ನ್ಯಾಯದ ಮೇಲೆ ವಿಶ್ವಾಸಾರ್ಹತೆ ಹುಟ್ಟಿಸಿದ ದೀಪಿಕಾ ಮತ್ತು ಶ್ವೇತಾಂಬರಿ

ಬಿಜೆಪಿಯ ಮಹಿಳಾ ರಾಜಕಾರಣಿಗಳು ಕಟುವಾ ಮತ್ತು ಉನ್ನಾವೊ ಪ್ರಕರಣಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿವೆ. ಈ ನಡುವೆಯೇ ದೀಪಿಕಾ ಮತ್ತು ಶ್ವೇತಾಂಬರಿ ಅವರು ತೆಗೆದುಕೊಂಡ ನಿಲುವುಗಳು ನ್ಯಾಯ ಇನ್ನೂ ಜೀವಂತವಾಗಿದೆ ಎಂಬುದರ ಕುರುಹು

ಉತ್ತರಪ್ರದೇಶದ ಉನ್ನಾವೊ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಕಾಶ್ಮೀರದ ಕಟುವಾದಲ್ಲಿ ನಡೆದ ಎಂಟು ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿದೆ. ಎರಡೂ ಪ್ರಕರಣಗಳನ್ನು ಆಳುವವರು ನಿಭಾಯಿಸಿದ ರೀತಿ ಕಟು ವಿಮರ್ಶೆಗೆ ಒಳಗಾಗುತ್ತಿರುವಾಗ ಕಟುವಾ ಅತ್ಯಾಚಾರ ಪ್ರಕರಣವನ್ನು ಭೇದಿಸಿದ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಪ್ರಕರಣದ ಪರ ವಕಾಲತ್ತು ವಹಿಸಿರುವ ವಕೀಲೆ ಎದುರಿಸಿದ ಒತ್ತಡ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗಿದೆ. ಅತ್ಯಾಚಾರದಂತಹ ಗಂಭೀರ ಪ್ರಕರಣಗಳನ್ನು ರಾಷ್ಟ್ರೀಯತೆ, ದೇಶಭಕ್ತಿಯ ಹೆಸರಿನಲ್ಲಿ ಸಮರ್ಥಿಸುತ್ತಿರುವುದು, ಹಿಂದೂ ವಿರೋಧಿಗಳು ಎಂಬಂತೆ ಬಿಂಬಿಸುತ್ತಿರುವುದನ್ನು ನೋಡಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳೆದ್ದಿವೆ.

ದೀಪಿಕಾ ಸಿಂಗ್ ರಾಜಾವತ್

“ನನ್ನನ್ನು ಕೂಡ ಅತ್ಯಾಚಾರ ಮಾಡಬಹುದು,” ಎಂದು ಆತಂಕ ವ್ಯಕ್ತಪಡಿಸಿರುವ ದೀಪಿಕಾ ಸಿಂಗ್ ರಾಜಾವತ್ ಕಟುವಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರು. ಬಾಲಕಿಯ ಪರ ನ್ಯಾಯಾಂಗ ಹೋರಾಟ ನಡೆಸಲು ಮುಂದೆ ಬಂದವರು. “ಏನಾಗಲಿದೆಯೋ ಗೊತ್ತಿಲ್ಲ. ನಾನು ನಾನಾಗಿ ಉಳಿದಿಲ್ಲ. ನನ್ನನ್ನು ಬಲಾತ್ಕರಿಸಬಹುದು, ಕೊಲೆ ಮಾಡಬಹುದು ಇಲ್ಲವೇ ಕೋರ್ಟಿನಲ್ಲಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಅಡ್ಡಿ ಉಂಟು ಮಾಡಬಹುದು. ನನ್ನನ್ನು ಅವರು ಏಕಾಂಗಿ ಮಾಡಿದ್ದಾರೆ. ಇದರಿಂದ ಬಚಾವಾಗುವುದು ಹೇಗೆ ಎಂಬುದು ಗೊತ್ತಿಲ್ಲ,” ಎಂದು ಆತಂಕ ಹೊರಹಾಕಿದ್ದಾರೆ. ಅಲ್ಲದೆ “ನನ್ನನ್ನು ಹಿಂದೂ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದನ್ನು ಸುಪ್ರೀಂಕೋರ್ಟ್ ಮುಂದಿಡಬೇಕು ಎಂದುಕೊಂಡಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಜಮ್ಮು ಕಾಶ್ಮೀರದ ವಕೀಲರ ಗುಂಪೊಂದು ಕಟುವಾ ಪ್ರಕರಣದ ವಿರುದ್ಧ ಆರೋಪಪಟ್ಟಿ ದಾಖಲಿಸದಂತೆ ಪೊಲೀಸರನ್ನು ತಡೆಹಿಡಿದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವಕೀಲರ ಸಂಘ ಕಟುವಾ ಅತ್ಯಾಚಾರ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಿದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ದೀಪಿಕಾ, ಜಮ್ಮು ಕಾಶ್ಮೀರದ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಸ್ಲಾತಿಯಾ ಅವರು “ಕೆಟ್ಟದ್ದನ್ನೆಲ್ಲಾ ಹರಡಬೇಡಿ. ನಾವು ಮುಷ್ಕರ ಹೂಡಿದ್ದೇವೆ. ಮುಷ್ಕರದ ನಡುವೆಯೇ ಕೆಲಸ ಮಾಡಲು ಮುಂದಾಗಿದ್ದೀರಿ. ನಿಮ್ಮನ್ನು ತಡೆಯುವುದು ಹೇಗೆಂದು ನಮಗೆ ಗೊತ್ತಿದೆ ಎಂದು ಹೇಳಿದ್ದರು. ನಂತರ ಕ್ಯಾಂಟೀನ್ ಗೆ ಹೋದಾಗಲೂ ನನಗೆ ಸರ್ವ್ ಮಾಡಲು ಯಾರೂ ಮುಂದೆ ಬರಲಿಲ್ಲ. ಏನನ್ನೂ ತಿನ್ನಬಾರದು ಎಂದು ಹೇಳಲಾಯಿತು. ಹೀಗಾಗಿ ಉಳಿದ ವಕೀಲರಂತೆ ನಾನೂ ಹೈಕೋರ್ಟ್ ಮೊರೆ ಹೋದೆ,” ಎಂದು ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ಕುಟುಂಬದಿಂದ ಬಂದ ದೀಪಿಕಾ ಈ ಹಿಂದೆಯೂ ಕಟುವಾ ಪ್ರಕರಣದ ವಿಚಾರಣೆಯನ್ನು ಜಮ್ಮು ಕಾಶ್ಮೀರದಿಂದ ಹೊರಗೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದ ಅವರು “ಪ್ರಧಾನಿಯವರು ಹೆಚ್ಚಿನ ಜವಾಬ್ದಾರಿ ಹೊರಬೇಕು. ಕಟುವಾಗೆ ತೆರಳಿ ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರಚೋದಿಸಿದ ಇಬ್ಬರು ಶಾಸಕರ ವಿರುದ್ಧ ಅವರು ಕ್ರಮ ಕೈಗೊಳ್ಳಬೇಕು. ಉನ್ನಾವೊ ಪ್ರಕರಣದಲ್ಲಿಯೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಏಕೆಂದರೆ ಅವರು ದೇಶದ ಪ್ರಧಾನಿ ಹಾಗೂ ಬಿಜೆಪಿ ನೇತಾರ. ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂದು ಗೊತ್ತಿದೆ. ತಮ್ಮದೇ ಪಕ್ಷದ ಕೆಲವರು ತಪ್ಪು ಮಾಡಿದರೆ ಆ ಹೊಣೆಯನ್ನು ಅವರು ಹೊರಬೇಕು,” ಎಂದು ಅಭಿಪ್ರಾಯಪಟ್ಟಿದ್ದರು.

ಅಲ್ಲದೆ ಪ್ರಕರಣವನ್ನು ನ್ಯಾಯಾಂಗದ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ರಿಟ್ ಅರ್ಜಿ ಸಲ್ಲಿಸಿದ್ದ ಅವರು, “ಪ್ರಕರಣದಲ್ಲಿ ಬಿಜೆಪಿ ನಡೆದುಕೊಂಡ ರೀತಿ ನಮ್ಮನ್ನು ಹೈಕೋರ್ಟ್ ಮೊರೆ ಹೋಗುವಂತೆ ಮಾಡಿತು. ತನಿಖಾಧಿಕಾರಿಗಳೂ ಒತ್ತಡಕ್ಕೆ ಸಿಲುಕಬಹುದು ಎಂಬ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆಗೆ ಮನವಿ ಮಾಡಲಾಗಿದೆ,” ಎಂದಿದ್ದರು.

ಶ್ವೇತಾಂಬರಿ ಶರ್ಮಾ

ಕಟುವಾ ಪ್ರಕರಣದ ತನಿಖೆ ನಡೆಸುತ್ತಿರುವ ಜಮ್ಮು ಕಾಶ್ಮೀರದ ವಿಶೇಷ ತನಿಖಾ ತಂಡದ ಕೆಲವೇ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳಲ್ಲಿ ಶ್ವೇತಾಂಬರಿ ಶರ್ಮಾ ಒಬ್ಬರು. ಅವರು ಜಮ್ಮು ಮೂಲದ ಉಪ ಪೋಲಿಸ್ ವರಿಷ್ಠಾಧಿಕಾರಿ. ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದಿಂದ ನಿರ್ವಹಣಾ ಶಾಸ್ತ್ರದಲ್ಲಿ ಪದವಿ ಪಡೆದ ಅವರು 2012ರಲ್ಲಿ ಪೊಲೀಸ್ ಇಲಾಖೆಗೆ ಸೇರಿದಾಗ ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿದ್ದರು.

‘ದಿ ಕ್ವಿಂಟ್’ ಜಾಲತಾಣ ನಡೆಸಿದ ವಿಶೇಷ ಸಂದರ್ಶನದಲ್ಲಿ ಪ್ರಕರಣದ ಕುರಿತು ಮಾತನಾಡಿದ ಅವರು, “ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಂಬಲಾದ ಆರೋಪಿಗಳು, ಅವರ ಸಂಬಂಧಿಕರು, ಸಹಾನುಭೂತಿ ವ್ಯಕ್ತಪಡಿಸುವವರು ಅಷ್ಟೇ ಅಲ್ಲದೆ ಕೆಲವು ವಕೀಲರು ಕೂಡ ತನಿಖೆಗೆ ಅಡ್ಡಗಾಲು ಹಾಕಿದರು. ನಮ್ಮನ್ನು ಅವಮಾನಿಸಿ ಶೋಷಿಸಿದರು. ಆದರೆ ಕೊನೆಯವರೆಗೂ ನಾವು ಅಚಲವಾಗಿ ನಿಂತೆವು,” ಎಂದು ಹೇಳಿದ್ದಾರೆ.

“ಪ್ರಕರಣ ಮುಚ್ಚಿಹಾಕುವಂತೆ ಹೀರಾನಗರ ಪೊಲೀಸ್ ಠಾಣೆಯಲ್ಲಿ ಲಂಚದ ಆಮಿಷ ಒಡ್ಡಲಾಗಿತ್ತು. ಸಂತ್ರಸ್ತೆಯ ಬಟ್ಟೆಯನ್ನು ಸ್ವಚ್ಛಗೊಳಿಸಿ ಸಾಕ್ಷ್ಯನಾಶಪಡಿಸಲಾಗಿತ್ತು. ನಾವು ಈ ಪ್ರಕರಣವನ್ನು ನವರಾತ್ರಿಯ ಸಂದರ್ಭದಲ್ಲಿ ಬೇಧಿಸಿದೆವು. ಅಪರಾಧಿಗಳನ್ನು ನ್ಯಾಯದ ಚೌಕಟ್ಟಿಗೆ ತರಲು ದೇವರು ಮಧ್ಯಪ್ರವೇಶಿಸಿದ. ದುರ್ಗಾಮಾತೆಯ ಆಶೀರ್ವಾದ ನಮ್ಮ ಮೇಲಿದೆ ಎಂದು ನಂಬುತ್ತೇನೆ,” ಎಂದು ಅವರು ತಿಳಿಸಿರುವುದು ಪ್ರಕರಣದ ಗಂಭೀರತೆಯನ್ನೂ ಅದರಲ್ಲಿ ಪಾತ್ರವಹಿಸಿದ್ದವರ ಕರಾಳ ಮುಖವನ್ನೂ ಬಿಚ್ಚಿಡುತ್ತದೆ.

ಕಟುವಾ ಅತ್ಯಾಚಾರ ಸಂಭವಿಸಿದ್ದು ಜನವರಿಯಲ್ಲಿ. ಆರೋಪಿಗಳ ವಿರುದ್ಧ ಇದೇ ತಿಂಗಳು ಆರೋಪಪಟ್ಟಿ ದಾಖಲಿಸಿದ ನಂತರ ಇದು ದೇಶಾದ್ಯಂತ ಸುದ್ದಿಗೆ ಗ್ರಾಸವಾಯಿತು. ಬಿಜೆಪಿಯ ಇಬ್ಬರು ಸಚಿವರು ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದು ಭಾರಿ ಚರ್ಚೆಗೆ ಒಳಗಾಗಿತ್ತು. ಸಂತ್ರಸ್ತೆ ಮುಸ್ಲಿಂ ಎಂಬ ಕಾರಣಕ್ಕೆ ನ್ಯಾಯ ನಿರಾಕರಿಸಲಾಗುತ್ತಿದೆ ಎಂಬ ಆಕ್ರೋಶ ದೇಶದೆಲ್ಲೆಡೆಯಿಂದ ವ್ಯಕ್ತವಾಗಿತ್ತು.

“ಪ್ರಕರಣದ ಆರೋಪಿಗಳಲ್ಲಿ ಬಹುತೇಕರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ತಮ್ಮ ಕುಲನಾಮವನ್ನು ಒತ್ತಿ ಹೇಳುತ್ತಿದ್ದರು. ಮುಸ್ಲಿಂ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಮ್ಮನ್ನು ಉಲ್ಲೇಖಿಸಬಾರದು. ನಾವೆಲ್ಲರೂ ಒಂದೇ ಧರ್ಮ ಜಾತಿಗೆ ಸೇರಿದವರು ಎಂದು ನಿರ್ದಿಷ್ಟವಾಗಿ ನನ್ನ ಮೇಲೆ ಪ್ರಭಾವ ಬೀರಲು ಯತ್ನಿಸಿದರು. ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿಯಾಗಿ ನನಗೆ ಯಾವುದೇ ಧರ್ಮವಿಲ್ಲ ಹಾಗೇನಾದರೂ ಇದ್ದರೆ ಅದು ನನ್ನ ಪೊಲೀಸ್ ಸಮವಸ್ತ್ರ ಮಾತ್ರ ಎಂದು ಅವರಿಗೆ ಹೇಳಿದೆ,” ಎಂಬುದಾಗಿ ಶ್ವೇತಾಂಬರಿ ತಿಳಿಸಿದ್ದಾರೆ.

ಇದನ್ನೂ ಓದಿ : ದೇಶದ ಕರಾಳ ವಾತಾವರಣ ಖಂಡಿಸಿ ಮೋದಿಗೆ ಪತ್ರ ಬರೆದ ನಿವೃತ್ತ ಅಧಿಕಾರಿಗಳು

“ಇಂಥ ಯತ್ನಗಳು ಫಲಿಸದೇ ಹೋದಾಗ ಬೆದರಿಕೆ ಒಡ್ಡುವ ಕಾರ್ಯ ನಡೆಯಿತು. ನಮ್ಮ ವಿರುದ್ಧ ಲಾಠಿ ಝಳಪಿಸಿದರು, ಘೋಷಣೆ ಕೂಗಿದರು. ಹಳ್ಳಿಗಳಿಗೆ ತೆರಳದಂತೆ ರಸ್ತೆ ತಡೆ ಮಾಡಿದರು ಕಡೆಗೆ ಕೋರ್ಟಿಗೆ ಹೋಗಲೂ ತಡೆ ಒಡ್ಡಲಾಯಿತು,” ಎಂದಿರುವ ಆ ಪೊಲೀಸ್ ಅಧಿಕಾರಿ ದೇವಸ್ಥಾನದಲ್ಲಿ ಬಾಲಕಿಯ ಮೃತದೇಹವನ್ನು ಪತ್ತೆ ಹಚ್ಚಿದ ತಂಡದಲ್ಲಿದ್ದರು. ಪ್ರಕರಣದ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭವನ್ನು ವಿವರಿಸುತ್ತಾ, “ನಿದ್ದೆ ಬರುತ್ತಿರಲಿಲ್ಲ. ಹಲವು ರಾತ್ರಿಗಳು ಎಚ್ಚರವಾಗಿರುತ್ತಿದ್ದೆ. ನನ್ನ ಗಂಡ ಅನ್ಯಕಾರ್ಯ ನಿಮಿತ್ತ ಪರವೂರಿಗೆ ತೆರಳಿದಾಗ ಮಕ್ಕಳ ನಿಗಾ ನೋಡದಾದೆ. ಆದರೆ ಕರ್ತವ್ಯವನ್ನು ನಿಭಾಯಿಸಿದ ತೃಪ್ತಿ ಇದೆ,” ಎಂದಿದ್ದಾರೆ. ಶ್ವೇತಾಂಬರಿ ಅವರಿಗೆ ಅತ್ಯಾಚಾರಕ್ಕೊಳಗಾದ ಬಾಲಕಿಯ ವಯಸ್ಸಿನ ಮಕ್ಕಳಿದ್ದಾರೆ.

ಬಿಜೆಪಿಯ ಮಹಿಳಾ ರಾಜಕಾರಣಿಗಳು ಕಟುವಾ ಮತ್ತು ಉನ್ನಾವೊ ಪ್ರಕರಣಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ ದೀಪಿಕಾ ಮತ್ತು ಶ್ವೇತಾಂಬರಿ ಅವರು ತೆಗೆದುಕೊಂಡ ನಿಲುವುಗಳು ದೇಶದಲ್ಲಿ ನ್ಯಾಯ ಇನ್ನೂ ಜೀವಂತವಾಗಿದೆ ಎಂಬುದರ ಕುರುಹು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More