ಈಗಾಗಲೇ ಮಿಂಚಿಹೋದ ಕಾಲದಲ್ಲಿ ಚಿಂತಿಸುತ್ತಿದ್ದಾರೆಯೇ ಸೀತಾರಾಂ ಯೆಚೂರಿ?

ಏಕಾಂಗಿಯಾಗಿ ಹೋರಾಡುವ ಕಾಲ ಇದಲ್ಲ ಎನ್ನುವ ಸಿಪಿಎಂ ಪ್ರಧಾನ ಕಾರ್ಯದರ್ಶಿಗಳ ನಿಲುವು ಆದರ್ಶನೀಯ. ಆದರೆ, ಇದು ಪ್ರಾಯೋಗಿಕವೇ? ಸದ್ಯ, ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಪಕ್ಷದ 22ನೇ ಅಧಿವೇಶನದಲ್ಲಿ ಈ ಗೊಂದಲಗಳಿಗೆ ತೆರೆ ಎಳೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ

‘ಗುರಿಯೇನೋ ಸುಂದರ, ಹಾದಿ ಮಾತ್ರ ಕಂದರ’ -ಸಿಪಿಎಂನ ಸದ್ಯದ ಸ್ಥಿತಿ ಇದು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದು ಪಕ್ಷದ ಗುರಿ. ಆದರೆ, ಅದಕ್ಕಾಗಿ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಮಾತ್ರ ಗೊಂದಲ. ಕೆಲವು ತಿಂಗಳ ಹಿಂದೆಯೇ ಉಂಟಾಗಿದ್ದ ಈ ಗೊಂದಲ ಈಗ ಬೃಹದಾಕಾರ ತಳೆದು ನಿರ್ಣಾಯಕ ಘಟ್ಟ ತಲುಪಿದೆ. ನಾಳೆ (ಏ.17) ಹೈದರಾಬಾದಿನಲ್ಲಿ ನಡೆಯಲಿರುವ ಸಮಾವೇಶ ಈ ಗೊಂದಲಗಳನ್ನು ಹೇಗೆ ನಿಭಾಯಿಸುತ್ತದೆ ಎಂಬ ಕುತೂಹಲ ಮೂಡಿದೆ. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಗೊಂದಲಗಳು ಮಹತ್ವ ಪಡೆದುಕೊಂಡಿವೆ.

ಏಕಾಂಗಿಯಾಗಿ ಹೋರಾಡುವ ಕಾಲ ಇದಲ್ಲ ಎನ್ನುವ ಯೆಚೂರಿ ನಿಲುವಿನಲ್ಲಿ ಒಳ್ಳೆಯ ಆದರ್ಶವಿದೆ. ಬಲಪಂಥೀಯ ಪಕ್ಷವೊಂದರ ವಿರುದ್ಧ 2019ರ ಚುನಾವಣೆಯಲ್ಲಿ ಸಾಂಘಿಕ ಹೋರಾಟ ನಡೆಸಬೇಕು ಎಂಬ ಅವರ ನಿಲುವು ಒಪ್ಪುವಂತಹುದ್ದೇ. ಆದರೆ, ಅದು ಪ್ರಾಯೋಗಿಕವಾಗಿ ಸಾಧ್ಯವೇ ಎಂಬುದನ್ನು ಅವರು ಮೊದಲೇ ಅರ್ಥಮಾಡಿಕೊಳ್ಳಬೇಕಿತ್ತು. ಅದನ್ನು ಸಾಧ್ಯವಾಗಿಸಲು ಪಕ್ಷದೊಳಗೆ ಮನವೊಲಿಸುವ ಕಾರ್ಯ ಮಾಡಬೇಕಿತ್ತು. ಆದರೆ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅವರಾಡಿದ ಮಾತುಗಳು ಪಕ್ಷದ ಕಾಂಗ್ರೆಸ್ ವಿರೋಧಿಗಳನ್ನು ಇನ್ನಷ್ಟು ದೂರ ತಳ್ಳಿದವೇ ವಿನಾ ಹತ್ತಿರಕ್ಕೆ ಸೆಳೆಯಲಿಲ್ಲ. ಪರಿಣಾಮವಾಗಿ, ಬಿಜೆಪಿ ವಿರುದ್ಧ ಹೋರಾಡುವ ಮೊದಲು ಪಕ್ಷದೊಳಗೇ ಯೆಚೂರಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ಪಕ್ಷವನ್ನು ಹೋಳು ಮಾಡುವ ಮಟ್ಟಕ್ಕೆ ಈ ಭಿನ್ನಾಭಿಪ್ರಾಯ ಆಕಾರ ಪಡೆದಿದೆ ಎಂಬ ಮಾತುಗಳಿವೆ. ಯೆಚೂರಿ ಅಧಿಕಾರದಲ್ಲಿ ಮುಂದುವರಿಯಲಿ, ಬಿಡಲಿ, ಪಕ್ಷದಲ್ಲಿ ಭಾರಿ ಕಂದಕ ಏರ್ಪಡುವುದಂತೂ ನಿಜ ಎಂದು ಪಕ್ಷದ ಕೆಲವರು ಹೇಳುತ್ತಿದ್ದಾರೆ.

ದಲಿತರಿಗೆ ಪಕ್ಷದಲ್ಲಿ ಆದ್ಯತೆ ನೀಡುವ ಯೆಚೂರಿ ಅವರ ‘ನೀಲ್-ಲಾಲ್’ ಘೋಷಣೆ ಎಲ್ಲಿತ್ತೋ ಅಲ್ಲೇ ನಿಂತಿದೆ. ಯೆಚೂರಿ ಅವರಂತಹ ನಾಯಕರು ನೀಲಿ-ಕೆಂಪು ಜಿಂದಾಬಾದ್ ಎನ್ನುತ್ತಾರಾದರೂ ಅದನ್ನು ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಜಾರಿಗೊಳಿಸಲಾಗಿದೆ ಎಂಬ ಪ್ರಶ್ನೆ ಇದೆ. ದಲಿತರಿಗೆ ಮನ್ನಣೆ ನೀಡುವ ಪ್ರಯೋಗವನ್ನು ಕರ್ನಾಟಕ ವಿಧಾನಸಭೆ ಚುನಾವಣೆ ನೆವದಲ್ಲಿ ದೊಡ್ಡ ಮಟ್ಟಿಗೆ ಮಾಡಬಹುದಿತ್ತು. ಆದರೆ, ಅದರ ಸುಳಿವು ಕೂಡ ಕಾಣಲಿಲ್ಲ. ಈ ಘಟ್ಟದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡುವ, ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವವನ್ನು ಯೆಚೂರಿ ಮುಂದಿಟ್ಟಿದ್ದಾರೆ. ಇದು ಕೂಡ ಅವರ ಹಲವು ಘೋಷಣೆಗಳಂತೆ ಆದರ್ಶದ ನೆಲೆಯಲ್ಲೇ ಉಳಿದಿದ್ದು, ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂಬುದನ್ನು ಪಕ್ಷದ ಬೆಳವಣಿಗೆಗಳು ಸೂಚಿಸುತ್ತಿವೆ.

ಯೆಚೂರಿ ತಮ್ಮ ಸ್ಥಾನದಲ್ಲಿ ಮುಂದುವರಿಯಲಿ ಎಂಬ ಪಶ್ಚಿಮ ಬಂಗಾಳ ಘಟಕದ ವಾದಕ್ಕೆ ಅಡ್ಡಗಾಲಾಗಿ ನಿಂತಿರುವುದು ಕೇರಳ ಬಣ. ಇದು ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಪ್ರಣೀತ ಗುಂಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಯೆಚೂರಿ ಹಾಗೂ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ನಡುವೆ ಕೆಲ ತಿಂಗಳ ಹಿಂದೆಯೇ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. 2016ರಿಂದಲೂ ಈ ಬಗ್ಗೆ ಇಬ್ಬರಲ್ಲೂ ಸಹಮತವಿಲ್ಲ. ಕಾರಟ್ ನಿಲುವನ್ನು ಸಿಪಿಎಂ ಕೇರಳ ಘಟಕ ಬೆಂಬಲಿಸಲು ಎರಡು ಕಾರಣಗಳಿವೆ. ಕಾರಟ್ ಕೇರಳ ವಲಯದಲ್ಲಿ ಪ್ರಭಾವಿ ಎಂಬುದು ಮೇಲ್ನೋಟದ ಮಾತಾದರೆ, ಕೇರಳದಲ್ಲಿ ಕೂಡ ಸಿಪಿಎಂಗೆ ಕಾಂಗ್ರೆಸ್ ಎದುರಾಳಿ ಎಂಬ ಸತ್ಯ ಬಹಳ ಆಳದ್ದು. ಅಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವಿನ ಸಂಘರ್ಷಗಳು ಹಿಂಸಾತ್ಮಕ ರೂಪ ಪಡೆದುಕೊಂಡ ಉದಾಹರಣೆಗಳಿವೆ. ಇತ್ತ ಯೆಚೂರಿ ಬದಲಾದರೆ ಪತ್ನಿ ಬೃಂದಾ ಕಾರಟ್ ಅವರನ್ನು ಆ ಹುದ್ದೆಗೆ ತರಬಹುದು ಎಂದು ಕಾರಟ್ ಯೋಚಿಸಿದಂತಿದೆ. ಆದರೆ, ಅದು ವಂಶ ರಾಜಕಾರಣಕ್ಕೆ ನಾಂದಿ ಹಾಡುವ ಅಪಾಯವಿದೆ. ಇದೇ ನೆಪವೊಡ್ಡಿ ಒಂದು ಗುಂಪು ಮಾಣಿಕ್ ಸರ್ಕಾರ್ ಅವರನ್ನು ಬೆಂಬಲಿಸುತ್ತಿದೆ. ಮಾಣಿಕ್ ಉನ್ನತ ಹುದ್ದೆ ಅಲಂಕರಿಸಿದರೆ ತಟಸ್ಥ ನಾಯಕತ್ವಕ್ಕೆ ಜಯ ದೊರೆತಂತಾಗುತ್ತದೆ ಎಂಬ ವಾದವಿದೆ. ಯೆಚೂರಿ ಮತ್ತು ಕಾರಟ್ ಗುಂಪುಗಳು ಮುಂದೆ ಉಂಟು ಮಾಡಬಹುದಾದ ಬಿರುಕನ್ನು ಇದು ತಡೆಯಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಯೆಚೂರಿ ನಂತರ ತೆರವಾಗುವ ಸ್ಥಾನಕ್ಕೆ ತೆಲಂಗಾಣದ ಬಿ ವಿ ರಾಘವುಲು ಹೆಸರು ಮೊದಲಿನಿಂದಲೂ ಕೇಳಿಬರುತ್ತಿತ್ತು. ರಾಘವುಲು ಹೇಳಿ ಕೇಳಿ ಕಾರಟ್-ಪಿಣರಾಯ್ ಅನುಯಾಯಿ. ಅಲ್ಲದೆ, ಯೆಚೂರಿ ಅವರಂತೆಯೇ ತೆಲುಗು ಸೀಮೆಯವರು. ರಾಘವುಲು ಅಧಿಕಾರಕ್ಕೆ ಬರಲು ಸ್ವತಃ ಯೆಚೂರಿ ಗುಂಪು ಅಡ್ಡಗಾಲು ಹಾಕುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಈಗಾಗಲೇ ತೆಲುಗಿನ ಯೆಚೂರಿ ಅವರಿಗೆ ಸ್ಥಾನ ದೊರೆತಿರುವುದು ರಾಘವಲು ನಡೆಗೆ ತಡೆಯೊಡ್ಡಬಹುದು. ಬೃಂದಾ ಬದಲಿಗೆ ಕೇರಳದಿಂದಲೇ ಯಾರಾದರೂ ನಾಯಕರನ್ನು ಪಕ್ಷದ ಉನ್ನತ ಹುದ್ದೆಗೆ ಆರಿಸುವ ಪ್ರಸ್ತಾವನೆ ಅಷ್ಟು ಸುಲಭವಾಗಿ ತೋರುತ್ತಿಲ್ಲ. ಎಸ್ ರಾಮಚಂದ್ರನ್ ಪಿಳ್ಳೈ ಅವರ ವಯಸ್ಸು ಪಕ್ಷದ ಚುಕ್ಕಾಣಿ ಹಿಡಿಯಲು ಅಡ್ಡಬರುತ್ತಿದೆ. ಕೇರಳ ಮೂಲದ ಪಾಲಿಟ್ ಬ್ಯೂರೊ ಸದಸ್ಯ ಎಂ ಎ ಬೇಬಿ ಅವರಿಗೆ ಉತ್ಸಾಹವಿದ್ದರೂ ಕೇರಳದೊಳಗೇ ಬೆಂಬಲದ ಕೊರತೆ ಎದುರಿಸುತ್ತಿದ್ದಾರೆ. ಇತ್ತ ಉತ್ತರ ಪ್ರದೇಶದ ಸುಭಾಷಿಣಿ ಅಲಿ ಅವರಿಗೂ ಕಾಲ ಕೂಡಿ ಬಂದಿಲ್ಲ ಎಂಬ ಮಾತುಗಳಿವೆ.

ಇದನ್ನೂ ಓದಿ : ತಾರಕಕ್ಕೇರಿದ ಸಿಪಿಎಂ ನಾಯಕರಾದ ಯೆಚೂರಿ, ಕಾರಟ್‌ ನಡುವಿನ ಶೀತಲ ಸಮರ

ಮೊದಮೊದಲು ಯೆಚೂರಿ ನಿಲುವನ್ನು ತ್ರಿಪುರ ಘಟಕ ಬೆಂಬಲಿಸಿತ್ತಾದರೂ, ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಟಾದ ಬಳಿಕ ತನ್ನ ನಿಲುವಿನಲ್ಲಿ ಗುರುತರ ಬದಲಾವಣೆ ಮಾಡಿಕೊಂಡಂತಿದೆ. ಕೇರಳದಂತೆಯೇ ತ್ರಿಪುರದಲ್ಲಿ ಕೂಡ ಸಿಪಿಎಂ ಹಾಗೂ ಕಾಂಗ್ರೆಸ್ ಹಾವು-ಮುಂಗುಸಿಗಳಿದ್ದಂತೆ. ಅಲ್ಲಿ ಮಾಣಿಕ್ ನೇತೃತ್ವದ ಸಿಪಿಎಂ ಸೋಲಲು ಕಾಂಗ್ರೆಸ್ ಕೊಡುಗೆಯೂ ಇತ್ತು. ಮಾಣಿಕ್ ಅವರೊಬ್ಬ ಬೆಂಗಾಳಿ ಮನುಷ್ಯ, ತ್ರಿಪುರದ ಬುಡಕಟ್ಟು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಎಡವಿದ್ದಾರೆ ಎಂದು ಚುನಾವಣೆ ಸಂದರ್ಭದಲ್ಲಿ ಹರಿಹಾಯ್ದಿತ್ತು. ಕಾಂಗ್ರೆಸ್ಸಿನ ಅನೇಕರು ಬಿಜೆಪಿ ಸೇರಿ ಪಕ್ಷವನ್ನು ಸೋಲಿಸಿದರು ಎಂದು ಸಿಪಿಎಂ ಕೂಡ ಆರೋಪ ಮಾಡಿತ್ತು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಸೆಣಸಲು ಈ ಹಿಂದೆ ಕಾಂಗ್ರೆಸ್ ಮತ್ತು ಸಿಪಿಎಂ ಮೈತ್ರಿ ಮಾಡಿಕೊಂಡು ಮುಖಭಂಗ ಅನುಭವಿಸಿದ್ದವು. ಕಾಂಗ್ರೆಸ್ ಬೆಂಬಲದ ಬಗ್ಗೆ ಅಪಸ್ವರ ಏಳಲು ಇದೂ ಒಂದು ಕಾರಣ.

ಈ ವೈರುಧ್ಯಗಳು ಅರಿವಿರದಷ್ಟು ಯೆಚೂರಿ ಅಪ್ರಬುದ್ಧರೇನೂ ಅಲ್ಲ. ಆದರೂ ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಮಾತನ್ನು ಅವರು ಪ್ರಸ್ತಾಪಿಸಿ ಪಕ್ಷದೊಳಗೆ ಅಲೆ ಎಬ್ಬಿಸಿದ್ದಾರೆ. ಹೈದರಾಬಾದಿನಲ್ಲಿ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಯೆಚೂರಿ ನಿಲುವು ಪ್ರಧಾನವಾಗಿ ಚರ್ಚೆಯಾಗಲಿದೆ. ಈ ಚರ್ಚೆ ಯಾರನ್ನು ಬಲಿ ಪಡೆಯಲಿದೆ, ಯಾರಿಗೆ ಮಣೆ ಹಾಕಲಿದೆ ಎಂಬ ಕುತೂಹಲ ಮೂಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More