ಇನ್ನುಮುಂದೆ ದೇಶಿ ಇ-ಮಾರುಕಟ್ಟೆಯಲ್ಲಿ ವಿದೇಶಿ ದೈತ್ಯ ಕಂಪನಿಗಳದ್ದೇ ಕಾರುಬಾರು

ಚಿಲ್ಲರೆ ದೈತ್ಯ ವಾಲ್ಮಾರ್ಟ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ.77ರಷ್ಟು ಪಾಲು ಖರೀದಿಸಿದ ನಂತರ ಭಾರತದಲ್ಲಿನ ಇ- ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ. ಅಮೆಜಾನ್-ವಾಲ್ಮಾರ್ಟ್ ಜಿದ್ದಾಜಿದ್ದಿಯಲ್ಲಿ ಗ್ರಾಹಕನಿಗೆ ಅಂತಿಮವಾಗಿ ಹೆಚ್ಚಿನ ಲಾಭ ಆಗಲಿದೆ. ಆದರೆ, ಈ ಲಾಭದ ಪರಿಸ್ಥಿತಿ ಬಹಳ ದಿನ ಇರಲಾರದು!

ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಅಮೆರಿಕದ ಚಿಲ್ಲರೆ ದೈತ್ಯ ವಾಲ್ಮಾರ್ಟ್ ಶೇ.77ರಷ್ಟು ಪಾಲು ಖರೀದಿಸಿದೆ. ಬರುವ ದಿನಗಳಲ್ಲಿ ತನ್ನ ಪಾಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶ ಇದೆ. ಇದುವರೆಗೆ ಫ್ಲಿಪ್‌ಕಾರ್ಟ್‌ಗೆ ಸ್ಪರ್ಧೆ ಒಡ್ಡುತ್ತಿದ್ದ ಅಮೆಜಾನ್, ಎಷ್ಟೇ ಕಸರತ್ತು ಮಾಡಿದರೂ ಭಾರತದ ಇ-ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ.

ಈಗ ಫ್ಲಿಪ್‌ಕಾರ್ಟ್‌ ವಾಲ್ಮಾರ್ಟ್ ತೆಕ್ಕೆಗೆ ಬಿದ್ದಿರುವುದರಿಂದ ಅಮೆಜಾನ್ ಮತ್ತಷ್ಟು ಬಿರುಸಿನ ಸ್ಪರ್ಧೆ ಎದುರಿಸಬೇಕಾಗುತ್ತದೆ. ಏಕೆಂದರೆ, ಫ್ಲಿಪ್‌ಕಾರ್ಟ್‌ ಖರೀದಿಸಿರುವ ವಾಲ್ಮಾರ್ಟ್ ಆರಂಭದಲ್ಲೇ 13,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದ್ದು, ಮೂಲಭೂತ ಸೌಲಭ್ಯ, ತಂತ್ರಜ್ಞಾನ ಉನ್ನತೀಕರಣ ಮತ್ತು ಮಾನವ ಸಂಪನ್ಮೂಲ ಸುಧಾರಣೆಗೆ ಬಳಸಲಿದೆ. ಇದರಿಂದ ಈಗಾಗಲೇ ಅಗ್ರಸ್ಥಾನದಲ್ಲಿರುವ ಫ್ಲಿಪ್‌ಕಾರ್ಟ್‌, ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಮತ್ತು ತನ್ನ ವಹಿವಾಟು ವಿಸ್ತರಿಸಿಕೊಳ್ಳಲು ಅನುಕೂಲವಾಗುತ್ತದೆ. ಮತ್ತಷ್ಟು ಕಾಲ ತನ್ನ ಅಧಿಪತ್ಯವನ್ನು ಮುಂದುವರಿಸಬಹುದು.

ವಾಲ್ಮಾರ್ಟ್‌ಗಾಗಲೀ ಅಮೆಜಾನ್‌ಗಾಗಲೀ ಭಾರತದ ಇ-ಮಾರುಕಟ್ಟೆಯಲ್ಲಿ ತಮ್ಮ ಪಾಲು ಹೆಚ್ಚಿಸಿಕೊಳ್ಳುವುದೇ ಮುಖ್ಯ ಗುರಿ. ಜಗತ್ತಿನಲ್ಲಿ ಅತಿ ತ್ವರಿತವಾಗಿ ವಿಸ್ತಾರಗೊಳ್ಳುತ್ತಿರುವ ಭಾರತದ ಇ-ಮಾರುಕಟ್ಟೆ ಮುಂಬರುವ ವರ್ಷಗಳಲ್ಲಿ ಈ ಎರಡೂ ಕಂಪನಿಗಳಿಗೆ ಅಮೆರಿಕದ ಹೊರಗಿನಿಂದ ಅತಿ ಹೆಚ್ಚು ಲಾಭ ತಂದುಕೊಡಲಿದೆ. ಇಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಇರುವ ಸುವರ್ಣಾವಕಾಶ ಬೇರೆಲ್ಲೂ ಇಲ್ಲ.

ಅಷ್ಟಕ್ಕೂ, ಭಾರತದ ಚಿಲ್ಲರೆ ವ್ಯಾಪಾರದ ಗಾತ್ರ 650 ಬಿಲಿಯನ್ ಡಾಲರ್ ಮೌಲ್ಯದ್ದು. ಇಷ್ಟು ಬೃಹತ್ ಗಾತ್ರದ ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾಲು ಪಡೆಯುವುದು ಉಭಯ ಕಂಪನಿಗಳು ಉದ್ದೇಶ. ಈಗಾಗಲೇ ಭಾರತದಲ್ಲಿ ಬೇರು ಬಿಟ್ಟಿರುವ ಅಮೆಜಾನ್ ಇ-ಮಾರುಕಟ್ಟೆಯ ಜೊತೆಗೆ ಚಿಲ್ಲರೆ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ ಲೆಕ್ಕಾಚಾರ ಹಾಕಿದೆ. ವಾಲ್ಮಾರ್ಟ್ ಚಿಲ್ಲರೆ ವಹಿವಾಟಿನಲ್ಲಿ ಜಗತ್ತಿನಲ್ಲಿ ನಂಬರ್ ಒನ್ ಕಂಪನಿ. ಆದರೆ, ವಾಲ್ಮಾರ್ಟ್ ಇದುವರೆಗೆ ಅಮೆರಿಕದ ಹೊರಗೆ ನಡೆಸಿದ ಮಾರುಕಟ್ಟೆ ವಿಸ್ತರಣೆ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಅದಕ್ಕೆ ಆಯಾ ದೇಶಗಳ ಜನರ ಅಭಿರುಚಿ, ಕಾನೂನು ಮತ್ತಿತರ ಕಾರಣಗಳಿವೆ.

ಉದಾರೀಕರಣೋತ್ತರ ಭಾರತವು ಎಲ್ಲ ಹೊಸ ಸಾಧ್ಯತೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಮತ್ತು ಅವುಗಳು ಕಡಿಮೆ ದರಕ್ಕೆ ದಕ್ಕುತ್ತಿರುವುದರಿಂದ ಜನರು ವಿದೇಶಿ ಸರಕು ಮತ್ತು ಸೇವೆಗಳನ್ನು ಬಹುಬೇಗ ಒಪ್ಪಿಕೊಳ್ಳುತ್ತಿದ್ದಾರೆ, ಅಪ್ಪಿಕೊಳ್ಳುತ್ತಿದ್ದಾರೆ. ಕಳೆದೊಂದು ದಶಕದಲ್ಲಾಗಿರುವ ಮೊಬೈಲ್ ಮತ್ತು ಕಳೆದ ನಾಲ್ಕೈದು ವರ್ಷಗಳಲ್ಲಾಗಿರುವ ಸ್ಮಾರ್ಟ್‌ಫೋನ್ ಕ್ರಾಂತಿಯಿಂದಾಗಿ ಭಾರತದ ಇ-ಮಾರುಕಟ್ಟೆ ವಿಸ್ತರಣೆ ಮತ್ತಷ್ಟು ಅನುಕೂಲ ಮಾಡಿದೆ.

ಬರುವ ದಿನಗಳಲ್ಲಿ ವಾಲ್ಮಾರ್ಟ್-ಅಮೆಜಾನ್ ನಡುವಿನ ಜಿದ್ದಾಜಿದ್ದಿ ನಮ್ಮ ನಿರೀಕ್ಷೆಗೂ ನಿಲುಕದಷ್ಟೂ ಬೃಹತ್ತಾಗಿರಲಿದೆ. ಇದು ದರ ಸಮರಕ್ಕೆ ನಾಂದಿ ಹಾಡಲಿದೆ. ದರ ಸಮರ ಯಾವಾಗಲೂ ಗ್ರಾಹಕರ ಪರ. ಹೀಗಾಗಿ, ಗ್ರಾಹಕರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಈ ಬೃಹತ್ ಕಂಪನಿಗಳ ದರ ಸಮರವು ದೇಶೀಯ ಚಿಲ್ಲರೆ ವಹಿವಾಟಿನ ಮೇಲೂ ಪರಿಣಾಮ ಬೀರಬಹುದು. ಆದರೆ, ಭಾರತದಲ್ಲಿ ಇ-ವಹಿವಾಟಿನ ಪ್ರಮಾಣ ಕೇವಲ ಶೇ.4ರಷ್ಟಿದೆ. ‘ಸ್ಟಾಟಿಸ್ಟಾ’ ಅಂಕಿ-ಅಂಶಗಳ ಪ್ರಕಾರ, 2014ರಲ್ಲಿ ಕೇವಲ ಶೇ.0.8ರಷ್ಟಿದ್ದ ಇ-ವಹಿವಾಟು ಈ ಐದು ವರ್ಷಗಳಲ್ಲಿ ತ್ವರಿತವಾಗಿ ಬೆಳೆಯುತ್ತಿದೆ. 2015ರಲ್ಲಿ ಶೇ.1.7, 2016ರಲ್ಲಿ ಶೇ.2.6, 2017ರಲ್ಲಿ ಶೇ. 3.6, 2018ರಲ್ಲಿ ಶೇ.4.4ರಷ್ಟಿದ್ದು, 2019ರಲ್ಲಿ ಶೇ.4.8ಕ್ಕೆ ಏರುವ ಅಂದಾಜು ಇದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಶೇ.1ರಷ್ಟು ಎಂದರೂ 1.30 ಕೋಟಿ ಗ್ರಾಹಕರು ಸಿಕ್ಕಿಬಿಡುತ್ತಾರೆ. ಭಾರತದ ಜನಸಂಖ್ಯೆಯ ಬೃಹತ್ ಗಾತ್ರವೇ ಈ ಎಲ್ಲ ಕಂಪನಿಗಳಿಗೆ ಬಂಡವಾಳ. ಜೊತೆಗೆ ತ್ವರಿತವಾಗಿ ವೃದ್ಧಿಸುತ್ತಿರುವ ಆರ್ಥಿಕತೆಯು ಜನರ ಖರೀದಿಸುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಖರೀದಿ ಶಕ್ತಿ ಹೆಚ್ಚಿದಂತೆ ಗ್ರಾಹಕರ ವಿನಿಯೋಜನೆಯೂ ಹಿಗ್ಗುತ್ತ ಹೋಗುತ್ತದೆ.

ಸುದೀರ್ಘ ಕಾಲದಲ್ಲಿ ಲಾಭ ನಿರೀಕ್ಷೆ ಇಟ್ಟುಕೊಳ್ಳುವ ವಾಲ್ಮಾರ್ಟ್, ಅಮೆಜಾನ್ ಕಂಪನಿಗಳಿಗೆ ಆರಂಭದ ನಾಲ್ಕೈದು ವರ್ಷಗಳಲ್ಲಿ ನಷ್ಟವಾದರೂ ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೆ. ಅಮೆರಿಕದಲ್ಲಿನ ಈ ಕಂಪನಿಗಳ ಈಗಿನ ವಹಿವಾಟಿನ ಪ್ರಮಾಣಕ್ಕೆ ಹೋಲಿಸಿದರೆ, ಭಾರತದಲ್ಲಿ ಈ ಕಂಪನಿಗಳು ಮಾಡುತ್ತಿರುವ ಹೂಡಿಕೆ ಪ್ರಮಾಣ ಅತ್ಯಲ್ಪವೇ. ಹೀಗಾಗಿ, ಅಮೆರಿಕದಲ್ಲಿ ದಕ್ಕಿದ ಲಾಭದ ಅಲ್ಪಭಾಗವನ್ನು ತಂದು ಭಾರತದಲ್ಲಿ ಸುರಿಯುತ್ತವೆ. ಡೋಗ್ ಮೆಕ್ಮಿಲನ್ ಮುನ್ನಡೆಸುತ್ತಿರುವ ವಾಲ್ಮಾರ್ಟ್, 2017ನೇ ಸಾಲಿನಲ್ಲಿ 50 ಬಿಲಿಯನ್ ಡಾಲರ್ ವಹಿವಾಟು ನಡೆಸಿ, 12 ಬಿಲಿಯನ್ ಒಟ್ಟು ಲಾಭಾಂಶ ಗಳಿಸಿದೆ. ಅಮೆಜಾನ್ 2017ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ 1.9 ಬಿಲಿಯನ್ ಡಾಲರ್ ನಿವ್ವಳ ಲಾಭ ಗಳಿಸಿದೆ.

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಮೂಲಕ ಭಾರತಕ್ಕೆ ಬರಲು ‘ಚಿಲ್ಲರೆ ದೈತ್ಯ’ ವಾಲ್ಮಾರ್ಟ್ ಹವಣಿಕೆ

ವಾಲ್ಮಾರ್ಟ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ.77ರಷ್ಟು ಪಾಲು ಪಡೆದಿದ್ದರೂ ತನ್ನ ವಹಿವಾಟನ್ನು ಫ್ಲಿಪ್‌ಕಾರ್ಟ್‌ ಹೆಸರಿನಲ್ಲೇ ವಿಸ್ತರಿಸಲಿದೆ. ಕ್ಯಾಶ್ ಅಂಡ್ ಕ್ಯಾರಿ ವಹಿವಾಟನ್ನು ಭಾರತಕ್ಕೆ ಈಗಾಗಲೇ ವಿಸ್ತರಿಸಿರುವ ವಾಲ್ಮಾರ್ಟ್, ಫ್ಲಿಪ್‌ಕಾರ್ಟ್‌ನ ಮೂಲವಾಗಿರುವ ಇ-ವಹಿವಾಟನ್ನು ವಿಸ್ತರಿಸಲಿದೆ. ಜೊತೆಜೊತೆಗೆ ತನ್ನ ಮೂಲ ವಹಿವಾಟಾಗಿರುವ ಚಿಲ್ಲರೆ ವ್ಯಾಪಾರವನ್ನು ಭಾರತದಲ್ಲಿ ಪ್ರಾರಂಭಿಸಲಿದೆ. ವಾಲ್ಮಾರ್ಟ್‌ನ ವ್ಯಾಪಾರದ ಆಸಕ್ತಿ ಇರುವುದು ಚಿಲ್ಲರೆ ವ್ಯಾಪಾರದಲ್ಲೇ. ಫ್ಲಿಪ್‌ಕಾರ್ಟ್‌ ಮೂಲಕ ಅದು ತನ್ನ ಚಿಲ್ಲರೆ ವ್ಯಾಪಾರವನ್ನು ಭಾರತದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಒಂದು ಕಡೆ ಆನ್‌ಲೈನ್ ಖರೀದಿದಾರರಿಗೆ ಅನುಕೂಲವಾಗುವಂತೆಯೇ, ವಾಲ್ಮಾರ್ಟ್ ಚಿಲ್ಲರೆ ವ್ಯಾಪಾರ ವಿಸ್ತರಿಸುವುದರಿಂದ ನೇರ ಖರೀದಿದಾರರಿಗೂ ಲಾಭವಾಗಲಿದೆ. ಆದರೆ, ಭಾರತದಲ್ಲಿ ಚಿಲ್ಲರೆ ವ್ಯಾಪಾರವನ್ನೇ ವೃತ್ತಿ ಮಾಡಿಕೊಂಡಿರುವ ಕೋಟ್ಯಂತರ ಜನರಿಗೆ ಸುದೀರ್ಘ ಕಾಲದಲ್ಲಿ ಸಂಕಷ್ಟ ಎದುರಾಗಬಹುದು. ಆದರೆ, ಸಂಕಷ್ಟ ಅಷ್ಟು ಬೇರ ಬರಲಿಕ್ಕಿಲ್ಲ.

ವಾಲ್ಮಾರ್ಟ್-ಅಮೆಜಾನ್ ಜಿದ್ದಾಜಿದ್ದಿ ನಡುವೆಯೂ ಭಾರತದಲ್ಲಿ ಹಲವು ಇ-ಕಾಮರ್ಸ್ ಕಂಪನಿಗಳು ತಮ್ಮ ವಹಿವಾಟು ವಿಸ್ತರಿಸುತ್ತಿವೆ. ಆನ್‌ಲೈನ್‌ನಲ್ಲಿ ದಿನಸಿ ಪದಾರ್ಥ ಮಾರಾಟ ಮಾಡುತ್ತಿರುವ ಇ-ಬಾಸ್ಕೆಟ್, ಗೃಹೋಪಯೋಗಿ ಪೀಠೋಪಕರಣ ಮಾರಾಟ ಮಾಡುತ್ತಿರುವ ಪೆಪ್ಪರ್ಫ್ರೈ, ಅರ್ಬನ್ ಲ್ಯಾಟರ್, ಚಿನ್ನದ ಆಭರಣ ಮಾರಾಟ ಮಾಡುತ್ತಿರುವ ಬ್ಲೂಸ್ಟೋನ್, ಕ್ಯಾರಟ್ ಲೇನ್ ಉತ್ತಮ ವಹಿವಾಟು ನಡೆಸುತ್ತಿವೆ. ವಸ್ತುಕೇಂದ್ರಿತ ವಹಿವಾಟು ನಡೆಸುವುದರಿಂದ ಈ ಕಂಪನಿಗಳಿಗೆ ಗ್ರಾಹಕರ ಮರುಖರೀದಿ ಸಾಧ್ಯತೆ ಹೆಚ್ಚಿದೆ. ಆದರೆ, ಈ ಕಂಪನಿಗಳ ಮಾರುಕಟ್ಟೆ ಪಾಲು ಅತ್ಯಲ್ಪ. ಬರುವ ದಿನಗಳಲ್ಲಿ ಈ ಕಂಪನಿಗಳನ್ನು ವಾಲ್ಮಾರ್ಟ್ ಅಥವಾ ಅಮೆಜಾನ್ ಖರೀದಿಸಲೂಬಹುದು.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More