ಚುನಾವಣೆ ಕರಾಮತ್ತು; ಕ್ಷಣದಲ್ಲೇ ಬರಿದಾಗುತ್ತಿವೆ ರಾಜ್ಯದ ಎಂಟಿಎಂಗಳು!

“ದೇಶದಲ್ಲಿ ನಗದು ಕೊರತೆಯಾಗಿದೆ, ಅದು ತಾತ್ಕಾಲಿಕ,” ಎಂದು ವಿತ್ತ ಸಚಿವ ಜೇಟ್ಲಿ ಹೇಳಿದ್ದಾರೆ. ಅತಿ ಹೆಚ್ಚಿನ ನಗದು ಕೊರತೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇದೆ. ಎಟಿಎಂಗಳಿಗೆ ಭರ್ತಿ ಮಾಡಿದ ನಗದು ತ್ವರಿತವಾಗಿ ಖಾಲಿಯಾಗುತ್ತಿದೆ. ಇದು ವಿಧಾನಸಭಾ ಚುನಾವಣೆಯ ಕರಾಮತ್ತು!

ಎಟಿಎಂಗಳ ಮುಂದೆ ‘ನೋ ಕ್ಯಾಶ್’ ಅಥವಾ ‘ಔಟ್ ಆಫ್ ಸರ್ವಿಸ್’ ಎಂಬ ಫಲಕ ಹಾಕಿದ್ದರೆ, ನಗದು ಕೊರತೆಯಾಗಿದೆ ಎಂದು ಆತಂಕಪಡಬೇಡಿ. ಅದು ಕೇವಲ ತಾತ್ಕಾಲಿಕ ನಗದು ಕೊರತೆ. ದೇಶದ ಕೆಲವು ಭಾಗಗಳಲ್ಲಿ ನಗದು ಕೊರತೆಯಾಗಿದೆ. ಎಟಿಎಂಗಳಿಗೆ ನಗದು ಭರ್ತಿ ಮಾಡುವುದು ವಿಳಂಬವಾಗುತ್ತಿದೆ. ಕೆಲವು ಎಟಿಎಂಗಳಲ್ಲಿ ನಗದು ಭರ್ತಿಯಾಗುತ್ತಲೇ ಇಲ್ಲ. ಆದರೆ, ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಕರ್ನಾಟಕ. ಕೆಲವು ವಾರಗಳಿಂದಲೂ ಎಟಿಂಎಂಗಳಲ್ಲಿ ‘ನೋ ಕ್ಯಾಶ್’ ಬೋರ್ಡ್ ಕಾಣಿಸಿಕೊಳ್ಳುತ್ತಿವೆ. ನಗದು ಕೊರತೆ ಇದೆಯೇ ಎಂದು ಎಸ್‌ಬಿಐ ಹಿರಿಯ ಅಧಿಕಾರಿಗಳನ್ನು ಕೇಳಿದಾಗ, “ನಗದು ಕೊರತೆ ಇಲ್ಲ, ಲಾಜಿಸ್ಟಿಕ್ ಸಮಸ್ಯೆ (ನೋಟು ಸಾಗಿಸಿ, ಎಟಿಎಂಗೆ ತುಂಬುವ ಪ್ರಕ್ರಿಯೆ) ಇದೆ,” ಎಂಬ ಉತ್ತರ ಸಿಕ್ಕಿತ್ತು.

ವಾಸ್ತವಿಕ ಸಮಸ್ಯೆ ಏನೆಂದರೆ, ರಾಜ್ಯದಲ್ಲಿ ಎಟಿಎಂಗಳಿಗೆ ನಗದು ತುಂಬಲಾಗುತ್ತಿದೆ. ಆದರೆ, ತುಂಬಿದ ನಗದು ತ್ವರಿತವಾಗಿ ಖಾಲಿಯಾಗುತ್ತದೆ. ಸಾಮಾನ್ಯವಾಗಿ ಎಟಿಎಂಗಳಿಗೆ ತುಂಬಿದ ನಗದಿನ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಬ್ಯಾಂಕುಗಳಿಗೆ ನಗದು ಹರಿದುಬರುತ್ತದೆ. ಆದರೆ, ಕೆಲವು ವಾರಗಳಿಂದ ಬ್ಯಾಂಕುಗಳಿಗೆ ಹರಿದುಬರುತ್ತಿರುವ ನಗದಿನ ಪ್ರಮಾಣ ಕಡಿಮೆ ಆಗಿದೆ.

ಇದಕ್ಕೆಲ್ಲ ಮೂಲ, ರಾಜ್ಯದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ. ಕೆಲವು ವಾರಗಳಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಇದ್ದಕ್ಕಿದ್ದಂತೆ ಎಟಿಎಂಗಳಲ್ಲಿ ನಗದು ಕೊರತೆ ಕಾಣಿಸಿಕೊಂಡಿತ್ತು. ಎಸ್‌ಬಿಐ ಉನ್ನತ ಅಧಿಕಾರಿಗಳು ಲಾಜಿಸ್ಟಿಕ್ ಸಮಸ್ಯೆ ಎಂದಿದ್ದರು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಹವರ್ತಿಗಳು, ಆಪ್ತ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ನಗದು ಹಿಂಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಎಟಿಎಂನಲ್ಲಿ ದಿನದ ಸರಾಸರಿ ನಗದು ವಿತ್‌ಡ್ರಾ ಪ್ರಮಾಣ ಏಳು ಲಕ್ಷ ರುಪಾಯಿ. ಆದರೆ, ಇತ್ತೀಚಿಗೆ ಇದು ನಾಲ್ಕೈದು ಪಟ್ಟು ಹೆಚ್ಚಿದೆ. ಹೀಗಾಗಿ, ಎಟಿಎಂಗಳಿಗೆ ಹಣ ತುಂಬಿದ ಕೆಲವೇ ಗಂಟೆಗಳಲ್ಲಿ ನಗದು ಖಾಲಿಯಾಗುತ್ತಿದೆ.

ನೆರೆಯ ತೆಲಂಗಾಣ ರಾಜ್ಯದ ಹೈದರಾಬಾದಿನಲ್ಲಿಯೂ ತೀವ್ರವಾಗಿ ನಗದು ಕೊರತೆಯಾಗಿದೆ. ಇತ್ತೀಚೆಗೆ ಆಂಧ್ರ ಮೂಲದ ವಾಹನದಿಂದ ಸಾಗಿಸುತ್ತಿದ್ದ ಸುಮಾರು 1.5 ಕೋಟಿ ರುಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು. ಅದು ಚುನಾವಣೆಗಾಗಿ ಆಂಧ್ರದಿಂದ ಬಂದ ಹಣವಾಗಿತ್ತು. ಇದುವರೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಲೆಕ್ಕವಿಲ್ಲದ 22 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಈ ಮೊತ್ತ ನಿತ್ಯವೂ ಹೆಚ್ಚುತ್ತಲೇ ಇದೆ. ಮತದಾನದ ದಿನದ ವೇಳೆಗೆ ನೂರು ಕೋಟಿ ದಾಟಿದರೂ ಅಚ್ಚರಿ ಇಲ್ಲ.

ಮತದಾನದ ದಿನ ಸಮೀಪಿಸಿದಾಗ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತದೆ. ಅದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಗದು ಸಂಗ್ರಹಿಸಿ ಇಡುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಚುನಾವಣಾ ಆಯೋಗ ಅದೆಷ್ಟೇ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರೂ ನಗದು ಸಾಗಾಟ ಮತ್ತು ಸಂಗ್ರಹವನ್ನು ನಿಯಂತ್ರಿಸಲಾಗುತ್ತಿಲ್ಲ.

ನಗದು ಚಲಾವಣೆ ಪ್ರಕ್ರಿಯೆ ಒಂದು ವೃತ್ತದಂತೆ. ಆರ್‌ಬಿಐನಿಂದ ನಿಯೋಜಿತವಾದ ಬ್ಯಾಂಕ್ (ಎಸ್‌ಬಿಐ) ಕರೆನ್ಸಿ ಚೆಸ್ಟ್‌ನಿಂದ ವಿವಿಧ ಬ್ಯಾಂಕುಗಳಿಗೆ ನಗದು ಸರಬರಾಜು ಮಾಡುತ್ತದೆ. ಆಯಾ ಬ್ಯಾಂಕುಗಳ ಮುಖ್ಯ ಶಾಖೆಯಿಂದ ಶಾಖೆಗಳಿಗೆ ಮತ್ತು ಎಟಿಎಂಗಳಿಗೆ ನಗದು ವಿತರಣೆ ಆಗುತ್ತದೆ. ಬ್ಯಾಂಕ್ ಶಾಖೆಗಳಿಂದ ದಿನವಿಡೀ ನಗದು ಪಾವತಿ ಮತ್ತು ಸ್ವೀಕೃತಿ ನಡೆಯುತ್ತಿರುತ್ತದೆ. ಎಟಿಎಂಗಳಲ್ಲಿ ವಿತ್‌ಡ್ರಾ ಮಾಡಲಾಗುತ್ತದೆ. ವ್ಯಾಪಾರ ವಹಿವಾಟು ನಡೆಸುವವರು ಬೆಳಗ್ಗೆ ನಗದು ಪಡೆಯುತ್ತಾರೆ. ಸಂಜೆ ವಾಪಸು ಬ್ಯಾಂಕಿನಲ್ಲಿ ಪಾವತಿಸುತ್ತಾರೆ. ಈ ಸ್ವೀಕೃತಿ ಮತ್ತು ಪಾವತಿ ನಡುವೆ ಸದಾ ಸಮತೋಲನ ಇರುತ್ತದೆ. ಹೀಗಾಗಿ, ಸಾಮಾನ್ಯ ದಿನಗಳಲ್ಲಿ ನಗದು ಕೊರತೆ ಇರುವುದಿಲ್ಲ. ಅಪನಗದೀಕರಣದ ವೇಳೆ ಈ ಸಮತೋಲನ ಇರಲಿಲ್ಲ. ಹೊಸ ನೋಟು ಚಲಾವಣೆ ತರಬೇಕಾಗಿದ್ದರಿಂದ ಬೇಡಿಕೆ ಪೂರೈಸುವಷ್ಟು ನೋಟುಗಳು ಸಕಾಲದಲ್ಲಿ ಮುದ್ರಣವಾಗದೆ ಇದ್ದುದರಿಂದ ನಗದು ಕೊರತೆ ಉದ್ಭವಿಸಿತ್ತು.

ಈಗ ದೇಶೀಯ ಹಣಕಾಸು ಮಾರುಕಟ್ಟೆಯಲ್ಲಿ 18.25 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದೆ. ಅಂದರೆ, ಅಪನಗದೀಕರಣದ ಅವಧಿಯಲ್ಲಿದ್ದ ಪ್ರಮಾಣದಷ್ಟೇ ಇದೆ. ಹಾಗಾಗಿ, ಈಗ ಉದ್ಭವಿಸಿರುವ ನಗದು ಕೊರತೆಯು ತಾತ್ಕಾಲಿಕವಾದುದು. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಮುಗಿದ ನಂತರ ಈ ಸಮಸ್ಯೆ ತನ್ನಿಂತಾನೇ ನಿವಾರಣೆ ಆಗಿಬಿಡುತ್ತದೆ.

ಅಗತ್ಯ ಇರುವುದಕ್ಕಿಂತಲೂ ಹೆಚ್ಚು ನಗದು ಚಲಾವಣೆಯಲ್ಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ನಗದು ಕೊರತೆ ತಾತ್ಕಾಲಿಕ. ಕೆಲವು ಭಾಗದಲ್ಲಿ ಹೆಚ್ಚಿನ ನಗದು ಸರಬರಾಜಾಗಿದ್ದು, ಕೆಲವು ಕಡೆ ಸರಬರಾಜು ಕೊರತೆ ಕಾಣಿಸಿಕೊಂಡಿದೆ. ಈ ಸಮಸ್ಯೆ ತ್ವರಿತ ನಿವಾರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವಿತ್ತ ಸಚಿವಾಲಯವು ದೇಶದ ನಗದು ಚಲಾವಣೆ ಸ್ಥಿತಿ ಕುರಿತಂತೆ ಪರಾಮರ್ಶೆ ಮಾಡಿದೆ. ಕೆಲವು ಭಾಗಗಳಲ್ಲಿ ಏಕಾಏಕಿ ಮತ್ತು ಅಸಹಜವಾಗಿ ನಗದು ಹಿಂಪಡೆಯುವ ಪ್ರಮಾಣ ಹೆಚ್ಚಿರುವುದರಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಮಸ್ಯೆ ತ್ವರಿತ ಪರಿಹರಿಸಲಾಗುತ್ತದೆ ಎಂದಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ದೇಶದಲ್ಲಿ ಅಸಹಜವಾಗಿ ನಗದಿಗೆ ಬೇಡಿಕೆ ಬಂದಿದೆ. ಏಪ್ರಿಲ್ ತಿಂಗಳ ಮೊದಲ 13 ದಿನಗಳಲ್ಲಿ 45,000 ಕೋಟಿ ಮೌಲ್ಯದ ನಗದು ಸರಬರಾಜು ಹೆಚ್ಚಿಸಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಅಸಹಜ ಬೇಡಿಕೆ ಬಂದಿದೆ. ವಿತ್ತ ಸಚಿವಾಲಯ ಮತ್ತು ಆರ್‌ಬಿಐ ಈ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಂಡಿವೆ ಎಂದು ವಿತ್ತ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಗತ್ಯವಾದಷ್ಟು ಕರೆನ್ಸಿ ನೋಟುಗಳ ಸಂಗ್ರಹ ಇದೆ. ಅಸಹಜ ಬೇಡಿಕೆ ಬಂದಾಗಲೂ ಇದುವರೆಗೆ ಪೂರೈಕೆ ಮಾಡಿದ್ದೇವೆ. ಬೇಡಿಕೆಗೆ ಅನುಗುಣವಾಗಿ ನಗದು ಪೂರೈಸಲು 500, 200, 100ರ ನೋಟುಗಳು ಸೇರಿದಂತೆ ಎಲ್ಲ ಮೌಲ್ಯದ ನೋಟುಗಳನ್ನು ದಾಸ್ತಾನಿಡಲಾಗುತ್ತದೆ ಎಂದು ಹೇಳಿಕೆಯಲ್ಲಿ ವಿವರಿಸಿದೆ.

ದೇಶದಲ್ಲಿ ಎಲ್ಲೂ ನಗದು ಕೊರತೆಯಾಗಲೀ, ಸಮಸ್ಯೆಯಾಗಲೀ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಗಾರ್ಗ್ ಸಿಎನ್ಬಿಬಿಸಿ ಟಿವಿ18ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ದೇಶದಲ್ಲಿ 18 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದೆ ಅಪಗನದೀಕರಣಕ್ಕೂ ಮುನ್ನ ಈ ಪ್ರಮಾಣ 17.5 ಲಕ್ಷ ಕೋಟಿ ಇತ್ತು ಎಂದು ವಿವರಿಸಲಾಗಿದೆ.

ಇದನ್ನೂ ಓದಿ : ಅಪನಗದೀಕರಣ ಅನಪೇಕ್ಷಿತ ನೀತಿ ಎನ್ನುತ್ತಾರೆ ರಘುರಾಮ್ ರಾಜನ್, ಕೌಶಿಕ್ ಬಸು

ಅನಿರೀಕ್ಷಿತ, ಅಸಹಜವಾಗಿ ಬರುವ ಬೇಡಿಕೆಯನ್ನು ಪೂರೈಸಲೆಂದೇ 2.5-3 ಲಕ್ಷ ಕೋಟಿ ಕರೆನ್ಸಿಯನ್ನು ಮೀಸಲಿಡಲಾಗುತ್ತದೆ. ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಿತ್ಯ ನೋಟು ಮುದ್ರಣದ ಪ್ರಮಾಣವನ್ನು 500 ಕೋಟಿಯಿಂದ 2,500 ಕೋಟಿಗೆ ಏರಿಸಲಾಗಿದೆ. ನಗದು ಕೊರತೆಯ ವದಂತಿಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನಗದು ಹಿಂಪಡೆಯಲಾಗುತ್ತಿದೆ ಎಂದು ಗಾರ್ಗ್ ಹೇಳಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 18.29 ಲಕ್ಷ ಕೋಟಿ ಕರೆನ್ಸಿ ಚಲಾವಣೆಯಲ್ಲಿದೆ. ನಮ್ಮ ವ್ಯವಸ್ಥೆಗೆ ಇಷ್ಟು ನಗದು ಸಾಕಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ ಹೇಳಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More