ನ್ಯಾಯಾಂಗದ ವಿಶ್ವಾಸಾರ್ಹತೆಗೆ ಮತ್ತೊಂದು ಪೆಟ್ಟು ಕೊಟ್ಟ ಗಣಿ ಲಂಚ ಪ್ರಕರಣ

ಇತ್ತೀಚಿನ ಕೆಲವು ವರ್ಷಗಳಲ್ಲಿ ಮೇಲಿಂದ ಮೇಲೆ ಪೆಟ್ಟು ತಿಂದು ಸಾಕಷ್ಟು ಘಾಸಿಗೊಂಡಿರುವ ದೇಶದ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಇದೀಗ, ಸಿಜೆಐ ಗಣಿ ಲಂಚ ಪ್ರಕರಣ ಮತ್ತೊಂದು ಬಲವಾದ ಪೆಟ್ಟು ನೀಡಿದೆ. ಈ ಹಿನ್ನೆಲೆಯಲ್ಲಿ ಬಿರುಸಾಗಿರುವ ಚರ್ಚೆಗಳತ್ತ ಇಣುಕುನೋಟ ಇಲ್ಲಿದೆ

ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಯ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮಗಳ ಕುರಿತ ಪ್ರಕರಣದ ವಿಷಯದಲ್ಲಿ ಅನುಕೂಲಕರ ತೀರ್ಪು ಪಡೆಯಲು ಮುಖ್ಯನ್ಯಾಯಮೂರ್ತಿ ಕೆ ಜೆ ಬಾಲಕೃಷ್ಣನ್‌ ಅವರಿಗೆ ೧೬೦ ಕೋಟಿ ರೂ. ಲಂಚ ನೀಡುವ ಕುರಿತ ಮಾತುಕತೆಯ ವೀಡಿಯೋ ಬಹಿರಂಗವಾಗುತ್ತಲೇ ರೆಡ್ಡಿ ಸಹೋದರರ ಹಗರಣಗಳು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಬಂದಿವೆ. ಗಣಿಗಾರಿಕೆ ಅಕ್ರಮಗಳು, ಗಡಿ ಬದಲಿಸಿದ ಪ್ರಕರಣ, ಸಿಬಿಐ ಹೂಡಿದ ದಾವೆಗಳು, ಎಸ್‌ಐಟಿ ತನಿಖೆಯಲ್ಲಿ ಕಂಡುಬಂದ ಕಾನೂನು ಉಲ್ಲಂಘನೆ, ಜಾಮೀನು ಪಡೆಯಲು ಸಿಬಿಐ ನ್ಯಾಯಾಧೀಶರಿಗೇ ಲಂಚ ನೀಡಿದ್ದು, ಸೇರಿದಂತೆ ರೆಡ್ಡಿ ಪಡೆಯ ಹಲವು ಅಂದಾದುಂದಿಯ ವ್ಯವಹಾರಗಳು ಮತ್ತೊಮ್ಮೆ ಜನರ ಕಣ್ಣಮುಂದೆ ಹಾದುಹೋಗುತ್ತಿವೆ.

ರೆಡ್ಡಿ ದರ್ಬಾರಿನ ಆ ದಿನಗಳ ಕುರಿತ ಈ ಹೊಸ ವೀಡಿಯೋ, ಅಷ್ಟಕ್ಕೇ ಸೀಮಿತವಾಗಿದ್ದರೆ ಬಹುಶಃ ಅದರ ಕುರಿತು ಇದೀಗ ರಾಷ್ಟ್ರಮಟ್ಟದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರಲಿಲ್ಲವೇನೋ. ಆದರೆ, ಆ ವೀಡಿಯೋ ಕೇವಲ ಕರ್ನಾಟಕ- ಆಂಧ್ರದ ಅದಿರು ಲೂಟಿ ಹೊಡೆದ ಒಂದು ಪ್ರಭಾವಿ ಸಮೂಹದ ಅಕ್ರಮಗಳ ಕುರಿತು ಮಾತ್ರ ಹೇಳುತ್ತಿಲ್ಲ. ಬದಲಾಗಿ, ಸಿಜೆಐನಂತಹ ಭಾರತೀಯ ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಗೇ ಲಂಚದ ಆಮಿಷವೊಡ್ಡಿ ತನಗೆ ಬೇಕಾದ ತೀರ್ಪು ಪಡೆಯುವ ಈ ವರಸೆ ದೇಶದ ನ್ಯಾಯಾಂಗ ವ್ಯವಸ್ಥೆಗೇ ಮಸಿ ಬಳಿದಿದೆ.

ಅದರಲ್ಲೂ ಭಾರತದ ಸಿಜೆಐ ಅವರ ಅಳಿಯನ ಮೂಲಕವೇ ಈ ವ್ಯವಹಾರ ನಡೆದಿದೆ ಎಂಬುದಕ್ಕೆ ವೀಡಿಯೋದಲ್ಲೇ ಸಾಕ್ಷಿ ಇದೆ. ರೆಡ್ಡಿಗಳ ಪರವಾಗಿ ಬಾಲನ್ ಎಂಬಾತ ಸಿಜೆಐ ಅಳಿಯ ಶ್ರೀರಂಜಿನ್ ಮೂಲಕ ನಡೆಸಿದ ವ್ಯವಹಾರದ ಕುರಿತ ಮಾತುಕತೆಯ ಅಂಶಗಳು ಕೂಡ ದೃಶ್ಯದಲ್ಲಿ ಸೆರೆಯಾಗಿವೆ.

ಜನಾರ್ಧನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಯ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ೨೦೦೯ರಲ್ಲಿ ಆ ಕಂಪನಿಯ ಗಣಿಗಾರಿಕೆಯನ್ನು ರದ್ದು ಮಾಡಿತ್ತು. ಆ ಕುರಿತ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ ಮುಂದೆ ನಡೆಯುತ್ತಿರುವ ವೇಳೆ ೨೦೧೦ರಲ್ಲಿ ಅಂದಿನ ಸಿಜೆಐ ಬಾಲಕೃಷ್ಣನ್‌ ಅವರನ್ನು ಪ್ರಭಾವಿಸಲು ಈ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ‌

ಸುಪ್ರೀಂಕೋರ್ಟ್ ಸಿಜೆಐನಂತಹ ದೇಶದ ನ್ಯಾಯಾಂಗದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲ ದಲಿತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನ್ಯಾ. ಕೆ ಜೆ ಬಾಲಕೃಷ್ಣನ್‌ ಅವರ ವಿರುದ್ಧ ಈ ವೀಡಿಯೋದ ಮೂಲಕ ದೊಡ್ಡ ಮಟ್ಟದ ಆರೋಪ ಕೇಳಿಬಂದಂತಾಗಿದೆ. ಆದರೆ, ಇದೇನೂ ಅವರ ವಿರುದ್ಧ ಕೇಳಿಬರುತ್ತಿರುವ ಮೊದಲ ಪ್ರಕರಣ ಅಲ್ಲ. ಈ ಹಿಂದೆ ಅವರು ಸಿಜೆಐ ಆಗಿರುವಾಗಲೇ ಅಕ್ರಮ ಆಸ್ತಿಯ ಆರೋಪಗಳು ಕೇಳಿಬಂದಿದ್ದವು. ೨೦೦೯ರಲ್ಲಿ ಅಂದಿನ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಡಿ ವಿ ಶೈಲೇಂದ್ರ ಅವರು ಸಿಜೆಐ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅಲ್ಲದೆ, ನ್ಯಾ. ಕರ್ಣನ್ ಪ್ರಕರಣದಲ್ಲಿಯೂ ಅವರ ಹೆಸರು ಕೇಳಿಬಂದಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ, ಸಿಜೆಐ ಸ್ಥಾನದಿಂದ ನಿವೃತ್ತರಾಗುತ್ತಲೇ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾನವಹಕ್ಕು ಆಯೋಗದ ಹೊಣೆಗಾರಿಕೆಯ ವಹಿಸಿಕೊಳ್ಳುವ ಮೂಲಕ ನ್ಯಾಯಾಂಗದ ಘನತೆಗೆ ಮಸಿ ಬಳಿದಿದಿದ್ದಾರೆ ಎಂಬ ಗಂಭೀರ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು.

ಹಾಗೆ ನೋಡಿದರೆ, ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಒಡೆಯುತ್ತಿರುವ ಇಂತಹ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ಅಪರೂಪವೇನಲ್ಲ.

ಇದೇ ಗಣಿ ರೆಡ್ಡಿಗಳ ವಿಷಯದಲ್ಲಿ ಜಾಮೀನಿಗಾಗಿ ೧೦ ಕೋಟಿ ರೂ. ಲಂಚ ಪಡೆದ ಆರೋಪದ ಮೇಲೆ ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿರಾಮ ರಾವ್, ಮತ್ತು ಇತರ ಇಬ್ಬರು ಜಿಲ್ಲಾ ನ್ಯಾಯಧೀಶರಾದ ಪ್ರಭಾಕರ ರಾವ್ ಹಾಗೂ ಲಕ್ಷ್ಮೀನರಸಿಂಹರಾವ್ ಅವರನ್ನು ೨೦೧೦ರಲ್ಲಿ ಎಸಿಬಿ ಬಂಧಿಸಿತ್ತು. ಆ ಪೈಕಿ ಪ್ರಭಾಕರ ರಾವ್ ೨೦೧೬ರಲ್ಲಿ ತಮ್ಮ ನಿವಾಸದಲ್ಲಿ ಅಸಹಜ ಸಾವುಕಂಡಿದ್ದರು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಅದಾದ ಬಳಿಕ, ಇತ್ತೀಚೆಗೆ ಉತ್ತರಪ್ರದೇಶ ಮೂಲದ ಪ್ರಸಾದ್ ಎಜ್ಯುಕೇಶನ್ ಟ್ರಸ್ಟ್ ಪ್ರಕರಣದಲ್ಲಿ ಲಂಚ ಪಡೆದ ಆರೋಪದ ಮೇಲೆ ಸಿಬಿಐ ಒರಿಸ್ಸಾ ಹೈಕೋರ್ಟ್ ನ್ಯಾಯಾಧೀಶ ಐ ಎಂ ಖುದ್ದುಸಿ ಅವರನ್ನು ಬಂಧಿಸಿತ್ತು. ಅಲ್ಲದೆ, ಈ ಪ್ರಕರಣದ ವಿಷಯದಲ್ಲಿ ಸ್ವತಃ ಸುಪ್ರೀಂಕೋರ್ಟಿನ ಉನ್ನತ ನ್ಯಾಯಮೂರ್ತಿಗಳ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು. ಈ ಪ್ರಕರಣದ ವಿಷಯದಲ್ಲಿ ಸುಪ್ರೀಂಕೋರ್ಟ್ ನ್ಯಾ. ಚಲಮೇಶ್ವರ್ ನೀಡಿದ್ದ ತೀರ್ಪನ್ನು ಸಿಜೆಐ ಮಿಶ್ರಾ ರದ್ದುಪಡಿಸಿ, ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದರು. ಆ ಹಿನ್ನೆಲೆಯಲ್ಲಿ ಸ್ವತಃ ಸಿಜೆಐ ನಡೆ ಶಂಕೆಗೆ ಗುರಿಯಾಗಿತ್ತು. ಇತ್ತೀಚಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ವಾಗ್ಡಂಡನೆ ನಿಲುವಳಿ ಸೂಚನೆಯಲ್ಲಿಯೂ ಈ ಪ್ರಕರಣವನ್ನು ಹೆಸರಿಸಲಾಗಿತ್ತು.

ಹಾಗೆಯೇ, ಗುಜರಾತಿನ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ ಎಚ್ ಲೋಯಾ ಅವರ ನಿಗೂಢ ಸಾವಿನ ವಿಷಯದಲ್ಲಿಯೂ ನ್ಯಾಯಾಂಗದ ಮೇಲಿನ ಜನಸಾಮಾನ್ಯರ ವಿಶ್ವಾಸ ಕುಸಿದುಬಿದ್ದಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದ ಎನ್‌ಕೌಂಟರ್ ಪ್ರಕರಣದ ಅಂತಿಮ ವಿಚಾರಣೆಯ ಹಂತದಲ್ಲಿ ನ್ಯಾ. ಲೋಯಾ ದಿಢೀರ್ ಸಾವಿಗೀಡಾಗಿದ್ದು ಹಲವು ಶಂಕೆಗಳಿಗೆ ಕಾರಣವಾಗಿತ್ತು. ಆದರೆ, ಇತ್ತೀಚೆಗೆ ಲೋಯಾ ಸಾವಿನ ಕುರಿತ ಪ್ರಕರಣದ ತೀರ್ಪು ನೀಡಿರುರವ ಸುಪ್ರೀಂಕೋರ್ಟ್ ಅದೊಂದು ಸಹಜ ಸಾವು, ಆ ಬಗ್ಗೆ ಪ್ರತ್ಯೇಕ ಸ್ವತಂತ್ರ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದೆ.

ಈ ಹಿಂದೆ ೨೦೧೧ರಲ್ಲಿ ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ಪಿ ಡಿ ದಿನಕರನ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳು ಕೇಳಿಬಂದಾಗ, ಅವರ ವಿರುದ್ಧ ನ್ಯಾಯಾಂಗ ತನಿಖೆ ಆರಂಭಿಸಲಾಗಿತ್ತು. ಅದಾದ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ವರ್ಷ, ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸೌಮಿತ್ರ ಸೇನ್ ವಿರುದ್ಧವೂ ಆದಾಯ ಮೀರಿದ ಗಳಿಕೆ ಹಾಗೂ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪಗಳು ಕೇಳಿಬಂದಿದ್ದವು. ಆ ಕುರಿತ ವಾಗ್ಧಂಡನೆ ಪ್ರಕ್ರಿಯೆ ಆರಂಭವಾಗುತ್ತಲೇ ಅವರು ರಾಜೀನಾಮೆ ನೀಡಿದ್ದರು. ಅದಕ್ಕೂ ಮುನ್ನ, ೧೯೯೩ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶ ವಿ ರಾಮಸ್ವಾಮಿ ವಿರುದ್ಧವೂ ಭ್ರಷ್ಟಾಚಾರದ ಆರೋಪದಡಿ ವಾಗ್ಡಂಡನೆಗೆ ಪ್ರಯತ್ನಿಸಲಾಗಿತ್ತು. ಆದರೆ, ಲೋಕಸಭೆಯಲ್ಲಿ ಅಗತ್ಯ ಬಹುಮತ ಸಿಗದೆ ವಾಗ್ದಂಡನೆ ಪ್ರಕ್ರಿಯೆ ಅರ್ಧಕ್ಕೇ ಮುರಿದುಬಿದ್ದಿತ್ತು.

ಇದನ್ನೂ ಓದಿ : ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅವಕಾಶವಿಲ್ಲ: ಸುಪ್ರೀಂ ಪುನರುಚ್ಚಾರ

ಈ ಎಲ್ಲಾ ನಿರ್ದಿಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಬಲವಾದ ಪೆಟ್ಟು ನೀಡಿದ ಘಟನೆ ಎಂದರೆ; ಕಳೆದ ಜನವರಿಯಲ್ಲಿ ಸ್ವತಃ ನ್ಯಾಯಾಂಗದ ಘನತೆಯನ್ನು ಕಾಯಬೇಕಾದ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗವಾಗಿ ಮಾಡಿದ ಟೀಕೆಗಳು. ಪತ್ರಿಕಾಗೋಷ್ಠಿಯಲ್ಲಿ ಅವರು ಆಡಿದ ಮಾತುಗಳು, ದೇಶದ ನ್ಯಾಯಾಂಗ ವ್ಯವಸ್ಥೆ, ಅದರಲ್ಲೂ ನ್ಯಾಯಾಂಗದ ಅಂತಿಮ ಭರವಸೆಯಾದ ಸುಪ್ರೀಂಕೋರ್ಟ್‌ ಸರ್ಕಾರದ ಆಣತಿಯಂತೆ ಕೆಲಸ ಮಾಡುತ್ತಿದೆ. ಪ್ರಕರಣಗಳ ವಿಚಾರಣೆಯ ಹಂಚಿಕೆ, ನ್ಯಾಯಪೀಠಗಳ ರಚನೆ, ನ್ಯಾಯಾಧೀಶರ ನೇಮಕ ಸೇರಿದಂತೆ ಹಲವು ವಿಷಯಗಳಲ್ಲಿ ನ್ಯಾಯಾಂಗದ ಆಡಳಿತ ಮತ್ತು ಕಲಾಪದಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ. ಸ್ವತಃ ಉನ್ನತ ನ್ಯಾಯಮೂರ್ತಿಗಳೇ ಸರ್ಕಾರದ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗಾಗಿ ದೇಶದ ನ್ಯಾಯಾಂಗ ವ್ಯವಸ್ಥೆಯಷ್ಟೇ ಅಲ್ಲ, ಇಡೀ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿ, ಕಣ್ಣೀರಿಟ್ಟಿದ್ದರು.

ಹೀಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮೇಲಿಂದ ಮೇಲೆ ಪೆಟ್ಟು ತಿಂದು ಸಾಕಷ್ಟು ಘಾಸಿಗೊಂಡಿರುವ ದೇಶದ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಇದೀಗ, ಗಣಿ ರೆಡ್ಡಿಗಳು ಸ್ವತಃ ಸಿಜೆಐಗೇ ಲಂಚ ನೀಡಿದ್ದರು ಎಂಬ ಹೊಸ ಪ್ರಕರಣ ಮತ್ತೊಂದು ಬಲವಾದ ಪೆಟ್ಟು ನೀಡಿದೆ. ದೇಶದ ಜನಸಾಮಾನ್ಯರ ಹಿತ ಕಾಯಬೇಕಾದ ಆಡಳಿತರೂಢ ಸರ್ಕಾರಗಳು ಕಾರ್ಪೊರೇಟ್ ಕುಳಗಳ ಪರ ವಕಾಲತು ವಹಿಸುತ್ತಿರುವ, ಅವರಿಗೆ ಅನುಕೂಲಕರ ನೀತಿಗಳನ್ನು ಅನುಸರಿಸುತ್ತಿರುವ ಹೊತ್ತಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತಕಾಯಬೇಕಾದ ನ್ಯಾಯಾಂಗವೇ ಹೀಗೆ ಪೆಟ್ಟಿನ ಮೇಲೆ ಪಟ್ಟು ತಿಂದು ಜನರ ಕಣ್ಣಲ್ಲಿ ದುರ್ಬಲನಾಗುವುದು ಅತ್ಯಂತ ಅಪಾಯಕಾರಿ, ಅಷ್ಟೇ ಅಲ್ಲ; ಅನಾಹುತಕಾರಿ ಬೆಳವಣಿಗೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More