ಸಿಜೆಐ ನಿವೃತ್ತಿ ಮಾತ್ರವೇ ಸದ್ಯದ ಸಮಸ್ಯೆಗೆ ಪರಿಹಾರ: ಫಾಲಿ ನಾರಿಮನ್

ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂ ಕೊರ್ಟ್‌ ನ್ಯಾಯಮೂರ್ತಿಗಳ ನಡುವೆ ಎದ್ದಿರುವ ಅಸಮಾಧಾನದ ಬಗ್ಗೆ ಮಾತನಾಡಿದ್ದಾರೆ. ಈಗಿನ ಎಲ್ಲ ಸಮಸ್ಯೆಗೆ ಸಿಜೆಐ ಅವರ ನಿವೃತ್ತಿ ಒಂದೇ ಪರಿಹಾರ ಎಂದೂ ಹೇಳಿದ್ದಾರೆ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಇತರ ನ್ಯಾಯಮೂರ್ತಿಗಳ ನಡುವಿನ ವಿಶ್ವಾಸ ಸಂಪೂರ್ಣ ಕುಸಿದಿದೆ ಎಂದು ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ನನ್ನ ೬೭ ವರ್ಷಗಳ ವಕೀಲಿಕೆ ವೃತ್ತಿ ಅನುಭವದಲ್ಲಿ ಈ ತರಹದ ಘಟನೆ ನಡೆದಿರಲಿಲ್ಲ. ನ್ಯಾಯಮೂರ್ತಿ, ವಕೀಲರು, ಎಲ್ಲರಲ್ಲೂ ಸಹಿಷ್ಣುತೆ ಪ್ರಮಾಣ ತೀರಾ ಕುಸಿದಿದೆ. ನಾನು ೧೯೭೨ರಲ್ಲಿ ದೆಹಲಿಗೆ ಬಂದಾಗಿನಿಂದ ಈವರೆಗೆ ೩೨ ಮುಖ್ಯ ನ್ಯಾಯಮೂರ್ತಿಗಳನ್ನು ನೋಡಿದ್ದೇನೆ. ಆದರೆ, ಈ ತರಹದ ಘಟನೆಯನ್ನು ಈ ಹಿಂದೆ ನೋಡಿಲ್ಲ,” ಎಂದು ಹೇಳಿದ್ದಾರೆ.

“೧೯೭೩ರ ಕೇಶವಾನಂದ ಭಾರತೀ ತೀರ್ಪಿನಲ್ಲಿ ಸಂವಿಧಾನದ ಮೂಲಭೂತ ಸ್ವರೂಪವನ್ನು ಯಾವ ಸರ್ಕಾರವೂ ಬದಲಾಯಿಸಬಾರದು ಎಂದು ಹೇಳಲಾಗಿತ್ತು. ಈ ತೀರ್ಪಿಗೆ ಏಳು ಮಂದಿ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದರೆ, ಆರು ಮಂದಿ ಅಸಮ್ಮತಿ ಸೂಚಿಸಿ ಮತ ಹಾಕಿದ್ದರು. ಸಂವಿಧಾನದ ಮೂಲ ಸ್ವರೂಪ ಬದಲಾವಣೆ ವಿಚಾರದಲ್ಲಿ ಅಂದು ನ್ಯಾಯಮೂರ್ತಿಗಳಲ್ಲಿ ಆರಂಭವಾದ ಜಗಳ ಇಂದು ತಾರ್ಕಿಕ ಅಂತ್ಯ ಕಾಣುವುದನ್ನು ನೋಡುತ್ತಿದ್ದೇವೆ,” ಎಂದು ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡ ನ್ಯಾ.ರಂಜನ್‌ ಗೊಗೊಯಿ, ನ್ಯಾ.ಜೆ ಚಲಮೇಶ್ವರ್‌, ನ್ಯಾ.ಮದನ್‌ ಲೋಕುರ್ ಹಾಗೂ ಕುರಿಯನ್ ಜೋಸೆಫ್‌ ಅವರು ಜನವರಿಯಲ್ಲಿ ಬಹಿರಂಗವಾಗಿ ನಡೆಸಿದ ಸುದ್ದಿಗೋಷ್ಠಿ ಬಗ್ಗೆಯೂ ಮಾತನಾಡಿರುವ ನಾರಿಮನ್‌, “ಮುಖ್ಯ ನ್ಯಾಯಮೂರ್ತಿ ನಿವೃತ್ತಿ ಆಗುವವರೆಗೂ ಕಾಯಲೇಬೇಕು. ಅವರು ೬೫ನೇ ವಯಸ್ಸಿಗೆ ನಿವೃತ್ತಿ ಆಗುತ್ತಿದ್ದು, ಅದರ ವಿಸ್ತರಣೆ ಸಾಧ್ಯವಿಲ್ಲ ಎನ್ನುವುದೇ ಸಮಾಧಾನದ ವಿಷಯ,” ಎಂದೂ ನಾರಿಮನ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಮಹಾಭೀಯೋಗ; ಕಾನೂನು ತಜ್ಞರು ಹೇಳುವುದೇನು?

ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ ಕುರಿತು ಮಾತನಾಡಿರುವ ನಾರಿಮನ್, “ಸುದ್ದಿಗೋಷ್ಠಿ ಎಂಬ ಅಸ್ತ್ರವನ್ನು ಕೊನೆಯ ಪ್ರಯತ್ನವಾಗಿ ಬಳಸಬೇಕು. ಮುಖ್ಯ ನ್ಯಾಯಮೂರ್ತಿಗಳಿಗೆ ಯಾವಾಗಲೂ ಮಾಸ್ಟರ್‌ ಆಫ್‌ ರೋಸ್ಟರ್‌ ನಿಯಮದ ಪ್ರಕಾರ, ಪೀಠಗಳ ಹಂಚಿಕೆಯ ಅಧಿಕಾರ ಇರುತ್ತದೆ. ಈ ಕಾರಣಕ್ಕಾಗಿ ಅವರನ್ನು ವಾಗ್ದಂಡನೆಗೆ ಗುರಿಪಡಿಸುವುದು ಸರಿಯಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಬಹುದು ಎಂಬುದರ ಬಗ್ಗೆಯೂ ಮಾತನಾಡಿರುವ ಅವರು, “ಮುಂದಿನ ಮುಖ್ಯ ನ್ಯಾಯಮೂರ್ತಿ ಖಂಡಿತವಾಗಿಯೂ ರಂಜನ್‌ ಗೊಗೊಯಿ ಅವರೇ. ಅವರನ್ನು ನೇಮಿಸದಂಥ ದಡ್ಡ ಕೆಲಸವನ್ನು ಸರ್ಕಾರ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More