ರೈತರ ಸಾಲಮನ್ನಾ, ನೀರಾವರಿಗೆ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ

ಕಾಂಗ್ರೆಸ್‌, ಬಿಜೆಪಿ ನಂತರ ಜೆಡಿಎಸ್‌ ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರೈತರ ಸಾಲಮನ್ನಾ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ರುಪಾಯಿ ನೀಡುವುದಾಗಿ ಭರವಸೆ ನೀಡಿರುವುದು ಪ್ರಣಾಳಿಕೆಯ ಪ್ರಮುಖ ಅಂಶಗಳು

ಕಾಂಗ್ರೆಸ್‌, ಬಿಜೆಪಿಗಿಂತ ತುಸು ಹೆಚ್ಚೇ ಎನ್ನುವಷ್ಟು ರೈತರ ಮೇಲೆ ಕಾಳಜಿ ಪ್ರದರ್ಶಿಸುತ್ತಿರುವುದು ಜೆಡಿಎಸ್‌. ಚುನಾವಣೆಯ ಕಾವು ಆರಂಭವಾಗುವುದಕ್ಕಿಂತಲೂ ಮೊದಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಕೃಷಿಕ ಸಮುದಾಯದ ಮನಗೆಲ್ಲಲು ಯತ್ನಿಸಿರುವ ಜೆಡಿಎಸ್‌, ಸೋಮವಾರ ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಎಂಬ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಹೇಳುತ್ತಿರುವಂತೆ ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಅಧಿಕಾರಕ್ಕೆ ಬಂದ ೨೪ ತಾಸಿನೊಳಗೆ ಮನ್ನಾ ಮಾಡುವುದಾಗಿ ಪುನರುಚ್ಚರಿಸಿದೆ. ಅಲ್ಲದೇ ರಾಜ್ಯದ ನೀರಾವರಿ ಯೋಜನೆಗಳಿಗೆ ಒಂದೂವರೆ ಲಕ್ಷ ಕೋಟಿ ರುಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದೆ. ಈಚೆಗಷ್ಟೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿಯು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ‌ ಒಂದು ಲಕ್ಷ ರುಪಾಯಿ ವರೆಗಿನ ಸಾಲಮನ್ನಾ ಮಾಡುವುದಾಗಿ ಬಿಜೆಪಿ ಹೇಳಿತ್ತು. ಅಲ್ಲದೇ ಒಂದೂವರೆ ಲಕ್ಷ ಕೋಟಿ ರುಪಾಯಿಗಳನ್ನು ರಾಜ್ಯದ ನೀರಾವರಿ ಯೋಜನೆಗಳಿಗೆ ಮೀಸಲಿಡುವುದಾಗಿ ಹೇಳಿತ್ತು. ಸಾಲಮನ್ನಾ ಬಗ್ಗೆ ಪ್ರಸ್ತಾಪಿಸದ ಕಾಂಗ್ರೆಸ್‌, ರಾಜ್ಯದ ನೀರಾವರಿ ಯೋಜನೆಗಳಿಗೆ ಒಂದೂ ಕಾಲು ಲಕ್ಷ ಕೋಟಿ ರುಪಾಯಿ ವೆಚ್ಚ ಮಾಡುವುದಾಗಿ ಹೇಳಿಕೊಂಡಿದೆ. ಎಚ್‌ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದು, ಅವರ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶಗಳು ಇಂತಿವೆ.

೫೩ ಸಾವಿರ ಕೋಟಿ ರುಪಾಯಿ ಸಾಲಮನ್ನಾ

ಬಹುಮತ ಪಡೆದು ಅಧಿಕಾರಕ್ಕೆ ಬಂದ ೨೪ ತಾಸಿನಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ರೈತರ ಎಲ್ಲಾ ಸಾಲಮನ್ನಾ ಮಾಡಲಾಗುವುದು. ಇದಕ್ಕೆ ಅಂದಾಜು ೫೩ ಸಾವಿರ ಕೋಟಿ ವೆಚ್ಚವಾಗುತ್ತದೆ.

ಬಯಲು ಸೀಮೆಗೆ ೬೦ ಟಿಎಂಸಿ ಅಡಿ ನೀರು

ಬಯಲು ಸೀಮೆಯ ಅರಸೀಕೆರೆ, ತಿಪಟೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ೬೦ ಟಿಎಂಸಿ ಅಡಿ ನೀರು ಪೂರೈಕೆ ಮಾಡಲಾಗುವುದು. ಅಲ್ಲದೇ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಕ್ಷೇತ್ರಕ್ಕೆ ಒಂದೂವರೆ ಲಕ್ಷ ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು.

ಮಾಗಡಿಯಲ್ಲಿ ಕೆಂಪೇಗೌಡ ವಿಶ್ವವಿದ್ಯಾಲಯ

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಕೆಂಪೇಗೌಡ ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಎಸ್‌ಎಸ್‌ಎಲ್‌ಸಿ-ಪಿಯುಸಿ ಓದಿದ ಯುವಕರಿಗೆ ವಂಚಿತರಾದವರಿಗೆ ಕೌಶಲ ತರಬೇತಿ ನೀಡಲಾಗುವುದು. ಇಲ್ಲಿನ ಎಲ್ಲಾ ಹುದ್ದೆಗಳನ್ನು ಕರ್ನಾಟಕದ ನಿವೃತ್ತ ಅಧಿಕಾರಿಗಳು/ಸೈನಿಕರಿಗೆ ನೀಡಲಾಗುವುದು.

೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೬ ಸಾವಿರ ರು.ಮಾಸಾಶನ

ಸರ್ಕಾರದ ಯಾವುದೇ ಕಾರ್ಯಕ್ರಮ ಫಲಾನುಭವಿಗಳಾಗದ, ತಿಂಗಳಿಗೆ ೮ ಸಾವಿರ ರುಪಾಯಿಗಳಿಗಿಂತಲೂ ಕಡಿಮೆ ಆದಾಯ ಹೊಂದಿರುವ ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೮ ಸಾವಿರ ರುಪಾಯಿ ಮಾಸಾಶನ. ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೬ ಸಾವಿರ ರುಪಾಯಿ ಮಾಸಾಶನ.

ಬಡ ಮಹಿಳೆಯರಿಗೆ ತಿಂಗಳಿಗೆ ೨ ಸಾವಿರ ರುಪಾಯಿ

ಕಳೆದ ೧೦ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರುವ ಕೃಷಿಯೇತರ ಮೂಲಗಳಿಂದ ತಿಂಗಳಿಗೆ ಕನಿಷ್ಠ ಐದು ಸಾವಿರ ರುಪಾಯಿಗಳಿಗಿಂತಲೂ ಕಡಿಮೆ ಆದಾಯ ಗಳಿಸುತ್ತಿರುವ ೨೪ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕುಟುಂಬ ವೆಚ್ಚ ನಿರ್ವಹಣೆ ಮಾಡಲು ಮಾಸಿಕ ೨ ಸಾವಿರ ರುಪಾಯಿ ನೀಡಲು ನಿರ್ಧಾರ.

ಎಸಿಬಿಗೆ ಇತಿಶ್ರೀ, ಲೋಕಾಯುಕ್ತ ಬಲವರ್ಧನೆ

ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ, ಲೋಕಾಯುಕ್ತ ಸಂಸ್ಥೆಯನ್ನು ಸಶಕ್ತಗೊಳಿಸಲಾಗುವುದು. ಲೋಕಾಯುಕ್ತಕ್ಕೆ ಪೊಲೀಸ್‌ ಅಧಿಕಾರ ನೀಡಲು ನಿರ್ಣಯ.

ಇಸ್ರೇಲ್‌ ಮಾದರಿ ಕೃಷಿಗೆ ಪ್ರೋತ್ಸಾಹ

ಇಸ್ರೇಲ್‌ ಮಾದರಿಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಿದ್ದು, ಇದೇ ಕಾರಣಕ್ಕಾಗಿ ಹಿಂದೆ ಕುಮಾರಸ್ವಾಮಿ ಅವರು ಇಸ್ರೇಲ್‌ ಪ್ರವಾಸ ಕೈಗೊಂಡಿದ್ದರು. ವಿಶೇಷ ಉದ್ದೇಶ ವ್ಯವಸ್ಥೆ, ಶೇ.೧೦೦ ನೀಡುವ ಮೂಲಕ ನೀರು ಸಂಗ್ರಹಣ ವ್ಯವಸ್ಥೆ, ಯಂತ್ರೋಪಕರಣ ಖರೀದಿಗೆ ಪ್ರೋತ್ಸಾಹಧನ, ಹನಿ ನೀರಾವರಿಗೆ ಶೇ.೯೦ರಷ್ಟು ಪ್ರೋತ್ಸಾಹಧನ, ಹೆಚ್ಚುವರಿ ಬೆಂಬಲ ಬೆಲೆ ನೀಡುವುದಾಗಿ ಹೇಳಲಾಗಿದೆ.

ಇದನ್ನೂ ಓದಿ : ಕಾಂಗ್ರೆಸ್‌ನ ಜನಪ್ರಿಯ ಯೋಜನೆಗಳ ಹೊಸ ರೂಪವೇ ಬಿಜೆಪಿ ಪ್ರಣಾಳಿಕೆ ವಿಶೇಷ!
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More