು ಹಲವು ದಿನಗಳಿಂದ ಮೂಲೆಗುಂಪಾಗಿದೆ. ಈ ತಿದ್ದುಪಡಿ ಮಾಡುವ ಮೂಲಕ ಹಲ್ಲಿಲ್ಲದ ಹಾವಿನಂತಾಗಿರುವ ಪಿಸಿಐಗೆ ಹೆಚ್ಚಿನ ಅಧಿಕಾರ ಕಲ್ಪಿಸಬೇಕು.
 • ಪೇಯ್ಡ್‌ ನ್ಯೂಸ್‌ ಪತ್ತೆಹಚ್ಚುವ ಕೆಲಸವನ್ನು ಚುನಾವಣಾ ಆಯೋಗವು ನಿರಂತರವಾಗಿ ಮಾಡಬೇಕು. ಲೋಪ ಕಂಡುಬಂದರೆ ಅಂಥವರ ವಿರುದ್ಧ ಆಯೋಗ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಭಾರತೀಯ ದಂಡಸಂಹಿತೆ (ಐಪಿಸಿ) ಅಡಿ ಕ್ರಮ ಕೈಗೊಳ್ಳಲು ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಾಯ ಪಡೆದುಕೊಳ್ಳಬೇಕು.
 • ಚುನಾವಣೆ ಸಂದರ್ಭದಲ್ಲಿ ನೀತಿಸಂಹಿತೆ ಜಾರಿಯಾಗುವ ಸಂದರ್ಭದಲ್ಲಿ ಪತ್ರಿಕೆ ಅಥವಾ ಟಿವಿಯ ಸಂಪಾದಕರು ಹಣಕ್ಕಾಗಿ ಯಾವುದೇ ಪಕ್ಷ ಅಭ್ಯರ್ಥಿಯ ಪರವಾಗಿ ಸುದ್ದಿ ಪ್ರಕಟಿಸುವುದಿಲ್ಲ ಎಂಬ ಘೋಷಣೆ ಹೊರಡಿಸಬೇಕು. ಇದರಿಂದ ಪತ್ರಿಕೆಯು ಯಾವುದೇ ರಾಜಕೀಯ ಹಿತಾಸಕ್ತಿಗೆ ಕೆಲಸ ಮಾಡುವುದಿಲ್ಲ ಎಂಬ ಸಂದೇಶ ರವಾನೆಯಾಗುವುದಲ್ಲದೆ, ನೈತಿಕವಾಗಿ ಸಂಸ್ಥೆಯ ಸಿಬ್ಬಂದಿಯನ್ನು ಬೆಸೆಯುತ್ತದೆ.
 • ಮತದಾನಕ್ಕೆ ಎರಡು ದಿನ ಬಾಕಿ ಇದೆ ಎನ್ನುವಾಗಲೇ ಅಭ್ಯರ್ಥಿ ಕುರಿತಾದ ಪ್ರಚಾರ ಸಂಬಂಧಿತ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಟಿವಿ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಇದೇ ನಿಯಮವನ್ನು ಪತ್ರಿಕೆಗಳಿಗೂ ಅನ್ವಯಿಸುವ ಕುರಿತು ಸಂಬಂಧಿತರ ನಡುವೆ ಚರ್ಚೆಯಾಗಬೇಕು.
 • ಪೇಯ್ಡ್‌ ನ್ಯೂಸ್‌ ಪಿಡುಗು ತೊಲಗಿಸುವ ಸಂಬಂಧ ಈಗಾಗಲೇ ಜಾರಿಯಲ್ಲಿರುವ ಭಾರತೀಯ ದಂಡಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ಅವುಗಳನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕೆಲಸವಾಗಬೇಕಿದೆ.
 • ಮಾಹಿತಿ ಮತ್ತು ಪ್ರಸಾರ ಇಲಾಖೆ, ಭಾರತೀಯ ಪತ್ರಿಕಾ ಮಂಡಳಿ, ಚುನಾವಣಾ ಆಯೋಗ, ಸಂಪಾದಕರು ಮತ್ತು ಪತ್ರಕರ್ತ ಒಕ್ಕೂಟ ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಮಾವೇಶ, ಕಾರ್ಯಾಗಾರ, ಸೆಮಿನಾರ್‌ ಮತ್ತು ಪ್ರಚಾರ ಆಂದೋಲನಗಳನ್ನು ನಡೆಸಿ ಮಾಧ್ಯಮದಲ್ಲಿ ಭ್ರಷ್ಟಾಚಾರ ತಡೆಯುವುದು ಮತ್ತು ಪ್ರಮುಖವಾಗಿ ಪೇಯ್ಡ್‌ ನ್ಯೂಸ್‌ಗೆ ಕಡಿವಾಣ ಹಾಕುವ ಸಂಬಂಧ ಉಪಾಯಗಳನ್ನು ಕಂಡುಕೊಳ್ಳಬೇಕಿದೆ.

ಮೇಲಿನ ಎಲ್ಲ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಿದರೆ ಮಾಧ್ಯಮಗಳಲ್ಲಿನ ಅಕ್ರಮಗಳನ್ನು ಸಂಪೂರ್ಣವಾಗಿ ತೊಡೆದುಹಾಕಲಾಗದೆ ಇದ್ದರೂ ಗಣನೀಯವಾಗಿ ತಗ್ಗಿಸಬಹುದಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More