ಬ್ಯಾಂಕುಗಳ ಖಾಸಗೀಕರಣಕ್ಕೆ ವಕಾಲತ್ತು ಹಾಕುತ್ತಿದ್ದ ಗಣ್ಯರೇಕೆ ಸೊಲ್ಲೆತ್ತುತ್ತಿಲ್ಲ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಹೊರ ಬಿದ್ದ ನಂತರ ಕಾರ್ಪೊರೆಟ್ ದೈತರು, ಆರ್ಥಿಕ ತಜ್ಞರು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದೊಂದೇ ಏಕೈಕ ಪರಿಹಾರ ಎಂಬ ಮಂತ್ರ ಪಠಿಸಿದ್ದರು. ಐಸಿಐಸಿಐ ಹಗರಣದ ನಂತರ ಇವರಾರೂ ಸೊಲ್ಲೆತ್ತುತ್ತಿಲ್ಲ ಏಕೆ?

ಪಂಜಾಬ್ ನ್ಯಾಷನಲ್ ಬ್ಯಾಂಕಿನ 13,700 ಕೋಟಿ ಹಗರಣ ಹೊರ ಬಿದ್ದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದೊಂದೇ ಹಗರಣಗಳ ರೋಗಕ್ಕೆ ಇರುವ ಏಕೈಕ ಚಿಕಿತ್ಸೆ ಎಂಬಂತೆ ಮಾತನಾಡಿದ್ದ ಕಾರ್ಪೊರೆಟ್ ದಿಗ್ಗಜರು, ಗಣ್ಯ ಆರ್ಥಿಕತಜ್ಞರು ಈಗ ಮೌನಕ್ಕೇಕೆ ಶರಣಾಗಿದ್ದಾರೆ?

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕು ಮತ್ತು ಪ್ರತಿಷ್ಠಿತ ಬ್ಯಾಂಕು ಎಂಬ ಹೆಗ್ಗಳಿಕೆ ಪಡೆದಿದ್ದ ಐಸಿಐಸಿಐ ಬ್ಯಾಂಕಿನಲ್ಲಿ ನಡೆದಿರುವ ಹಗರಣದ ಬಗ್ಗೆ ಅವರ್ಯಾರೂ ಸೊಲ್ಲೆತ್ತುತ್ತಿಲ್ಲ ಏಕೆ? ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಡೆದರೆ ಮಾತ್ರ ಹಗರಣ, ಖಾಸಗಿ ಬ್ಯಾಂಕುಗಳಲ್ಲಿ ನಡೆದರೆ ಅದು ಹಗರಣವಲ್ಲವೇ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣವು ಕಳೆಹಂತದ ಸಿಬ್ಬಂದಿ ಮಾಡಿದ ಲೋಪದಿಂದ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ವಿತ್ತ ಸಚಿವಾಲಯದ ಸಂಘಟಿತ ಲೋಪಗಳಿಂದಾಗಿ ಆಗಿರುವ ಹಗರಣ. ಆದರೆ, ಐಸಿಐಸಿಐ ಹಗರಣವು ನೇರವಾಗಿ ಬ್ಯಾಂಕಿನ ಸಿಇಒ ಭಾಗಿಯಾಗಿರುವ ಪ್ರಕರಣ. 3,250 ಕೋಟಿ ರುಪಾಯಿಗಳನ್ನು ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ್ದಕ್ಕೆ ಪ್ರತಿಯಾಗಿ ಸಿಇಒ ಪತಿಯ ಕಂಪನಿಗೆ ವಿಡಿಯೋಕಾನ್ ಸಂಸ್ಥೆ 64 ಕೋಟಿ ರು.ಸಾಲ ನೀಡಿರುವ ‘ಕೊಟ್ಟು-ಕೊಳ್ಳುವ’ ಹಗರಣ ಇದು.

ಈ ಹಗರಣದ ಬಗ್ಗೆ ರೇಟಿಂಗ್ ಏಜೆನ್ಸಿ ಫಿಚ್‌ ಸಹ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಆದಾಗ ಇಡೀ ಸಾರ್ವಜನಿಕ ವಲಯದ ಬ್ಯಾಂಕುಗಳ ವಿರುದ್ಧ ಮುಗಿಬಿದ್ದವರು ಈಗೇಕೆ ಮೌನಕ್ಕೆ ಶರಣಾಗಿದ್ದಾರೆ?

ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ, ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ, ಇನ್ಫೊಸಿಸ್ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಮತ್ತಿತರರು ಖಾಸಗೀಕರಣದ ಪರ ವಕಾಲತ್ತು ಹಾಕಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಹೊರಬಿದ್ದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಪ್ರವೃತ್ತಿ ಕಾರ್ಪೊರೆಟ್ ವಲಯದಲ್ಲಿ ಹೆಚ್ಚಿತ್ತು. ಕಾರ್ಪೊರೆಟ್ ದಿಗ್ಗಜರು ಖಾಸಗೀಕರಣವೇ ಎಲ್ಲದಕ್ಕೂ ಮದ್ದು ಎಂಬ ನಿರ್ಧಾರಕ್ಕೆ ಬಂದಂತೆ ಹೇಳಿಕೆ ನೀಡಿದ್ದರು.

ವಿಶೇಷ ಎಂದರೆ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯ ಒಂದು ಹೆಜ್ಜೆ ಮುಂದೆ ಹೋಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊರತಾಗಿ ಉಳಿದೆಲ್ಲ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕೆಂದು ಹೇಳಿದ್ದರು. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದಾಗಿ ರಾಜಕೀಯ ಪಕ್ಷಗಳು 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದರು.

ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆ ತೊರೆದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ್ ಪನಗಾರಿಯ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ನಿಷ್ಕ್ರಿಯ ಸಾಲ ಮತ್ತು ಹಗರಣದಿಂದಾಗಿಯೇ ಅವುಗಳನ್ನು ಖಾಸಗೀಕರಣ ಮಾಡಬೇಕು ಎಂದು ವಾದಿಸುತ್ತಿರುವುದಾಗಿ ಹೇಳಿದ್ದರು. ಆದರೆ, ಐಸಿಐಸಿಐ ಬ್ಯಾಂಕಿನಲ್ಲಿಯೂ ಸ್ವಜನ ಪಕ್ಷಪಾತ, ಹಿತಾಸಕ್ತಿ ಸಂಘರ್ಷದ ಹಗರಣ ನಡೆದಿದೆ. ಹಾಗಾದರೆ ಪನಗಾರಿಯಾ ಅವರೂ ಐಸಿಐಸಿಐ ಬ್ಯಾಂಕಿನ ಹಗರಣದ ನಂತರವೂ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕು ಎನ್ನುತ್ತಾರಾ?

ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಪ್ರಬಲವಾದ ವಕಾಲತ್ತು ಹಾಕಿದ್ದರು. ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕುಗಳ ಮಾರುಕಟ್ಟೆ ಶೇ.70ರಷ್ಟಿದೆ. ಅವರೇ ನೀಡಿರುವ ಅಂಕಿ ಅಂಶಗಳ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳ ಮಾರುಕಟ್ಟೆ ಪಾಲು ಪ್ರತಿ ವರ್ಷ ಶೇ.4ರಷ್ಟು ಕುಸಿಯುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪಾತ್ರ ತೀರಾ ಕ್ಷೀಣಿಸಲಿದೆ. ಇದೇ ವೇಳೆ ಖಾಸಗಿ ವಲಯದ ಬ್ಯಾಂಕುಗಳ ಮಾರುಕಟ್ಟೆಯನ್ನು ತೀವ್ರವಾಗಿ ವಿಸ್ತರಿಸಿಕೊಳ್ಳುತ್ತಿವೆ. ಖಾಸಗಿ ಬ್ಯಾಂಕುಗಳು ಹೂಡಿಕೆದಾರರಿಗೂ ಲಾಭ ತಂದುಕೊಟ್ಟಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಮಾರುಕಟ್ಟೆ ಬಂಡವಾಳ ಕ್ಷೀಣವಾಗುವ ಮುನ್ನ ಅವುಗಳನ್ನು ಖಾಸಗೀಕರಣಗೊಳಿಸಬೇಕು ಎಂದು ಅವರು ಸಲಹೆ ಮಾಡಿದ್ದರು.

ಐಸಿಐಸಿಐ ಹಗರಣ ಬಯಲಾದ ನಂತರ ಆ ಬ್ಯಾಂಕಿನ ಹೂಡಿಕೆದಾರರು ಶೇ.12ರಷ್ಟು ನಷ್ಟ ಅನುಭವಿಸಿದರು. ಐಸಿಐಸಿಐ ಹಗರಣ ಬಯಲಾದ ನಂತರವೂ, ಹಗರಣದಲ್ಲಿ ಖುದ್ದು ಸಿಇಒ ಸ್ವಜನಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದರೂ ಸ್ಥಾನ ತೊರೆಯದೇ ಮುಂದುವರೆದಿದ್ದಾರೆ. ಇಷ್ಟಾದರೂ ನಂದನ್ ನಿಲೇಕಣಿ ಅವರು ಈ ಬಗ್ಗೆ ಏನೂ ಮಾತನಾಡಿಲ್ಲ. ಕಾರ್ಪೊರೆಟ್ ಆಡಳಿತದ ಬಗ್ಗೆ ಪ್ರತಿಪಾದಿಸುವ ನಂದನ್ ನಿಲೇಕಣಿ ಐಸಿಐಸಿಐ ಹಗರಣದ ನಂತರ ಚಕಾರ ಎತ್ತಿಲ್ಲವೇಕೆ?

ಇನ್ಫೊಸಿಸ್ ಮಾಜಿ ಚೀಫ್ ಫೈನಾನ್ಷಿಯಲ್ ಆಫೀಸರ್ ಮೋಹನ್ ದಾಸ್ ಪೈ ಅವರು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದ ಪರವಾಗಿ ವಕಾಲತ್ತು ಹಾಕಿದ್ದರು. ಅರವಿಂದ್ ಪನಗಾರಿಯ ಅವರ ವಾದವನ್ನು ಸಮರ್ಥಿಸಿದ್ದ ಪೈ "ಹೌದು, ನಾನು ಪನಾಗರಿಯ ಅವರ ಮಾತನ್ನು ಒಪ್ಪುತ್ತೇನೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಅವುಗಳಿಗೆ ಸ್ವಾತಂತ್ರ ಬೇಕಿದೆ. ಈಗ ಸಮಸ್ಯೆ ಇರುವುದು ಈ ಬ್ಯಾಂಕುಗಳ ಮಾಲೀಕರದು. ಮಾಲೀಕರು ಬ್ಯಾಂಕುಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಸ್ವಂತಂತ್ರ ನೀಡುತ್ತಿಲ್ಲ,” ಎಂದಿದ್ದರು. ಆದರೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಐಸಿಐಸಿಐ ಬ್ಯಾಂಕಿನ ಸಿಇಒ ಸ್ವಜನಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷದ ಆರೋಪದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಮೋಹನ್ ದಾಸ್ ಪೈ ಏನನ್ನೂ ಹೇಳಿಲ್ಲ.

ಸಾರ್ವಜನಿಕ ವಲಯದ ಬ್ಯಾಂಕುಗಳ ಕುರಿತಂತೆ ಇನ್ಫೊಸಿಸ್ ಮಾಜಿ ಚೀಫ್ ಫೈನಾನ್ಷಿಯಲ್ ಆಫೀಸರ್ ವಿ ಬಾಲಕೃಷ್ಣನ್ ಸಾರ್ವಜನಿಕ ವಲಯದ ಬ್ಯಾಂಕುಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಖಾಸಗೀಕರಣವೇ ಉತ್ತರವಲ್ಲ ಎಂದು ವಾದಿಸಿದ್ದರು. ಐಸಿಐಸಿಐ ಹಗರಣ ಹೊರಬಿದ್ದ ನಂತರ ಬಾಲಕೃಷ್ಣನ್ ಅವರೇ ನಂದನ್ ನಿಲೇಕಣಿ ಮತ್ತು ಮೋಹನದಾಸ್ ಪೈ ಅವರಿಗಿಂತ ಹೆಚ್ಚು ಸೂಕ್ಷ್ಮ ಹಾಗೂ ಪ್ರಬುದ್ಧವಾಗಿ ಚಿಂತಿಸುತ್ತಾರೆಂಬುದು ಸಾಬೀತಾಗಿದೆ.

ರಾಜಕೀಯ ಹಸ್ತಕ್ಷೇಪ ಮುಕ್ತವಾದ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಹೊಂದಿರುವ ಆಡಳಿತ ಮಂಡಳಿಗಳ ಅವಶ್ಯಕತೆ ಸಾರ್ವಜನಿಕ ಬ್ಯಾಂಕುಗಳಿಗೆ ಇದೆ ಎಂಬ ವಾದ ಬಾಲಕೃಷ್ಣನ್ ಅವರದು. ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯ ದೊಡ್ಡ ಜನಸಮುದಾಯ ಇರುವ ಭಾರತಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳೇ ಸೂಕ್ತ. ಈ ಬ್ಯಾಂಕುಗಳು ಮಾತ್ರವೇ ಬಹುದೂರದವರೆಗೆ ಸಾಗಿ ಬ್ಯಾಂಕಿಂಗ್ ಸೌಲಭ್ಯ ಒದಗಿಸಬಲ್ಲವು. ಸಾಮಾಜಿಕ ಬದ್ಧತೆಯನ್ನು ನಿಭಾಯಿಸಬಲ್ಲವು. ಭಾರತದಲ್ಲಿನ ಜನರ ಉಳಿತಾಯ ಹೆಚ್ಚಿದೆ. ಅದಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸುರಕ್ಷತೆಯೇ ಕಾರಣ ಎಂದು ಬಾಲಕೃಷ್ಣನ್ ವಾದಿಸಿದ್ದರು.

ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಕಾರ್ಪೊರೆಟ್ ದಿಗ್ಗಜರು ವಕಾಲತ್ತು ವಹಿಸಿದ್ದನ್ನು ಕಟುವಾಗಿ ವಿರೋಧಿಸಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಿಎಂಡಿ ರಜನೀಶ್ ಕುಮಾರ್. ಸಾರ್ವಜನಿಕ ವಲಯದ ಬ್ಯಾಂಕುಗಳ ಸಮಸ್ಯೆಗೆ ನಿಷ್ಕ್ರಿಯ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚಿರುವುದೇ ಮುಖ್ಯ ಕಾರಣ. ನಿಷ್ಕ್ರಿಯ ಸಾಲದ ಹೊರೆಯನ್ನು ಇಟ್ಟುಕೊಂಡಿರುವವರೆಲ್ಲ ಉದ್ಯಮ ಸಂಘಟನೆಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತು ಮಾತನಾಡುತ್ತಾರೆ. ಮೊದಲು ಬ್ಯಾಂಕುಗಳಿಗೆ ಸಾಲ ಪಾವತಿ ಮಾಡಿ, ಅವುಗಳ ಸುಧಾರಣೆ ಬಗ್ಗೆ ಮಾತನಾಡಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಅಲ್ಲದೆ, ಖಾಸಗೀಕರಣವೇ ಎಲ್ಲ ಸಮಸ್ಯೆಗಳಿಗೆ ರಾಮಬಾಣ ಅಲ್ಲ, ಬ್ಯಾಂಕುಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವಾಗ ಸಮರ್ಥರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದರು. ಐಸಿಐಸಿಐ ಬ್ಯಾಂಕಿನ ಹಗರಣ ಹೊರ ಬಂದ ನಂತರ ರಜನೀಶ್ ಕುಮಾರ ಅವರ ವಾದ ಹೆಚ್ಚು ಅರ್ಥಪೂರ್ಣ ಎನಿಸುತ್ತಿದೆ.

ಕಾರ್ಪೊರೆಟ್ ವಲಯದಲ್ಲಿ ಖಾಸಗಿ ಬ್ಯಾಂಕುಗಳ ಪರವಾದ ಲಾಬಿ ಇದೆ. ಖಾಸಗಿ ಬ್ಯಾಂಕುಗಳನ್ನು ಉತ್ತೇಜಿಸುವ ಈ ಲಾಬಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಹಗರಣಗಳಾದಾಗ ಮುಗಿಬಿದ್ದು ಖಾಸಗೀಕರಣದ ಪರವಾಗಿ ಒತ್ತಡ ಹೇರುತ್ತದೆ. 2004ರಲ್ಲಿ ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ದಿವಾಳಿಯಾದಾಗ ಭಾರತೀಯ ರಿಸರ್ವ್ ಬ್ಯಾಂಕ್ ಠೇವಣಿದಾರರ ನೆರವಿಗೆ ಬಂತು. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜೊತೆ ವಿಲೀನಗೊಳಿಸಿತು. ಇದರಿಂದ ಓರಿಯಂಟಲ್ ಬ್ಯಾಂಕ್‌ಗೆ ಲಾಭಕ್ಕಿಂತ ನಷ್ಟವೇ ಆಗಿತ್ತು. ಆದರೆ, ವಿಲೀನ ಪ್ರಕ್ರಿಯೆಯಿಂದ ಗ್ರಾಹಕರ ಠೇವಣಿ ವಾಪಸಾಯಿತಾದರೂ ಹೂಡಿಕೆದಾರರು ನಷ್ಟ ಅನುಭವಿಸಿದರು.

ಖಾಸಗೀಕರಣದ ಪರವಾಗಿ ಮಾತನಾಡುವವರು 2008ರ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಲೆಮನ್ ಬ್ರದರ್ಸ್ ದಿವಾಳಿಯಾಗಿದ್ದು, ಮೆರಿಲ್ ಲಿಂಚ್ ನಷ್ಟ ಅನುಭವಿಸಿ ಬ್ಯಾಂಕ್ ಆಫ್ ಅಮೆರಿಕದಲ್ಲಿ ವಿಲೀನವಾಗಿದ್ದನ್ನು ಮರೆತಂತಿದೆ.

ಪ್ರಸ್ತುತ ರೇಟಿಂಗ್ ಏಜೆನ್ಸಿಗಳು, ಮಾರುಕಟ್ಟೆ ವಿಶ್ಲೇಷಕರು, ಫಂಡ್ ಹೌಸ್ ಮ್ಯಾನೇಜರ್‌ಗಳು ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಮಲತಾಯಿ ಧೋರಣೆ ತಳೆದಂತಿದೆ. ನಿಷ್ಕ್ರಿಯ ಸಾಲವನ್ನು ಮುಂದಿಟ್ಟುಕೊಂಡು ಇಡೀ ಸಾರ್ವಜನಿಕ ವಲಯದ ಬ್ಯಾಂಕುಗಳೇ ನಷ್ಟದಲ್ಲಿವೆ ಎಂಬಂತೆ ಬಿಂಬಿಸಲಾಗುತ್ತಿದೆ. ನಿಷ್ಕ್ರಿಯ ಸಾಲದ ಸಮಸ್ಯೆ ಕೇವಲ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸೀಮಿತವಾಗಿಲ್ಲ. ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ಎನ್‌ಪಿಎ ಶೇ.7.82ರಷ್ಟಿದೆ.

ಪ್ರತಿಷ್ಠಿತ ಖಾಸಗಿ ಬ್ಯಾಂಕು ಎಂದೇ ಹೆಸರಾಗಿರುವ ಆಕ್ಸಿಸ್ ಬ್ಯಾಂಕ್ ನಿಷ್ಕ್ರಿಯ ಸಾಲ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಕಾರಣಕ್ಕಾಗಿ ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶ ಮಾಡಿ, ಆಕ್ಸಿಸ್ ಬ್ಯಾಂಕ್ ಸಿಇಒ ಶಿಖಾ ಶರ್ಮ ಅವರನ್ನು ನಾಲ್ಕನೇ ಅವಧಿಗೆ ಮುಂದುವರೆಸುವ ಬಗ್ಗೆ ಮರುಪರಿಶೀಲನೆ ಮಾಡುವಂತೆ ಬ್ಯಾಂಕ್ ಆಡಳಿತ ಮಂಡಳಿಗೆ ಸೂಚಿಸಿತ್ತು. ಅದಾದ ನಂತರ ಶಿಖಾ ಅವಧಿಗೆ ಮುನ್ನ ಅಧಿಕಾರ ತೊರೆಯುವ ನಿರ್ಧಾರ ಪ್ರಕಟಸಿದ್ದಾರೆ.

ಕಾರ್ಪೊರೆಟ್ ವಲಯಗಳಿಗೆ ಬೃಹತ್ ಪ್ರಮಾಣದ ಸಾಲ ಬೇಕಾದರೆ ಸಾರ್ವಜನಿಕ ವಲಯದ ಬ್ಯಾಂಕುಗಳೇ ಬೇಕು. ಈಗ ಭಾರಿ ನಿಷ್ಕ್ರಿಯ ಸಾಲ ಹೊಂದಿರುವುದು ಈ ಬೃಹತ್ ಕಾರ್ಪೊರೆಟ್‌ಗಳೇ. ಯಾವಾಗಲೂ ಲಾಭ-ನಷ್ಟವನ್ನಷ್ಟೇ ನೋಡುವ ಕಾರ್ಪೊರೆಟ್‌ಗಳಿಗೆ ಯಾವಾಗಲೂ ಲಾಭ-ನಷ್ಟ ಮಾತ್ರ ನೋಡುವ ಖಾಸಗಿ ಬ್ಯಾಂಕುಗಳೇ ಪ್ರಿಯವಾಗಿದ್ದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ. ಆದರೆ, ನಾಗರಿಕತೆ ವ್ಯಾಪ್ತಿಯಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು ಸಾರ್ವಜನಿಕ ವಲಯದ ಬ್ಯಾಂಕುಗಳೇ ಹೊರತು ಖಾಸಗಿ ಬ್ಯಾಂಕುಗಳಲ್ಲ.

ಇದನ್ನೂ ಓದಿ : ಸರ್ಕಾರಿ ಬ್ಯಾಂಕುಗಳ ಸಮಸ್ಯೆಗೆ ಖಾಸಗೀಕರಣವೇ ರಾಮಬಾಣವಲ್ಲ: ರಜನೀಶ್ ಕುಮಾರ್

ಸಾರ್ವಜನಿಕ ವಲಯದ ಬ್ಯಾಂಕುಗಳ ಧ್ಯೇಯ ದೇಶದ ಜನರ ಶ್ರೇಯೋಭಿಯೋಭಿೃದ್ಧಿಯ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸುವುದಾಗಿರುತ್ತದೆ. ಆದರೆ, ಖಾಸಗಿ ಬ್ಯಾಂಕುಗಳಿಗೆ ತಮ್ಮ ಲಾಭ ಹೆಚ್ಚಿಸಿಕೊಂಡು ಷೇರು ದರ ಏರಿಸಿಕೊಂಡು ಮಾರುಕಟ್ಟೆ ಬಂಡವಾಳವನ್ನು ಅತ್ಯಲ್ಪ ಅವಧಿಯಲ್ಲಿ ದುಪ್ಪಟ್ಟು ಮಾಡಿಕೊಳ್ಳುವುದಷ್ಟೇ ಧ್ಯೇಯವಾಗಿರುತ್ತದೆ. ಇವುಗಳ ಪರವಾಗಿ ವಕಾಲತ್ತು ಹಾಕುವ ಕಾರ್ಪೊರೆಟ್ ದಿಗ್ಗಜರ ಧ್ಯೇಯವೂ ಇದೇ ಆಗಿದೆ. ಒಂದು ವೇಳೆ, ಸಾರ್ಜಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿದರೆ ಈ ಬ್ಯಾಂಕುಗಳ ವಹಿವಾಟು ಹೆಚ್ಚಳವಾಗಿ, ಲಾಭ ದುಪ್ಪಟ್ಟಾಗಿ, ಮಾರುಕಟ್ಟೆ ಬಂಡವಾಳ ಬಹುಪಟ್ಟು ಏರಬಹುದು. ಆದರೆ, ಜನಸಾಮಾನ್ಯನಿಗೆ ಕೈಗೆಟಕುವ ದರದಲ್ಲಿ ಬ್ಯಾಂಕಿಂಗ್ ಸೇವೆ ಸಿಗುತ್ತದೆ ಎಂಬುದಕ್ಕೆ ಯಾರು ತಾನೇ ಗ್ಯಾರಂಟಿ ನೀಡುತ್ತಾರೆ?

ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕುಗಳ ಪ್ರಕರಣಗಳು ಖಾಸಗಿ ಬ್ಯಾಂಕುಗಳೇನು ಶ್ರೇಷ್ಠವಲ್ಲ ಎಂಬ ಸ್ಪಷ್ಟ ನಿದರ್ಶನಗಳಾಗಿ ನಮ್ಮ ಮುಂದಿವೆ. ಈ ಎರಡೂ ಪ್ರಕರಣಗಳು ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವವರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಲು ಪ್ರೇರಣೆ ಆಗಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More