ಕರ್ನಾಟಕ ಚುನಾವಣೆಯಲ್ಲಿ ಪೇಯ್ಡ್‌ ನ್ಯೂಸ್‌ ಸದ್ದು; ಬೆಂಗಳೂರು ನಂಬರ್ ಒನ್

ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಸುದ್ದಿ ಪ್ರಸಾರವಾಗಿರುವ ಪ್ರಕರಣಗಳು ಪತ್ತೆಯಾಗಿವೆ. ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕ್ರಮದ ಪರ ಪೇಯ್ಡ್‌ ನ್ಯೂಸ್‌ಗಳನ್ನು ಪ್ರಸಾರ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ಮುಂದಿದೆ

ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಅಧಿಕಾರಿಗಳನ್ನು ಒಳಗೊಂಡ ಮಾಧ್ಯಮ ಪ್ರಮಾಣೀಕೃತ ಮತ್ತು ದೃಢೀಕರಣ ಸಮಿತಿ (Media Certification & Monitoring committee) ಪೇಯ್ಡ್ ನ್ಯೂಸ್ ಪ್ರಕರಣಗಳನ್ನು ಪತ್ತೆಹಚ್ಚಿದೆ. ಇದುವರೆಗೂ ರಾಜ್ಯದ ವಿವಿಧೆಡೆ ಒಟ್ಟು ೧೦ ಪ್ರಕರಣಗಳನ್ನು ಸಮಿತಿ ಗುರುತಿಸಿದೆಯಲ್ಲದೆ, ಅವುಗಳನ್ನು ಪೇಯ್ಡ್ ನ್ಯೂಸ್ ಎಂದು ಖಚಿತಪಡಿಸಿದೆ.

ಚಿಕ್ಕನಾಯಕನಹಳ್ಳಿಯ ಜೆಡಿಎಸ್ ಶಾಸಕ ಸುರೇಶ್‌ಬಾಬು ಅವರಿಗೆ ಬೆಂಗಳೂರು ನಗರದ ಕ್ರೆಸೆಂಟ್‌ ರಸ್ತೆಯಲ್ಲಿರುವ ಖಾಸಗಿ ಸುದ್ದಿವಾಹಿನಿಯೊಂದರ ಪ್ರತಿನಿಧಿ ಆಮಿಷವೊಡ್ಡಿದ್ದ ಪ್ರಕರಣವನ್ನು ‘ಸುಲಿಗೆ’ ಪ್ರಕರಣವೆಂದು ಇದೇ ಸಮಿತಿ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಧ್ವನಿ ಮುದ್ರಣದ ಟೇಪ್‌ ಅನ್ನು ಶಾಸಕ ಸುರೇಶ್‌ಬಾಬು ಅವರು ಸಮಿತಿಗೆ ದೂರು ದಾಖಲಿಸಿದ್ದರು. ಆರಂಭದಲ್ಲಿ ಇದು ಪೇಯ್ಡ್ ನ್ಯೂಸ್ ಪ್ರಕರಣವೆಂದು ದಾಖಲಿಸಿಕೊಳ್ಳಲಾಗಗಿತ್ತು. ಆಡಿಯೋ ಟೇಪ್‌ ಅನ್ನು ಪರಿಶೀಲಿಸಿದ ಬಳಿಕ ಇದು ಸುಲಿಗೆ ಪ್ರಕರಣ ಎಂದು ಸಮಿತಿ ತೀರ್ಮಾನಿಸಿತು.

ಈ ಬಗ್ಗೆ, ಖಾಸಗಿ ಸುದ್ದಿವಾಹಿನಿಯ ವ್ಯವಸ್ಥಾಪಕರು ಸಮಜಾಯಿಷಿ ನೀಡಿದ್ದಾರಾದರೂ, ಆಮಿಷ ಒಡ್ಡಿರುವುದರ ಹಿಂದಿನ ಎಲ್ಲಾ ಪ್ರಕ್ರಿಯೆಗಳನ್ನೂ ತನಿಖೆಗೊಳಪಡಿಸಬೇಕು ಎಂದು ಸಮಿತಿ ಹೇಳಿದೆ. ಅದೇ ರೀತಿ ಪ್ರಕರಣವನ್ನು ಪೊಲೀಸ್‌ ತನಿಖೆಗಾಗಿ ಹಸ್ತಾಂತರಿಸಿದೆ ಎಂದು ಮಾಧ್ಯಮ ಪ್ರಮಾಣೀಕೃತ ಸಮಿತಿ ಉನ್ನತ ಮೂಲಗಳು ಖಚಿತಪಡಿಸಿವೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಮಿತಿಯು ಮುದ್ರಣ, ವಿದ್ಯುನ್ಮಾನ, ರೇಡಿಯೋ, ಎಫ್‌ಎಂ , ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಕಾಸಿಗಾಗಿ ಸುದ್ದಿ ಮೇಲೆ ನಿಗಾ ವಹಿಸಿತ್ತು. ಸಮಿತಿಯು ಇದುವರೆಗೂ ೨೯ ಪ್ರಕರಣ ಪತ್ತೆಹಚ್ಚಿದೆಯಾದರೂ ಅಂತಿಮವಾಗಿ ೧೦ ಪ್ರಕರಣಗಳನ್ನಷ್ಟೇ ಕಾಸಿಗಾಗಿ ಪ್ರಕಟಿಸಲಾದ ಸುದ್ದಿ ಎಂದು ತೀರ್ಮಾನಿಸಿದೆ.

“ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ಹಾಗೂ ಭಾರತ ಚುನಾವಣಾ ಆಯೋಗದ ವಿಚಾರಣೆಯಲ್ಲಿ ಕಾಸಿಗಾಗಿ ಸುದ್ದಿ ದೃಢಪಟ್ಟಿವೆ. ಇಂತಹ ಪ್ರಕರಣಗಳ ಕುರಿತು ಆಯೋಗವು ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಭಾರತೀಯ ಪತ್ರಿಕಾ ಮಂಡಳಿ ಅಥವಾ ನ್ಯಾಷನಲ್ ಬ್ರಾಡ್‌ಕಾಸ್ಟಿಂಗ್‌ ಸ್ಟ್ಯಾಂಡರ್ಡ್ ಆಥಾರಿಟಿ ಅವರಿಗೆ ಪ್ರಕರಣವನ್ನು ವಹಿಸಲಿದೆ,” ಎಂದು ಸಮಿತಿಯ ಸದಸ್ಯರೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ಪೇಯ್ಡ್ ನ್ಯೂಸ್ ಪ್ರಕಟಿಸಿರುವ ಜಿಲ್ಲೆಗಳ ಈ ಯಾದಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂದಿದೆ. ಒಟ್ಟು ೪ ಪ್ರಕರಣಗಳನ್ನು ಸಮಿತಿ ದಾಖಲಿಸಿದೆ. ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ ೨ ಪ್ರಕರಣಗಳು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ತಲಾ ೧ ಪ್ರಕರಣವನ್ನು ದಾಖಲಿಸಿದೆ. ಆದರೆ ಪತ್ರಿಕೆ, ಟಿವಿ ವಾಹಿನಿಗಳ ಹೆಸರುಗಳನ್ನು ಸಮಿತಿ ಬಹಿರಂಗಗೊಳಿಸಿಲ್ಲ.

ರಾಜ್ಯದ ೩೦ ಜಿಲ್ಲೆಗಳಲ್ಲಿನ ಸಮಿತಿ ಮುಂದೆ ಒಟ್ಟು ೨೯ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಬೆಂಗಳೂರು ಮತ್ತು ಬೀದರ್ ಜಿಲ್ಲೆಯಲ್ಲಿ ತಲಾ ೭ ಮಂದಿ ಸೇರಿದಂತೆ ಒಟ್ಟು ೨೭ ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿಯಾಗಿತ್ತು. ಈ ಪೈಕಿ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಯ ಒಟ್ಟು ೩ ಅಭ್ಯರ್ಥಿಗಳು ಕಾಸಿಗಾಗಿ ಸುದ್ದಿ ಪ್ರಕಟಿಸಿರುವ ಬಗ್ಗೆ ತಮ್ಮ ಖಾತೆಯಲ್ಲಿ ಹಣವನ್ನು ನಮೂದಿಸಿದ್ದಾರೆ. ೨ ಪ್ರಕರಣಗಳಲ್ಲಿ ಮಾತ್ರ ಪೇಯ್ಡ್ ನ್ಯೂಸ್ ಎಂಬುದು ಪತ್ತೆಯಾಗಿಲ್ಲ. ಕಳೆದ ಬಾರಿ (೨೦೧೩) ವಿಧಾನಸಭೆಗೆ ನಡೆದಿದ್ದ ಚುನಾವಣೆ ಸಂದರ್ಭದಲ್ಲಿ ವರದಿಯಾಗಿದ್ದ ಪೇಯ್ಡ್ ನ್ಯೂಸ್ ಪ್ರಕರಣಗಳಿಗೆ ಹೋಲಿಸಿದರೆ ಈ ಬಾರಿ ಅತಿ ಕಡಿಮೆ. ೨೦೧೩ರಲ್ಲಿ 42 ಪೇಯ್ಡ್ ನ್ಯೂಸ್ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಇದನ್ನೂ ಓದಿ : ಸಂಕಲನ | ಪೇಯ್ಡ್ ನ್ಯೂಸ್ ಸುತ್ತ ‘ದಿ ಸ್ಟೇಟ್’ ಪ್ರಕಟಿಸಿದ ವಿಶೇಷ ವರದಿಗಳು

ಜಿಲ್ಲೆಗಳಲ್ಲಿ ಪ್ರಸಾರವಾಗುವ ಸ್ಥಳೀಯ ಕೇಬಲ್ ವಾಹಿನಿಗಳ ಎಲ್ಲ ಕಾರ್ಯಕ್ರಮಗಳು ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಜಾಹೀರಾತುಗಳನ್ನು ಸಮಿತಿ ನಿರಂತರ ವೀಕ್ಷಣೆ ಮಾಡಲಾಗುತ್ತಿದೆ. ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಲಾಗುತ್ತಿದೆಯಲ್ಲದೆ, ಪ್ರತಿನಿತ್ಯ ಪತ್ರಿಕೆಯಲ್ಲಿ ಬರುವ ಸುದ್ದಿ, ಅನಧಿಕೃತ ಜಾಹೀರಾತುಗಳನ್ನು ಸಮಿತಿ ಸದಸ್ಯರು ವೀಕ್ಷಿಸುತ್ತಿದ್ದಾರೆ. ಪೇಯ್ಡ್ ನ್ಯೂಸ್ ಪ್ರಕಟಗೊಂಡಲ್ಲಿ ಸಮಿತಿ ಸ್ವಯಂ ದೂರು ದಾಖಲಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸಂಬಂಧಿತ ಚುನಾವಣಾಧಿಕಾರಿಗಳಿಗೆ ಶಿಫಾರಸು ಮಾಡುತ್ತಿದೆ.

ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಚುನಾವಣಾ ಜಾಹೀರಾತು ಪ್ರಸಾರಕ್ಕೂ ಮುನ್ನ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಎಂಸಿಎಂಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು. ಪೂರ್ವಾನುಮತಿ ಖಾತ್ರಿಪಡಿಸಿಕೊಂಡು ಖಾಸಗಿ ವಾಹಿನಿಯವರು ಜಾಹೀರಾತು ಪ್ರಸಾರ ಮಾಡಬೇಕು. ಒಂದು ವೇಳೆ, ಈ ನಿಯಮ ಉಲ್ಲಂಘಿಸಿದ್ದಲ್ಲಿ ಖಾಸಗಿ ವಾಹಿನಿಗಳ ಉಪಕರಣಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ಭಾರತ ಚುನಾವಣಾ ಆಯೋಗವು ಚುನಾವಣಾಧಿಕಾರಿಗಳಿಗೆ ನೀಡಿದೆ.

ಯಾವುದು ಪೇಯ್ಡ್ ನ್ಯೂಸ್?: ಒಂದೇ ಸಮಯದಲ್ಲಿ ವಿವಿಧ ಪ್ರಕಟಣೆಗಳಲ್ಲಿ ಭಾವಚಿತ್ರದೊಂದಿಗೆ ಲೇಖನ ರೂಪದಲ್ಲಿ ಸ್ಪರ್ಧಾತ್ಮಕವಾಗಿ ಪ್ರಕಟಗೊಳ್ಳುವ ಬೈಲೈನ್ ಸುದ್ದಿಗಳು. ವೃತ್ತಪತ್ರಿಕೆಯ ಒಂದೇ ಪುಟದಲ್ಲಿ ಸ್ಪರ್ಧಾತ್ಮಕ ಅಭ್ಯರ್ಥಿಗಳನ್ನು ಶ್ಲಾಘಿಸುವ ರೀತಿಯಲ್ಲಿ ಮತ್ತು ಜಯ ಗಳಿಸುವ ಸಾಧ್ಯತೆ ಇರುವ ಬಗ್ಗೆ ಲೇಖನ ಪ್ರಕಟಗೊಳ್ಳುವುದು. ಒಬ್ಬ ಅಭ್ಯರ್ಥಿ ಸಮಾಜದ ಪ್ರತಿಯೊಂದು ವರ್ಗದಿಂದ ಬೆಂಬಲ ಪಡೆಯುತ್ತಿದ್ದು ಮತ್ತು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂಬ ಸುದ್ದಿ.

ಬೈಲೈನ್ ಇಲ್ಲದೆ ಅಭ್ಯರ್ಥಿಯ ಪರವಾಗಿ ಸುದ್ದಿ ಪ್ರಕಟಣೆ, ಯಾವುದೇ ಸುದ್ದಿಯನ್ನು ಒಳಗೊಳ್ಳದೆ ರಾಜ್ಯ, ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲು ಅಭ್ಯರ್ಥಿ ಅಥವಾ ಪಕ್ಷ ಸಿದ್ಧವಾಗಿದೆ ಎಂದು ಪತ್ರಿಕೆಯಲ್ಲಿ ಕೇವಲ ಶಿರೋನಾಮೆ ಪ್ರಕಟಿಸುವುದು. ಯಾವುದೋ ಪಕ್ಷ ಅಥವಾ ಅಭ್ಯರ್ಥಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಸುದ್ದಿಯ ಪ್ರತಿ ವಾಕ್ಯದಲ್ಲಿ ತಿಳಿಸುತ್ತ ಚುನಾವಣೆ ಕಣದಲ್ಲಿರುವ ಇನ್ನುಳಿದ ಪಕ್ಷ ಅಥವಾ ಅಭ್ಯರ್ಥಿ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಸುದ್ದಿ.

125-150 ಪದಗಳುಳ್ಳ ಸ್ಥಿರ ಗಾತ್ರದ ಕಠಿಣ ರೂಪದ ಬರವಣಿಗೆ ಹಾಗೂ ಡಬಲ್ ಕಾಲಂನಲ್ಲಿ ಭಾವಚಿತ್ರವಿದ್ದು, ಜಾಹೀರಾತಿನಂತೆ ಬಿಂಬಿಸುವ ಸುದ್ದಿ. ಸ್ಲಾಟ್ ಅಧಾರದ ಮೇಲೆ ಪಾವತಿ ಸುದ್ದಿಯಾಗಿ ಅಭ್ಯರ್ಥಿಯಿಂದ ಪಡೆಯಲಾದ ಅನೇಕ ಪ್ರಕಾರದ ಫಾಂಟ್‌ಗಳು ಹಾಗೂ ಡ್ರಾಪ್ ಕೇಸ್ ಶೈಲಿಗಳನ್ನು, ಛಾಯಾಚಿತ್ರಗಳನ್ನು ನಿರ್ದಿಷ್ಟ ಪತ್ರಿಕೆಯ ಒಂದೇ ಪುಟದಲ್ಲಿ ಎಲ್ಲವನ್ನು ಮುದ್ರಿಸುವುದು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More