ಟ್ವಿಟರ್ ಸ್ಟೇಟ್ | ಮೆಕ್ಕಾ ಸ್ಫೋಟ ಖುಲಾಸೆ ವಿರೋಧಿಸಿದ ಪತ್ರಕರ್ತರು

ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಎಲ್ಲಾ ಆರೋಪಿಗಳೂ ಖುಲಾಸೆಗೊಂಡಿರುವುದು ಟ್ವಿಟರ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆರೋಪಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆಯೇ ತಪ್ಪೊಪ್ಪಿಕೊಂಡ ನಂತರವೂ ಅಪರಾಧ ಸಾಬೀತಾಗದಿರುವುದು ಚರ್ಚೆಗೆ ಗ್ರಾಸವಾಗಿದೆ

ಎಂಟು ಮಂದಿ ಪ್ರಾಣ ಪಡೆದ 2007ರ ಹೈದರಾಬಾದ್‌ ಮೆಕ್ಕಾ ಮಸೀದಿ ಸ್ಫೋಟದ ಪ್ರಕರಣದಲ್ಲಿ ಬಲಪಂಥೀಯ ಸ್ವಾಮಿ ಅಸೀಮಾನಂದ ಸೇರಿದಂತೆ ಐವರು ಆರೋಪಿಗಳನ್ನು ಹೈದರಾಬಾದ್‌ನ ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಖುಲಾಸೆ ಮಾಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅಥವಾ ಎನ್ಐಎ ಇವರ ಮೇಲಿನ ಆರೋಪವನ್ನು ಸಾಬೀತು ಮಾಡುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 2007 ಮೇ 18ರಂದು ನಡೆದ ಹೈದರಾಬಾದ್‌ ಮೆಕ್ಕಾ ಮಸೀದಿ ಸ್ಫೋಟದಲ್ಲಿ ೫೮ ಮಂದಿ ಗಾಯಗೊಂಡು ೮ ಮಂದಿ ಪ್ರಾಣ ಕಳೆದುಕೊಂಡಿದ್ದರು. ಘಟನೆ ಸಂಬಂಧ ಬಲಪಂಥೀಯ ಸಂಘಟನೆಗಳ ಹತ್ತು ಮಂದಿಯನ್ನು ಆರೋಪಿಗಳೆಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮೊಕದ್ದಮೆ ಹೂಡಿತ್ತು. ಅಲ್ಲದೆ ಈ ತೀರ್ಪು ನೀಡಿದ ನ್ಯಾಯಾಲಯದ ನ್ಯಾಯಾಧೀಶರು ನಂತರ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಜಾಗತಿಕವಾಗಿ ‘ಹಿಂದೂ ಭಯೋತ್ಪಾದನೆ’ ಎನ್ನುವ ಶಬ್ದ ಚರ್ಚೆಗೆ ಕಾರಣವಾಗಿದ್ದ ಮೆಕ್ಕಾ ಮಸೀದಿ ಸ್ಫೋಟದಲ್ಲಿ ಯಾರಿಗೂ ಶಿಕ್ಷೆಯಾಗದೆ ಇರುವ ವಿಚಾರ ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

“೧೧ ವರ್ಷಗಳಾಗಿವೆ. ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟದಲ್ಲಿ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಒಟ್ಟಿನಲ್ಲಿ ಎಂಟು ಮಂದಿ ಸಾವನ್ನಪ್ಪಿ, ೫೮ ಮಂದಿ ಗಾಯಗೊಂಡ ಸ್ಫೋಟಕ್ಕೆ ಯಾರೂ ಜವಾಬ್ದಾರರಲ್ಲ. ಇದು ಭಾರತ,” ಎಂದು ಪತ್ರಕರ್ತ ರಾಜ್‌ದೀಪ್ ದೇಸಾಯಿ ಟೀಕಿಸಿದ್ದಾರೆ. ಪತ್ರಕರ್ತೆ ಉಮಾ ಸುಧೀರ್ ಟ್ವೀಟ್ ಮಾಡಿ, “ಇದು ಎಂಥ ನ್ಯಾಯ? ೧೧ ವರ್ಷಗಳ ನಂತರ ತೀರ್ಪು ಬಂದರೂ ಯಾರಿಗೂ ಶಿಕ್ಷೆಯಾಗುವುದಿಲ್ಲ. ತನಿಖಾ ಸಂಸ್ಥೆ ಚೆನ್ನಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಮಸೀದಿ ಒಳಗೆ ೮ ಮಂದಿ ಪ್ರಾಣ ಕಳೆದುಕೊಂಡು, ಅಸೀಮಾನಂದ ಅವರು ತಮ್ಮ ತಪ್ಪೊಪ್ಪಿಕೊಂಡ ನಂತರವೂ ಯಾರಿಗೂ ಶಿಕ್ಷೆಯಾಗಿಲ್ಲ,” ಎಂದು ಹೇಳಿರುವ ಡಾ ಜುನೇದ್ ಅವರ ಹತಾಶ ನುಡಿಗಳನ್ನು ಮುಂದಿಟ್ಟಿದ್ದಾರೆ.

ಹಲವು ಟ್ವೀಟಿಗರು ಎನ್ಐಎ ತನಿಖಾ ಶೈಲಿ ಮತ್ತು ಹಿಂದುತ್ವ ಸಂಘಟನೆಗಳ ಮೇಲೆ ಸಾಕ್ಷ್ಯ ಹೇಳುವ ಟೇಟ್‌ಗಳು ಧೂಳು ತಿನ್ನುತ್ತಾ ಬಿದ್ದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. “ಮಾಲೆಗಾಂವ್, ಮೆಕ್ಕಾ ಮಸೀದ್, ಅಜ್ಮೀರ್ ಶರೀಫ್ ಪ್ರಕರಣಗಳ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಉಗ್ರವಾದಿ ಹಿಂದುತ್ವ ಸಂಘಟನೆಗಳ ಅಪರಾಧ ಸಾಬೀತು ಮಾಡುವ ಟೇಪ್‌ಗಳು ಧೂಳು ತಿನ್ನುತ್ತಾ ಬಿದ್ದಿರುವುದೇಕೆ?” ಎಂಬ ಅಭಿಪ್ರಾಯ ಸೂಚಿಸಿ ತಾವೇ ಬರೆದಿರುವ ತೆಹಲ್ಕಾದ ಲೇಖನವನ್ನು ರಾಣಾ ಅಯೂಬ್ ಅವರು ಟ್ವೀಟ್ ಮಾಡಿದ್ದಾರೆ. “ಪ್ರಧಾನಿ ಮೋದಿಯವರು ಎನ್ಐಎ ನೇತೃತ್ವ ವಹಿಸಲು ವೈ ಸಿ ಮೋದಿಯವರನ್ನು ಆರಿಸಿ ಕಳುಹಿಸಿದ್ದರು. ಅವರು ಮತ್ತೊಂದು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮಾಲೆಗಾಂವ್ ಪ್ರಕರಣದ ವಿಶೇಷ ಸರ್ಕಾರಿ ವಕೀಲರಾಗಿದ್ದ ರೋಹಿಣಿ ಸಾಲಿಯಾನ್ ಅವರು ವೈ ಸಿ ಮೋದಿ ನೇಮಕದ ಬಗ್ಗೆ ಎಚ್ಚರಿಕೆ ನೀಡಿದ್ದರು. ಹಿಂದೂ ಭಯೋತ್ಪಾದನೆ ಆರೋಪಿಗಳು ಖುಲಾಸೆಗೊಳ್ಳುವ ಅವರ ಆತಂಕ ಈಗ ನಿಜವಾಗಿದೆ,” ಎಂದು ಜನಪ್ರಿಯ ವೆಬ್‌ತಾಣದ ಸಂಪಾದಕ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ. ಪತ್ರಕರ್ತ ಎಂಕೆ ವೇಣು ಅವರೂ ನ್ಯಾಯಾಲಯದ ತೀರ್ಪನ್ನು ಕಟುವಾಗಿ ವಿಶ್ಲೇಷಿಸಿದ್ದಾರೆ. “ಮೆಕ್ಕಾ ಮಸೀದಿ ಸ್ಫೋಟದ ಹಿಂದೂ ಭಯೋತ್ಪಾದನೆಯ ಆರೋಪಿಗಳೆಲ್ಲರನ್ನೂ ನ್ಯಾಯಾಲಯ ಖುಲಾಸೆ ಮಾಡಿರುವುದರಿಂದ ಸಿಬಿಐ ಮತ್ತು ಎನ್ಐಎ ವೈಫಲ್ಯ ಮತ್ತೆ ಸಾಬೀತಾಗಿದೆ. ನಿರ್ಣಾಯಕ ದಾಖಲೆಗಳೇ ಕಳೆದು ಹೋಗಿವೆ. ತನಿಖಾ ಸಂಸ್ಥೆಗಳು ಮತ್ತು ವಕೀಲರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ,” ಎಂದು ಎಂ ಕೆ ವೇಣು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ದೇಶದ ಸಾಕ್ಷಿಪ್ರಜ್ಞೆಯನ್ನು ಮತ್ತೊಮ್ಮೆ ಬಡಿದೆಬ್ಬಿಸಿದ ಆಸಿಫಾ

ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಟ್ವೀಟ್ ಮಾಡಿ, “ಹಿಂದೂ ಭಯೋತ್ಪಾದನೆ ಎನ್ನುವುದು ಇಲ್ಲ ಎಂದು ಹೇಳುವುದು ಭಯೋತ್ಪಾದಕರೆಲ್ಲರೂ ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಎಂದು ಹೇಳಿದಂತಾಗುತ್ತದೆ,” ಎಂಬ ತಮ್ಮ ಸಂಸ್ಥೆಯು ಪ್ರಕಟಿಸಿರುವ ಲೇಖನಗಳನ್ನು ಮುಂದಿಟ್ಟಿದ್ದಾರೆ. ಅವರು ಇನ್ನೂ ಎರಡು ಲೇಖನಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಒಂದು ಲೇಖನವು ಎನ್ಐಎಯ ವೈಫಲ್ಯವನ್ನು ವಿಶ್ಲೇಷಿಸಿದೆ. ಪತ್ರಕರ್ತೆ ಸೀಮಿ ಪಾಶಾ ಅವರು ಟ್ವೀಟ್ ಮಾಡಿ, “ಅಸೀಮಾನಂದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ೨೦೧೦ರಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದರು. ಅಜ್ಮೀರ್ ಶರೀಫ್ ಸ್ಫೋಟ, ಮೆಕ್ಕಾ ಮಸೀದಿ ಸ್ಫೋಟ, ಮಾಲೆಗಾಂವ್, ಸಂಜೋತಾ ಸ್ಫೋಟದಲ್ಲಿ ತಮ್ಮ ಪಾತ್ರವಿದೆ ಎಂದು ಒಪ್ಪಿಕೊಂಡಿದ್ದರು. ಹಾಗಿದ್ದರೆ ಎನ್ಐಎಗೆ ತಾವೇ ಹೂಡಿದ ಪ್ರಕರಣವನ್ನು ಸಾಬೀತುಮಾಡಲು ಸಾಧ್ಯವಾಗಿಲ್ಲವೆ?” ಎಂದು ಪ್ರಶ್ನಿಸಿದ್ದಾರೆ. “ಮಾಲೆಗಾಂವ್, ಸಂಜೋತಾ, ಮೆಕ್ಕಾ. ಎನ್ಐಎ ಪ್ರದರ್ಶನ ಕೆಟ್ಟದಾಗಿಲ್ಲ. ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಎಂಬ ನಾಟಕವಿದು,” ಎಂದು ಪತ್ರಕರ್ತೆ ರಾಣಾ ಅಯೂಬ್ ಬೇಸರದ ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ಮಾಜಿ ಐಎಎಸ್ ಅಧಿಕಾರಿ ಸಂಜೀವ್ ಭಟ್ ಅವರು ಈ ತೀರ್ಪು ನಿರೀಕ್ಷಿತ, ಅಚ್ಚರಿ ಪಡುವಂತದ್ದೇನಿಲ್ಲ ಎಂದು ಹೇಳಿದ್ದಾರೆ.

ಪ್ರಕರಣಗಳನ್ನು ತೀರ್ಮಾನಿಸುವಲ್ಲಿ ರಾಜಕೀಯದ ಪ್ರಾಬಲ್ಯದ ಬಗ್ಗೆ ಬಹಳಷ್ಟು ಮಂದಿ ವಿಷಾದದ ಹೇಳಿಕೆ ಕೊಟ್ಟಿದ್ದಾರೆ. “ಮೆಕ್ಕಾ ಮಸೀದಿ ಪ್ರಕರಣದ ತೀರ್ಪು ಮತ್ತೊಮ್ಮೆ ಒಂದು ವಿಷಯವನ್ನು ಸಾಬೀತು ಮಾಡಿದೆ. ನೀವು ಆರ್‌ಎಸ್‌ಎಸ್‌ ಸದಸ್ಯರಾಗಿದ್ದಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಯಾವುದೇ ಅಪರಾಧ ಮಾಡಿದರೂ ರಕ್ಷಣೆ ಪಡೆದುಕೊಳ್ಳಬಹುದು” ಎಂದು ಹೈದರಾಬಾದ್‌ನ ವೈ ಶ್ರೀನಿವಾಸ ರೆಡ್ಡಿ ಟ್ವೀಟ್ ಮಾಡಿದ್ದಾರೆ. “ಅಸೀಮಾನಂದ್ ಸೇರಿದಂತೆ ಮೆಕ್ಕಾ ಮಸೀದಿ ಪ್ರಕರಣದ ಎಲ್ಲಾ ಆರೋಪಿಗಳೂ ಖುಲಾಸೆಗೊಂಡಿದ್ದಾರೆ. ಅಚ್ಚರಿಯೇನಿಲ್ಲ. ರಾಜಕೀಯ ಪ್ರಭಾವ ಭಯೋತ್ಪಾದನಾ ಪ್ರಕರಣಗಳನ್ನು ನಿರ್ಧರಿಸುತ್ತಿರುವುದರಲ್ಲಿ ಸಂಶಯವೇ ಇಲ್ಲ. ದಾಖಲೆಗಳ ನಾಶ, ಸಾಕ್ಷಿಗಳ ರೆಕಾರ್ಡಿಂಗ್ ನಾಶ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಅಧೋಗತಿಯನ್ನು ಸೂಚಿಸುತ್ತದೆ,” ಎಂದು ಪತ್ರಕರ್ತೆ ಸಬಾ ನಖ್ವಿ ಅಭಿಪ್ರಾಯಪಟ್ಟಿದ್ದಾರೆ. ಎನ್ಐಎ ದೇಶದ ಹೊಸ ‘ಪಂಜರದ ಪಕ್ಷಿ’ ಎನ್ನುವ ಅಭಿಪ್ರಾಯವನ್ನು ಬಹಳಷ್ಟು ಮಂದಿ ಟ್ವೀಟಿಗರು ವ್ಯಕ್ತಪಡಿಸಿದ್ದಾರೆ. ಕೆಲವರು ಈಗ ಮೆಕ್ಕಾ ಮಸೀದಿ ಕುರಿತ ತೀರ್ಪನ್ನು ಮುಂದಿಡುವ ಮೂಲಕ ಅತ್ಯಾಚಾರಗಳ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಂದ ಜನರ ಆಲೋಚನೆಗಳನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ಎಎನ್ಐ’ ಸಂಸ್ಥೆ ವಿದೇಶಾಂಗ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಆರ್‌ವಿಎಸ್ ಮಣಿ ಅವರ ಅಭಿಪ್ರಾಯವನ್ನು ಟ್ವೀಟ್ ಮಾಡಿದೆ. “ಮೆಕ್ಕಾ ಮಸೀದಿ ದಾಳಿಯ ವ್ಯೂಹ ರಚಿಸಿದ ವ್ಯಕ್ತಿಗಳನ್ನು ಎನ್ಐಎ ದುರುಪಯೋಗ ಪಡಿಸಿ ರಕ್ಷಿಸಲಾಗಿದೆ. ಇದು ದೊಡ್ಡ ಎಚ್ಚರಿಕೆಯ ಗಂಟೆ. ಸಂತ್ರಸ್ತರಿಗೆ ನೀವು ಹೇಗೆ ಪರಿಹಾರ ಕೊಡುವಿರಿ? ಈ ಸಿದ್ಧಾಂತವನ್ನು ಮುಂದಿಟ್ಟ ಕಾಂಗ್ರೆಸ್ ಅಥವಾ ಇನ್ಯಾರಾದರೂ ಅವರಿಗೆ ಪರಿಹಾರ ಕೊಡುವರೆ?” ಎಂದು ಮಣಿ ಪ್ರಶ್ನಿಸಿದ್ದಾರೆ. ಮಣಿ ಅವರು ಇತ್ತೀಚೆಗಿನ ದಿನಗಳಲ್ಲಿ ಇಶ್ರತ್ ಜಹಾನ್ ಪ್ರಕರಣದಿಂದ ಆರಂಭಿಸಿ ಬಿಜೆಪಿ ಮತ್ತು ಮೋದಿ ಅವರಿಗೆ ಕಂಟಕವಾಗಿದ್ದ ಹಲವು ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಹೆಣೆಯಲಾಗಿದೆ ಎಂದು ಹೇಳಿ ಸಂಘಪರಿವಾರದ ಪರವಾಗಿ ನಿಂತವರು. ಇವರು ಮಾತ್ರವಲ್ಲದೆ, ಹಲವು ಬಿಜೆಪಿ ನಾಯಕರು ಮೆಕ್ಕಾ ಮಸೀದಿ ಪ್ರಕರಣದ ತೀರ್ಪಿನಲ್ಲಿ ಹಿಂದೂ ಸಂಘಟನೆಗಳ ವ್ಯಕ್ತಿಗಳು ಖುಲಾಸೆಗೊಂಡಿರುವುದನ್ನು ಬೆಂಬಲಿಸಿದ್ದಾರೆ ಮತ್ತು ಯುಪಿಎ ಸರ್ಕಾರ ಉದ್ದೇಶಪೂರ್ವಕವಾಗಿ ‘ಹಿಂದೂ ಭಯೋತ್ಪಾದನೆ’ ಎಂಬ ಕಲ್ಪನೆಯನ್ನು ಮುಂದಿಟ್ಟಿತ್ತು ಎಂದು ವಾದಿಸುತ್ತಿದ್ದಾರೆ. ಬಿಜೆಪಿಯ ಪ್ರಮುಖ ಸಂಸದರು, ಶಾಸಕರು, ನಾಯಕರು, ಸಾಮಾಜಿಕ ಕಾರ್ಯಕರ್ತರು ಈ ನಿಟ್ಟಿನಲ್ಲಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಗೆಡವಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಅಧಿಕೃತವಾಗಿ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯನ್ನು ಎ್‌ಡಿಟಿವಿ ಟ್ವೀಟ್ ಮಾಡಿದೆ. “ಇದು ನ್ಯಾಯದ ವಿಚಾರವಾದ ಕಾರಣ ಅಭಿಪ್ರಾಯ ಹೇಳುವುದಿಲ್ಲ. ಈ ವಿಚಾರವಾಗಿ ಹೇಗೆ ಮುಂದುವರಿಯಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟದ್ದು,” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪರವಾಗಿ ಟ್ವಿಟರ್‌ನಲ್ಲಿ ಟ್ವೀಟ್‌ಗಳನ್ನು ಹಾಕಿ ಬೆಂಬಲಿಸುವ ಹಲವಾರು ಕಾರ್ಯಕರ್ತರು ನ್ಯಾಯಾಲಯದ ತೀರ್ಪನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಅಬು ಅಸಿಮ್ ಅಜ್ಮಿ ನ್ಯಾಯಾಲಯದ ತೀರ್ಪನ್ನು ಟೀಕಿಸಿದ್ದಾರೆ. ಅಂತಿಮವಾಗಿ ತನಿಖಾ ಸಂಸ್ಥೆಗಳು ಇಂತಹ ಪ್ರಕರಣಗಳಿಗೆ ಯಾರೂ ಜವಾಬ್ದಾರರಲ್ಲ ಎನ್ನುವ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಜನರಿಗೆ ಹೇಳುತ್ತಿದ್ದಾರೆ ಎಂದು ಅಬು ಅಸಿಮ್ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More