ಟ್ವಿಟರ್ ಸ್ಟೇಟ್ | ಎಟಿಎಂ ‘ನೋ ಕ್ಯಾಶ್’ ತಾತ್ಕಾಲಿಕ ಎಂದ ಜೇಟ್ಲಿಗೆ ಟಾಂಗ್

ಹಲವು ರಾಜ್ಯಗಳಲ್ಲಿ ಎಟಿಎಂನಲ್ಲಿ ನಗದು ಕೊರತೆಯಾಗಿರುವ ಹಿನ್ನೆಲೆಯಲ್ಲಿ ನೋಟು ಅಮಾನ್ಯದ ದಿನಗಳು ಜನರಿಗೆ ಮತ್ತೆ ನೆನಪಾಗುವಂತಾಗಿದೆ. ವಿತ್ತ ಸಚಿವರು ಈ ಕೊರತೆ ತಾತ್ಕಾಲಿಕ ಎಂದು ಹೇಳಿರುವುದು ಟ್ವೀಟಿಗರಿಗೆ ಸಮಾಧಾನ ತಂದಿಲ್ಲ. ಈ ಹಿನ್ನೆಲೆಯಲ್ಲಿ ಟ್ವೀಟಿಗರ ಅಭಿಪ್ರಾಯ ಇಲ್ಲಿದೆ

ಹಲವು ರಾಜ್ಯಗಳಲ್ಲಿ ನಗದು ಹಣ ಎಟಿಎಂಗಳಲ್ಲಿ ದೊರೆಯದೆ ಇರುವ ಸಮಸ್ಯೆ ಇಂದು ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗಿ ಕೇಂದ್ರ ವಿತ್ತಸಚಿವರು ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಹಣ ಎಟಿಎಂಗಳಲ್ಲಿ ನಗದು ಹಣದ ಕೊರತೆ ಕಡಿಮೆಯಾಗಿತ್ತು. ಇದೀಗ ನವದೆಹಲಿ, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ನಗದು ಕೊರತೆ ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಟ್ವಿಟರ್‌ನಲ್ಲೂ ನಗದು ಕೊರತೆಗೆ ಸಂಬಂಧಿಸಿದ ಚರ್ಚೆ ಹಲವು ಆಯಾಮಗಳಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರು ಟ್ವೀಟ್ ಮಾಡಿ, “ಹಲವು ರಾಜ್ಯಗಳಲ್ಲಿ ಎಟಿಎಂಗಳಲ್ಲಿ ಹಣದ ಕೊರತೆ ಆಗಿರುವುದು ಕಂಡಾಗ ದೊಡ್ಡ ನೋಟುಗಳು ಕಣ್ಮರೆಯಾಗುವುದು ಗಮನಕ್ಕೆ ಬಂದಿದೆ. ಇದು ನೋಟು ಅಮಾನ್ಯದ ದಿನಗಳನ್ನು ನೆನಪಿಸಿದೆ. ದೇಶದಲ್ಲಿ ಹಣಕಾಸು ತುರ್ತು ಸ್ಥಿತಿ ಬಂದಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆದಿಯಾಗಿ ವಿಪಕ್ಷಗಳು ಎಟಿಎಂಗಳಲ್ಲಿ ನಗದು ಕೊರತೆ ಆವರಿಸಿರುವ ಬಗ್ಗೆ ಟೀಕಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಟ್ವೀಟ್ ಮೂಲಕ ಉತ್ತರಿಸಿದ್ದಾರೆ. “ದೇಶದಲ್ಲಿ ನಗದು ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದೇನೆ. ವ್ಯವಹಾರಕ್ಕೆ ಅಗತ್ಯವಾಗಿರುವುದಕ್ಕಿಂತ ಹೆಚ್ಚಿನ ನಗದು ದೇಶದಲ್ಲಿ ಚಲಾವಣೆಯಲ್ಲಿದ್ದು, ಬ್ಯಾಂಕ್‌ಗಳಲ್ಲೂ ಲಭ್ಯವಿರುತ್ತದೆ. ಆಕಸ್ಮಿಕ ಮತ್ತು ಅಸಹಜವಾಗಿ ತಾತ್ಕಾಲಿಕವಾಗಿ ನಗದು ಕೊರತೆ ಕೆಲವು ಕಡೆ ಸೃಷ್ಟಿಯಾಗಿರುವುದನ್ನು ತ್ವರಿತವಾಗಿ ನಿಭಾಯಿಸಲಾಗುವುದು,” ಎಂದು ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ. ಈ ನಡುವೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ೨೦೦೦ ರೂಪಾಯಿ ನೋಟುಗಳು ಆಕಸ್ಮಿಕವಾಗಿ ಚಾಲ್ತಿಯಿಂದ ದೂರವಾಗಿರುವುದರ ಹಿಂದೆ ಪಿತೂರಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿರುವುದನ್ನು ಪತ್ರಕರ್ತೆ ಗಾರ್ಗಿ ರಾವತ್ ಟ್ವೀಟ್ ಮಾಡಿದ್ದಾರೆ. ಬಹಳಷ್ಟು ಮಂದಿ ಟ್ವೀಟಿಗರು ಅರುಣ್ ಜೇಟ್ಲಿಯವರು ನಗದು ಸಮಸ್ಯೆ ತಾತ್ಕಾಲಿಕ ಎಂದು ಹೇಳಿರುವುದನ್ನು ಟೀಕಿಸಿದ್ದಾರೆ.

ಕೆಲವು ಜನಪ್ರಿಯ ಟ್ವೀಟಿಗರು, ನಗದು ಕೊರತೆ ನೋಟು ಅಮಾನ್ಯದ ದಿನಗಳನ್ನು ನೆನಪಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಶಿವಂ ವಿಜ್ ಟ್ವೀಟ್ ಮಾಡಿ, “ಬಿಕ್ಕಟ್ಟು ಎಂದಿದ್ದರೂ ಬಿಕ್ಕಟ್ಟೇ. ಮೋದಿ ಸರ್ಕಾರ ಅತ್ಯಾಚಾರ ಮತ್ತಿತರ ವಿವಾದಗಳಿಂದ ಸುಧಾರಿಸಿಕೊಳ್ಳುತ್ತಲೇ ನಗದು ಕೊರತೆ ಸಮಸ್ಯೆಯನ್ನು ಎದುರಿಸುತ್ತಿದೆ. ಹಲವು ರಾಜ್ಯಗಳ ಎಟಿಎಂಗಳಲ್ಲಿ ನಗದೇ ಇಲ್ಲ. ಇದು ನೋಟು ಅಮಾನ್ಯದ ವೈಫಲ್ಯವನ್ನು ಜನರು ನೆನಪಿಸಿಕೊಳ್ಳುವಂತೆ ಮಾಡಿದೆ,” ಎಂದು ಹೇಳಿದ್ದಾರೆ. “೨೦೧೬ರ ನವೆಂಬರ್‌ನಿಂದಲೇ ಎಟಿಎಂಗಳು ಖಾಲಿ ಬಿದ್ದಿವೆ. ಇದೀಗ ಮತ್ತೆ ಖಾಲಿಯಾಗಿವೆ. ಹಣ ತುಂಬಿ ತುಳುಕುತ್ತಿರುವ ಪಕ್ಷವೆಂದರೆ ಬಿಜೆಪಿ ಮಾತ್ರ. ಉಳಿದವರೆಲ್ಲರೂ ಕಷ್ಟಪಡುತ್ತಿದ್ದಾರೆ,” ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ. ಬಹಳಷ್ಟು ರಾಜ್ಯಗಳ ಟ್ವೀಟಿಗರು ತಮ್ಮ ನಗರಗಳಲ್ಲಿ ನಗದು ಕೊರತೆಯಾಗಿರುವ ಬಗ್ಗೆ ಟ್ವಿಟರ್‌ ಸಂದೇಶ ಹಾಕುತ್ತಿದ್ದಾರೆ. ಪತ್ರಕರ್ತೆ ಸುಪರ್ಣಾ ಸಿಂಗ್ ಟ್ವೀಟ್ ಮಾಡಿ, “ಹಣಕಾಸು ಸಚಿವರು ಶೇ.೮೫ರಷ್ಟು ಎಟಿಎಂಗಳು ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ. ಆದರೆ ದೆಹಲಿಯಲ್ಲಿ ಬಹುತೇಕ ಎಟಿಎಂಗಳಲ್ಲಿ ಇಂದು ನಗದಿರಲಿಲ್ಲ,” ಎಂದು ಹೇಳಿದ್ದಾರೆ. ಪತ್ರಕರ್ತ ಪ್ರಶಾಂತ್ ಕುಮಾರ್ ಅವರೂ ದೆಹಲಿಯಲ್ಲಿ ಎಟಿಎಂಗಳಲ್ಲಿ ನಗದು ಕೊರತೆಯಾಗಿರುವುದನ್ನು ವರದಿ ಮಾಡಿದ್ದಾರೆ. ಸುಶಾಂತ್ ಸಿನ್ಹಾ ಅವರು ಬೆಂಗಳೂರಿನಲ್ಲಿ ನಗದಿಗಾಗಿ ಐದಾರು ಎಟಿಎಂಗಳನ್ನು ಸುತ್ತಾಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಟ್ವೀಟಿಗ ಡಾ ಅಜಯ್ ಕುಮಾರ್ ಅವರು ಜಾರ್ಖಂಡ್‌ನಲ್ಲೂ ನಗದು ಕೊರತೆಯಾಗಿದೆ ಎಂದರೆ, ಹೈದರಾಬಾದ್‌ನಲ್ಲಿ ನಗದಿಲ್ಲ ಎನ್ನುವ ವಿವರವನ್ನು ಶ್ರೀನಿವಾಸ್ ಬಸವರಾಜು ಟ್ವೀಟ್ ಮಾಡಿದ್ದಾರೆ. ಹಲವು ರಾಜ್ಯಗಳಲ್ಲಿ ಟ್ವೀಟಿಗರು ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಚುನಾವಣೆ ಕರಾಮತ್ತು; ಕ್ಷಣದಲ್ಲೇ ಬರಿದಾಗುತ್ತಿವೆ ರಾಜ್ಯದ ಎಂಟಿಎಂಗಳು!

ನಗದು ಕೊರತೆಯಾಗಿರುವುದಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಹಾಗೂ ೨೦೧೯ರ ಲೋಕಸಭಾ ಚುನಾವಣೆಯ ನಂಟಿದೆ ಎಂದು ಹಲವು ಟ್ವೀಟಿಗರು ಸಂಶಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಅರುಣ್ ಜೇಟ್ಲಿ ಅವರ ಹೇಳಿಕೆಗೆ ಕಟುವಾಗಿ ಉತ್ತರಿಸಿದ್ದಾರೆ. “ಎಟಿಎಂನಲ್ಲಿ ಹಣವಿಲ್ಲದೆ ಇರುವ ಹಿನ್ನೆಲೆಯಲ್ಲಿ ನಗದು ಕೊರತೆ ತಾತ್ಕಾಲಿಕ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಕರ್ನಾಟಕ ಚುನಾವಣೆ ನಂತರ ನಗದು ವಾಪಸು ಬರುತ್ತದೆ ಎಂದು ಅವರಿಗೆ ತಿಳಿದಿರುವ ಹಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಕೋಟ್ಯಂತರ ಹಣ ಖರ್ಚು ಮಾಡಿ ನಗದು ಕೊರತೆಯನ್ನು ಸೃಷ್ಟಿಸಿದೆ,” ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. “ವಿಪಕ್ಷಗಳಿಗೆ ಹಣ ಸಿಗದಂತೆ ಸರ್ಕಾರ ನಗದನ್ನೆಲ್ಲ ಒಳಗೆಳೆದುಕೊಳ್ಳುತ್ತಿದೆಯೇ?” ಎನ್ನುವ ಸಂಶಯವನ್ನು ಮಾಜಿ ವಿದೇಶಾಂಗ ರಾಯಭಾರಿ ಕೆ ಸಿ ಸಿಂಗ್ ಟ್ವೀಟ್ ಮಾಡಿದ್ದಾರೆ. ಆಪ್ ಪಕ್ಷದ ನಾಯಕರಾದ ಪೃಥ್ವಿ ರೆಡ್ಡಿ ಅವರೂ, “ಕರ್ನಾಟಕದ ಚುನಾವಣೆ ಹಿನ್ನೆಲೆಯಲ್ಲಿ ನಗದನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ,” ಎನ್ನುವ ಸಂಶಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಪತ್ರಕರ್ತ ಜಾಕಾ ಜೇಕಬ್ ಅವರು ಆರ್‌ಬಿಐ ನಗದು ಕೊರತೆ ಬಗ್ಗೆ ಒಂದೂ ಶಬ್ದ ಆಡದೆ ಇರುವುದನ್ನು ಪ್ರಶ್ನಿಸಿದ್ದಾರೆ.

ವಕೀಲ ಸಂಜಯ್ ಹೆಗಡೆ ಅವರು, ಜನರು ನಗದು ಕೂಡಿಡುತ್ತಿರುವ ಕಾರಣ ಚಲಾವಣೆ ಕಡಿಮೆಯಾಗಿದೆ ಎಂದು ಅಂದಾಜಿಸಿದ್ದಾರೆ. “ನೋಟು ಅಮಾನ್ಯದ ಕಾಲದಿಂದಲೂ ಚಲಾವಣೆಯಲ್ಲಿ ಸಮಸ್ಯೆಯಾಗಿದೆ. ನಗದನ್ನು ಜನರು ಕೂಡಿಡುತ್ತಾ ಹೋಗುತ್ತಿದ್ದಂತೆಯೇ ಚಲಾವಣೆಯಲ್ಲಿರುವ ನಗದು ಕಡಿಮೆಯಾಗಿದೆ. ಚಲಾವಣೆಗೆ ಅಗತ್ಯವಾಗಿರುವಷ್ಟು ಹಣವನ್ನು ಮುದ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ,” ಎಂದು ಸಂಜಯ್ ಟ್ವೀಟ್ ಮಾಡಿದ್ದಾರೆ. ಅವರಿಗೆ ಉತ್ತರಿಸಿದ ಪತ್ರಕರ್ತೆ ಸ್ಮಿತಾ ಪ್ರಕಾಶ್, “ಅಥವಾ ಆರ್‌ಬಿಐ ೨೦೦೦ದ ನೋಟುಗಳನ್ನು ಮುದ್ರಿಸುವುದನ್ನು ಕಡಿಮೆ ಮಾಡಿರಬಹುದು. ಕೇವಲ ರು. ೫೦೦ ಮತ್ತು ರು. ೨೦೦ ನೋಟುಗಳು ಮಾತ್ರ ಮಾರುಕಟ್ಟೆಗೆ ಬರುತ್ತಿವೆ,” ಎಂದು ತಮ್ಮ ಅಭಿಪ್ರಾಯ ಟ್ವೀಟ್ ಮಾಡಿದ್ದಾರೆ. ಆದರೆ, ನೋಟು ಅಮಾನ್ಯದ ಪರಿಣಾಮ ಇಂದಿಗೂ ಜನರನ್ನು ಕಾಡುತ್ತಿದೆ ಎಂದು ಸಂಜಯ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ನೋಟು ಅಮಾನ್ಯದ ಸಮಸ್ಯೆ ಈಗಲೂ ಮುಂದುವರಿದಿದೆ ಎನ್ನುವ ಅಭಿಪ್ರಾಯವನ್ನೇ ಹಲವು ಟ್ವೀಟಿಗರು ಮುಂದಿಟ್ಟಿದ್ದಾರೆ.

ಹಣಕಾಸು ಮ್ಯಾನೇಜರ್ ಆಗಿರುವ ವಿಕಾಸ್ ಪಾಂಡೆ ಅವರು ಟ್ವೀಟ್ ಮಾಡಿ, “ಸದ್ಯ ೧೮.೫ ಲಕ್ಷ ಕೋಟಿ ನಗದು ಚಲಾವಣೆಯಲ್ಲಿದೆ. ನೋಟು ಅಮಾನ್ಯಕ್ಕೆ ಹೋಲಿಸಿದರೆ ೩ ಲಕ್ಷ ಕೋಟಿ ಹೆಚ್ಚು ನಗದು ಚಲಾವಣೆಯಲ್ಲಿದೆ. ಹಾಗಿದ್ದರೂ ಎಟಿಎಂಗಳಲ್ಲಿ ನಗದು ಕೊರತೆಯಾಗಿದೆ. ಬಾಗಶಃ ಹಣವನ್ನು ನಗದಾಗಿ ಬದಲಿಸಲಾಗಿದೆ ಅಥವಾ ವಿದೇಶದಲ್ಲಿ ಕೂಡಿಡಲಾಗಿದೆ. ಸಾಲದ ಬೇಡಿಕೆ ಇನ್ನೂ ಕಡಿಮೆಯೇ ಇದೆ,” ಎಂದು ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಟ್ವೀಟಿಗರು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆಯೇ ಆರೋಪಗಳನ್ನು ಹೊರಿಸಿದ್ದಾರೆ. “ಬ್ಯಾಂಕಿಂಗ್ ವ್ಯವಸ್ಥೆ ನೋಟುಗಳನ್ನು ಎಟಿಎಂಗಳಿಗೆ ವಿತರಿಸುವ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ,” ಎಂದು ಪತ್ರಕರ್ತ ಮಹೇಶ್ ವಿಜಪುರ್‌ಕರ್ ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿ ಕನ್ನಯ್ಯ ಕುಮಾರ್ ಅವರು ನಗದುರಹಿತ ಸಮಾಜ ಎಂದ ಕೂಡಲೇ ನಗದುರಹಿತ ಎಟಿಎಂಗಳು ಎಂದು ಸರ್ಕಾರ ಅಂದುಕೊಂಡ ಹಾಗಿದೆ ಎಂದು ತಮಾಷೆ ಮಾಡಿದ್ದಾರೆ. ನಿರ್ದೇಶಕ ಶಿರಿಶ್ ಕುಂದರ್ ಅವರು ಹಾಸ್ಯ ಮಾಡುತ್ತಾ, “ಹೌದು, ನಗದು ಕೊರತೆ ತಾತ್ಕಾಲಿಕ. ಇನ್ನೊಂದೇ ವರ್ಷ,” ಎಂದು ಬಿಜೆಪಿ ಸರ್ಕಾರ ಶೀಘ್ರದಲ್ಲಿಯೇ ಕೆಳಗಿಳಿಯಲಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. “ಖಾಲಿ ಎಟಿಎಂಗಳು! ತೀವ್ರ ನಗದು ಕೊರತೆ. ಈಗ ನಾವು ಹಿಂದಿನ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಬೇಕು,” ಎಂದು ಪ್ರಧಾನಿ ನರೇಂದ್ರ ಮೋದಿಯವರು ಪೇಟಿಎಂ ಜಾಹೀರಾತಿನಲ್ಲಿ ಕಂಡುಬಂದಿರುವ ಫೋಟೋ ಟ್ಯಾಗ್ ಮಾಡಿ ಟ್ವೀಟ್ ಹಾಕಿದ್ದಾರೆ. ಬಹಳಷ್ಟು ಮಂದಿ ಬಿಜೆಪಿಯ ಕೆಟ್ಟ ದಿನಗಳು ಆರಂಭವಾಗಿವೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ಟ್ವೀಟಿಗರು ಮೋದಿ ಸರ್ಕಾರವನ್ನು ವ್ಯಂಗ್ಯ, ಅಪಹಾಸ್ಯ ಮಾಡಲು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More