ಯಜಮಾನನಿಲ್ಲದೆ ಅನಾಥವಾಗಿದೆ ಕೇಂದ್ರ ಹಣಕಾಸು ಸಚಿವಾಲಯ!

ಜಾಗತಿಕವಾಗಿ ಅತಿ ತ್ವರಿತ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿರುವ ಭಾರತದ ವಿತ್ತ ಸಚಿವಾಲಯ ಇಂದು ಅಕ್ಷರಶಃ ಅನಾಥವಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದರೆ, ಹಣಕಾಸು ಕಾರ್ಯದರ್ಶಿ ರಜೆ ಹಾಕಿ ವಿಶ್ರಾಂತಿ ಪಡೆಯುತ್ತಿದ್ದಾರೆ!

ಭಾರತ ಸರ್ಕಾರದ ವಿತ್ತ ಸಚಿವಾಲಯ ಈಗ ಯಜಮಾನನೇ ಇಲ್ಲದೆ ಅನಾಥವಾಗಿದೆ. ವಿತ್ತ ಸಚಿವಾಲಯದ ಹೊಣೆ ಹೊತ್ತಿರುವ ಅರುಣ್ ಜೇಟ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ನಿತ್ಯವೂ ಕಚೇರಿಗೆ ಬಂದು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ವಿತ್ತ ಸಚಿವರಿಲ್ಲದಾಗ ವಿತ್ತ ಕಾರ್ಯದರ್ಶಿ ನಿತ್ಯದ ಆಗೋಹೋಗುಗಳನ್ನು ನೋಡಿಕೊಳ್ಳುತ್ತಾರೆ. ಅತಿ ಮುಖ್ಯವಾದ ವಿಚಾರಗಳಿದ್ದಾಗ ವಿತ್ತ ಸಚಿವರ ಬಳಿಗೆ ತೆರಳಿ ಚರ್ಚಿಸುತ್ತಾರೆ. ಇಲ್ಲವೇ ಕ್ಯಾಬಿನೆಟ್ ಕಾರ್ಯದರ್ಶಿ ಜೊತೆ, ಅತ್ಯಂತ ಮುಖ್ಯವಾಗಿದ್ದರೆ ಪ್ರಧಾನಿ ಬಳಿಯೇ ಚರ್ಚಿಸುತ್ತಾರೆ.

ಈಗ ವಿತ್ತ ಸಚಿವಾಲಯದಲ್ಲಿ ಸಚಿವ ಅರುಣ್ ಜೇಟ್ಲಿ ಅವರಿಲ್ಲ. ಅವರಿಲ್ಲದ ವೇಳೆ ಹೆಚ್ಚುವರಿ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಬೇಕಿದ್ದ ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧೀಯ ಬರೋಬ್ಬರಿ 15 ದಿನಗಳ ಕಾಲ ರಜೆ ಹಾಕಿ ಹೋಗಿದ್ದಾರೆ. ನ್ಯೂಸ್ ಸೆಂಟ್ರಲ್ ಡಾಟ್ಕಾಮ್ ವರದಿ ಪ್ರಕಾರ, ಅವರು ಯೋಗ ಮತ್ತು ಧ್ಯಾನ ಮಾಡಿ ವಿಶ್ರಮಿಸಲು ಮೈಸೂರಿಗೆ ತೆರಳಿದ್ದಾರೆ!

ಇನ್ನು, ವಿತ್ತ ಸಚಿವಾಲಯದ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕಾದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿದ್ದಾರೆ. ಅವರು ರಾಜ್ಯದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದು, ಆಗಾಗ್ಗೆ ರಾಜಧಾನಿಗೆ ತೆರಳುತ್ತಿದ್ದರೂ ಅವರ ಮನಸ್ಸೆಲ್ಲ ಕರ್ನಾಟಕದ ಮೇಲೆಯೇ ಇರುವಂತಿದೆ.

ಕರ್ನಾಟಕದಲ್ಲಿ ಅಧಿಕಾರ ಗದ್ದುಗೆ ಹಿಡಿಯಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಕರೆಸಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ ಅವರು ಚುನಾವಣಾ ಪ್ರಚಾರದಲ್ಲಿ ಎಷ್ಟು ಮಗ್ನರಾಗಿದ್ದಾರೆಂದರೆ, ಉತ್ತರ ಪ್ರದೇಶದಲ್ಲಿ ಪ್ರಕೃತಿ ಪ್ರಕೋಪದಿಂದ 70 ಮಂದಿ ಸತ್ತಿರುವ ಸುದ್ದಿಯೂ ಅವರಿಗೆ ಗೊತ್ತಾಗಿಲ್ಲ! ಗೊತ್ತಾಗಿದ್ದರೆ, ಮುಖ್ಯಮಂತ್ರಿಯಾಗಿ ಅವರು ಖಂಡಿತ ಉತ್ತರ ಪ್ರದೇಶಕ್ಕೆ ತೆರಳಿ ಸಂತ್ರಸ್ತ ಕುಟಂಬಗಳಿಗೆ ಸಾಂತ್ವನ ಹೇಳುತ್ತಿದ್ದರು. ಸತ್ತವರ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕಿಂತಲೂ ಚುನಾವಣೆ ಗೆಲ್ಲುವುದೇ ಹೆಚ್ಚು ಅಂತ ಪ್ರಧಾನಿ ನರೇಂದ್ರ ಮೋದಿಯಾಗಿ ಯಾರೂ ಅಂದುಕೊಂಡಿಲ್ಲ. ಆದರೆ, ಅಲ್ಲಿ 70 ಮಂದಿ ಸತ್ತಿರುವ ವಿಷಯ ತಿಳಿದಿಲ್ಲ ಅಷ್ಟೇ!

ವಿತ್ತ ಸಚಿವರು ಮತ್ತು ವಿತ್ತ ಕಾರ್ಯದರ್ಶಿಗಳ ಗೈರುಹಾಜರಿಯಲ್ಲಿ ಸದ್ಯಕ್ಕೆ ಹಣಕಾಸು ಇಲಾಖೆ ವಿನಿಯೋಜನೆ ಕಾರ್ಯದರ್ಶಿ ಎ ಎನ್ ಝಾ ಅವರು ನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಹಣಕಾಸು ಇಲಾಖೆ ರಾಜ್ಯ ಸಚಿವರಾದ ಪ್ರತಾಪ್ ಶುಕ್ಲಾ ಮತ್ತು ಪೊನ್ ರಾಧಾಕೃಷ್ಣನ್ ಇಬ್ಬರಿಗೂ ವಿತ್ತ ಸಚಿವರ ಗೈರುಹಾಜರಿನಲ್ಲಿ ಸಚಿವಾಲಯ ನಡೆಸುವ ಸಾಮರ್ಥ್ಯವಿಲ್ಲ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದಾರೆ. ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದೆ. ಅವರ ಆರೋಗ್ಯ ತೀವ್ರ ಸೂಕ್ಷ್ಮವಾಗಿದ್ದು, ಸೋಂಕು ಹರಡದಂತಹ ಪ್ರತ್ಯೇಕ ಜಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಮೂತ್ರಪಿಂಡ ಬದಲಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಾದರೂ ಯಾವಾಗ ಎಂಬುದು ಸ್ಪಷ್ಟವಾಗಿಲ್ಲ. ಮೂತ್ರಪಿಂಡ ಕಸಿ ಮಾಡಿದ ನಂತರವೂ ಅವರು ಸಾಕಷ್ಟು ಸಮಯ ವಿಶ್ರಾಂತಿಯಲ್ಲಿ ಇರಲೇಬೇಕಾಗುತ್ತದೆ.

ಇಲ್ಲಿ ಎರಡು ಪ್ರಮುಖ ಪ್ರಶ್ನೆಗಳಿವೆ; ಮೊದಲನೆಯದು, ಸದಾ ಸುಗಮ ಆಡಳಿತದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು ವಿತ್ತ ಸಚಿವಾಲಯಕ್ಕೆ ಏಕೆ ಒಬ್ಬ ಶಾಶ್ವತ ಸಚಿವರನ್ನು ನಿಯೋಜಿಸುತ್ತಿಲ್ಲ? ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಐಸಿಐಸಿಐ ಹಗರಣ, ಅಪನಗದೀಕರಣದ ಫಲಶೃತಿಯಾಗಿ ಹಿನ್ನಡೆ ಸಾಧಿಸಿರುವ ಆರ್ಥಿಕತೆ ಚೇತರಿಕೆಗೆ ಕ್ರಮ ಕೈಗೊಳ್ಳಬೇಕಾದ ಹೊತ್ತಿನಲ್ಲಿ ಹೀಗೆ ವಿತ್ತ ಸಚಿವಾಲಯ ಅನಾಥವಾಗುವುದಕ್ಕೆ ಬಿಟ್ಟರೇಕೆ?

ಎರಡನೇ ಪ್ರಶ್ನೆ; ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತೀವ್ರ ಅನಾರೋಗ್ಯದಿಂದ ಬಳಲುವಾಗ ವಿತ್ತ ಸಚಿವಾಲಯದ ಹೊಣೆ ಹೊರಬೇಕಿದ್ದ ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಎರಡು ವಾರಗಳ ಕಾಲ ವಿಶ್ರಾಂತಿಗಾಗಿ ರಜೆಯ ಮೇಲೆ ತೆರಳುವುದು ಎಷ್ಟು ಸರಿ? ಅಷ್ಟಕ್ಕೂ ಯೋಗ ಮತ್ತು ಧ್ಯಾನ ಮಾಡುವಂತಹ ಯಾವ ಒತ್ತಡವನ್ನು ಅವರು ಎದುರಿಸುತ್ತಿದ್ದರು?

ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಜನರನ್ನು ನಂಬುವುದಿಲ್ಲ. ಹೀಗಾಗಿಯೇ ಅವರು ಸದಾ ನಂಬುವ ಅರುಣ್ ಜೇಟ್ಲಿ ಅವರಿಗೆ ಅತ್ಯಂತ ಪ್ರಮುಖವಾದ ಹಣಕಾಸು ಮತ್ತು ರಕ್ಷಣಾ ಖಾತೆಗಳನ್ನು ನೀಡಿದ್ದರು. ನಂತರ ಅರುಣ್ ಜೇಟ್ಲಿ ಅವರಿಗೆ ಎರಡೂ ಖಾತೆಗಳನ್ನು ನಿಭಾಯಿಸುವುದು ಸಾಧ್ಯವಾದಾಗ ರಕ್ಷಣಾ ಇಲಾಖೆಗೆ ಪರಿಕ್ಕರ್ ಅವರನ್ನು ನೇಮಿಸಿದ್ದರು. ನಂತರ ಗೋವಾ ರಾಜ್ಯದಲ್ಲಿ ಅಧಿಕಾರ ಗ್ರಹಿಸಲು ಪರಿಕ್ಕರ್ ಅವರನ್ನು ಆ ರಾಜ್ಯಕ್ಕೆ ರವಾನಿಸಿದರು. ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದ ಪರಿಕ್ಕರ್, ಪುಟ್ಟ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಸದ್ಯ ಅವರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಾಣಿಜ್ಯ ಸಚಿವಾಲಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್ ರಕ್ಷಣಾ ಇಲಾಖೆಯ ಹೊಣೆ ಹೊತ್ತಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯಕ್ಕೆ ತುತ್ತಾದ ನಂತರ ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರೇ ಬಹುತೇಕ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ಅಧಿಯಾ ಅವರು ಪ್ರದಾನಿ ಮೋದಿಗೆ ಆಪ್ತರು. ಗುಜರಾತ್ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಅಧಿಯಾ, ಈ ಹಿಂದೆಯೂ ನರೇಂದ್ರ ಮೋದಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ತಮ್ಮ ಆಪ್ತ ಅಧಿಕಾರಿಯನ್ನೇ ನಂಬಿದ ಪ್ರಧಾನಿ ಮೋದಿ ವಿತ್ತ ಸಚಿವಾಲಯಕ್ಕೆ ಬೇರೊಬ್ಬ ಸಚಿವರನ್ನು ನೇಮಿಸುವ ಗೋಜಿಗೆ ಹೋಗಲಿಲ್ಲ. ಅಷ್ಟಕ್ಕೂ ವಿತ್ತ ಸಚಿವಾವಲಯದ ಹೊಣೆ ನಿಭಾಯಿಸುವಂತಹ ತಮ್ಮ ಆಪ್ತರಾರೂ ಅವರಿಗೆ ಸಿಕ್ಕಲ್ಲದಿರುವುದು ಮತ್ತೊಂದು ಕಾರಣ ಇರಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಗರಣಗಳು, ಕುಸಿಯುತ್ತಿರುವ ರುಪಾಯಿ ಮೌಲ್ಯ, ಏರುತ್ತಿರುವ ಕಚ್ಚಾತೈಲ ದರ, ಏರಬಹುದಾದ ಹಣದುಬ್ಬರ, ಕುಸಿಯುತ್ತಿರುವ ಆರ್ಥಿಕತೆ ಎಲ್ಲವೂ ತಮ್ಮ ಮುಂದಿರುವಾಗ ಹಾಗೂ ವಿತ್ತ ಸಚಿವರು ಅನಾರೋಗ್ಯದಿಂದ ಬಳಲುತ್ತಿರುವಾಗ ವಿತ್ತ ಕಾರ್ಯದರ್ಶಿಗಳು ಎರಡು ವಾರ ರಜೆ ಹಾಕಿ ಹೋಗುವುದು ಎಷ್ಟು ಸರಿ? ನ್ಯೂಸ್ ಸೆಂಟ್ರಲ್ ಡಾಟ್ಕಾಮ್ ವರದಿ ಪ್ರಕಾರ, ಸೆಂಟ್ರಲ್ ಸೆಕ್ರೆಟರಿಯೇಟ್‌ನ ನಾರ್ತ್ ಬ್ಲಾಕ್‌ನಲ್ಲಿ ಹರಿದಾಡುತ್ತಿರುವ ಪಿಸುಮಾತುಗಳ ಪ್ರಕಾರ, ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹಸ್ಮುಖ್ ಅಧಿಯಾ ವಿರುದ್ಧ ತಿರುಗಿಬಿದ್ದಿದ್ದಾರೆ. ಜಿಎಸ್ಟಿಎನ್ ಹಗರಣದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರು ಭಾಗಿಯಾಗಿದ್ದಾರೆ ಎಂದು ಟ್ವಿಟ್ಟರ್ ಮೂಲಕ ಆರೋಪಿಸಿದ್ದಾರೆ. ಅಧಿಯಾ ಅವರನ್ನು ಪ್ರಾಮುಖ್ಯತೆ ಇಲ್ಲದ ಜವಳಿ ಇಲಾಖೆ ಕಾರ್ಯದರ್ಶಿಯಾಗಿ ನಿಯೋಜಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಅತ್ಯುನ್ನತ ಹುದ್ದೆಯಾದ ಕ್ಯಾಬಿನೆಟ್ ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಹಸ್ಮುಖ್ ಅಧಿಯಾ ಅವರಿಗೆ ಸುಬ್ರಮಣಿಯನ್ ಸ್ವಾಮಿ ಅವರ ಆರೋಪಗಳು ನುಂಗಲಾರದ ತುತ್ತಾಗಿವೆ. ಪ್ರಧಾನಿ ಮೋದಿಗೆ ಆಪ್ತರಾಗಿದ್ದರೂ ಜಿಎಸ್ಟಿಎನ್ ಹಗರಣ ಕುರಿತಾದ ಸ್ವಾಮಿ ಆರೋಪಗಳು ಹಸ್ಮುಖ್ ಅಧಿಯಾ ಅವರನ್ನು ಅಧೀರನನ್ನಾಗಿಸಿವೆ. ಅಲ್ಲದೆ, ಹಸ್ಮುಖ್ ಅಧಿಯಾ ಅವರು ರೆವಿನ್ಯೂ ಕಾರ್ಯದರ್ಶಿಯಾಗಿದ್ದಾಗ ಅನಾಮಧೇಯ ವ್ಯಕ್ತಿ ಕಳುಹಿಸಿದ್ದ ಚಿನ್ನದ ಬಿಸ್ಕತ್ತು ಸ್ವೀಕರಿಸಿದ್ದರು. ಅದನ್ನು ನಂತರ ಅವರು ತೋಷ್ಕಾನಾಗೆ (ಸರ್ಕಾರಕ್ಕೆ ಬಂದ ಉಡುಗೊರೆಗಳನ್ನು ಸಂಗ್ರಹಿಸಿಡುವ ಸ್ಥಳ) ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. 2 ಲಕ್ಷ ಮೌಲ್ಯದ ಈ ಉಡುಗೊರೆ ರವಾನಿಸಿದ ವ್ಯಕ್ತಿಯ ವಿರುದ್ಧ ಅವರು ದೂರು ದಾಖಲಿಸಿಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಷಯ ಮಾಧ್ಯಮಗಳಲ್ಲಿ ಬಂದ ನಂತರ ಅವರು ವಿಚಲಿತರಾಗಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಅವರು ರಜೆ ಮೇಲೆ ತೆರಳಿರಬಹುದು.

ಸಾಮಾನ್ಯವಾಗಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸುಧೀರ್ಘ ರಜೆ ಮೇಲೆ ತೆರಳುವುದಿಲ್ಲ. ಸಂಕಷ್ಟ ಪರಿಸ್ಥಿತಿ ಇದ್ದಾಗ ವಾರವಿಡೀ ರಜೆ ಪಡೆಯದೇ ಕೆಲಸ ಮಾಡುತ್ತಾರೆ. ಆದರೆ, ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರು ಅತ್ಯಂತ ಸಂಕಷ್ಟದ ದಿನಗಳಲ್ಲಿ ಸುಧೀರ್ಘ ರಜೆ ಹಾಕಿದ್ದಾರೆ.

ಇದನ್ನೂ ಓದಿ : ಹಾಡ್ಯನಾಮಿಕ್ಸ್ | ಪಿಎನ್‌ಬಿ ಹಗರಣ; ಆರ್‌ಬಿಐ, ವಿತ್ತ ಸಚಿವಾಲಯದ ಹೊಣೆ ಏನು?

ಪ್ರಮುಖ ಮಾಧ್ಯಮಗಳೊಂದಿಗೆ ಆಪ್ತ ಸಂಪರ್ಕ ಹೊಂದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ವಿತ್ತ ಸಚಿವಾಲ ಯಜಮಾನನಿಲ್ಲದೆ ಇದ್ದರೂ ಸುಸೂತ್ರವಾಗಿ ನಡೆಯುತ್ತಿದೆ ಎಂಬಂತೆ ಸುದ್ದಿಗಳನ್ನು ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರು ಮಾಧ್ಯಮಗಳನ್ನು ನಿಭಾಯಿಸುತ್ತಿರುವುದರಿಂದ ದೇಶಕ್ಕೆ ‘ಕಾರ್ಯನಿರ್ವಹಿಸುತ್ತಿರುವ ಹಣಕಾಸು ಸಚಿವಾಲಯ’ದ ಅಗತ್ಯ ಇದೆ ಎಂಬ ಪ್ರಮುಖ ವಿಷಯವು ಬದಿಗೆ ಸರಿದುಹೋಗಿದೆ. ಆದರೆ, ವಿತ್ತ ಸಚಿವಾಲಯದಲ್ಲಿ ಎಲ್ಲವೂ ಸರಿ ಇಲ್ಲ.

ಕಳೆದ ಲೋಕಸಭಾ ಚುನಾವಣೆ ವೇಳೆ ಸಮರ್ಥ ಮತ್ತು ಉತ್ತಮ ಆಡಳಿತದ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ ವಿಜಯ ಯಾತ್ರೆ ಮಾಡುತ್ತಿದ್ದಾರೆ. ಅವರ ಏಕೈಕ ಗುರಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿದೆ. ಆಡಳಿತ ವೈಫಲ್ಯವಾಗಲೀ, ಆರ್ಥಿಕ ಹಿನ್ನಡೆಯಾಗಲೀ, ಬೆಲೆ ಏರಿಕೆಯಿಂದ ಜನರು ಸಂಕಷ್ಟ ಎದುರಿಸಲಿ, ಅದ್ಯಾವುದೂ ಆವರಗೆ ಪ್ರಮುಖ ಎನಿಸಿಲ್ಲ. ಹಾಗೆ ಎನಿಸಿದ್ದರೆ, ಅವರು ವಿತ್ತ ಸಚಿವಾಲಯ ಅನಾಥವಾಗಲು ಬಿಡುತ್ತಿರಲಿಲ್ಲ. ಉತ್ತರ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ಸತ್ತಿರುವ 70 ಜನರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋಗುವಂತೆ ಯೋಗಿ ಆದಿತ್ಯನಾಥ ಅವರಿಗೆ ಸೂಚಿಸಿರುತ್ತಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More