ಸಂದರ್ಶನದಲ್ಲಿ ಅಕ್ರಮವಾಗಿ ಹೆಚ್ಚು ಅಂಕ ಪಡೆದು ಉನ್ನತ ಹುದ್ದೆ ಕಬಳಿಸಿದರು

ಕೆಪಿಎಸ್ಸಿಯಲ್ಲಿ ನಡೆದಿದ್ದ ವಿವಿಧ ಸ್ವರೂಪದ ಅಕ್ರಮಗಳಿಗೆ ಕೊನೆಯೇ ಇಲ್ಲದಂತಾಗಿತ್ತು. ಉತ್ತರ ಪತ್ರಿಕೆ ಮೌಲ್ಯಮಾಪನ, ಮೂರನೇ ಮೌಲ್ಯಮಾಪನ ಮತ್ತು ವ್ಯಕ್ತಿತ್ವ ಸಂದರ್ಶನದಲ್ಲೇ ಅತಿ ಹೆಚ್ಚು ಅಕ್ರಮಗಳು ನಡೆದಿದ್ದವು. ವ್ಯಕ್ತಿತ್ವ ಸಂದರ್ಶನದಲ್ಲಿ ಹೇಗೆಲ್ಲಾ ಅಕ್ರಮ ನಡೆದಿತ್ತು ಎಂಬುದರ ವಿವರ ಇಲ್ಲಿದೆ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 1999 ಮತ್ತು 2004ರಲ್ಲಿ ನಡೆಸಿದ್ದ ಕೆಎಎಸ್‌ ಅಧಿಕಾರಿಗಳ ನೇಮಕ ಪ್ರಕರಣ ಕಡೆಗೂ ತಾರ್ಕಿಕ ಅಂತ್ಯ ಕಂಡಿದೆ. ಸ್ವಜನಪಕ್ಷಪಾತ ಸೇರಿದಂತೆ ವಿವಿಧ ಸ್ವರೂಪದಲ್ಲಿ ನಡೆದಿದ್ದ ವ್ಯಾಪಕ ಅಕ್ರಮಗಳ ವಿರುದ್ಧ ಅರ್ಹ ಫಲಾನುಭವಿಗಳು ೧೩ ವರ್ಷಗಳಿಂದ ನಡೆಸಿದ್ದ ಹೋರಾಟಕ್ಕೆ ಜಯ ಲಭಿಸಿದೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಮೂರನೇ ಮೌಲ್ಯಮಾಪನ ಮತ್ತು ವ್ಯಕ್ತಿತ್ವ ಸಂದರ್ಶನದಲ್ಲೇ ಅತಿ ಹೆಚ್ಚು ಅಕ್ರಮಗಳು ನಡೆದಿದ್ದವು. ಇದರಿಂದಾಗಿಯೇ ಬಹುತೇಕ ಅಭ್ಯರ್ಥಿಗಳು ನೇರವಾಗಿ ಉಪ ವಿಭಾಗಾಧಿಕಾರಿ ಹುದ್ದೆಗೇರಿದ್ದರು. ೨೦೦೬ರಲ್ಲಿ ಸೇವೆ ಆರಂಭಿಸಿದ್ದ ಇವರಲ್ಲಿ ಹಲವರು ಐಎಎಸ್‌ ಹುದ್ದೆಗೆ ಬಡ್ತಿ ಹೊಂದಿದ್ದರು. ಹೈಕೋರ್ಟ್‌ ನ ತೀರ್ಪಿನ್ವಯ ಅವರೀಗ ಕೆಳಗಿನ ಹುದ್ದೆಗೆ ಇಳಿಯಬೇಕಿದೆ.

ಇಷ್ಟೆಲ್ಲಾ ಅಕ್ರಮಗಳು ನಡೆದಿದ್ದ ಅವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಡಾ.ಎಚ್‌.ಎನ್.‌ಕೃಷ್ಣ ಅವರು ಅಧ್ಯಕ್ಷರಾಗಿದ್ದರು. ವ್ಯಕ್ತಿತ್ವ ಸಂದರ್ಶನ ಪ್ರಕ್ರಿಯೆಗಳಲ್ಲಂತೂ ಡಾ.ಎಚ್‌.ಎನ್.ಕೃಷ್ಣ ಆದಿಯಾಗಿ ಉಳಿದ ಸದಸ್ಯರೂ ತಮಗಿದ್ದ ವಿವೇಚನಾಧಿಕಾರವನ್ನು ಮನಸೋ ಇಚ್ಛೆ ಬಳಸಿದ್ದರು. ಅಕ್ರಮಗಳು ನಡೆದಿದ್ದೇ ಇಲ್ಲಿ. ಮೌಖಿಕ ಸಂದರ್ಶನಕ್ಕೆ ನಿಗದಿಪಡಿಸಿದ್ದ ೨೦೦ ಅಂಕಗಳ ಪೈಕಿ ಹೆಚ್ಚು ಅಂಕ ಯಾರಿಗೆ ಲಭಿಸುವುದೋ ಅವರು ರ್ಯಾಕಿಂಗ್ ಪಟ್ಟಿಯಲ್ಲಿ ಮೇಲಕ್ಕೆ ಹೋಗಬಹುದು. ಇಲ್ಲಿ ಸದಸ್ಯರು ಮಾಡಿರುವ ಕುಕೃತ್ಯ ಇದೆ ಆಗಿದೆ.

ವ್ಯಕ್ತಿತ್ವ ಸಂದರ್ಶನದಲ್ಲಿ ಗೋಲ್ಮಾಲ್:‌ ರಾಜೇಂದ್ರ (ರಿಜಿಸ್ಟರ್‌ ನಂಬರ್ 500182) ಅವರಿಗೆ  ೨೦೦೫ ಆಗಸ್ಟ್ ೧೩ರಂದು ನಡೆದಿದ್ದ ಸಂದರ್ಶನದಲ್ಲಿ  5 ಮಂದಿ ಸದಸ್ಯರು 100 ಅಂಕಗಳಿಂದ 150ವರೆಗೆ ಅಂಕ ನೀಡಿದ್ದರು.  ಸಂದರ್ಶನ ಸಮಿತಿಯ ನಾಲ್ಕನೆ ಸದಸ್ಯ ಇವರಿಗೆ ಕೊಟ್ಟಿದ್ದು 100 ಅಂಕ ನೀಡಿದ್ದರೇ, ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಅವರು ಒಬ್ಬರೇ 194 ಅಂಕ ನೀಡಿದ್ದರು. ಮಧುಚಂದ್ರ ತೇಜಸ್ವಿ( ರಿಜಿಸ್ಟರ್ ನಂಬರ್ 500893) ಅವರಿಗೆ ಜುಲೈ 18, 2005ರಂದು ಸಂದರ್ಶನ ನಡೆದಿತ್ತು. ಇವರಿಗೆ ಡಾ.ಎಚ್.ಎನ್.ಕೃಷ್ಣ ಅವರೊಬ್ಬರೇ 180 ಅಂಕ ನೀಡಿದ್ದರೇ, ಉಳಿದ 5 ಸದಸ್ಯರೂ  150 ಅಂಕ ನೀಡಿದ್ದರು.

ಜಿ.ಪಿ. ರಘು ಎಂಬುವರಿಗೆ (ರಿಜಿಸ್ಟರ್ ನಂಬರ್‌ 504151)  ಅಗಸ್ಟ್ 13, 2005ರಂದು ನಡೆದಿದ್ದ ಸಂದರ್ಶನದಲ್ಲಿ  ಉಳಿದ 5 ಸದಸ್ಯರೂ 150 ಅಂಕ ನೀಡಿದ್ದರೆ,  ಡಾ.ಎಚ್.ಎನ್.ಕೃಷ್ಣ ಅವರು 174 ಅಂಕ  ನೀಡಿದ್ದರು. ಡಿ.ಆರ್‌. ಪುಷ್ಪಾ (ರಿಜಿಸ್ಟರ್‌ ನಂಬರ್ 508572) ಇವರಿಗೆ ಆಗಸ್ಟ್ 13, 2005ರಂದು ನಡೆದಿದ್ದ ಸಂದರ್ಶನದಲ್ಲಿ ಉಳಿದ 5 ಸದಸ್ಯರೂ 150 ಅಂಕ ನೀಡಿದ್ದರೆ,  ಡಾ.ಎಚ್.ಎನ್.ಕೃಷ್ಣ ಅವರು 168 ಅಂಕ ನೀಡಿದ್ದರು. ಸತ್ಯಭಾಮಾ (ರಿಜಿಸ್ಟರ್ ನಂಬರ್ 519464) ಆಗಸ್ಟ್ 19, 2005ರಲ್ಲಿ ನಡೆದಿದ್ದ ಸಂದರ್ಶನದಲ್ಲಿ  ಉಳಿದ 5 ಸದಸ್ಯರು 150ರಿಂದ 156 ಅಂಕ ನೀಡಿದ್ದರೆ, ಡಾ.ಎಚ್.ಎನ್.ಕೃಷ್ಣ ಅವರೊಬ್ಬರೇ 162 ಅಂಕ ನೀಡಿದ್ದರು.

ಎಸ್‌. ಸವಿತಾ (ರಿಜಿಸ್ಟರ್‌ ನಂಬರ್‌ 506117) ಆಗಸ್ಟ್ 19, 2005ರಂದು ನಡೆದಿದ್ದ ಸಂದರ್ಶನದಲ್ಲಿ ಉಳಿದ 5 ಸದಸ್ಯರು 120 ಅಂಕ ಕೊಟ್ಟಿದ್ದರೆ, ಡಾ.ಎಚ್.ಎನ್.ಕೃಷ್ಣ ಅವರು 144 ಅಂಕ ನೀಡಿದ್ದರು. ಅಲ್ಲದೆ, ಕೆಲ ಅಭ್ಯರ್ಥಿಗಳಿಗೆ ಡಾ.ಎಚ್.ಎನ್.ಕೃಷ್ಣ ಅವರು ಅಂಕಗಳನ್ನೇ ನೀಡಿರಲಿಲ್ಲ. ಬನಶಂಕರಿ (ರಿಜಿಸ್ಟರ್ ನಂಬರ್ 513216)  ಜುಲೈ 8, 2005ರಂದು ನಡೆದಿದ್ದ ಸಂದರ್ಶನದಲ್ಲಿ ಉಳಿದ 4 ಮಂದಿ ಸದಸ್ಯರು 80ರಿಂದ 95 ಅಂಕ, ಜಿ. ಬಸವರಾಜು (ರಿಜಿಸ್ಟರ್ ನಂಬರ್ 511089) ಅವರಿಗೆ  ಉಳಿದ 4 ಸದಸ್ಯರು 55ರಿಂದ 70 ಅಂಕ ನೀಡಿದ್ದರೆ, ಡಾ.ಎಚ್.ಎನ್.ಕೃಷ್ಣ ಅವರು ಒಂದೇ ಒಂದು ಅಂಕವನ್ನೂ ನೀಡಿಲ್ಲ.

ಇವರೊಬ್ಬರಷ್ಟೇ ಅಲ್ಲ, ಉಳಿದ 5 ಸದಸ್ಯರೂ ಇದೇ ಹಾದಿಯನ್ನು ಹಿಡಿದಿದ್ದರು. ಆಗಸ್ಟ್ 13, 2005ರಂದು ನಡೆದಿದ್ದ ಸಂದರ್ಶನದಲ್ಲಿ ಸದಸ್ಯರಾದ ಲಿಲಿಯನ್‌ ಕ್ಸೇವಿಯರ್‌, ಎಚ್.ಎಸ್.ಪಾಟೀಲ್ , ವೆಂಕಟಸ್ವಾಮಿ, ಮೊಹಮದ್ ಅಲಿ ಖಾನ್ ಅವರು ಎಂ.ಬಿ.ರಾಜೇಶ್ ಗೌಡ ಸೇರಿದಂತೆ ಹಲವರಿಗೆ ಒಂದೇ ಒಂದು ಅಂಕವನ್ನೂ ನೀಡಿಲ್ಲ. ಕೃಷ್ಣ ರಾಜೇಂದ್ರ ಭಾರತ್, ಕೃಷ್ಣಕುಮಾರ್ ಬಕಾಲೆ, ಕೃಷ್ಣಕುಮಾರ್, ಆರ್‌.ಎಂ.ಕುಮಾರಸ್ವಾಮಿ ಅವರಿಗೆ ಸದಸ್ಯರಾಗಿದ್ದ ಮೊಹ್ಮದ್ ಆಲಿಖಾನ್ ಅವರು ಒಂದೂ ಅಂಕವನ್ನೂ ನೀಡಿರಲಿಲ್ಲ.

ಕಂಪ್ಯೂಟರ್‌ ಕೈ ಚಳಕ ಹೇಗೆಲ್ಲಾ ನಡೆದಿತ್ತು?: ಅಭ್ಯರ್ಥಿಗಳು ವಾಸ್ತವದಲ್ಲಿ ಗಳಿಸಿದ್ದ ಅಂಕಗಳಿಗೂ, ಕಂಪ್ಯೂಟರ್‌ನಲ್ಲಿ ದಾಖಲಾಗಿದ್ದ ಅಂಕಗಳ ಮಧ್ಯೆ ವ್ಯತ್ಯಾಸ ಕಂಡು ಬಂದಿದ್ದವು. ಕೆಲವರಿಗೆ ಲಾಭವಾಗಿದ್ದರೆ, ಇನ್ನು ಹಲವರಿಗೆ ನಷ್ಟವೂ ಆಗಿತ್ತು. ವ್ಯತ್ಯಾಸದ ಅಂಕಗಳಿಂದಾಗಿ ಒಟ್ಟು 24 ಮಂದಿ ಅಭ್ಯರ್ಥಿಗಳಲ್ಲಿ ಕೆಲವರಿಗೆ  ಅಸಿಸ್ಟೆಂಟ್‌ ಕಮಿಷನರ್‌, ತಹಶೀಲ್ದಾರ್, ಡಿವೈಎಸ್ಪಿ, ಅಬಕಾರಿ ಡಿವೈಎಸ್ಪಿ, ಅಸಿಸ್ಟೆಂಟ್‌ ಡೈರೆಕ್ಟರ್‌, ಚೀಫ್‌ ಆಫೀಸರ್‌, ಅಸಿಸ್ಟೆಂಟ್‌ ಸೂಪರಿಟೆಂಡೆಂಟ್‌, ಲೇಬರ್ ಆಫೀಸರ್‌, ಸೆಕ್ಷನ್‌ ಆಫೀಸರ್‌ ಹುದ್ದೆ ಲಭಿಸಿತ್ತು.

ವಿಜಯ ಮಹಾಂತೇಶ್‌ ದಾನಮ್ಮನವರ್‌, ಎಂ.ಎಲ್‌.ವೈಶಾಲಿ, ವೈ.ಜಿ.ಎಂ. ಗಂಗಾಧರಸ್ವಾಮಿ, ಕುಮಾರ್ ಇವರಿಗೆ ಅಸಿಸ್ಟೆಂಟ್‌ ಕಮಿಷನರ್‌ ಹುದ್ದೆ ಲಭಿಸಿದ್ದರೆ, ಅಜೀಜ್‌ ದೇಸಾಯಿ, ಭಾರತಿ ಹೊಳ್ಳಿಕೇರಿ, ಆರ್‌.ಮೇಘನಾ, ಬಿ.ಎನ್‌.ವೀಣಾ, ಶ್ರೀ ಹರ್ಷ ಎಸ್‌ ಶೇಟ್‌ ಅವರಿಗೆ ತಹಶೀಲ್ದಾರ್‌ ಹುದ್ದೆ ದೊರೆತಿತ್ತು. ಭಾರತಿ ಹೊಳ್ಳಿಕೇರಿ ಅವರು ಸಾರ್ವಜನಿಕ ಆಡಳಿತ ವಿಷಯದಲ್ಲಿ ವಾಸ್ತವದಲ್ಲಿ ಸರಾಸರಿ ೧೩೪ ಅಂಕ ಗಳಿಸಿದ್ದರೆ, ಕಂಪ್ಯೂಟರ್‌ನಲ್ಲಿ ೧೫೯ ಅಂಕ ದಾಖಲಾಗಿತ್ತು. ಅದೇ ರೀತಿ ಬಿ ಎನ್‌ ವೀಣಾ ಅವರು ಕನ್ನಡ ವಿಷಯದಲ್ಲಿ ವಾಸ್ತವವಾಗಿ ಸರಾಸರಿ ೧೭೨.೫ ಅಂಕ ಗಳಿಸಿದ್ದರೆ ಕಂಪ್ಯೂಟರ್‌ನಲ್ಲಿ ೨೦೧ ಅಂಕ ದಾಖಲಾಗಿತ್ತು.

ಇನ್ನು, ವಿ.ಶೇಷಮೂರ್ತಿ, ಪಿ.ಎಸ್.ರಮೇಶ್, ಕೆ.ಸುರೇಶ್‌, ಆರ್‌. ಲತಾ ಅವರು ಅಸಿಸ್ಟೆಂಟ್‌ ಸೂಪರಿಟೆಂಡೆಂಟ್‌ ಆಗಲು ಕಂಪ್ಯೂಟರ್‌ನಲ್ಲಿ ದಾಖಲಾಗಿದ್ದ ಅಂಕಗಳೇ ಕಾರಣ ಎಂದು ವರದಿ ಹೇಳಿತ್ತು. ಕೆ.ಸುರೇಶ್‌ ಅವರು ಸಾರ್ವಜನಿಕ ಆಡಳಿತ ವಿಷಯ-೨ರಲ್ಲಿ ವಾಸ್ತವವಾಗಿ ಸರಾಸರಿ ೧೨೪ ಅಂಕ ಸಿಕ್ಕಿದ್ದರೆ, ಕಂಪ್ಯೂಟರ್‌ನಲ್ಲಿ ದಾಖಲಾದ ನಂತರ ೧೩೬ ಅಂಕ ಲಭಿಸಿತ್ತು. ಅದೇ ರೀತಿ ಆರ್.ಲತಾ ಅವರು ಇತಿಹಾಸ ವಿಷಯದಲ್ಲಿ ವಾಸ್ತವವಾಗಿ ೧೨೧.೫ ಸರಾಸರಿ ಅಂಕ ಪಡೆದಿದ್ದರೆ ಕಂಪ್ಯೂಟರ್‌ನಲ್ಲಿ ದಾಖಲಾದ ನಂತರ ೧೪೭೮ ಅಂಕ ಸಿಕ್ಕಿತ್ತು.

ಇದನ್ನೂ ಓದಿ : ಕೆಪಿಎಸ್ಸಿ ಅಕ್ರಮ ನೇಮಕಕ್ಕೆ ಕೊನೆಗೂ ಸುಪ್ರೀಂ ಕತ್ತರಿ; ಹಿರಿಯ ಅಧಿಕಾರಿಗಳಲ್ಲಿ ತಳಮಳ

ಕಂಪ್ಯೂಟರ್ ನಲ್ಲಿ ವ್ಯತ್ಯಾಸದ ಅಂಕಗಳಿಂದ ವಿ ಕೆ ರಮಣಿ, ಎಂ ವಿ ತುಷಾರ ರಮಣಿ ಅವರು ಚೀಫ್‌ ಆಫೀಸರ್‌ ಹುದ್ದೆ ಪಡೆದುಕೊಂಡಿದ್ದರು. ಇದರಲ್ಲಿ ಎಂ ವಿ ತುಷಾರ ರಮಣಿ ಅವರು ಜನರಲ್‌ ಸ್ಟಡೀಸ್‌ ಪೇಪರ್‌-೧ರಲ್ಲಿ ವಾಸ್ತವವಾಗಿ ೧೩೭ ಸರಾಸರಿ ಅಂಕ ಗಳಿಸಿದ್ದು, ಕಂಪ್ಯೂಟರ್‌ನಲ್ಲಿ ದಾಖಲಾದ ನಂತರ ೧೫೬ ಅಂಕ ಲಭಿಸಿತ್ತು. ಹಾಗೆಯೇ ಜಿ ಎಸ್‌ ಮಂಗಳ, ಪಿ.ಚಂದ್ರಶೇಖರ್‌, ಕೆ ಚಿರಂಜೀವಿ ಅವರು ಕಂಪ್ಯೂಟರ್‌ ಕೈ ಚಳಕದ ಪರಿಣಾಮ ಸೆಕ್ಷನ್‌ ಆಫೀಸರ್‌ ಹುದ್ದೆ ಪಡೆದುಕೊಂಡಿದ್ದರು. ಜಿ.ಎಸ್‌. ಮಂಗಳ ಅವರು ವಾಸ್ತವವಾಗಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸರಾಸರಿ ೧೦೮.೫ ಅಂಕ ಗಳಿಸಿದ್ದರೆ, ಕಂಪ್ಯೂಟರ್‌ನಲ್ಲಿ ದಾಖಲಾದ ನಂತರ ೧೨೯ ಅಂಕ ಲಭಿಸಿತ್ತು. ಜನರಲ್‌ ಸ್ಟಡೀಸ್‌ನಲ್ಲಿ ವಾಸ್ತವವಾಗಿ ಸರಾಸರಿ ೧೧೨ ಅಂಕ ಗಳಿಸಿದ್ದರೆ, ಕಂಪ್ಯೂಟರ್‌ನಲ್ಲಿ ದಾಖಲಾದ ನಂತರ ೧೩೨ ಅಂಕ ಸಿಕ್ಕಿತ್ತು. ಅದೇ ರೀತಿ ಪಿ ಚಂದ್ರಶೇಖರ್‌ ಅವರು ಪ್ರಾಣಿಶಾಸ್ತ್ರ ವಿಷಯದಲ್ಲಿ ವಾಸ್ತವವಾಗಿ ಸರಾಸರಿ ೧೧೭.೫ ಅಂಕ ಗಳಿಸಿದ್ದರೆ ಕಂಪ್ಯೂಟರ್‌ನಲ್ಲಿ ೧೫೨ ಅಂಕ ದಾಖಲಾಗಿತ್ತು.

ಕಂಪ್ಯೂಟರ್ ಕೈ ಚಳಕ ಕೆಲವರಿಗ ಲಾಭ ಆಗಿದ್ದರೆ, ಇನ್ನು ಕೆಲವರಿಗೆ ನಷ್ಟವೂ ಆಗಿದೆ. ಎಕ್ಸೈಸ್‌ ಡಿವೈಎಸ್ಪಿ ಹುದ್ದೆ ಪಡೆದುಕೊಂಡಿರುವ ಪಿ ಬಿಂದುಶ್ರೀ ಅವರು ಕನ್ನಡ ವಿಷಯದಲ್ಲಿ ವಾಸ್ತವವಾಗಿ ಸರಾಸರಿ ೧೬೮.೫ ಅಂಕ ಗಳಿಸಿದ್ದರೆ, ಕಂಪ್ಯೂಟರ್‌ನಲ್ಲಿ ದಾಖಲಾದ ನಂತರ ಇವರಿಗೆ ೧೪೩ ಅಂಕಕ್ಕೆ ಇಳಿಕೆಯಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More