ಮೋದಿ ಆದೇಶದ ಮೇರೆಗೆ ದಲಿತರ ಮನೆ ಭೋಜನ; ಉ.ಪ್ರದೇಶದಲ್ಲಿ ಪ್ರಹಸನ

ದಲಿತರ ಆಕ್ರೋಶ ಶಮನ ಮಾಡಲು ಪ್ರಧಾನಿ ಮೋದಿ ‘ದಲಿತರ ಮನೆಯಲ್ಲಿ ರಾತ್ರಿ ಭೋಜನ’ ಕಾರ್ಯಕ್ರಮ ಘೋಷಿಸಿದ್ದರು. ಆದರೆ, ದಲಿತರ ಮನೆಗೆ ಭೋಜನ ಮಾಡಲು ಹೋದ ಉತ್ತರ ಪ್ರದೇಶದ ಸಚಿವರು ಮತ್ತು ಸಂಸದರು ತಮ್ಮ ನಿಜ ವ್ಯಕ್ತಿತ್ವವನ್ನು ಜನರಿಗೆ ತೋರಿಸಿದ್ದಾರೆ

ದಶಕಗಳ ಹಿಂದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದುದನ್ನು ಬಿಜೆಪಿ ಸಾಮಾಜಿಕ ಜಾಲ ತಾಣಗಳಲ್ಲಿ ‘ನಾಟಕ’ ಎಂದು ತಮಾಷೆ ಮಾಡಿತ್ತು. ರಾಹುಲ್ ಗಾಂಧಿ ದಲಿತ ಮನೆಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಮುಂದಿಟ್ಟು, ಅವರ ದಲಿತರ ಮನೆ ಭೇಟಿಯನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು. ಆದರೆ ಇದೀಗ ಸ್ವತಃ ಅಮಿತ್ ಶಾ ಆದಿಯಾಗಿ ಬಿಜೆಪಿ ಮುಖಂಡರು ದಲಿತರ ಮನೆಯಲ್ಲಿ ಭೋಜನ ಮಾಡುವ ‘ದಲಿತ್ ಡಿನ್ನರ್’ ರಾಜಕೀಯಕ್ಕೆ ಇಳಿದಿದ್ದಾರೆ. ಆದರೆ ಬಿಜೆಪಿ ನಾಯಕರ ಇಂತಹ ದಲಿತ ಭೋಜನ ಕಾರ್ಯಕ್ರಮಗಳಿಗೆ ಸ್ವತಃ ಪಕ್ಷದೊಳಗೇ ಮತ್ತು ಆರ್‌ಎಸ್‌ಎಸ್‌ನಲ್ಲಿ ಅಸಮಾಧಾನವಿದೆ. ದಲಿತರ ಮನೆಗೆ ತೆರಳಿ ಒಂದು ರಾತ್ರಿ ಕಳೆಯುವುದು ನರೇಂದ್ರ ಮೋದಿಯವರ ಫ್ಲಾಗ್‌ಶಿಪ್ ಕಾರ್ಯಕ್ರಮ. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ದಲಿತ ವಿರೋಧಿ ನೀತಿ ಹೊಂದಿರುವ ಬಗ್ಗೆ ದಲಿತ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಈ ಆಕ್ರೋಶ ಶಮನ ಮಾಡಲು ಪ್ರಧಾನಿ ಮೋದಿ ‘ದಲಿತರ ಮನೆಯಲ್ಲಿ ರಾತ್ರಿ ಭೋಜನ’ ಕಾರ್ಯಕ್ರಮ ಘೋಷಿಸಿದ್ದರು. ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಪಕ್ಷದ ಮುಖಂಡರು ಪಾಲಿಸಲು ಮುಂದಾಗಿದ್ದರೂ, ವೈಯಕ್ತಿಕವಾಗಿ ಭಿನ್ನ ನಿಲುವನ್ನು ಹೊಂದಿರುವಾಗ ಮನಃಪೂರ್ವಕವಾಗಿ ದಲಿತರ ಮನೆಯಲ್ಲಿ ಭೋಜನ ಮಾಡುವುದು ಬಿಜೆಪಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಬಿಜೆಪಿಯ ಮಾತೃಸಂಸ್ಥೆಯಾಗಿರುವ ಆರ್‌ಎಸ್ಎಸ್, ಬಿಜೆಪಿ ನಾಯಕರ ಪ್ರಯತ್ನಗಳು ಸಹಜವಾದುದಲ್ಲ, ದಲಿತರನ್ನು ಓಲೈಸುವ ನಾಟಕ ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಂಡು ಟೀಕಿಸಿದೆ.

ಮುಖ್ಯವಾಗಿ ಆರ್‌ಎಸ್ಎಸ್ ನಾಯಕರಿಗೆ ಬಿಜೆಪಿಯ ದಲಿತ ಔಟ್‌ರೀಚ್ ಕಾರ್ಯಕ್ರಮ ಸಫಲವಾಗುವ ಸಾಧ್ಯತೆಯಂತೂ ಕಾಣಿಸುತ್ತಿಲ್ಲ. ಅದೇ ಕಾರಣದಿಂದ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದೀಗ “ದಲಿತರ ಹೆಸರಲ್ಲಿ ನಾಟಕ ಆಡಬೇಡಿ,” ಎಂದು ಬಿಜೆಪಿಗೆ ನಿರ್ದೇಶನ ನೀಡಿದ್ದಾರೆ. ಆರ್‌ಎಸ್ಎಸ್ ಮತ್ತು ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕರ ಸಭೆಯಲ್ಲಿ ಮೋಹನ್ ಭಾಗವತ್ ಅವರು ಬಿಜೆಪಿಯ ದಲಿತ ಭೋಜನ ಕಾರ್ಯಕ್ರಮವನ್ನು ಟೀಕಿಸಿ ‘ನಾಟಕ ಮಾಡಬೇಡಿ’ ಎಂದು ಹೇಳಿರುವುದು ವರದಿಯಾಗಿದೆ. ನಂತರ ಮೋಹನ್ ಭಾಗವತ್ ಇಂತಹ ಹೇಳಿಕೆ ನೀಡಿರುವುದನ್ನು ಆರ್‌ಎಸ್ಎಸ್ ನಿರಾಕರಿಸಿದೆ. ಆದರೆ ಆರ್‌ಎಸ್ಎಸ್ ಪದಾಧಿಕಾರಿಗಳು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, “ಬಿಜೆಪಿ ದಲಿತರ ಮನೆಗೆ ಹೋಗಿ ಊಟ ಮಾಡುವ ನಾಟಕದಂತಹ ಕಾರ್ಯಕ್ರಮಗಳಿಗೆ ಸಂಘಪರಿವಾರದ ಒಪ್ಪಿಗೆಯಿಲ್ಲ,” ಎನ್ನುವುದನ್ನು ಪದೇ ಪದೇ ಹೇಳುತ್ತಾ ಬಂದಿದ್ದಾರೆ. “ಸಂಘ ಪರಿವಾರ ಮತ್ತು ಬಿಜೆಪಿಯ ಮೇಲೆ ದಲಿತರ ಭರವಸೆ ಬೆಳೆಯುವುದು ಸಹಜವಾಗಿ ನಡೆಯಬೇಕೇ ವಿನಾ ಇಂತಹ ಕಾರ್ಯಕ್ರಮಗಳಿಂದಲ್ಲ. ಕೇವಲ ಊಟ ಮಾಡಿದರೆ ಸಾಲದು, ಜಾತಿ ತಾರತಮ್ಯವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು. ದಲಿತರ ಜೊತೆಗೆ ಆಗಾಗ್ಗೆ ಸಂವಹನ ಕಾರ್ಯಕ್ರಮ ನಡೆಸಬೇಕು,” ಎನ್ನುವುದು ಆರ್‌ಎಸ್ಎಸ್ ಅಭಿಪ್ರಾಯ. ಇಂತಹ ಕಾರಣಗಳಿಂದಲೇ ಬಿಜೆಪಿಯ ‘ದಲಿತ ಡಿನ್ನರ್ ಪಾಲಿಟಿಕ್ಸ್’ ಸುದ್ದಿಯಾಗುತ್ತಲೇ ಇದೆ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ:

“ದಲಿತ ಮನೆಗಳಲ್ಲಿ ಸೊಳ್ಳೆಗಳು ಇಡೀ ರಾತ್ರಿ ಕಚ್ಚುತ್ತವೆ,” ಎನ್ನುವುದು ಇತ್ತೀಚೆಗೆ ದಲಿತ ಭೋಜನದ ನಾಟಕದ ಪಾತ್ರದಾರಿಯಾಗಿದ್ದ ಉತ್ತರ ಪ್ರದೇಶದ ಸಚಿವೆ ಅನುಪಮಾ ಜೈಸ್ವಾಲ್ ಅಭಿಪ್ರಾಯವಾಗಿದೆ. “ದಲಿತರು ಸೌಲಭ್ಯ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಉತ್ತರ ಪ್ರದೇಶದ ಸರ್ಕಾರದ ಸಚಿವರು ಇಡೀ ರಾತ್ರಿ ದಲಿತರ ಮನೆಗಳಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಂಡಿದ್ದಾರೆ. ಹಾಗೆಂದು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಲು ಅವರು ಬೇಸರಿಸುತ್ತಿಲ್ಲ. ಎರಡು ಸ್ಥಳಗಳಿಗೆ ಹೋಗೆಂದರೆ ನಾಲ್ಕು ಸ್ಥಳಗಳಿಗೆ ಹೋಗುತ್ತಿದ್ದಾರೆ,” ಎಂದು ಜೈಸ್ವಾಲ್ ಹೇಳಿಕೆ ನೀಡಿದ್ದಾರೆ. ಬಡವರಿಗಾಗಿ ಯೋಜನೆಗಳನ್ನು ರೂಪಿಸಿದ ನಂತರ ಸೊಳ್ಳೆ ಕಚ್ಚಿಸಿಕೊಳ್ಳುವ ಹೊರತಾಗಿಯೂ ಅವರ ಬಳಿಗೆ ತಲುಪಿಸಿದ ಸಂತೃಪ್ತಿ ತಮಗಿದೆ ಎನ್ನುವುದು ಅವರ ಮಾತಿನ ಒಕ್ಕಣೆಯಾಗಿದೆ. ಪ್ರಧಾನಿ ಆದೇಶದ ಮೇರೆಗೆ ದಲಿತರ ಮನೆಗೆ ಭೋಜನಕ್ಕೆ ತೆರಳಿದ ಉತ್ತರ ಪ್ರದೇಶದ ಬಿಜೆಪಿ ಮುಖಂಡರ ಬಗ್ಗೆ ಇಂತಹ ಹಲವು ಸ್ವಾರಸ್ಯಮಯ ವಿಷಯಗಳು ಚಾಲ್ತಿಯಲ್ಲಿವೆ. ಮಾತ್ರವಲ್ಲದೆ, ಈ ಉದಾಹರಣೆಗಳು ದಲಿತರ ಕುರಿತ ಬಿಜೆಪಿಯ ಧೋರಣೆಗಳಿಗೂ ಉದಾಹರಣೆಗಳಾಗಿ ನಿಂತಿವೆ.

ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿರುವ ‘ದಲಿತರ ಮನೆಗೆ ಬಿಜೆಪಿ ಸಚಿವರು’ ಕಾರ್ಯಕ್ರಮದಲ್ಲಿ ಮತ್ತೊಬ್ಬ ಸಚಿವ ಸುರೇಶ್ ರೈನಾ ಅವರು ದಲಿತರ ಮನೆಯಲ್ಲಿ ಭೋಜನಕ್ಕೆ ಹೋಗಿದ್ದರು. ಆದರೆ ತಮ್ಮದೇ ಭೋಜನವನ್ನು ಕಟ್ಟಿಸಿಕೊಂಡು ಹೋಗಿದ್ದಲ್ಲದೆ, ಮಿನರಲ್ ವಾಟರ್ ಮತ್ತು ಬಡಿಸಲು ತಟ್ಟೆ, ಚಮಚಗಳನ್ನೂ ಜೊತೆಯಲ್ಲಿ ಕೊಂಡು ಹೋಗಿದ್ದರು. ಪಾಲಕ್ ಪನೀರ್, ಕಡಲೆ ಸಾರು, ದಾಲ್ ಮಖನಿ, ತಂದೂರಿ ರೋಟಿ ಮತ್ತು ಗುಲಾಬ್ ಜಾಮೂನು ಹಿಡಿದು ಬಂದ ಅತಿಥಿಗಳನ್ನು ಕಂಡು ದಲಿತರು ಬೇಸ್ತು ಬಿದ್ದಿದ್ದರು.

ಉತ್ತರ ಪ್ರದೇಶದ ಮತ್ತೊಬ್ಬ ಸಚಿವರಾದ ರಾಜೇಂದ್ರ ಪ್ರತಾಪ್ ಸಿಂಗ್ ಅವರು ದಲಿತರ ಮನೆಯಲ್ಲಿ ಭೋಜನ ಮಾಡಿದ ನಂತರ ರಾಮ ದೇವರು ಶಬರಿಯ ಮನೆಯಲ್ಲಿ ಉಂಡ ಪ್ರಕರಣಕ್ಕೆ ತಮ್ಮ ಭೋಜನವನ್ನು ಹೋಲಿಸಿಕೊಂಡರು! “ರಾಮಾಯಣದಲ್ಲಿ ರಾಮ ಮತ್ತು ಶಬರಿಯ ನಡುವಿನ ಭೋಜನ ಪ್ರಕರಣದ ಉಲ್ಲೇಖವಿದೆ. ಇಂದು ನಾನು ಇಲ್ಲಿಗೆ ಬಂದಾಗ ಜ್ಞಾನ್‌ನ ತಾಯಿ ನನಗೆ ಆಹಾರ ಕೊಟ್ಟರು. ನನಗೆ ಈ ಊಟ ಕೊಡಲು ಆಕೆ ಬಹಳ ಪುಣ್ಯ ಮಾಡಿರಬೇಕು ಎಂದು ಆಕೆಯೇ ಹೇಳಿದ್ದಾರೆ. ನಾನೊಬ್ಬ ಕ್ಷತ್ರಿಯ. ಧರ್ಮ ಮತ್ತು ಸಮಾಜವನ್ನು ರಕ್ಷಿಸುವುದು ನನ್ನ ಕರ್ತವ್ಯ” ಎನ್ನುವ ರಾಜೇಂದ್ರ ಪ್ರತಾಪ್ ಸಿಂಗ್ ಅವರ ಮಾತುಗಳು ದಲಿತರ ಬಗ್ಗೆ ಮೇಲ್ವರ್ಗದವರ ಮನಸ್ಸುಗಳಲ್ಲಿ ಎಂಥಾ ನಿಲುವುಗಳಿವೆ ಎನ್ನುವುದು ಸ್ಪಷ್ಟಪಡಿಸುತ್ತದೆ.

ಉತ್ತರ ಪ್ರದೇಶದ ಸಂಸದೆ ಉಮಾ ಭಾರತಿಯವರಂತೂ ದಲಿತರ ಮನೆಗೆ ಭೋಜನ ಮಾಡಲು ಹೋಗುವ ಕಾರ್ಯಕ್ರಮ ಹಾಕಿಕೊಂಡು ನಂತರ ಹೋಗದೆ ತಪ್ಪಿಸಿಕೊಂಡರು. ಆದರೆ ತಾವು ದಲಿತರ ಮನೆಗೆ ಹೋಗದೆ ಇರುವುದಕ್ಕೆ ಕಾರಣ ನೀಡಿ ಸಮಜಾಯಿಸಿ ಕೊಟ್ಟರು. ದಲಿತರ ಮನೆಗೆ ಹೋಗಿ ಅವರಿಗೆ ಪುಣ್ಯಬರುವಂತೆ ಮಾಡಲು ನಾನು ರಾಮ ದೇವರಲ್ಲ ಎಂದು ಹೇಳಿಕೆ ಕೊಟ್ಟರು. “ದಲಿತರು ನನ್ನ ಮನೆಗೆ ಬಂದರೆ ನನಗೆ ಪುಣ್ಯ ಬರುತ್ತದೆ ಎಂದುಕೊಂಡಿದ್ದೇನೆ. ಅವರಿಗೆ ನನ್ನ ಸೋದರ ಸಂಬಂಧಿ ಅಡುಗೆ ಮಾಡಿದ ಆಹಾರ ಬಡಿಸುತ್ತೇನೆ” ಎಂದು ಉಮಾಭಾರತಿ ಹೇಳಿಕೆ ನೀಡಿದರು.

ಇದನ್ನೂ ಓದಿ : ಎಸ್‌ಸಿ-ಎಸ್‌ಟಿ ಕಾಯ್ದೆ: ಕೇಂದ್ರದ ಮೌನಕ್ಕೆ ಬಿಜೆಪಿ ದಲಿತ ನಾಯಕರ ಆಕ್ರೋಶ

ಹೀಗೆ ಪ್ರತೀ ಬಾರಿಯೂ ಹೀಗೆ ಬಿಜೆಪಿ ಸಚಿವರ ದಲಿತ ಭೋಜನಗಳು ತಪ್ಪು ಕಾರಣಗಳಿಗೇ ಸುದ್ದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏನು ಹೇಳುತ್ತಾರೆ? ಹೇಳುವುದೇನಿದೆ? ಅವರು ಸ್ವತಃ ದಲಿತರ ಮನೆಯಲ್ಲಿ ಭೋಜನ ಆಯೋಜಿಸಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದರು. ಇತ್ತೀಚೆಗೆ ಯೋಗಿ ಆದಿತ್ಯನಾಥ್ ಅಮ್ರೋಹಾ ಮತ್ತು ಪ್ರತಾಪ್ ಗಢದಲ್ಲಿ ದಲಿತರ ಮನೆಯಲ್ಲಿ ರಾತ್ರಿ ತಂಗಿ ಸಭೆ ನಡೆಸಿದ್ದರು. ದಲಿತರಿಗಾಗಿ ತಮ್ಮ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳ ಅಭಿಪ್ರಾಯ ಪಡೆಯುವುದು ತಮ್ಮ ಉದ್ದೇಶ ಎಂದು ಆದಿತ್ಯನಾಥ್ ಹೇಳಿದ್ದರು. ಆದರೆ ವಿರೋಧಪಕ್ಷಗಳು ಅವರ ಈ ಕಾರ್ಯಕ್ರಮದ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಒಂದೊಂದಾಗಿ ಮುಂದಿಟ್ಟು ಟೀಕಿಸಿದ್ದವು. “ಭಾರತ್ ಬಂದ್ ಸಂದರ್ಭದಲ್ಲಿ ದಲಿತರನ್ನು ದಮನಿಸಿದ ಸರ್ಕಾರ, ಎಸ್‌ಸಿ/ಎಸ್‌ಟಿ ಕಾಯ್ದೆ ಸಡಿಲಿಸಿದ ಕುರಿತ ನಿಲುವಿನಲ್ಲಿ ದಲಿತ ವಿರೋಧಿಯಾಗಿ ನಡೆದುಕೊಂಡ ಬಿಜೆಪಿ ಹೀಗೆ ದಲಿತರ ಮನೆಗಳಿಗೆ ಹೋಗಿ ತನಗೆ ಬಂದ ಕೆಟ್ಟ ವರ್ಚಸ್ಸನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ದಲಿತ ವಿರೋಧಿ ನೀತಿಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ ತಾವು ದಲಿತ ಕಾಳಜಿ ಹೊಂದಿದ್ದೇವೆ ಎನ್ನುವ ನಾಟಕ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಬಿಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದರು. ಹೀಗೆ ಯೋಗಿ ಆದಿತ್ಯನಾಥ್ ದಲಿತ ಮನೆಗಳಿಗೆ ಭೇಟಿ ನೀಡಿದ್ದು ಅವರ ಸರ್ಕಾರದ ಕೈಗೊಂಡ ದಲಿತ ವಿರೋಧಿ ನೀತಿಗಳನ್ನು ಮುಂದಿಟ್ಟು ಚರ್ಚಿಸಲು ವಿಪಕ್ಷಗಳಿಗೆ ಒಂದು ವೇದಿಕೆಯಾಯಿತು. ಈ ಮೊದಲು ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ‘’ಬಿಜೆಪಿ ಸಚಿವರು ಮತ್ತು ಸಂಸದರು ‘ಗ್ರಾಮ ಸ್ವರಾಜ್ ಅಭಿಯಾನ’ ಕಾರ್ಯಕ್ರಮದ ಅಡಿಯಲ್ಲಿ ಶೇ. ೫೦ಕ್ಕೂ ಅಧಿಕ ದಲಿತರು ನೆಲೆಸಿರುವ ಉತ್ತರ ಪ್ರದೇಶದ ೨೦,೦೦೦ ಗ್ರಾಮಗಳಲ್ಲಿ ಯಾವುದಾದರೂ ಒಂದು ಗ್ರಾಮದಲ್ಲಿ ಒಂದು ರಾತ್ರಿ ಕಳೆಯಬೇಕು” ಎಂದು ಆದೇಶಿಸಿದ್ದರು. ಆ ಆದೇಶದ ನಂತರ ಈಗ ಒಂದು ತಿಂಗಳಲ್ಲಿ ಬಿಜೆಪಿ ಸಚಿವರು ದಲಿತರ ಆಕ್ರೋಶ ಶಮನಗೊಳಿಸುವ ಸಲುವಾಗಿ ತಮ್ಮ ನಡವಳಿಕೆಯಿಂದ ಸ್ವತಃ ಪಕ್ಷಕ್ಕೆ ಮುಜುಗರ ತಂದಿದ್ದಾರೆ.

ಈ ಎಲ್ಲಾ ಉದಾಹರಣೆಗಳೂ ಬಿಜೆಪಿಯ ಮೇಲ್ವರ್ಗದ ಮುಖಂಡರು ದಲಿತರನ್ನು ನೋಡುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ ಎನ್ನುವುದನ್ನು ತಿಳಿಸುತ್ತವೆ. ಸಮಾಜದೊಳಗೆ ದಲಿತರನ್ನು ಕೆಳದರ್ಜೆಯವರಂತೆ ಕಾಣುವ ಪ್ರವೃತ್ತಿ ಇನ್ನೂ ಬದಲಾಗಿಲ್ಲ. ದಲಿತರ ಬಗ್ಗೆ ಮೇಲ್ವರ್ಗದಲ್ಲಿ ಕನಿಕರವೇನೋ ಇರಬಹುದು, ಆದರೆ ಅವರು ತಮಗೆ ಸಮಾನರು ಎಂದು ನೋಡುವ ಮನೋಭಾವನೆಯಿಲ್ಲ. ದಲಿತರ ಮನೆಗೆ ಹೋಗುವುದು ರಾಜಕೀಯವಾಗಿ ತಮಗೆ ಲಾಭದಾಯಕ ಎನ್ನುವ ಒಂದು ಆಸಕ್ತಿಯಷ್ಟೇ ಈ ‘ಡಿನ್ನರ್ ಪಾಲಿಟಿಕ್ಸ್’ ಮಾಡುವಂತೆ ಅವರನ್ನು ಪ್ರೇರೇಪಿಸುತ್ತಿದೆ. ಹೀಗೆ ಒತ್ತಡಪೂರ್ವಕವಾಗಿ ಪ್ರಧಾನಿ ಮೋದಿಯವರು ತಮ್ಮ ಸಚಿವರನ್ನು ಮತ್ತು ಸಂಸದರನ್ನು ದಲಿತರ ಮನೆಗೆ ಹೋಗುವಂತೆ ಆದೇಶಿಸುವುದರಿಂದ ಮೂಲ ಮಟ್ಟದಲ್ಲಿ ದಲಿತರಿಗೆ ಏನೂ ಒಳಿತಾಗುವುದಿಲ್ಲ ಎನ್ನುವುದೂ ಅಷ್ಟೇ ನಿಜ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More