ಪ್ರಮಾಣಪತ್ರ ಲೋಪ ಆರೋಪ; ವಿಶ್ರಾಂತ ಕುಲಪತಿ ರಂಗಪ್ಪ ವಿರುದ್ಧ ಆಯೋಗಕ್ಕೆ ದೂರು

ಮೈಸೂರಿನ ಚಾಮರಾಜ ಮತಕ್ಷೇತ್ರಕ್ಕೆ ವಿಶ್ರಾಂತ ಕುಲಪತಿ ಕೆ ಎಸ್ ‌ರಂಗಪ್ಪ ಅವರನ್ನು ಜೆಡಿಎಸ್‌ ಕಣಕ್ಕಿಳಿಸಿದೆ. ಹಲವು ಆರೋಪಗಳಿಗೆ ಗುರಿಯಾಗಿರುವ ಇವರನ್ನು ಕಣಕ್ಕಿಳಿಸಿರುವ ಬಗ್ಗೆ ಅಪಸ್ವರ ಕೇಳಿಬಂದಿತ್ತು. ಇದೀಗ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಆ ದೂರಿನಲ್ಲೇನಿದೆ?

ಮೈಸೂರಿನ ಚಾಮರಾಜ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್‌ ಅಭ್ಯರ್ಥಿ ಕೆ ಎಸ್‌ ರಂಗಪ್ಪ ಅವರ ವಿರುದ್ಧ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ (ಬಿಒಎಮ್) ಕೆ ಎಸ್ ಶಿವರಾಮು ಅವರು ಸಲ್ಲಿಸಿರುವ ದೂರಿನಲ್ಲಿ, "ಕೆ ಎಸ್ ರಂಗಪ್ಪ ಅವರು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳು ಘೋಷಣೆ ಮಾಡಿದ್ದಾರೆ," ಎಂದು ಆರೋಪಿಸಲಾಗಿದೆ. ಮತದಾನಕ್ಕೆ ೨ ದಿನ ಬಾಕಿ ಇರುವಾಗ ರಂಗಪ್ಪ ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿದ್ದ ಹಗರಣವನ್ನು ಪುನಃ ಮುನ್ನೆಲೆಗೆ ತಂದಂತಾಗಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಆಧಾರವಿಲ್ಲದ ಜಾಹೀರಾತು; ರಾಜ್ಯ ಬಿಜೆಪಿಗೆ ಮುಖಭಂಗ

“ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಮೂನೆ ೨೬ರಲ್ಲಿ ಶಾಸನಬದ್ಧವಾಗಿ ಸಲ್ಲಿಸಬೇಕಾದ ಸ್ವಯಂಘೋಷಣೆಯಲ್ಲಿ ದುರುದ್ದೇಶದಿಂದ ಹಲವು ಅಂಶಗಳನ್ನು ರಂಗಪ್ಪ ಅವರು ಮರೆಮಾಚಿದ್ದಾರೆ. ಅಲ್ಲದೆ, ಮೊದಲ ಆರೋಪಿಯಾಗಿರುವ ಕ್ರಿಮಿನಲ್ ಪ್ರಕರಣದ ಬಗ್ಗೆ (ಸಿಆರ್ ೪೨/೨೦೧೬) ಸಿಐಡಿ ಸಲ್ಲಿಸಿದ್ದ ‘ಬಿ’ ಅಂತಿಮ ವರದಿಯನ್ನು ಅಕ್ಟೋಬರ್‌ ೧೭,೨೦೧೭ರಂದು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಈ ಪ್ರಕರಣದ ವಿಚಾರಣೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಜೂನ್ ೬,೨೦೧೮ರಂದು ಬರಲಿದೆ. ಆದರೆ ಈ ವಿವರವನ್ನು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ,” ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕೆ ಎಸ್‌ ಶಿವರಾಮು ಅವರು ಸಲ್ಲಿಸಿರುವ ದೂರಿನ ಪ್ರತಿ

“ಸಿಐಡಿ ಸಲ್ಲಿಸಿದ್ದ ‘ಬಿ’ ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಒಪ್ಪಿ ಅಂತಿಮ ಆದೇಶ ಹೊರಡಿಸಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ದೂರುದಾರರಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಈ ವರದಿಯನ್ನು ಪ್ರಶ್ನಿಸಿದೆಯಲ್ಲದೆ, ಪ್ರಕರಣವು ನ್ಯಾಯಾಲಯದ ಇತ್ಯರ್ಥಕ್ಕೆ ಬಾಕಿ ಇದೆ. ಆದರೂ ಈ ವಿವರಗಳನ್ನು ಪ್ರಮಾಣಪತ್ರದಲ್ಲಿ ಹೇಳದೆಯೇ ಮರೆಮಾಚಲಾಗಿದೆ,” ಎಂದು ದೂರಿನಲ್ಲಿ ಹೇಳಲಾಗಿದೆ.

ಅದೇ ರೀತಿ, “ರಂಗಪ್ಪ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದ ಅವಧಿಯಲ್ಲಿ ಪ್ರಾದೇಶಿಕ ಕೇಂದ್ರಗಳಿಗೆ ನಿಯಮಬಾಹಿರವಾಗಿ ೩೮,೬೯,೮೩೬ ರು. ಮೊತ್ತದಲ್ಲಿ ಕಂಪ್ಯೂಟರ್‌ ಮತ್ತು ಪೀಠೋಪಕರಣಗಳನ್ನು ಖರೀದಿಸಿದ್ದರು. ಈ ಪ್ರಕರಣದಲ್ಲಿಯೂ ಅವರನ್ನು ಪ್ರಥಮ ಆರೋಪಿಯನ್ನಾಗಿಸಲಾಗಿದೆ. ಇವರ ವಿರುದ್ಧ ಮಾರ್ಚ್ ೧,೨೦೧೮ರಂದು ಇಲಾಖೆ ವಿಚಾರಣೆ ಕೂಡ ಆರಂಭವಾಗಿದೆ. ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಪ್ರಕರಣವನ್ನು ನಮೂದಿಸದೆಯೇ ಉದ್ದೇಶಪೂರ್ವಕವಾಗಿ ಮರೆಮಾಚಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಲಾಗಿದೆ,” ಎಂದು ಆರೋಪಿಸಲಾಗಿದೆ.

ಶ್ರೇಯಸ್‌ ರಂಗಪ್ಪ ಅವರ ಕುರಿತು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರತಿ

ಪ್ರಮಾಣಪತ್ರದಲ್ಲಿರುವ ‘ಅವಲಂಬಿತರು’ ಕಾಲಂನಲ್ಲಿ ರಂಗಪ್ಪ ಅವರ ಪುತ್ರ ಶ್ರೇಯಸ್‌ ಅವರ ಹೆಸರು ಮತ್ತು ಪಾನ್ ಸಂಖ್ಯೆ (BMFPR 9656B) ನಮೂದಿಸಲಾಗಿದೆ. ಆದರೆ, ೨೦೧೬-೧೭ನೇ ಸಾಲಿನ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ವಿವರ ಪಟ್ಟಿ ಕಾಲಂನಲ್ಲಿ ‘ಅನ್ವಯಿಸುವುದಿಲ್ಲ’ ಎಂದು ಹೇಳಲಾಗಿದೆ. ಆದರೆ, ಶ್ರೇಯಸ್ ಅವರು ಅಕ್ಟೋಬರ್‌ ೧೯,೨೦೧೩ರಲ್ಲಿ ಸುಮಾರು ೫೫ ಲಕ್ಷ ಮೊತ್ತದಲ್ಲಿ ಐಷಾರಾಮಿ (ಜಾಗ್ವಾರ್‌) ಕಾರು ಖರೀದಿಸಿದ್ದು, ವಾಹನ ಆಜೀವ ತೆರಿಗೆ ರೂಪದಲ್ಲಿ ೧೦ ಲಕ್ಷ ಪಾವತಿಸಿದ್ದಾರೆ. ಈ ಕಾರು ಶ್ರೇಯಸ್‌ ಅವರ ಹೆಸರಿನಲ್ಲಿದೆ. ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿವರವನ್ನು ಮರೆಮಾಚಲಾಗಿದೆ ಎಂದು ಕೆ ಎಸ್‌ ಶಿವರಾಮು ಅವರು ದೂರಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More