ಶಿಕ್ಷಣ ನೀತಿಯಲ್ಲಿ ಹಿಂದಿಗೆ ಆದ್ಯತೆ ಎಂದ ಕೇಂದ್ರ ಸಚಿವರ ಮಾತಿಗೆ ಆಕ್ರೋಶ

ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿವೆ. ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ನೂತನ ಶಿಕ್ಷಣ ನೀತಿಯ ಮೂಲಕ ಹಿಂದಿಗೆ ಪ್ರಾಮುಖ್ಯತೆ ನೀಡಲಾಗುವುದು ಎನ್ನುವ ಮೂಲಕ ದಕ್ಷಿಣ ಭಾರತದ ಜನರ ಟೀಕೆಗೆ ಗುರಿಯಾಗಿದ್ದಾರೆ

ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿವೆ. ಒಂದಷ್ಟು ಸಮಯ ಚರ್ಚೆಯಿಂದ ಹಿಂದೆ ಸರಿದಿದ್ದ ಈ ವಿಚಾರ, ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ನೂತನ ಶಿಕ್ಷಣ ನೀತಿಯ ಮೂಲಕ ಹಿಂದಿಗೆ ಪ್ರಾಮುಖ್ಯತೆ ನೀಡಲಾಗುವುದು ಎನ್ನುವ ಮೂಲಕ ದಕ್ಷಿಣ ಭಾರತದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದರು. ಈ ಸಂದರ್ಭ ನೂತನ ಶಿಕ್ಷಣ ನೀತಿಯ ಕುರಿತು ಮಾತನಾಡಿದ ಸಚಿವರು ಹಿಂದಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದಿದ್ದಾರೆ. “ದೇಶ ಹಾಗೂ ಸಮಾಜಕ್ಕೆ ಭಾಷೆ ಬಹಳ ಮುಖ್ಯ. ಹಾಗಾಗಿ ನೂತನ ಶಿಕ್ಷಣ ನೀತಿಯ ಮೂಲಕ ಹಿಂದಿಗೆ ನೀಡಬೇಕಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ,” ಎಂದು ಕೇಂದ್ರ ಸಚಿವ ಹೇಳಿದ್ದಾರೆ.

“೧೮೩೫ರಲ್ಲಿ ಮೊದಲ ಬಾರಿ ಶಿಕ್ಷಣ ನೀತಿ ಜಾರಿ ಮಾಡಿದಾಗ ಲಾರ್ಡ್ ಮೆಕಾಲೆ, ‘ಭಾರತೀಯರು ತಮ್ಮ ರೂಪ ಮತ್ತು ರಕ್ತದಲ್ಲಿ ಭಾರತೀಯರಾಗಿ ಉಳಿಯಲಿದ್ದಾರೆ. ಅವರ ಆಲೋಚನೆಗಳು ಬ್ರಿಟಿಷರಂತೆ ಇರಲಿದೆ’ ಎಂದಿದ್ದರು. ಶೀಘ್ರದಲ್ಲಿಯೇ ನೂತನ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಇಂಗ್ಲಿಷ್ ಭಾಷೆ ತಿಳಿಯದಿದ್ದರೆ ಜನ ತಮ್ಮನ್ನು ತಾವು ಕೀಳಾಗಿ ಕಾಣುತ್ತಾರೆ ಎಂಬುದು ದುರದೃಷ್ಟಕರ. ನಿಮ್ಮ ತಾಯಿಯನ್ನು ಹೇಗೆ ಬದಲಾಯಿಸಲು ಸಾಧ್ಯವಿಲ್ಲವೋ ಹಾಗೇ ನಿಮ್ಮ ಮಾತೃ ಭಾಷೆಯನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂದಿದ್ದಾರೆ. ಸಚಿವರು ದಕ್ಷಿಣ ಭಾರತದ ಮೇಲೆ ಹಿಂದಿ ಹೇರಿಕೆ ಮಾಡುವ ಕುರಿತಾಗಿ ಮಾತನಾಡಿ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಮೊದಲು ಇಂತಹ ವಿಚಾರಗಳು ದಕ್ಷಿಣ ಭಾರತದ ರಾಜ್ಯಗಳ ಜನತೆಯ ಕೋಪಕ್ಕೆ ಕಾರಣವಾಗಿತ್ತು. ಅಂಥ ಪ್ರಸಂಗಗಳು ಇಲ್ಲಿವೆ.

ತಮಿಳುನಾಡು ಹೆದ್ದಾರಿ ನಾಮಫಲಕ

ತಮಿಳುನಾಡಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸೂಚನಾ ಫಲಕಗಳಲ್ಲಿ ಇಂಗ್ಲಿಷ್‌ನ ‌ಬದಲಾಗಿ ಹಿಂದಿ ಭಾಷೆ ಉಪಯೋಗಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ೨೦೧೭ರ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ ಹಾಗೂ ೭೭ರಲ್ಲಿ ಸೂಚನಾ ಫಲಕಗಳಲ್ಲಿದ್ದ ಇಂಗ್ಲಿಷ್ ಹೆಸರು ಅಳಿಸಿ ಹಿಂದಿಯಲ್ಲಿ ಬರೆಯುವ ಪ್ರಕ್ರಿಯೆ ನಡೆದಿತ್ತು. ಇದನ್ನು ಮರು ಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ), ಪಟ್ಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷಗಳೂ ವಿರೋಧಿಸಿದ್ದವು. ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನಾ ಫಲಕದಲ್ಲಿ ಹಿಂದಿಯನ್ನು ಅಳಿಸಿ ಮತ್ತೆ ಇಂಗ್ಲಿಷ್‌ನಲ್ಲಿ ಹೆಸರು ಬರೆಯಲಾಗಿತ್ತು.

ನಮ್ಮ ಮೆಟ್ರೋ

ನಮ್ಮ ಮೆಟ್ರೋ ಆರಂಭವಾದಾಗ ಮೆಟ್ರೋದಲ್ಲಿ ರಾಷ್ಟ್ರೀಯ ಭಾಷೆಯನ್ನು ಬಳಸಬೇಕು ಎಂದು ಕೇಂದ್ರ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಕೇಂದ್ರ ಸರಕಾರದ ತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿಯನ್ನು ಕಡ್ಡಾಯ ಮಾಡಿದ ಕೇಂದ್ರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ೨೦೧೬ರ ಡಿಸೆಂಬರ್ ೯ರಂದು ನಮ್ಮ ಮೆಟ್ರೋ ಸೇರಿ ಎಲ್ಲ ಮೆಟ್ರೋ ರೈಲು ನಿಗಮಗಳಿಗೆ ಪತ್ರ ಬರೆದು ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿತ್ತು. ಮೆಟ್ರೋದಲ್ಲಿ ಹಿಂದಿ ಭಾಷೆ ಅಳವಡಿಸಿದ್ದನ್ನು ಜನ ವಿರೋಧಿಸಿದ್ದರಿಂದ ಹಿಂದಿ ಬಳಕೆಯಲ್ಲಿ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕೆಂದು ೨೦೧೬ ಜುಲೈ ೨ರಂದು ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಆ ಪತ್ರಕ್ಕೆ ಕೇಂದ್ರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

ಹಿಂದಿ ಪರೀಕ್ಷೆ

ಕೇಂದ್ರದ ಹಿಂದಿ ಹೇರಿಕೆ ನಿರ್ಧಾರದಿಂದ ರಾಷ್ಟ್ರೀಯ ಹೆದ್ದಾರಿ ಮೈಲುಗಲ್ಲುಗಳಲ್ಲಿ, ಮೆಟ್ರೋ ನಿಲ್ದಾಣಗಳಲ್ಲಿ, ಹಿಂದಿ ಪರೀಕ್ಷೆಗಳು ಹೀಗೆ ಎಲ್ಲೆಡೆ ಹಿಂದಿ ಹೇರಿಕೆ ಆರಂಭವಾದಾಗಲೇ ಕರ್ನಾಟಕ, ತಮಿಳುನಾಡು ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ನಿರ್ಧಾರದ ಕುರಿತಾಗಿ ಚರ್ಚಿಸಲು ವಿವಿಧ ರಾಜ್ಯದ ಪ್ರಾದೇಶಿಕ ಪಕ್ಷಗಳು, ಭಾಷಾ ಸಂಘಟನೆಗಳು ೨೦೧೭ ಜುಲೈನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಈ ಸಭೆಯಲ್ಲಿ ವಿವಿಧ ರಾಜ್ಯದ ಪ್ರತಿನಿಧಿಗಳು ಭಾಗವಹಿಸಿದ್ದರು. ಹಿಂದಿ ಭಾಷಾ ಹೇರಿಕೆ ಎದುರಾಗಿ ಒಟ್ಟಾಗುವಂತೆ ಆಂಧ್ರಪ್ರದೇಶ, ಅಸ್ಸಾಂ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತೆಲಂಗಾಣ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ವೇದಿಕೆಯ ಅಧ್ಯಕ್ಷ ಸಭೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ : ಬಜೆಟ್ ನೆಪದಲ್ಲಿ ದಕ್ಷಿಣದ ಮೇಲೆ ಹಿಂದಿ ಹೇರಿಕೆ; ಟ್ವಿಟರ್‌ನಲ್ಲಿ ಜೋರು ಚರ್ಚೆ

ಹಿಂದಿಯಲ್ಲಿ ಬಜೆಟ್ ಮಂಡನೆ

ವಿತ್ತ ಸಚಿವ ಅರುಣ್ ಜೇಟ್ಲಿ ಹಿಂದಿಯಲ್ಲಿ ಬಜೆಟ್ ಮಂಡನೆ ಮಾಡಿದ್ದು ದಕ್ಷಿಣ ಭಾರತದ ಜನರ ಟೀಕೆಗೆ ಗುರಿಯಾಗಿತ್ತು. ದೇಶಕ್ಕೆ ಒಬ್ಬ ವಿತ್ತ ಸಚಿವರಿರುವಾಗ ಈ ರೀತಿ ಮಾಡಿದ್ದು ಅನ್ಯಾಯ ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈನ ಟಿವಿ ಪತ್ರಕರ್ತ ಕಾರ್ತಿಕೇಯ ಸೆಲ್ವನ್ ಅವರು ಇಂದು ಇಂಡಿಯಾವೋ ಹಿಂಡಿಯಾವೋ ಎಂದು ಪ್ರಶ್ನಿಸುವ ಮೂಲಕ ದಕ್ಷಿಣ ಭಾರತದ ಜನತೆಯನ್ನು ಚಿಂತಿಸುವಂತೆ ಮಾಡಿದ್ದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾನವ ಸಂಪನ್ಮೂಲದ ಅಭಿವೃದ್ಧಿ ಹಾಗೂ ಬೆಳವಣಿಗೆಯ ಜವಾಬ್ದಾರಿ ಹೊಂದಿರುತ್ತದೆ. ಸಚಿವಾಲಯವು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ವಿಭಾಗ ಎಂದು ಎರಡು ವಿಭಾಗಗಳನ್ನು ಹೊಂದಿದೆ. ಶಾಲಾ ಶಿಕ್ಷಣ ವಿಭಾಗ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದ ಜವಾಬ್ದಾರಿ ವಹಿಸಿದರೆ, ಉನ್ನತ ಶಿಕ್ಷಣ ವಿಭಾಗ ವಿಶ್ವವಿದ್ಯಾಲಯ ಶಿಕ್ಷಣ, ತಾಂತ್ರಿಕ ಶಿಕ್ಷಣ, ವಿದ್ಯಾರ್ಥಿ ವೇತನದ ಕುರಿತಾದ ಜವಾಬ್ದಾರಿ ನಿರ್ವಹಿಸುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More