ಪೆಟ್ರೋಲ್, ಡಿಸೇಲ್ ದರ ಭಾನುವಾರದಿಂದ ದುಬಾರಿ! ಶೇ.5ರಷ್ಟು ಏರಿಕೆ?

ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಸ್ಥಿರವಾಗಿತ್ತು. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಬೆಲೆ ಏರಿಕೆಗೆ ತಡೆಯೊಡ್ಡಿತ್ತು. ಶನಿವಾರ ಮತದಾನ ಮುಗಿಯುತ್ತಿದೆ. ಭಾನುವಾರದಿಂದ ದರ ಏರಿಕೆಯ ಹೊರೆ ಹೊರಲು ಸಿದ್ದರಾಗಿ!

ಶನಿವಾರ ಮತದಾನ ಮಾಡಿ ಸಮಾಧಾನದ ನಿಟ್ಟುಸಿರು ಬಿಡುವ ಮತದಾರರಿಗೆ ಮತ್ತೊಂದು ಆಘಾತ ಕಾದಿದೆ. ಎರಡು ವಾರಗಳಿಂದ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಭಾನುವಾರದಿಂದ ಏರಲಿದೆ. ಐಒಸಿ ಮೂಲಗಳ ಪ್ರಕಾರ, ದರ ಏರಿಕೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರಕ್ಕೆ ಸಮಾನವಾಗಿರುತ್ತದೆ. ಅಂದರೆ, ಕಳೆದ ಎರಡು ವಾರಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಎಷ್ಟು ಏರಿದೆಯೋ ಅದಕ್ಕೆ ಪೂರಕವಾಗಿ ದರ ನಿಗದಿ ಮಾಡಲಾಗುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ನಿತ್ಯವೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರಕ್ಕೆ ಅನುಗುಣವಾಗಿ ಏರಿಳಿಯುತ್ತಿದೆ. ಆದರೆ, ಜಾಗತಿಕ ರಾಜಕೀಯ ಅಸ್ಥಿರತೆ ಮತ್ತಿತರ ಕಾರಣಗಳಿಗಾಗಿ ತೈಲ ದರ ಏರುಹಾದಿಯಲ್ಲಿಯೇ ಇದೆ. ಹೀಗಾಗಿ, ನಿತ್ಯವೂ 10 ಪೈಸೆಯಿಂದ 50 ಪೈಸೆವರೆಗೂ ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಬಂದಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿನ ದರವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲೇ ಇದೆ.

ಏಪ್ರಿಲ್ 27ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪ್ರತಿ ಬ್ಯಾರೆಲ್ ಗೆ 67.05 ಡಾಲರ್ ಇತ್ತು. ಶುಕ್ರವಾರ ದಿನದ ವಹಿವಾಟಿನಲ್ಲಿ ಗರಿಷ್ಠ ದರ 71.63 ಡಾಲರ್ ಇತ್ತು. ಈ ಅವಧಿಯಲ್ಲಿ ಕಚ್ಚಾತೈಲ ದರ ಏರಿಕೆ ಪ್ರತಿ ಬ್ಯಾರೆಲ್ ಗೆ 3.98 ಡಾಲರ್. ಅಂದರೆ, ಈ ಅವಧಿಯಲ್ಲಿ ಏರಿರುವ ಪ್ರಮಾಣ ಶೇ.5.88ರಷ್ಟು.

ಏಪ್ರಿಲ್ 27ರಂದು ಸ್ಥಿರವಾಗಿದ್ದ ಪೆಟ್ರೋಲ್ ದರ 75.82 ರುಪಾಯಿ. ಡಿಸೇಲ್ ದರ 65.05 ರುಪಾಯಿ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ದರಕ್ಕೆ ಪೂರಕವಾಗಿ ಶೇ.5.88ರಷ್ಟು ಏರಿಕೆ ಮಾಡಿದರೆ, ಪೆಟ್ರೋಲ್‌ಗೆ 4.45 ರುಪಾಯಿ ಹೆಚ್ಚಳವಾಗುತ್ತದೆ. ಡಿಸೇಲ್ ದರ 3.94 ರುಪಾಯಿ ಹೆಚ್ಚಳವಾಗುತ್ತದೆ. ಅಂದರೆ, ಗ್ರಾಹಕರು ಈಗ ತೆರಬೇಕಾಗುವ ದರ ಪೆಟ್ರೋಲ್‌ಗೆ 80.27, ಡೀಸೆಲ್‌ಗೆ 68.99 ರುಪಾಯಿ.

ಒಂದೇ ದಿನ ಇಷ್ಟು ಪ್ರಮಾಣದಲ್ಲಿ ದರ ಏರಿಸುವ ಸಾಧ್ಯತೆ ಇಲ್ಲ. ಕಳೆದ ಎರಡು ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಸ್ಥಿರವಾಗಿದ್ದ ದರದ ವಾಸ್ತವಿಕ ಏರಿಕೆಯನ್ನು ಮುಂದಿನ ಎರಡು ವಾರಗಳಲ್ಲಿ ಸಮಾನವಾಗಿ ಹಂಚಿಕೆ ಮಾಡಿ ಏರಿಕೆ ಮಾಡುವ ತಂತ್ರವೂ ಇದೆ. ಹೀಗೆ ಮಾಡುವುದರಿಂದ ಗ್ರಾಹಕರಿಗೆ ಒಂದೇ ಭಾರಿ ಹೆಚ್ಚಿನ ಹೊರೆ ಆಗದೇ ದರ ಏರಿಕೆಯನ್ನು ಅರಗಿಸಿಕೊಳ್ಳಬಲ್ಲರು. ಈಗಲೂ ತೈಲ ಮಾರುಕಟ್ಟೆ ಕಂಪನಿಗಳು ಅನುಸರಿಸುತ್ತಿರುವುದು ಇದೇ ನೀತಿ.

ಹೀಗಾಗಿ ಭಾನುವಾರ ಪೆಟ್ರೋಲ್ ದರ ಏರಿಕೆಗೆ ಗ್ರಾಹಕರು ಸಿದ್ದರಾಗಬೇಕು. ಒಂದು ವೇಳೆ, ಈ ಎರಡು ವಾರಗಳಲ್ಲಿ ಆಗಿರುವ ನಷ್ಟವನ್ನು ತಗ್ಗಿಸಿಕೊಳ್ಳಲು ಒಂದೇ ಬಾರಿಗೆ ಏರಿಕೆ ಮಾಡಿದರೆ ಪೆಟ್ರೋಲ್ 88.27 ಮತ್ತು ಡಿಸೇಲ್ 68.99 ರುಪಾಯಿಗೆ ಏರಿರುತ್ತದೆ. ಆ ಶಾಕ್ ತಡೆದುಕೊಳ್ಳಲು ಗ್ರಾಹಕರು ಈಗಲೇ ಸಿದ್ದತೆ ಮಾಡಿಕೊಳ್ಳಬೇಕು!

ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ, ಸ್ಥಿರವಾಗಿರುವ ದರವನ್ನು ಕಾಯ್ದುಕೊಳ್ಳಬಹುದು. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತವಾಗಿ ಕುಸಿದು ಪ್ರತಿ ಬ್ಯಾರೆಲ್ ಗೆ 29 ಡಾಲರ್ ಗೆ ಇಳಿದಾಗಲೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿದಿರಲಿಲ್ಲ. ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಕಚ್ಚಾತೈಲ ದರ ಇಳಿಕೆಯ ಲಾಭವನ್ನು ಎಂದು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ಇದನ್ನೂ ಓದಿ : ಕರ್ನಾಟಕ ಚುನಾವಣೆ ಮುಗಿಯುವವರೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಇಲ್ಲ?

ಬದಲಿಗೆ, ಒಂಬತ್ತು ಬಾರಿ ಎಕ್ಸೈಜು ಸುಂಕವನ್ನು ಹೇರಿಕೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಯುವುದನ್ನು ತಪ್ಪಿಸಿತ್ತು. ಇಡೀ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಎಕ್ಸೈಜ್ ಸುಂಕ ತಗ್ಗಿಸಿದ್ದು ಒಂದೇ ಬಾರಿ.

ಒಂಬತ್ತು ಬಾರಿ ಎಕ್ಸೈಜ್ ಸುಂಕ ಏರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಎಕ್ಸೈಜ್ ಸುಂಕ ತಗ್ಗಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡೀಸೆಲ್ ಅನ್ನು 60 ರುಪಾಯಿ ಮತ್ತು 45 ರುಪಾಯಿಗೆ ಈಗಲೂ ನೀಡಬಹುದು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಬೇಕಷ್ಟೆ. ಅತ್ಯಂತ ಸನಿಹದಲ್ಲಿ ಯಾವುದೇ ಪ್ರಮುಖ ಚುನಾವಣೆ ಇಲ್ಲದೆ ಇರುವುದರಿಂದ ಎಕ್ಸೈಜ್ ಸುಂಕ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂಬುದು ವಾಸ್ತವ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More