ದೇಶದ ಕರಾಳ ವಾತಾವರಣ ಖಂಡಿಸಿ ಮೋದಿಗೆ ಪತ್ರ ಬರೆದ ನಿವೃತ್ತ ಅಧಿಕಾರಿಗಳು

೨೦೧೨ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಿಂದ ಹಿಡಿದು ಇಂದಿನ ಕಟುವಾ, ಜಮ್ಮು ಹಾಗೂ ಸೂರತ್ ಪ್ರಕರಣಗಳ ಭೀಕರತೆ ರಾಷ್ಟ್ರದೊಳಗೆ ಆತಂಕ ಹುಟ್ಟಿಸಿದೆ. ಇಷ್ಟು ಕರಾಳ ವಾತಾವರಣವನ್ನು ಮನಗಂಡ ಸರ್ಕಾರಿ ನಿವೃತ್ತ ಅಧಿಕಾರಿಗಳು ಪತ್ರದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ

೨೦೧೨ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರದದಿಂದ ಹಿಡಿದು ಇಂದಿನ ಅಮಾನವೀಯ ಕಟುವಾ, ಜಮ್ಮು ಹಾಗೂ ಸೂರತ್ ಅತ್ಯಾಚಾರಗಳ ಭೀಕರತೆ ರಾಷ್ಟ್ರದೊಳಗೆ ಆತಂಕ ಹುಟ್ಟಿಸಿದೆ. ಭಾರತದ ವಾತಾವರಣ ಹೇಗೆ ಬದಲಾವಣೆಯಾಗುತ್ತಿದೆ ಎಂದು ಊಹೆಗೂ ನಿಲುಕದಾಗಿದೆ. ಇಷ್ಟು ಕರಾಳ ವಾತಾವರಣ ಸೃಷ್ಟಿಯನ್ನು ಮನಗಂಡ ಸರ್ಕಾರಿ ನಿವೃತ್ತ ಅಧಿಕಾರಿಗಳು ತಮ್ಮ ಆಕ್ರೋಶವನ್ನು ಪತ್ರದ ಮೂಲಕ ಹೊರಹಾಕಿದ್ದಾರೆ.

೫೦ ಮಂದಿ ಐಎಎಸ್, ಐಎಫ್‌ಎಸ್, ಐಪಿಎಸ್ ನಿವೃತ್ತ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಆಸೀಫಾ ಪರ ವಕೀಲೆ ದೀಪಿಕಾ ಸಿಂಗ್ ರಜಾವತ್ ಅವರು ಪ್ರಕರಣವನ್ನು ಎತ್ತಿಕೊಂಡಾಗಿಂದ ಬಿಜೆಪಿ ನಾಯಕರಿಂದ, ಬೆಂಬಲಿಗರಿಂದ ಬೆದರಿಕೆ ಕರೆಗಳು ಬರುತ್ತಿವೆ. ಅವರು “ನನ್ನನ್ನು ಕೊಲ್ಲಬಹುದು, ರೇಪ್ ಮಾಡಬಹುದು,” ಎಂಬ ಆತಂಕ ಹೊರಹಾಕಿದ್ದಾರೆ. ಸಂಸ್ಕೃತಿ, ಹೆಣ್ಣು ದೈವ ಸ್ವರೂಪ ಎಂದೆಲ್ಲ ಬೀಗುವ ಸಂಘಪರಿವಾರ ಪೋಷಿತ ಬಿಜೆಪಿಯವರ ನಡೆ ನಾಗರಿಕ ಸಮಾಜ ಒಪ್ಪುವಂತಹದಲ್ಲ.

ಪತ್ರದಲ್ಲಿ ಏನಿದೆ?

“ಕೇವಲ ನಾವು ದುಃಖವನ್ನು ಹೊರಹಾಕಲು, ಶೋಕಾಚರಣೆಯನ್ನು ವ್ಯಕ್ತಪಡಿಸಲು, ಅಂತಾರಾ‍ಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಆಗುತ್ತಿರುವ ಅವಮಾನದ ಕುರಿತಾಗಿ ಮಾತ್ರ ಒಟ್ಟಾಗಿ ಮಾತಾಡುತ್ತಿಲ್ಲ. ಅಧಿಕಾರದಲ್ಲಿದ್ದುಕೊಂಡು ಪಕ್ಷದಲ್ಲಿ ಲೆಕ್ಕವಿಲ್ಲದಷ್ಟು, ಹುಡುಕಲಾರದಷ್ಟು ಅನ್ಯಾಯದ ಹಾದಿ ತುಳಿದಿರುವ ಹಾಗೂ ರಾಜಕೀಯ ಬದ್ಧತೆಯಿಂದ ದೂರ ಇರುವ ನಾಯಕರನ್ನು ಪ್ರಶ್ನೆ ಮಾಡುತ್ತಿದ್ದೇವೆ. ದ್ವೇಷ ಬಿತ್ತುತ್ತಿರುವ ಪಕ್ಷದ ಕಾರ್ಯಸೂಚಿಯನ್ನು ಪ್ರಶ್ನೆ ಮಾಡುತ್ತಿದ್ದೇವೆ. ಆಡಳಿತಾರೂಢ ಪ್ರೇರಿತ ದುರಾಚಾರ, ಪ್ರಕ್ಷುಬ್ಧ ವಾತಾವರಣದ ವಿರುದ್ಧ ದನಿ ಎತ್ತುವ ಪ್ರತಿಭಟನಾಕಾರರ ಜತೆ ನಾವು ದನಿಗೂಡುತ್ತೇವೆ. ಪಕ್ಷದ ಸಿದ್ದಾಂತಗಳನ್ನು ದತ್ತು ಸ್ವೀಕಾರದಂತೆ ಪಡೆದುಕೊಳ್ಳದೇ, ಸಂವಿಧಾನದ ಮೌಲ್ಯಗಳಿಗೆ ತಲೆಕೆಡಿಸಿಕೊಳ್ಳದೇ, ಪಕ್ಷದ ಮುಖವಾಣಿಗಳಂತೆ ವರ್ತಿಸದೇ ಇರುವ ಜನ ವರ್ಗಗಳ ದನಿಯಾಗುತ್ತೇವೆ. ಸಂವಿಧಾನದ ಮೌಲ್ಯಗಳನ್ನು ಮೇಲೆತ್ತಬಲ್ಲರು ಹಾಗೂ ಎಂದು ಪ್ರತಿ ಸಾರಿ ಅಧಿಕಾರಕ್ಕೇರುವ ನಾಯಕರುಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಕುಸಿಯುತ್ತಿರುವ ಮೌಲ್ಯದ ಎಚ್ಚರಿಕೆಯ ಗಂಟೆಗಳು ಇನ್ನೂ ಜೋರಾಗಿ ಬಾರಿಸುತ್ತಿವೆ. ಅಲ್ಲದೇ ಶೋಷಿತರು, ಅಲ್ಪಸಂಖ್ಯಾತರು ಭಯದಿಂದ ಬದುಕುವ, ಭಯದಿಂದ ಸ್ವಾತಂತ್ರ್ಯ ಅನುಭವಿಸುವ ಸ್ಥಿತಿಯಿಲ್ಲ ಎನ್ನುವ ಭರವಸೆ ನಾಶವಾಗಿ ಹೋಗಿದೆ.

ಆ ಎಂಟು ವರ್ಷದ ಹುಡುಗಿಯ ಮೇಲೆ ಎರಗಿದ ಮನುಷ್ಯರಲ್ಲಿ ಪ್ರಾಣಿಗಳಂತೆ ವರ್ತಿಸಿದ ಒರಟುತನ ಹಾಗೂ ಅನಾಗರಿಕತೆಯ ಅಂಶಗಳು ಎದ್ದು ಕಾಣುತ್ತಿವೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇಂತಹ ಕರಾಳ ದಿನಗಳಲ್ಲಿ ಅಮಾನವೀಯ ಕೃತ್ಯಗಳಿಗೆ ಪ್ರತಿಕ್ರಿಯಿಸುವ ಪ್ರಭುತ್ವ ನಿಷ್ಕ್ರಿಯ, ಅಪ್ರಾಮಾಣಿಕತೆಯಿಂದ ಕೂಡಿದೆ. ಗಲ್ಲಿಗೇರಿಸಿದಷ್ಟು ಅವಮಾನ ಅನುಭವಿಸುತ್ತಿರುವ ನಮ್ಮ ಮೇಲೆ ಭರವಸೆಯ ಬೆಳಕು ಇಲ್ಲದಾಗಿದೆ.

ಕಟುವಾ ಪ್ರಕರಣದಲ್ಲಿ ಸಂಘಪರಿವಾರದವರು ಬಿತ್ತಿದ ಕೋಮು ವಾತಾವರಣ, ಯುದ್ಧ ಹುಟ್ಟು ಹಾಕುವ ಮನಸ್ಥಿತಿ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲಿ ವ್ಯಕ್ತವಾದ ನಡವಳಿಕೆಗಳೆಲ್ಲವೂ ರಾಜಕೀಯ ಅಧಿಕಾರ ಪ್ರಚೋದಿಸಿದಂತಹವು. ಇದರಿಂದ ಅವರ ಉದ್ದೇಶವೊಂದೇ ಹಿಂದೂ ಮುಸ್ಲಿಮರನ್ನು ಪಂಥೀಯವಾಗಿ ಧ್ರುವೀಕರಿಸುವುದು.

ಉನ್ನಾವೋ ಪ್ರಕರಣದಿಂದ ಉತ್ತರಪ್ರದೇಶದಲ್ಲಿರುವ ಪಿತೃಪ್ರಭುತ್ವ ಫ್ಯೂಡಲ್ ಮಾಫಿಯಾ ಬೆತ್ತಲಾಗಿದೆ. ಮತ ಗಳಿಕೆಯ ಹಾಗೂ ರಾಜಕೀಯ ಅಧಿಕಾರ ಹೊಂದುವ ಒಂದೇ ಕಾರಣಕ್ಕೆ ಅಂತಹ ನಾಯಕರಿಗೆ ಅತ್ಯಾಚಾರ ಮಾಡುವಷ್ಟು, ಕೊಲೆ ಮಾಡುವಷ್ಟು ಸ್ವಾತಂತ್ರ ಸಿಕ್ಕಿದೆ. ಕೋಮುವಾದದ ಉರಿಯ ಬೇಗುದಿಯು ಸಂಘ ಪರಿವಾರದೊಳಗೇ ಹುಟ್ಟಿ ಬೆಳೆಯುತ್ತಿರುವಾಗ ನ್ಯಾಯದ ಭರವಸೆಯ ಸವಕಲು ಮಾತುಗಳನ್ನು ಕೇಳಿ ನಮಗೆ ಸಾಕಾಗಿದೆ,” ಎಂದು ವಿಷಾದದ ಮಾತುಗಳನ್ನು ಅಧಿಕಾರಿಗಳು ಹೊರಹಾಕಿದ್ದಾರೆ.

ಇದನ್ನೂ ಓದಿ : ಕಟುವಾ, ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಖಂಡನೆ; ದೇಶಾದ್ಯಂತ ಪ್ರತಿಭಟನೆ

ತಡವಾಗಿಯಾದರೂ ನಿವೃತ್ತ ಅಧಿಕಾರಿಗಳು ಪ್ರಬಲ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ. ನಿವೃತ್ತ ಅಧಿಕಾರಿಗಳಾದ ಕರ್ನಾಟಕದ ಶೋಭಾ ನಂಬೀಸನ್ (ಐಎಎಸ್), ಬಿಹಾರದ ಎಂ ಎ ಇಬ್ರಾಹಿಮಾ (ಐಎಎಸ್), ಮಧ್ಯಪ್ರದೇಶದ ಹರ್ಷ್ ಮಂದೇರ್ (ಐಎಎಸ್), ಕೆ ಪಿ ಫ್ಯಾಬಿಯಾನ್ (ಐಎಫ್‌ಎಸ್), ತ್ರಿಪುರಾದ ಕೆ ಎಸ್ ಸುಬ್ರಮಣಿಯನ್ (ಐಪಿಎಸ್), ರಾಜಸ್ಥಾನದ ಅದಿತಿ ಮೆಹ್ತಾ (ಐಎಎಸ್), ಹಿಮಾಚಲ ಪ್ರದೇಶದ ದೀಪಕ್ ಸನನ್ (ಐಎಎಸ್) ಸೇರಿದಂತೆ ಒಟ್ಟು ನಲವತ್ತೊಂಬತ್ತು ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More