ಪರದೇಶದಲ್ಲಿ ಹಿಂದಿಗೆ ನೀರೆರೆಯುತ್ತಿರುವವರು ಇತರ ತಾಯ್ನುಡಿಗಳನ್ನು ಮರೆತರೇ?

ಹಿಂದಿ ಹೇರಿಕೆಯ ಯತ್ನಗಳು ವಿದೇಶಿ ನೆಲದಲ್ಲೂ ನಡೆಯುತ್ತಿವೆ. ಈಗಾಗಲೇ ಆಡಳಿತ ನಡೆಸಿದವರು ಹಾಗೂ ಪ್ರಸ್ತುತ ಅಧಿಕಾರದಲ್ಲಿ ಇರುವವರಿಗೆ ಉಳಿದ ಭಾಷೆಯ ಬಗೆಗೆ ಕಾಳಜಿ ಇದ್ದಂತಿಲ್ಲ. ಈ ನಡುವೆ, ವಿನಾಶದ ಅಂಚಿನಲ್ಲಿರುವ ಭಾಷೆಗಳ ಸ್ಥಿತಿ ಯಾರೂ ಕೇಳಿಸಿಕೊಳ್ಳದ ಕಾಡಿನ ಕೂಗಾಗಿ ಉಳಿದಿದೆ

ದೇಶದಲ್ಲಿ ಒಟ್ಟು 29 ರಾಜ್ಯಗಳಿದ್ದು, ಅವುಗಳಲ್ಲಿ ಹಿಂದಿ ಮಾತನಾಡುವ ರಾಜ್ಯಗಳ ಸಂಖ್ಯೆ ಹತ್ತು. ಉತ್ತರ- ಮಧ್ಯ ಭಾರತದಲ್ಲಿ ಹಿಂದಿಯ ಪ್ರಭಾವ ಹೆಚ್ಚು. ವಿದೇಶಗಳಲ್ಲಿ ಅಂದರೆ, ಮಾರಿಷಸ್‌ನ ಹಿಂದಿಯಲ್ಲಿ ಭೋಜಪುರಿ ಮತ್ತು ಫ್ರೆಂಚ್ ಭಾಷೆಯ ಮಿಶ್ರಣವೇ ಹೆಚ್ಚು. ಫಿಜಿ ಹಿಂದಿಯು ಅವಧ್ ಮತ್ತು ಭೋಜಪುರಿ ಭಾಷೆಗಳ ಹದವಾದ ಬೆರಕೆ. ದಕ್ಷಿಣ ಆಫ್ರಿಕಾದಲ್ಲೂ ಇವೆರಡೂ ಭಾಷೆಗಳ ಮಿಶ್ರಣವನ್ನೇ ಹಿಂದಿ ಎಂದು ಕರೆಯಲಾಗುತ್ತದೆ. ಶ್ರೀಲಂಕಾ ಮತ್ತು ಸಿಂಗಪುರದಲ್ಲಿ ತಮಿಳಿನ ಪ್ರಭಾವ ಹೆಚ್ಚು. ಬಾಂಗ್ಲಾದೇಶದಲ್ಲಿ ಬೆಂಗಾಳಿ ಅಧಿಕೃತ ಭಾಷೆ. ಭಾರತದಿಂದ ವಲಸೆ ಹೋದವರು ಬ್ರಿಟನ್, ಮಧ್ಯಪ್ರಾಚ್ಯ ಹಾಗೂ ಅಮೆರಿಕದಲ್ಲಿ ಬೆಂಗಾಳಿಯನ್ನು ಆಡುತ್ತಾರೆ. ಆದರೆ, ಸಂಖ್ಯಾಬಲದಲ್ಲಿ ಹಿಂದಿ ಮುಂದಿದೆ. ದೇಶದ ಪ್ರತಿಶತ 100 ಮಂದಿಯಲ್ಲಿ 50 ಜನ ಹಿಂದಿ ಮಾತನಾಡುತ್ತಾರೆ. ಇಂಗ್ಲಿಷ್ ಮಾತನಾಡುವವರ ಸಂಖ್ಯೆ ಶೇ.12ರಷ್ಟು. ಉಳಿದ ಯಾವ ಭಾಷೆಯೂ ಶೇಕಡವಾರು ಲೆಕ್ಕದಲ್ಲಿ ಎರಡಂಕಿ ದಾಟುವುದಿಲ್ಲ.

ಈ ಸಂಖ್ಯಾಬಲವನ್ನೇ ನೆಚ್ಚಿಕೊಂಡು ಹಿಂದಿಯನ್ನು ದೇಶದ ಅಧಿಕೃತ ಭಾಷೆ ಮಾಡಲು ಹೊರಟರೆ ಹಲವು ತಾಯ್ನುಡಿಗಳ ಭಾರತಕ್ಕೆ ಪೆಟ್ಟು ನೀಡಿದಂತೆ. ದಕ್ಷಿಣ ಭಾರತದಲ್ಲಿ ಇಂಗ್ಲಿಷ್ ಭಾಷೆಗೆ ಇರುವ ಆದ್ಯತೆ ಹಿಂದಿಗೆ ಇಲ್ಲ. ಮೇಲಾಗಿ, ದ್ರಾವಿಡ ಚಳವಳಿಯ ದಟ್ಟ ಪ್ರಭಾವದಿಂದ ಪ್ರೇರಿತವಾದ ತಮಿಳುನಾಡು ಹಿಂದಿಯನ್ನು ಎಂದಿಗೂ ತನ್ನದೆಂದು ಭಾವಿಸಿಲ್ಲ. 1937ರಲ್ಲಿಯೇ ಅಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಯ ಕಹಳೆ ಮೊಳಗಿತು. ಪಶ್ಚಿಮ ಬಂಗಾಳದಲ್ಲಿ ಹಿಂದಿ ವಿರುದ್ಧ ಆಂದೋಲನಗಳು ನಡೆದಿವೆ. ಹಿಂದಿ-ಉರ್ದು ನಡುವಿನ ಜಟಾಪಟಿಗೂ ಅನೇಕ ವರ್ಷಗಳ ಇತಿಹಾಸವಿದೆ. ಕರ್ನಾಟಕ ಸೇರಿದಂತೆ ತಾಯ್ನುಡಿಯ ಸೆಳೆತ ದಟ್ಟವಾಗಿರುವ ಬಹುತೇಕ ಹಿಂದಿಯೇತರ ರಾಜ್ಯಗಳು ಅದರ ಯಜಮಾನಿಕೆಯನ್ನು ವಿರೋಧಿಸುತ್ತ ಬಂದಿವೆ. ದೇಶದಲ್ಲಿ ಉಪಭಾಷೆಗಳೂ ಸೇರಿದಂತೆ 2,500ಕ್ಕೂ ಹೆಚ್ಚು ವೈವಿಧ್ಯಮಯ ಭಾಷೆಗಳಿವೆ. ಒಂದೊಂದಕ್ಕೂ ಅದರದೇ ಆದ ಪರಂಪರೆ ಇದೆ. ಇದು ಬಹುಭಾಷೆಗಳ ಬಣ್ಣಬಣ್ಣದ ಹೂವರಳಿದ ನೆಲ.

ಆದರೆ, ಅಧಿಕಾರದಲ್ಲಿರುವವರು ಸಂಖ್ಯಾಬಲವೊಂದನ್ನೇ ನೆಪವಾಗಿಟ್ಟುಕೊಂಡು ಪರದೇಶಗಳಲ್ಲಿ ಹಿಂದಿಯನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ. ವಿಶ್ವಸಂಸ್ಥೆಯಲ್ಲಿ ಹಿಂದಿಗೆ ಅಥವಾ ಬೇರಾವುದೇ ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಪ್ರಸ್ತಾವವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಇತ್ತೀಚೆಗೆ ಹೇಳಿದ್ದಾರೆ ನಿಜ. ಆದರೆ, ಅಂಥದ್ದೊಂದು ಪ್ರಯತ್ನ ಜನವರಿಯಲ್ಲಿ ನಡೆದಿತ್ತು ಎಂಬುದಕ್ಕೆ ದಾಖಲೆಗಳಿವೆ. ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ದೊರೆಯುವುದಾದರೆ, ಅದಕ್ಕಾಗಿ 400 ಕೋಟಿ ರುಪಾಯಿಗಳಷ್ಟು ಹೊರೆ ಹೊರಲು ಸಿದ್ಧ ಎಂಬರ್ಥದ ವಾದವನ್ನು ಆಗ ಅವರು ಮಂಡಿಸಿದ್ದರು. ಆದರೆ, ನಿಯಮಾವಳಿಗಳ ಕಾರಣಕ್ಕೆ ಹಿಂದಿ ಭಾಷೆಗೆ ಮನ್ನಣೆ ನೀಡುವ ಪ್ರಸ್ತಾವ ಬಿದ್ದುಹೋಗಿತ್ತು. ಹಿಂದಿಯನ್ನು ಭಾರತದಲ್ಲಿ ಮಾತ್ರ ಅಧಿಕೃತ ಭಾಷೆಯನ್ನಾಗಿ ಮಾಡಿದರೆ ಹಿಂದಿ ಮಾತನಾಡುವ ಮಾರಿಷಸ್, ಫಿಜಿ ದೇಶಗಳ ಕತೆಯೇನು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದರು. ಅಲ್ಲದೆ, ಈ ಮೊದಲೇ ಹೇಳಿದಂತೆ ತಮಿಳು ಮತ್ತು ಬೆಂಗಾಳಿ ಭಾಷೆಗಳ ದಟ್ಟ ಪ್ರಭಾವ ಬೇರೆ ದೇಶಗಳಲ್ಲೂ ಇದೆ.

ಇದನ್ನೂ ಓದಿ : ಚೀನಾದಲ್ಲಿ ‘ಹಿಂದಿ ಮೀಡಿಯಂ’ ಸದ್ದು; ಮೂರು ದಿನದಲ್ಲಿ ೧೦೦ ಕೋಟಿ ಗಳಿಕೆ

ಬಿಜೆಪಿ ಆಡಳಿತಾವಧಿಯಲ್ಲಿ ಮಾತ್ರ ಹೀಗಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆಯೂ ಇಂತಹ ಯತ್ನಗಳು ನಡೆದಿದ್ದವು. 1998ರಲ್ಲಿ ಭಾರತ ಮತ್ತು ಮಾರಿಷಸ್ ದೇಶಗಳ ನಡುವೆ ನಡೆದ ಒಪ್ಪಂದವೊಂದರಲ್ಲಿ ವಿಶ್ವ ಹಿಂದಿ ಸಚಿವಾಲಯವೊಂದನ್ನು ಸ್ಥಾಪಿಸುವ ಪ್ರಸ್ತಾವನೆಗೆ ಚಾಲನೆ ನೀಡಲಾಗಿತ್ತು. ಸಚಿವಾಲಯದ ಕಚೇರಿ ಸ್ಥಾಪನೆಗೆ 14 ಕೋಟಿಯಷ್ಟು ಹಣ ವಿನಿಯೋಗಿಸಿತ್ತು. 2006ರಲ್ಲಿ ಯುಪಿಎ ಸರ್ಕಾರದ ನೇತೃತ್ವದಲ್ಲಿ ವಿಶ್ವ ಹಿಂದಿ ದಿನಾಚರಣೆಗೆ ಚಾಲನೆ ನೀಡಲಾಯಿತು. ಇದೆಲ್ಲದರ ಮುಂದುವರಿಕೆ ಎಂಬಂತೆ ಕಳೆದ ತಿಂಗಳು ಅಂದರೆ, ಮಾರ್ಚ್‌ನಲ್ಲಿ ಮಾರಿಷಸ್‌ನ ಹಿಂದಿ ಸಚಿವಾಲಯ ಕಟ್ಟಡಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, “ಭಾಷೆ ಮತ್ತು ಸಂಸ್ಕೃತಿ ಒಟ್ಟೊಟ್ಟಿಗೆ ಸಾಗುತ್ತವೆ. ಭಾಷೆ ಅಳಿದರೆ ಸಂಸ್ಕೃತಿಯೂ ಅಳಿಯುತ್ತದೆ. ಇದನ್ನು ವಿದೇಶದಲ್ಲಿರುವ ಮಂದಿ ಮರೆಯಬಾರದೆಂದೇ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ,” ಎಂದಿದ್ದರು.

“ಭಾಷೆ ಅಳಿದರೆ ಸಂಸ್ಕೃತಿಯೂ ಅಳಿಯುತ್ತದೆ,” ಎಂದ ಸುಷ್ಮಾ ಸ್ವರಾಜ್, ಅದನ್ನು ಹಿಂದಿಯನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಹೇಳಿದರೇ ಅಥವಾ ದೇಶದಲ್ಲಾಡುವ 2,500 ಭಾಷೆಗಳನ್ನೂ ಗಮನಿಸಿ ಆಡಿದರೇ ಎಂಬುದು ಪ್ರಶ್ನಾರ್ಹ. ಏಕೆಂದರೆ, ವಿದೇಶಾಂಗ ಸಚಿವಾಲಯ ಹಿಂದಿಗೆ ನೀಡಿದಷ್ಟು ಮನ್ನಣೆಯನ್ನು ಸಂವಿಧಾನದ 8ನೇ ಪರಿಚ್ಚೇದದಡಿ ಬರುವ ಭಾಷೆಗಳಿಗೂ ನೀಡುತ್ತಿಲ್ಲ. “ಹಿಂದಿಗೆ ಉತ್ತೇಜನ ನೀಡಲು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಂಸ್ಥೆ ಐಸಿಸಿಆರ್‌ಗೆ ಸೂಚಿಸಲಾಗಿದೆ,” ಎಂದು ಏ.5ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸ್ವರಾಜ್ ಸ್ವತಃ ಹೇಳಿದ್ದಾರೆ.

ಐಸಿಸಿಆರ್ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂಬತ್ತು ಹಿಂದಿ ಅಧ್ಯಯನ ಪೀಠಗಳಿಗಾಗಿ ಹಣ ವಿನಿಯೋಗಿಸುತ್ತಿದೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ 11 ಹಿಂದಿ ಶಿಕ್ಷಕರ ಖರ್ಚುವೆಚ್ಚವನ್ನು ಅದು ಭರಿಸುತ್ತಿದೆ. ವಿದೇಶಗಳಲ್ಲಿ ಪಾಠ ಮಾಡುವ ಮೂರು ಸಂಸ್ಕೃತ ಶಿಕ್ಷಕರಿಗೆ ಹಾಗೂ ಇಬ್ಬರು ತಮಿಳು ಶಿಕ್ಷಕರಿಗೆ ಪ್ರಾಯೋಜಕತ್ವ ಒದಗಿಸುತ್ತಿದೆ. ತನ್ನ 14 ಕೇಂದ್ರಗಳಲ್ಲಿ 25 ಸ್ಥಳೀಯ ಹಿಂದಿ ಬೋಧಕರಿಗೆ ಆದ್ಯತೆ ನೀಡುತ್ತಿದೆ. ಇಂತಹ ತರಗತಿಗಳು ಹಿಂದಿ ಮಾತೃಭಾಷೆಯಲ್ಲದ ಮಲೇಷ್ಯಾ ಮತ್ತು ಶ್ರೀಲಂಕಾದಲ್ಲಿ ಕೂಡ ನಡೆಯುತ್ತಿವೆ. ದಕ್ಷಿಣ ಆಫ್ರಿಕಾದಂತಹ ಕೆಲವು ದೇಶಗಳಲ್ಲಿ ಬೆಂಗಾಳಿ, ಉರ್ದುವಿಗೆ ಪ್ರೋತ್ಸಾಹ ನೀಡುತ್ತಿದ್ದರೂ ಅದು ಸಂಸ್ಥೆಯ ಮುತುವರ್ಜಿಯಿಂದಲ್ಲ ಬದಲಾಗಿ, ಸ್ಥಳೀಯ ಬೆಂಗಾಳಿ ಅಥವಾ ಉರ್ದು ಸಂಘಟನೆಗಳ ಒತ್ತಾಯದಿಂದ.

ಹಾಗೆಂದು ಹಿಂದಿ ಭಾಷೆಗೆ ಪ್ರೋತ್ಸಾಹ ನೀಡಬಾರದು ಎಂದರ್ಥವಲ್ಲ. ಅಧಿಕಾರಿಗಳು ಇತರ ಭಾಷೆಗಳ ಬಗ್ಗೆ ತೋರಿರುವ ಅಸಡ್ಡೆಯ ಬಗ್ಗೆಯಷ್ಟೇ ಬೇಸರ. ಯುನೆಸ್ಕೋ ಮಾಹಿತಿ ಪ್ರಕಾರ, ಭಾರತದ 191 ಭಾಷೆಗಳು ಅಳಿವಿನಂಚಿನಲ್ಲಿವೆ. ವಿನಾಶದ ಭೀತಿಯಲ್ಲಿರುವ ಭಾಷೆಗಳು, ಖಚಿತವಾಗಿ ನಾಶವಾಗಲಿರುವ ಭಾಷೆಗಳು, ತೀವ್ರಗತಿಯಲ್ಲಿ ನಾಶವಾಗುತ್ತಿರುವ ಭಾಷೆಗಳು ಹಾಗೂ ಗಂಭೀರ ಸ್ಥಿತಿಯಲ್ಲಿರುವ ಭಾಷೆಗಳು ಹೀಗೆ ನಾಲ್ಕು ವಿಭಾಗಗಳಾಗಿ ವಿನಾಶದಂಚಿನಲ್ಲಿರುವ ಭಾಷೆಗಳ ಪಟ್ಟಿ ನೀಡಿದೆ. 40 ಭಾಷೆಗಳು ಗಂಭೀರ ಸ್ಥಿತಿಯಲ್ಲಿವೆ ಎಂದು ಅದು ಎಚ್ಚರಿಸಿದೆ. ಇವುಗಳಲ್ಲಿ ಅನೇಕವು ಬುಡಕಟ್ಟು ಜನಾಂಗಗಳಿಗೆ ಸೇರಿದ ಅಪರೂಪದ ಭಾಷೆಗಳು. ಅಂಡಮಾನ್ ನಿಕೋಬಾರ್ ರೀತಿಯ ದ್ವೀಪಗಳಲ್ಲಿ ಕೆಲವರು ಸತ್ತರೆ ಅವರಾಡುವ ಭಾಷೆಯೂ ಪ್ರಾಣ ತೊರೆಯುವಂತಹ ಸ್ಥಿತಿ ಇದೆ. ಕರ್ನಾಟಕದ ಕೊರಗ, ಕುರುಬ ಭಾಷೆಗಳೂ ವಿನಾಶದ ಸ್ಥಿತಿ ತಲುಪಿವೆ ಎಂದು ಪಟ್ಟಿ ಹೇಳುತ್ತದೆ.

ಅಳಿವಿನಂಚಿನಲ್ಲಿರುವ ಭಾಷೆಗಳ ಬಗ್ಗೆ ಆಡಳಿತ ನಡೆಸುವವರ ನಿಲುವೇನು? ವಿಶ್ವಸಂಸ್ಥೆಯಲ್ಲಿ ಹಿಂದಿಗೆ ಅಧಿಕೃತ ಮಾನ್ಯತೆ ನೀಡುವ ಅಥವಾ ನೀಡದಿರುವ ಸಂಬಂಧ ಚರ್ಚಿಸುವ ಬದಲು, ಅದೇ ವಿಶ್ವಸಂಸ್ಥೆಯ ಅಂಗವಾದ ಯುನೆಸ್ಕೋ ನೀಡಿದ ಭಾಷೆಗಳ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಉಳಿವಿಗೆ ಶ್ರಮಿಸಬಹುದಲ್ಲವೇ? ಹೀಗಾದಾಗ ಮಾತ್ರ 'ಭಾಷೆ ಅಳಿದರೆ ಸಂಸ್ಕೃತಿಯೂ ಅಳಿಯುತ್ತದೆ' ಎಂಬ ಮಾತಿಗೆ ಅರ್ಥ ಬಂದೀತು. ಫೆ.21ನ್ನು ಲೋಕ ತಾಯ್ನುಡಿಯನ್ನಾಗಿ ಆಚರಿಸುವುದೂ ಸಾರ್ಥಕವಾದೀತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More