ತುಮಕೂರು ಆಹಾರ ಸಂಸ್ಕರಣ ಘಟಕ ಕುರಿತ ಮೋದಿ ಮಾತಿನ ಸತ್ಯಶೋಧನಾ ವಿವರ

ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ಆಹಾರ ಸಂಸ್ಕರಣ ಘಟಕದ ಕುರಿತು ಹೇಳಿದ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಘಟಕದಲ್ಲಿರುವ ವಾಸ್ತವಾಂಶದ ಕುರಿತು ಅಲ್ಲಿನ ಕೆಲ ಕಾಯಂ ನೌಕರರನ್ನು ‘ದಿ ಸ್ಟೇಟ್’ ಮಾತನಾಡಿಸಿದಾಗ ಹೊರಬಿದ್ದ ಸತ್ಯಾಂಶಗಳು ಇಲ್ಲಿವೆ

ಇದು ಸತ್ಯಶೋಧನೆಯ ಕಾಲ. ಸತ್ಯದ ನಂತರವೂ ಹುಡುಕಾಟ ಮುಂದುವರಿಸುವುದು ಅಗತ್ಯ ಮತ್ತು ಅನಿವಾರ್ಯ. ಸುಳ್ಳುಗಳ ಸಾಮ್ರಾಜ್ಯ ಕಟ್ಟಿ, ಸುಳ್ಳನ್ನೇ ಸತ್ಯವೆಂದು ನಂಬಿಸುವ ಕಾಲಘಟ್ಟವಿದು. ಚುನಾವಣೆಯ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಹೇಳುವ ಸುಳ್ಳುಗಳು ಜನರನ್ನು ಆಕರ್ಷಿಸುತ್ತವೆ ಮತ್ತು ಚರ್ಚೆಯನ್ನು ಹುಟ್ಟುಹಾಕುತ್ತವೆ. ಇದೇ ಹಾದಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರು ಆಹಾರ ಸಂಸ್ಕರಣ ಘಟಕದ ಕುರಿತು ಹೇಳಿದ ಮಾತುಗಳು ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿವೆ. ಘಟಕದಲ್ಲಿರುವ ವಾಸ್ತವಾಂಶದ ಕುರಿತು ಅಲ್ಲಿನ ಕೆಲ ಕಾಯಂ ನೌಕರರನ್ನು ‘ದಿ ಸ್ಟೇಟ್’ ಮಾತನಾಡಿಸಿದಾಗ ಹೊರಬಿದ್ದ ಸತ್ಯಾಂಶಗಳು ಇಲ್ಲಿವೆ.

ತುಮಕೂರು ಹೊರವಲಯದ ವಸಂತನರಸಾಪುರದಲ್ಲಿ ಆಹಾರ ಕಾರ್ಖಾನೆ ಇದೆ. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಹೊಂದಿಕೊಂಡಂತಿರುವ ಕೈಗಾರಿಕಾ ಪ್ರದೇಶದಲ್ಲಿ ಆಹಾರ ಸಂಸ್ಕರಣ ಘಟಕ ಸ್ಥಾಪನೆಯಾಗಿದೆ. ಈ ಘಟಕದಲ್ಲಿ ಆರಂಭದಲ್ಲಿ ೧೨ ಕಾಯಂ ನೌಕರರು ಮತ್ತು ೬೦೦ ಮಂದಿ ಗುತ್ತಿಗೆ ಕಾರ್ಮಿಕರು ಇದ್ದುದು ನಿಜ. ಇದೇ ವಿಷಯವನ್ನು ಕಾರ್ಮಿಕ ಮುಖಂಡರು ಪ್ರಸ್ತಾಪಿಸಿದ್ದರು. ಆದರೆ, ನಾಲ್ಕು ವರ್ಷಗಳ ನಂತರ ಆಹಾರ ಸಂಸ್ಕರಣ ಘಟಕದಲ್ಲಿ ೧೨ ಯೂನಿಟ್‌ಗಳನ್ನು ಆರಂಭಿಸಲಾಗಿದೆ.

ಪ್ರತಿಯೊಂದು ಯೂನಿಟ್‌ನಲ್ಲಿ ೧೨ ಕಾಯಂ ನೌಕರರು, ಒಟ್ಟು ೧೫೦ ಮಂದಿ ಕಾಯಂ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ವ್ಯವಸ್ಥಾಪಕರು, ಮೇಲುಸ್ತುವಾರಿಗಳು ಮತ್ತು ಘಟಕದ ಸಿಬ್ಬಂದಿ (ಸ್ಟಾಫ್ ವರ್ಕರ್ಸ್) ಸೇರಿದ್ದಾರೆ. ಇನ್ನು, ಎಲ್ಲ ಯೂನಿಟ್‌ಗಳಿಂದ ಸುಮಾರು ೧,೨೦೦ ಗುತ್ತಿಗೆ ಕಾರ್ಮಿಕರು ಇದ್ದಾರೆ ಎನ್ನುತ್ತವೆ ಘಟಕದ ಮೂಲಗಳು. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಅಲ್ಲಿ ೬ ಸಾವಿರ ಉದ್ಯೋಗ ಸೃಷ್ಟಿಯಾಗಿಲ್ಲ. ಅಂದರೆ, ಪ್ರಧಾನಿ ಹೇಳಿದ್ದರಲ್ಲಿ ಅರ್ಧ ಭಾಗದಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲದಿರುವುದು ಸತ್ಯಶೋಧನೆಯಿಂದ ಕಂಡುಬಂದಿದೆ. ಕಾಯಂ ನೌಕರರು, ಗುತ್ತಿಗೆ ನೌಕರರು ಮತ್ತು ಘಟಕದಿಂದಾದ ಉಪಕಸುಬುಗಳು ಸೇರಿದರೂ ಎರಡು ಸಾವಿರದಷ್ಟು ಕೂಡ ಉದ್ಯೋಗ ಸೃಷ್ಟಿಯಾಗಿಲ್ಲ.

ಘಟಕದಲ್ಲಿ ಎಚ್‌ಸಿಎಲ್ ಯೂನಿಟ್, ಐಎಫ್ಪಿಪಿಎಲ್, ಆಗ್ರೋವೆಟ್, ರೈಸ್ಮಿಲ್, ದೇಶಿಅಡ್ಡ, ಸಬ್ಲಿಮ್, ಅವಂತಿ ಫೂಡ್ಸ್, ಎಂಎನ್ಎಸ್ ಫುಡ್, ಕಾಂಬಿಮಿರೈಟೆಗೂ, ಕುಕ್ಕೀಸ್, ಡಿಜಿ ಬ್ರದರ್ಸ್ ಹೀಗೆ ೧೨ ಯೂನಿಟ್‌ಗಳಿದ್ದು ಒಂದೊಂದು ಯೂನಿಟ್ ಒಂದೊಂದು ಉತ್ಪನ್ನದಲ್ಲಿ ತೊಡಗಿವೆ. ಆಲೂಗೆಡ್ಡೆ ಚಿಪ್ಸ್, ಮಾವಿನಹಣ್ಣು ಸೇರಿ ವಿವಿಧ ಹಣ್ಣುಗಳ ಜ್ಯೂಸ್, ಮೆಣಸಿನಪುಡಿ, ಬಗೆಬಗೆಯ ಅಕ್ಕಿ, ಹಪ್ಪಳ, ಸಂಡಿಗೆ, ಕುಕ್ಕೀಸ್‌ಗಳ ತಯಾರಿಕೆ ಹೀಗೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡುವುದು ಘಟಕದ ವಿಶೇಷ. ಅಂದಹಾಗೆ, ವ್ಯವಸ್ಥಾಪಕರು ಮತ್ತು ಸೂಪರ್‌ವೈಸರ್‌ಗಳ ಹುದ್ದೆಗಳನ್ನು ಉತ್ತರ ಭಾರತದವರಿಗೆ ನೀಡಿದ್ದು ತಾರತಮ್ಯ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗ್ರೇಡ್ ೧ ಮತ್ತು ಗ್ರೇಡ್ ೨ ಹುದ್ದೆಗಳನ್ನು ಬಿಟ್ಟು ಕಾಯಂ ಕಾರ್ಮಿಕರು ಕೂಡ ಉತ್ತರ ಭಾರತದವರೇ ಹೆಚ್ಚಿದ್ದು, ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಿಲ್ಲ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಗಳನ್ನು ನೀಡಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕೇಂದ್ರ ಸರ್ಕಾರ ಪ್ರಯತ್ನಿಸಬೇಕಾಗಿತ್ತು. ಆದರೆ, ಅಸತೋಲನವನ್ನು ಹೆಚ್ಚುವಂತೆ ಮಾಡಿದೆ. ಲಾರಿಗಳಲ್ಲಿ ಬಂದ ಸರಕನ್ನು ಇಳಿಸುವುದು ಮತ್ತು ತುಂಬುವುದು ಗುತ್ತಿಗೆ ಕಾರ್ಮಿಕರ ಕೆಲಸವಾಗಿದೆ. ಅದೂ ಋತುಮಾನಕ್ಕೆ ತಕ್ಕಹಾಗೆ ಗುತ್ತಿಗೆ ಕಾರ್ಮಿಕರ ಸಂಖ್ಯೆಯಲ್ಲಿ ಏರಿಳಿತವೂ ಆಗುತ್ತದೆ. ಮಳೆಗಾಲದಲ್ಲಿ ಅಷ್ಟೊಂದು ಕೆಲಸವಿರುವುದಿಲ್ಲ. ಅಂಥ ಸಮಯದಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆ ೭೦೦ಕ್ಕೂ ಕಡಿಮೆಯಾಗುತ್ತದೆ. ಗುತ್ತಿಗೆ ಕಾರ್ಮಿಕರ ಸಂಖ್ಯೆಯಲ್ಲಿ ಏಕರೀತಿಯ ಸಮತೋಲನ ಕಂಡುಬರುವುದಿಲ್ಲ. ಸರಕಿನ ಆಧಾರದ ಮೇಲೆ ಕಾರ್ಮಿಕರ ಸಂಖ್ಯೆಯೂ ಏರಿಳಿತ ಕಾಣುತ್ತದೆ. ಇದ್ಯಾವುದನ್ನೂ ಪ್ರಧಾನಿಗಳು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸದೆ, ಕೇವಲ ೬ ಸಾವಿರ ಉದ್ಯೋಗ ಸೃಷ್ಟಿ ಮಾತ್ರ ಹೇಳಿ ವೈಭವೀಕರಣ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

“ಕಾಯಂ ನೌಕರರನ್ನು ಹೊರತುಪಡಿಸಿ ಇಡೀ ಘಟಕಕ್ಕೆ ಗುತ್ತಿಗೆ ಕಾರ್ಮಿಕರನ್ನು ಸರಬರಾಜು ಮಾಡುವುದು ಗುತ್ತಿಗೆ ಕಂಪನಿಗಳ ಕೆಲಸ. ಆರೇಳು ಗುತ್ತಿಗೆ ಕಂಪನಿಗಳು ಸರ್ಕಾರ ಕೊಡುವ ವೇತನದಲ್ಲೂ ಹಿಡಿದು ಕೊಡುತ್ತವೆ! ಜೊತೆಗೆ, ಕೆಲ ತಿಂಗಳಿಂದ ಗುತ್ತಿಗೆ ಕಾರ್ಮಿಕರ ವೇತನದಲ್ಲಿ ಸ್ವಲ್ಪ ಮಟ್ಟಿನ ಹಣ ಹಿಡಿದು ಕೊಡಲಾಗುತ್ತಿದೆ. ಪ್ರತಿದಿನಕ್ಕೆ ಒಬ್ಬ ಗುತ್ತಿಗೆ ಕಾರ್ಮಿಕರಿಂದ ೩೦ ರುಪಾಯಿ, ಅಂದರೆ ತಿಂಗಳಿಗೆ ೯೦೦ ರುಪಾಯಿ ವೇತನವನ್ನು ಒಬ್ಬೊಬ್ಬ ಗುತ್ತಿಗೆ ಕಾರ್ಮಿಕರಿಂದ ಹಿಡಿಯಲಾಗುತ್ತಿದೆ. ಗುತ್ತಿಗೆ ಕಂಪನಿಗಳು ಮಾಡುತ್ತಿರುವ ಅನ್ಯಾಯವನ್ನು ಕೇಳುವವರೇ ಇಲ್ಲವಾಗಿದೆ,” ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಗುತ್ತಿಗೆ ಕಾರ್ಮಿಕರು.

ಇದನ್ನೂ ಓದಿ : ತುಮಕೂರು ಆಹಾರ ಸಂಸ್ಕರಣ ಘಟಕದ ನೈಜ ಉದ್ಯೋಗಿಗಳೆಷ್ಟು, ಮೋದಿ ಹೇಳಿದ್ದೆಷ್ಟು?

ಗುತ್ತಿಗೆ ಕಾರ್ಮಿಕರನ್ನು ಖುದ್ದು ಮಾತನಾಡಿಸಿದಾಗ, “ನಮಗೆ ಪ್ರತಿ ತಿಂಗಳು ಪಿಎಫ್, ಇಎಸ್ಐ ಕಡಿತವಾಗಿ ೫,೫೦೦ ರುಪಾಯಿ ಕೈಗೆ ಬರುತ್ತದೆ. ಇದರಲ್ಲಿ ಕುಟುಂಬ ನಿರ್ವಹಣೆ ಮಾಡಬೇಕು, ಮಕ್ಕಳನ್ನು ಓದಿಸಬೇಕು. ವೇತನ ಹೆಚ್ಚಿಸುವಂತೆ ಕೇಳಿದರೆ, ಕೆಲಸ ಬಿಟ್ಟು ಹೋಗು ಎನ್ನುತ್ತಾರೆ. ಸಂಘ ಕಟ್ಟಿಕೊಂಡು ಹೋರಾಟ ಮಾಡೋಣವೆಂದರೆ ಅದಕ್ಕೆ ಅವಕಾಶವನ್ನೇ ಕೊಡುತ್ತಿಲ್ಲ. ಚೆನ್ನಾಗಿ ದುಡಿಸಿಕೊಳ್ಳುತ್ತಾರೆ, ಆದರೆ ವೇತನ ಮಾತ್ರ ಕಡಿಮೆ. ಅದರಲ್ಲೂ ಗುತ್ತಿಗೆದಾರರು ನಮಗೆ ಕೊಡುವ ಹಣದಲ್ಲೂ ಹಿಡಿದುಕೊಳ್ಳುತ್ತಾರೆ. ಹೀಗಾದರೆ ಜೀವನ ಸಾಗಿಸುವುದು ಹೇಗೆ?” ಎಂದು ಅಲವತ್ತುಕೊಳ್ಳುತ್ತಾರೆ.

ಘಟಕದಲ್ಲಿ ಇನ್ನೂ ಕೆಲವು ಯೂನಿಟ್‌ಗಳನ್ನು ಆರಂಭಿಸಲು ಸಿದ್ದತೆಯೂ ನಡೆಯುತ್ತಿದೆ. ದೇಶದಲ್ಲಿ ೧,೦೦೦ ಬಿಗ್ ಬಜಾರ್‌ಗಳನ್ನು ತೆರೆದು, ಇಲ್ಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ೧೫, ಮಂಗಳೂರಿನಲ್ಲಿ ೧೦ ಮತ್ತು ಬೆಳಗಾವಿಯಲ್ಲಿ ೫ ಬಿಗ್ ಬಜಾರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಆಹಾರ ಸಂಸ್ಕರಣ ಘಟಕದಲ್ಲಿ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಆಹಾರ ಸಂಸ್ಕರಣ ಘಟಕ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಅಲ್ಲಿ ಏನೇನು ಉತ್ಪಾದನೆ ಮಾಡಲಾಗುತ್ತಿದೆ, ಘಟಕದ ಸಾಧನೆಗಳೇನು, ವಹಿವಾಟು ಹೇಗಿದೆ. ಲಾಭವೇ, ನಷ್ಟವೇ ಮುಂತಾದ ಯಾವುದೇ ಮಾಹಿತಿ ಇದುವರೆಗೂ ಹೊರಬಿದ್ದಿಲ್ಲ. ಹೀಗಾಗಿ, ಸಂಸ್ಕರಣ ಘಟಕ ಇದ್ದೂ ಇಲ್ಲದಂತಾಗಿದೆ. ಒಟ್ಟಾರೆ ಹೇಳಬೇಕೆಂದರೆ, ಪ್ರಧಾನಿ ಮೋದಿಯವರ ಮಾತಿನಲ್ಲಿ ಅರ್ಧದಷ್ಟೂ ನಿಜ ಇಲ್ಲದಿರುವುದು ಕಂಡುಬರುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More