ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳನ್ನೇ ತಿದ್ದಿ ಬದಲಾಯಿಸಿದ ಭೂಪರು!

ಕೆಎಎಸ್‌ ಅಧಿಕಾರಿಗಳ ನೇಮಕದಲ್ಲಿ ನಡೆದಿರುವ ಅಕ್ರಮಗಳನ್ನು ಊಹಿಸಲೂ ಸಾಧ್ಯವಿಲ್ಲ. ಕೇವಲ ಸಂದರ್ಶನದಲ್ಲಷ್ಟೇ ಅಕ್ರಮ ನಡೆದಿಲ್ಲ. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳನ್ನೂ ಮೌಲ್ಯಮಾಪಕರು ತಿದ್ದಿದ್ದರು. ಇದು ಉನ್ನತ ಹುದ್ದೆಗಳಿಗೇರಲು ರಹದಾರಿಯಾಗಿತ್ತು. ಅದು ಹೇಗೆ? ಇಲ್ಲಿದೆ ವಿವರ

1998, 1999, 2004ರಲ್ಲಿ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳಿಗೆ ನಡೆದಿದ್ದ ವ್ಯಕ್ತಿತ್ವ ಸಂದರ್ಶನದಲ್ಲಿ ಅಭ್ಯರ್ಥಿಗಳು ಪಡೆದಿದ್ದ ಅಂಕಗಳನ್ನೇ ಮಾರ್ಪಡಿಸಲಾಗಿತ್ತು. ಅಲ್ಲದೆ, ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳನ್ನು ಮೌಲ್ಯಮಾಪಕರು ತಿದ್ದಿದ್ದರು. ಇದರ ಹಿಂದೆ ನಡೆದಿರಬಹುದಾದ ಹಣದ ಕರಾಮತ್ತು ಏನು ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಇದರಿಂದ ಲಾಭ ಪಡೆದುಕೊಂಡಿದ್ದ ಅಭ್ಯರ್ಥಿಗಳು ನಿರಾಯಾಸವಾಗಿ ಉನ್ನತ ಹುದ್ದೆಗೇರಿದ್ದರು. ಈ ಅಕ್ರಮಗಳನ್ನು ಸತ್ಯಶೋಧನಾ ಸಮಿತಿ ಪತ್ತೆಹಚ್ಚಿತ್ತು.

ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಎಚ್ ಎನ್ ಕೃಷ್ಣ ಅವರ ಸೂಚನೆ ಮೇರೆಗೆ ಕೆಲ ಸದಸ್ಯರು ಅಂಕಗಳನ್ನು ಮಾರ್ಪಾಡುಗೊಳಿಸಿದ್ದರೆ, ಖುದ್ದು ಕೃಷ್ಣ ಅವರೇ ಅಂಕಗಳನ್ನು ಮಾರ್ಪಾಡುಗೊಳಸಿದ್ದನ್ನು ಸಮಿತಿ ಬೆಳಕಿಗೆ ತಂದಿತ್ತು. ಮೌಲ್ಯಮಾಪಕರು ಒಟ್ಟು 29 ಮಂದಿ ಅಭ್ಯರ್ಥಿಗಳು ಗಳಿಸಿದ್ದ ಅಂಕಗಳನ್ನು ಅಕ್ರಮವಾಗಿ ತಿದ್ದಿ  ಲಾಭ ಮಾಡಿಕೊಟ್ಟಿದ್ದರೆ, ಅಧ್ಯಕ್ಷರಾಗಿದ್ದ ಕೃಷ್ಣ ಮತ್ತು ಸದಸ್ಯರು 11 ಮಂದಿಗೆ ನೀಡಿದ್ದ ಸಂದರ್ಶನ ಅಂಕಗಳನ್ನು ಮಾರ್ಪಡಿಸಿದ್ದರು.

ಅಮರೇಶ್ ಕುಂಬಾರ ಅವರಿಗೆ 100 ಅಂಕ ಸಿಕ್ಕಿದ್ದು 150 ಅಂಕ ನೀಡಲಾಗಿದೆ. ಹಾಗೆಯೇ, ಅನಿತಾ ಅವರಿಗೆ 50 ಅಂಕ ಸಿಕ್ಕಿದ್ದು 60 ಅಂಕಕ್ಕೆ ಕೃಷ್ಣ ಅವರು ಮಾರ್ಪಾಡುಗೊಳಿಸಿದ್ದಾರೆ. 1998ರ ತಂಡದಲ್ಲಿ ತಹಶೀಲ್ದಾರ್‌ ಆಗಿ ಆಯ್ಕೆಯಾಗಿದ್ದ ಶಾರದಾ ಸಿ ಕೋಲ್ಕರ್ ಅವರ ಅಂಕವನ್ನು ೧೫೦ರಿಂದ ೧೫೨ಕ್ಕೆ, ಲೇಬರ್ ಆಫೀಸರ್‌ ಆಗಿ ನೇಮಕವಾಗಿರುವ ಎಚ್‌ ಎಲ್‌ ಗುರುಪ್ರಸಾದ್‌ ಅವರ ಅಂಕವನ್ನು ೧೪೦ರಿಂದ ೧೪೫ಕ್ಕೆ ಏರಿಸಲಾಗಿತ್ತು. ಇವರಿಗೆ ಕೆಪಿಎಸ್ಸಿ ಸದಸ್ಯ ಎಚ್‌ ಎಸ್‌ ಪಾಟೀಲ್‌ ಅವರು ಅಂಕ ಮಾರ್ಪಾಡುಗೊಳಿಸಿದ್ದರು.

ಅಸಿಸ್ಟಂಟ್‌ ಕಂಟ್ರೋಲರ್‌ ಕೆ ಬೀನಾ ಅವರಿಗೆ ದೊರೆತಿದ್ದ ೧೫೦ ಅಂಕಗಳನ್ನು ೧೫೫ಕ್ಕೆ, ಅಸಿಸ್ಟಂಟ್‌ ಕಮಿಷನರ್‌ ಕೆ ಲೀಲಾವತಿ ಅವರಿಗೆ ೧೪೦ರಿಂದ ೧೪೫, ಕಮರ್ಷಿಯಲ್‌ ಟ್ಯಾಕ್ಸ್‌ ಆಫೀಸರ್‌ ಬಿ ಎನ್‌ ಮಂಜುನಾಥ ಅವರಿಗೆ ೫೦ರಿಂದ ೧೫೦ಕ್ಕೆ, ಅಸಿಸ್ಟಂಟ್‌ ಟ್ರೆಝರಿ ಆಫೀಸರ್‌ ಎಂ ಎಸ್‌ ಸಂಗಾಪುರ ಅವರಿಗೆ ೫೦ರಿಂದ ೧೫೦, ಎಂ ಎನ್‌ ಹೇಮಾವತಿ ಅವರಿಗೆ ದೊರೆತಿದ್ದ ೧೫೦ ಅಂಕಗಳನ್ನು ೧೫೫ಕ್ಕೆ ಏರಿಸಲಾಗಿತ್ತು. ಸದಸ್ಯೆ ಲಿಲಿಯನ್‌ ಕ್ಸೇವಿಯರ್‌ ಅವರು ಇವರೆಲ್ಲರ ಅಂಕ ಮಾರ್ಪಡಿಸಿದ್ದರು ಎಂದು ಸತ್ಯಶೋಧನಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು.

ಅದೇ ರೀತಿ, ಸದಸ್ಯ ವೆಂಕಟಸ್ವಾಮಿ ಅವರು, ಎಸ್ ಗುಣಕರ್‌ ಅವರಿಗೆ 55ರಿಂದ 50ಕ್ಕೆ, ಎನ್ ಆರ್ ಸಿದ್ದಲಿಂಗಪ್ಪ ಅವರಿಗೆ 149ರಿಂದ 150, ಗುರುನಾಥ್‌ ಬಡಿಗೇರ್‌ ಅವರಿಗೆ 60ರಿಂದ 80 ಅಂಕಗಳಿಗೆ ಮಾರ್ಪಾಡುಗೊಳಿಸಿದ್ದರು. ಸದಸ್ಯ ದಾಸಯ್ಯ ಅವರು ಅನಂತರಾಮ ಅರಳಿ ಅವರಿಗೆ 50ರಿಂದ 155, ರೇಷ್ಮಾ ತಹಸೀನ ಅವರಿಗೆ 130ರಿಂದ 120 ಅಂಕಗಳಿಗೆ ಮಾರ್ಪಾಡುಗೊಳಿಸಿದ್ದಾರೆ. 1999ರಲ್ಲಿಯೂ ಇದೇ ಸದಸ್ಯರು ಹಲವು ಅಭ್ಯರ್ಥಿಗಳ ಅಂಕ ತಿದ್ದಿದ್ದರು.

1999ರಲ್ಲೂ ಇದೇ ಸದಸ್ಯರು ಒಟ್ಟು 14 ಮಂದಿ ಅಭ್ಯರ್ಥಿಗಳ ಅಂಕ ಬದಲಾಯಿಸಿದ್ದರು. ಸದಸ್ಯ ಎಚ್ ಎಸ್ ಪಾಟೀಲ ಅವರು ಆರತಿ (ಲೇಬರ್ ಆಫೀಸರ್), ಎಚ್ ಕೆ ಕೃಷ್ಣಮೂರ್ತಿ (ತಹಶೀಲ್ದಾರ್), ಪಾಟೀಲ್ ಯಲಗೌಡ ಶಿವನಗೌಡ (ಅಸಿಸ್ಟಂಟ್ ಕಮಿಷನರ್) ಅವರ ಅಂಕಗಳನ್ನು ಮಾರ್ಪಾಡುಗೊಳಿಸಿದ್ದರೆ, ಸದಸ್ಯೆ ಲಿಲಿಯನ್ ಕ್ಸೇವಿಯರ್ ಅವರು ಅಭಿಲಾಷ್ ಕಾರ್ತಿಕೇಯ (ಅಸಿಸ್ಟಂಟ್ ಕಮಿಷನರ್), ಟಿ ಅನಿತಾ, ಬಿ ಆರ್ ಭಾಗ್ಯ,  ಟಿ ಅಮರನಾಥ, ಡಿ ದೇವರಾಜ (ಡಿವೈಎಸ್ಪಿ), ಶಾಂತರಾಮ ಹೆಗ್ಡೆ ಅವರ ಅಂಕ ತಿದ್ದಿದ್ದರು.

ಇದನ್ನೂ ಓದಿ : ಸಂದರ್ಶನದಲ್ಲಿ ಅಕ್ರಮವಾಗಿ ಹೆಚ್ಚು ಅಂಕ ಪಡೆದು ಉನ್ನತ ಹುದ್ದೆ ಕಬಳಿಸಿದರು

ಸದಸ್ಯ ದಾಸಯ್ಯ ಅವರು, ರಾಮಾಂಜನೇಯ (ಅಸಿಸ್ಟಂಟ್ ಕಮಿಷನರ್) ಹಾಗೂ ಮೊಹಮದ ಆಲಿ ಖಾನ್ ಅವರು ತಹಶೀಲ್ದಾರ್ ಜಯಣ್ಣ, ಮುರ್ಷಿದ್ದೀನ್ ಕಿಲ್ಲೇದಾರ, ಕೆ ಬಿ ಓಂಕಾರ್‌ ಪಡೆದಿದ್ದ ಅಂಕಗಳನ್ನು ಮಾರ್ಪಾಡಿಸಿದ್ದರು. ಎಚ್‌ ಎನ್‌ ಕೃಷ್ಣ ಅವರ ಸೂಚನೆ ಮೇರೆಗೆ ಎಚ್‌ ಎಸ್‌ ಪಾಟೀಲ್‌, ಲಿಲಿಯನ್‌ ಕ್ಸೇವಿಯರ್‌ ಅವರೂ ಅಂಕಗಳನ್ನು ಮಾರ್ಪಾಡುಗೊಳಿಸಿದ್ದಾರೆ. ಶಾಲಿನಿ ಎಂಬುವರಿಗೆ ೭೦ ಅಂಕ ಲಭಿಸಿತ್ತು. ಕೃಷ್ಣ ಅವರ ಸೂಚನೆ ಮೇರೆಗೆ ಇವರ ಅಂಕವನ್ನು ೧೪೦ಕ್ಕೆ ಏರಿಸಲಾಗಿದೆ. ಎಸ್‌ ಬಿ ನಾಗೇಂದ್ರ ಅವರು ಗಳಿಸಿದ್ದ ೧೦೦ ಅಂಕಗಳ ಬದಲಿಗೆ ೧೫೦ ಅಂಕ (ವ್ಯತ್ಯಾಸ ೫೦ ಅಂಕ) ನೀಡಲಾಗಿದೆ. ಪ್ರಭುರಾಜ್ ಮತ್ತು ಮಹದೇವ ನಾಯಕ್‌ ಅವರಿಗೆ ೧೪೦ ಅಂಕ ಲಭಿಸಿದ್ದು, ೧೪೫ ಅಂಕಕ್ಕೆ ಹೆಚ್ಚಿಸಲಾಗಿದೆ.

ಈ ಮೂರೂ ಅವಧಿಯಲ್ಲಿ ನಡೆದಿದ್ದ ಗಂಭೀರ ಸ್ವರೂಪದ ಅಕ್ರಮಗಳ ಕುರಿತು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಕಳವಳ ವ್ಯಕ್ತಪಡಿಸಿತ್ತು. ಇದೊಂದು ಸಂವಿಧಾನಬಾಹಿರ ಮತ್ತು ನಿಯಮಬಾಹಿರ ಕ್ರಮ ಎಂದು ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಕೆಪಿಎಸ್‌ಸಿ ಸಲ್ಲಿಸಿದ್ದ ಪರಿಷ್ಕೃತ ಪಟ್ಟಿಯ ಪ್ರಕಾರ, ಎರಡು ತಿಂಗಳ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತಲ್ಲದೆ, ೧:೫ರ ಅನುಪಾತದನ್ವಯ ಹೊಸದಾಗಿ ಅರ್ಹರ ಪಟ್ಟಿಯನ್ನು ತಯಾರಿಸಬೇಕು ಎಂದೂ ತಾಕೀತು ಮಾಡಿತ್ತು. ಇದನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಆ ಎಲ್ಲ ವಿಶೇಷ ಮೇಲ್ಮನವಿಗಳನ್ನು ವಜಾಗೊಳಿಸಿ ಹೈಕೋರ್ಟ್‌ ತೀರ್ಪನ್ನೇ ಎತ್ತಿಹಿಡಿದಿದೆ. ಹೈಕೋರ್ಟ್‌ ತೀರ್ಪಿನ ಅನುಸಾರ ಆಯ್ಕೆ ಪಟ್ಟಿಗಳೇ ತಲೆಕೆಳಗಾಗುವ ಸಾಧ್ಯತೆಗಳಿವೆ.

ಚಿತ್ರ: ಸಾಂದರ್ಭಿಕ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More