ಯೋಗಿ ಅಧಿಕಾರದ ಈವರೆಗಿನ ಅನ್ಯಾಯದ ಕಂತೆಗಳನ್ನು ಬಿಚ್ಚಿಟ್ಟ ಉನ್ನಾವೋ ಪ್ರಕರಣ

ಉತ್ತರಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ ಒಂದು ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಯೋಗಿ ವಿರುದ್ಧ ಎದ್ದ ಆರೋಪಗಳ ಪಟ್ಟಿ, ಕೋಮುಗಲಭೆ, ಅತ್ಯಾಚಾರ ಪ್ರಕರಣ, ಮಕ್ಕಳ ಸಾವಿನ ಪ್ರಕರಣ, ಆರೋಪಿಗಳನ್ನು ರಕ್ಷಿಸಲು ಯೋಗಿ ಮಾಡಿದ ಸಾಹಸ ಪಕ್ಷವೇ ಮುಜುಗರಕ್ಕೆ ಒಳಗಾಗುವಂತೆ ಮಾಡಿವೆ

ಏರುದನಿಯ ಆರೋಪಗಳು, ಜನರನ್ನು ಎತ್ತರಕ್ಕೆ ಕೊಂಡೊಯ್ಯುವ ಭರವಸೆಗಳು, ನ್ಯಾಯ ದೊರಕಿಸಿಕೊಡುವ ಅಧಿಕಾರಶಾಹಿಯ ಮಾತುಗಳು ಹಾಗೂ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಆಡಳಿತಾವಧಿಯಲ್ಲೇ ಅತೀ ಹೆಚ್ಚು ಅನ್ಯಾಯದ ಹೆಜ್ಜೆಗಳನ್ನು ಉನ್ನಾವೋ ಪ್ರಕರಣ ಪ್ರಬಲವಾಗಿ ತೋರಿಸುತ್ತಿದೆ.

ಹದಿಮೂರು ತಿಂಗಳ ಹಿಂದೆ ಅಧಿಕಾರದ ಗದ್ದುಗೆ ಏರಿದ್ದ ಯೋಗಿ ಆದಿತ್ಯನಾಥರನ್ನು ಜನರು ಒಮ್ಮತದಿಂದ ಒಪ್ಪಿಕೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 403 ಸೀಟಿನಲ್ಲಿ 324 ಸೀಟುಗಳನ್ನು ಪಡೆದ ಬಿಜೆಪಿ ದಾಖಲೆ ಸೃಷ್ಟಿಸಿತ್ತು. ಅತೀ ಹೆಚ್ಚಿನ ಜನರಿರುವ ರಾಜ್ಯದಲ್ಲಿ ಜನರು ಭರವಸೆಯೊಂದಿಗೆ, ಆದಿತ್ಯನಾಥರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಒಳ್ಳೆಯ ದಿನಗಳನ್ನು ಎದುರು ನೋಡುತ್ತಿದ್ದರು.

ಈ ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಕುಟುಂಬದವರ ಆಡಳಿತವನ್ನು ಭ್ರಷ್ಟ ಮತ್ತು ಕ್ರಿಮಿನಲ್ ಎಂದು ಯೋಗಿ ಆದಿತ್ಯನಾಥ ಅವರು ಜನರಲ್ಲಿ ನಂಬಿಸಿದರು. ಅದರಿಂದ ನಿಮ್ಮನ್ನು ಮುಕ್ತಗೊಳಿಸುತ್ತೇವೆ ಎಂದು ಹಿಂದೂಗಳನ್ನು ಧ್ರುವೀಕರಿಸಿದರು. ಆದರೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆಯುವುದರೊಳಗಾಗಿ ಯೋಗಿ ಆದಿತ್ಯನಾಥ ವಿರುದ್ಧ ಎದ್ದ ಆರೋಪಗಳ ಪಟ್ಟಿ, ಕೋಮುಗಲಭೆ, ಅತ್ಯಾಚಾರ ಪ್ರಕರಣ, ಅಲ್ಪಸಂಖ್ಯಾತರ ನಕಲಿ ಎನ್‍ಕೌಂಟರ್ ಪ್ರಕರಣಗಳು, ಗೋರಖ್‌ಪುರದಲ್ಲಿ ನಡೆದ ಮಕ್ಕಳ ಸಾವು, ಆರೋಪಿಗಳನ್ನು ರಕ್ಷಿಸಲು ಮಾಡಿದ ಯೋಗಿ ಹರಸಾಹಸ ಬಿಜೆಪಿ ನಾಯಕರನ್ನು ಮುಜುಗರಕ್ಕೆ ತಂದಿಡುವಂತೆ ಮಾಡಿತು.

ಹಿಂದಿನ ಆಡಳಿತಾವಧಿಯಲ್ಲಿ ಅಂದರೆ 2013ರ ಮುಜಾಫ್ಫರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಯೋಗಿ ಯೋಚಿಸಿದ್ದರು, ಅಲ್ಲದೇ ಸ್ವತಃ ತನ್ನ ವಿರುದ್ಧವೇ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕ ಹಿಂಪಡೆಯುವಂತೆ ಆದೇಶ ಹೊರಡಿಸಿದ್ದದು ವಿಪರ್ಯಾಸ.

ಯೋಗಿ ಆಡಳಿತವನ್ನು ಕಂಡು ಹಲವು ನಾಯಕರು ಟೀಕೆ ಮಾಡಿದರು. ಅನನುಭವಿ ನಾಥ ಪಂಥದ ಯೋಗಿಯವರಿಗೆ ಹತ್ತಾರು ವರ್ಷಗಳಿಂದ ಗೋರಖ್‌ನಾಥ ದೇವಸ್ಥಾನ ಟ್ರಸ್ಟಿನ ಬಹುಕೋಟಿ ಆಸ್ತಿಯನ್ನು ನಿರ್ವಹಣೆ ಮಾಡಿ ಗೊತ್ತೇ ಹೊರತು ರಾಜ್ಯವನ್ನಲ್ಲ ಎಂದು ವ್ಯಂಗ್ಯವಾಡಿದರು. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಮಹಿಳೆಯರ ರಕ್ಷಣೆಗೆ ತಾನು ಶ್ರಮಿಸುತ್ತೇನೆ ಎಂದು ಹೇಳಿಕೊಂಡು ಬಂದರೂ ರಾಜಧಾನಿ ಲಕ್ನೋ ಇಂದ 50 ಕಿ.ಮೀ ದೂರದ ಉನ್ನಾವೋ ಜಿಲ್ಲೆಯ ಸಂತ್ರಸ್ತೆಗೆ ನ್ಯಾಯ ಒದಗಿಸಲು ಆಗಲಿಲ್ಲ, ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಎಫ್‍ಐಆರ್ ದಾಖಲಿಸಲು 10 ತಿಂಗಳೇ ಬೇಕಾಯಿತು.

ಸಂತ್ರಸ್ತೆಯು ಕಳೆದ ರವಿವಾರ ಮುಖ್ಯಮಂತ್ರಿ ಮನೆಯ ಬಾಗಿಲಿಗೆ ಬಂದು ಗೋಗರೆಯುವವರೆಗೂ ಮನೆಯವರು ಆತ್ಮಹತ್ಯೆಗೆ ಯತ್ನಿಸುವವರೆಗೂ ಬಡ ಹೆಣ್ಣುಮಕ್ಕಳ ಪರಿಸ್ಥಿತಿ ಅರಿಯಲು ಯೋಗಿ ಸರ್ಕಾರಕ್ಕೆ ಆಗಲಿಲ್ಲ. ಆದರೆ ಸತತ ಪ್ರತಿಭಟನೆ, ಒತ್ತಾಯಗಳಿಂದ ಕೊನೆಗೂ ಯೋಗಿ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕಾಯಿತು.

ತನ್ನ ಶಾಸಕರನ್ನು ರಕ್ಷಿಸಲು ಅಧಿಕಾರದಿಂದ ಪೋಷಿಸುತ್ತಾ ಬಂದ ಯೋಗಿ ಸರ್ಕಾರದ ಅಮಾನವೀಯ ಮುಖವನ್ನು ಮಾಧ್ಯಮಗಳು ಚೆನ್ನಾಗಿಯೇ ಬಹಿರಂಗಗೊಳಿಸಿದವು. ಸಂತ್ರಸ್ತೆಯ ತಂದೆ ಮೇಲೆ ಹಲ್ಲೆ ಮಾಡಿದ ಕುಲದೀಪ್ ಸಿಂಗ್ ಸೆಂಗರ್‌ನನ್ನು ಸಹೋದರ ಅತುಲ್ ಸಿಂಗ್‍ರನ್ನೂ ಅರೆಸ್ಟ್ ಮಾಡಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕಾಯಿತು. ಕಾನೂನು ಬಾಹಿರ ಎಂದು ನೆಪವೊಡ್ಡಿ ತಂದೆ ಪಪ್ಪು ಸಿಂಗ್‍ರನ್ನು ಜೈಲಿಗೆ ಕಳುಹಿಸಿ ನ್ಯಾಯಾಂಗ ಬಂಧನದಲ್ಲೇ ಅನುಮಾನಾಸ್ಪದವಾಗಿ ಸಾಯುವಂತೆ ಮಾಡಲಾಯಿತು.

ಹಲವಾರು ಬಾರಿ ಉನ್ನಾವೋ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕುಲದೀಪ್ ಸೆಂಗರ್ ಅಜೇಯ ನಾಯಕರಾಗಿ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಇದರಿಂದ ಉತ್ತರಪ್ರದೇಶದ ಜಾತಿ ರಾಜಕೀಯದಲ್ಲಿ ಠಾಕೂರ್ ನಾಯಕನಾಗಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಪ್ರತಿ ಸಾರಿ ಸಂತ್ರಸ್ತೆ ಹಾಗೂ ಆಕೆಯ ತಂದೆ ನ್ಯಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಹಾಗೂ ಮಾಧ್ಯಮದವರ ಮೊರೆ ಹೋದಾಗ ಬೆದರಿಕೆ ಹಾಕಿ ಪ್ರಕರಣವನ್ನು ಮುಚ್ಚಿ ಹಾಕುವಂತೆ ಹಲವು ಬಾರಿ ಸೆಂಗರ್ ಸಹೋದರರು ಪ್ರಯತ್ನಿಸಿದ್ದಾರೆ.

ಕಳೆದ ಬುಧವಾರ ಸಂಜೆ ಕುಲದೀಪ್ ಸೆಂಗರ್ ಅವರು ಲಖನೌ ಜಿಲ್ಲೆಯ ಪೊಲೀಸ್ ಮುಖ್ಯಸ್ಥರ ನಿವಾಸಕ್ಕೆ ಮಧ್ಯರಾತ್ರಿ ಭೇಟಿ ನೀಡಿ "ಮಾಧ್ಯಮವು ತಪ್ಪಾಗಿ ನನ್ನನ್ನು ವರ್ಣಿಸುತ್ತಿವೆ ಎಂದು ತಿಳಿಸಲು ಮಾತ್ರ ನಾನು ಇಲ್ಲಿಗೆ ಬಂದಿದ್ದೇನೆ," ಎಂದು ಹೇಳಿ ಹೊರಟು ಹೋಗುತ್ತಾರೆ. ಮರುದಿನ ಮುಖ್ಯಮಂತ್ರಿ ಕಚೇರಿಯ ಸುತ್ತಲೂ ಸಂಕೋಚದಿಂದ ಕಾಣಿಸಿಕೊಳ್ಳುತ್ತಾರೆ. ಏತನ್ಮಧ್ಯೆ, ಅವರ ಬೆಂಬಲಿಗರು ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ. ಇನ್ನೊಬ್ಬ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕುಲದೀಪ್ ಸೆಂಗರ್‌ನನ್ನು ಬೆಂಬಲಿಸುತ್ತಾ “ಮೂರು ನಾಲ್ಕು ಮಕ್ಕಳನ್ನು ಹೊಂದಿದ ತಾಯಿಯನ್ನು ಯಾರೂ ಅತ್ಯಾಚಾರ ಮಾಡುತ್ತಾರೆ,” ಎಂದು ಹೇಳಿ ಅಕೆಯ ವ್ಯಕ್ತಿತ್ವ ಹರಣವನ್ನೂ ಮಾಡಿದ್ದಾರೆ.

ಕೊನೆಗೂ ಪೋಸ್ಕೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡ ನಂತರ ರಾಜ್ಯ ಸರ್ಕಾರ ಅದನ್ನು ಸಿಬಿಐಗೆ ವಹಿಸಲು ತೀರ್ಮಾನಿಸಿದೆ. ಕುಲದೀಪ್ ಸೆಂಗರ್ ಅವರು ಗುರುವಾರ ಪತ್ರಿಕಾಗೋಷ್ಠಿ ಕರೆದು, “ನಾನು ಶಾಸಕ, ನನ್ನ ವಿರುದ್ಧದ ಆರೋಪಗಳನ್ನು ನ್ಯಾಯಾಲಯ ಸಾಬೀತುಪಡಿಸುವವರೆಗೆ ನನ್ನನ್ನು ‘ಮಾನನೀಯ’ (Honorable) ಎಂದು ಕರೆಯಬೇಕು,” ಎಂದು ಹೇಳಿಕೊಂಡಿದ್ದಾರೆ. ಅವರ ಮಾತನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ವಿ ಪಿ ಸಿಂಗ್ ಕೂಡ ಸಮರ್ಥಿಸಿಕೊಳ್ಳುತ್ತಾರೆ.

ಇದನ್ನೂ ಓದಿ : ಕಟುವಾ, ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಖಂಡನೆ; ದೇಶಾದ್ಯಂತ ಪ್ರತಿಭಟನೆ

ಉತ್ತರಪ್ರದೇಶದ ವಕೀಲರೊಬ್ಬರು ಅಲಹಾಬಾದ್ ನ್ಯಾಯಾಲಯ ಆದೇಶ ಹೊರಡಿಸಿದರೂ ಉತ್ತರಪ್ರದೇಶ ಸರ್ಕಾರ ಸೆಂಗರ್‌ನನ್ನು ಅರೆಸ್ಟ್ ಮಾಡುತ್ತದೇ ಇಲ್ಲವೋ ಎಂಬ ಹಗುರಾದ ವಾದವನ್ನು ಹರಿಬಿಟ್ಟಿದ್ದಾರೆ. ಇಷ್ಟೆಲ್ಲಾ ಪ್ರತಿರೋಧಗಳನ್ನು ಎದುರಿಸಿದ ಉತ್ತರಪ್ರದೇಶ ಸರ್ಕಾರ ಸೆಂಗರ್‌ನನ್ನು ಬಂಧಿಸಲು ಹೆಚ್ಚು ಸಮಯವನ್ನೇ ತೆಗೆದುಕೊಂಡಿತು. ಸಿಬಿಐ ಶುಕ್ರವಾರ ತಡರಾತ್ರಿ ಲಕ್ನೋ ಇಂದಿರಾನಗರದಲ್ಲಿರುವ ಕುಲದೀಪ್ ಸಿಂಗ್ ಸೆಂಗರ್‌ನನ್ನು ಆತನ ಮನೆಯಲ್ಲೇ ಬಂಧಿಸಿದ್ದಾರೆ.

ಸೆಂಗರ್‌ನ ಸಂಬಂಧಿ ಪ್ರಕಾರ್ ಸಿಂಗ್ ಸಿಬಿಐ ಕುಲದೀಪ್ ಸೆಂಗರ್‌ನನ್ನು ಬಂಧಿಸಿದ ನಂತರ “ಎಂಎಲ್‍ಎ ಚಿಕ್ಕಪ್ಪ ಅವರೇ ಸ್ವತಃ ಈ ವಿಷಯದ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಕೋರಿದ್ದರು, ಈಗ ಅವರು ನಿಮ್ಮ ವಿರುದ್ಧದ ಆರೋಪಗಳನ್ನು ತಪ್ಪೊಪ್ಪಿಕೊಂಡರೆ, ಅವರು ಏಕೆ ಸಿಬಿಐ ವಶಕ್ಕೆ ಹೋಗುತ್ತಾರೆ?” ಎಂದು ಹೇಳಿಕೆ ನೀಡಿದ್ದಾರೆ.

ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ ಆಗುತ್ತಿರುವ ವಿಘಟನೆಗಳಿಗೆ ಹಾಗೂ ಪ್ರಕ್ಷುಬ್ಧ ವಾತಾವರಣದಿಂದ ದೂರ ಸರಿದು ಮಧ್ಯಪ್ರದೇಶದ ದತ್ತಿಯಾಗೆ ಪೂಜೆಗೆಂದು ಕಾಲು ಕಿತ್ತಿದ್ದಾರೆ.

ಫೋಟೋ : ಹಿಂದುಸ್ಥಾನ್ ಟೈಮ್ಸ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More