ಶ್ರೀರಾಮುಲು ಲಂಚ ಪ್ರಕರಣ| ಹಿರೇಮಠ್‌ ಆರೋಪಕ್ಕೆ ಪುಷ್ಟಿ ನೀಡಿದ ಸುದ್ದಿವಾಹಿನಿ

ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ತೆರೆ ಬೀಳುವ ಹೊತ್ತಿಗೆ ಸರಿಯಾಗಿ ಬಿಜೆಪಿ ಸಂಕಟಕ್ಕೆ ಸಿಲುಕುವ ಸುದ್ದಿಯೊಂದು ಹೊರಬಿದ್ದಿದೆ. ಬಿಜೆಪಿಯ ಪ್ರಮುಖ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಸುಪ್ರೀಂ ಕೋರ್ಟ್‌ ಜಡ್ಜ್‌ಗೆ ಲಂಚ ನೀಡಿದ ಪ್ರಕರಣ ಬಯಲಾಗಿದೆ

ನರೇಂದ್ರ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥರು ತಿಂಗಳು ಕಾಲ ಪ್ರಚಾರ ಮಾಡಿದ್ದು ವ್ಯರ್ಥವಾಗುವುದೇ?

-ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿಜವಾದ ಸ್ಪರ್ಧೆ ಒಡ್ಡುವ ಉತ್ಸಾಹ ಹಾಗೂ ಅಧಿಕಾರ ಹಿಡಿಯುವ ಮಾತುಗಳನ್ನಾಡುತ್ತಿದ್ದ ಬಿಜೆಪಿಗೆ, ಗುರುವಾರ ಖಾಸಗಿ ವಾಹಿನಿಗಳಲ್ಲಿ ಬಿತ್ತರವಾದ ನಂತರ ಸಾರ್ವಜನಿಕ ವಲಯದಲ್ಲಿ ಇಂಥದ್ದೊಂದು ಚರ್ಚೆ ಬಿರುಸಾಗಿದೆ.

ಗಣಿ ಪ್ರಕರಣವೊಂದರಲ್ಲಿ ತಮ್ಮ ಪರ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆ ೧೬೦ ಕೋಟಿ ರು. ಲಂಚ ನೀಡುವ ಪ್ರಯತ್ನ ಮಾಡಿದ ದೃಶ್ಯಗಳನ್ನು ಖಾಸಗಿ ವಾಹಿನಿ ಬಿಡುಗಡೆ ಮಾಡಿದೆ. ಮಧ್ಯಾಹ್ನವೇ ಹೊರಬಿದ್ದ ಈ ಸುದ್ದಿ ಟ್ವಿಟರ್‌ನಲ್ಲೂ ಸದ್ದು ಮಾಡಿದ್ದು, ಈ ಕುರಿತು ಕಾಂಗ್ರೆಸ್‌ ಪಕ್ಷ ಪತ್ರಿಕಾಗೋಷ್ಠಿ ನಡೆಸಿ, ನರೇಂದ್ರ ಮೋದಿ ರಾಜ್ಯದ ಜನತೆಗೆ ಉತ್ತರಿಸಬೇಕೆಂದು ಅಗ್ರಹಿಸಿದೆ. ಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್, "ಶ್ರೀರಾಮುಲು ಬಿಜೆಪಿಯ ಸ್ಟಾರ್‌ ಪ್ರಚಾರಕ. ಪ್ರಧಾನಿಗಳು ಮೌನ ಮುರಿದು, ರಾಜ್ಯವನ್ನು ಲೂಟಿ ಮಾಡಲು ಬಳ್ಳಾರಿ ಗ್ಯಾಂಗನ್ನು ಮತ್ತೆ ಕರೆದಿದ್ದು ಯಾಕೆಂಬ ಕರ್ನಾಟಕ ಜನರ ಪ್ರಶ್ನೆಗೆ ಉತ್ತರ ಕೊಡಬೇಕು. ಕೂಡಲೇ ಈ ಲಂಚ ಪ್ರಕರಣ ತನಿಖೆಯಾಗಬೇಕು,' ಎಂದು ಆಗ್ರಹಿಸಿದರು.

ಈ ಬೆಳವಣಿಗೆ ಕುರಿತು ಗಣಿ ಹಗರಣ ಬಯಲುಗೆಳೆಯಲು ಹೋರಾಡಿದ ಸಾಮಾಜಿಕ ಕಾರ್ಯಕರ್ತ ಎಸ್‌ ಆರ್ ಹಿರೇಮಠ ಪ್ರತಿಕ್ರಿಯಿಸಿದ್ದು, "ಈ ಪ್ರಕರಣವನ್ನು ಹಿಂದೆಯೇ ಬಹಿರಂಗಪಡಿಸಿದ್ದೆವು. ಸುಪ್ರೀಂ ಕೋರ್ಟ್‌ ಸಿಜೆಐ ಆಗಿದ್ದ ಬಾಲಕೃಷ್ಣನ್, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಪಿ ಡಿ ದಿನಕರನ್‌ ಅವರು ರೆಡ್ಡಿ ಆಪ್ತರ ಜೊತೆ ಕೇರಳದ ಹೊಟೆಲ್‌ವೊಂದರಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ, ೨೬೫ ಕೋಟಿ ರು.ಗಳಿಗೆ ಮಾತುಕತೆ ನಡೆದಿತ್ತು. ಮತ್ತೆ ಈ ಪ್ರಕರಣ ಈಗ ಸುದ್ದಿ ಮಾಡುತ್ತಿರುವುದು ನಾವು ಮಾಡಿದ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ ಮತ್ತು ಖಾತ್ರಿಯಾದಂತಾಗಿದೆ,'' ಎಂದಿದ್ದಾರೆ.

ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡಲಾರಂಭಿಸಿದೆ. ಜೊತೆಗೆ #ReddyStingBJPExposed ಟ್ರೆಂಡ್‌ ಆಗಲಾರಂಭಿಸಿದೆ. ಬಿಜೆಪಿ ಭ್ರಷ್ಟರಿಗೆ ಈ ಚುನಾವಣೆಯಲ್ಲಿ ಟಿಕೆಟ್‌ ನೀಡಿರುವ ಕುರಿತ ಚರ್ಚೆ ಮತ್ತೆ ಕಾವು ಪಡೆದುಕೊಂಡಿದೆ.

ಇದನ್ನೂ ಓದಿ : ಕ್ರಿಮಿನಲ್ ಸಂಚು, ಬೆದರಿಕೆ; ಇವು ಶ್ರೀರಾಮುಲು ಎದುರಿಸುತ್ತಿರುವ ಮೊಕದ್ದಮೆಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದವರು ಶ್ರೀರಾಮುಲು. ರೆಡ್ಡಿ ಸಹೋದರರ ಆಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡು, ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವರೂ ಆಗಿದ್ದ ಶ್ರೀರಾಮುಲು, ಈ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ನಂತರದ ಪ್ರಮುಖ ಹಾಗೂ ಪ್ರಭಾವಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದರು.

ಜಾಮೀನು ಮೇಲೆ ಹೊರಬಂದಿದ್ದ ಜನಾರ್ದನ ರೆಡ್ಡಿ ಶ್ರೀರಾಮುಲು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಬಿಜೆಪಿ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಜನಾರ್ದನ ರೆಡ್ಡಿ ಅವರು ಪ್ರಚಾರದಲ್ಲಿ ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಬಳ್ಳಾರಿ ಕ್ಷೇತ್ರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡಿತ್ತು.

ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡುವ ಪ್ರಕರಣದಲ್ಲಿ ೨೦೧೨ರಲ್ಲಿ ಲಂಚ ಪಡೆದ ಆರೋಪದ ಮೇಲೆ ಆಂಧ್ರದ ಸಿಬಿಐ ವಿಶೇಷ ಕೋರ್ಟ್‌ನ ನ್ಯಾ.ಟಿ ಪಟ್ಟಾಭಿ ರಾಮರಾವ್ ಅವರನ್ನು ಹೈದರಾಬಾದಿನ ಸಿಬಿಐ ಬಂಧಿಸಿತ್ತು. ಅವರಿಂದ ೧.೬೦ ಕೋಟಿ ರು. ನಗದು, ೧.೧೫ ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಮತದಾನ ದಿನ ಸಮೀಪಿಸುತ್ತಿರುವ ಹೊತ್ತಲ್ಲಿ ಈ ಸುದ್ದಿ ಹೊರಬಿದ್ದಿರುವುದು ಬಿಜೆಪಿಗೆ ದೊಡ್ಡ ಆಘಾತ ಉಂಟುಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More