ಅಲಿಗಢ ವಿಶ್ವವಿದ್ಯಾಲಯ ಪದೇಪದೇ ಶಿಕ್ಷಣೇತರ ಕಾರಣಕ್ಕೆ ಸುದ್ದಿ ಆಗುವುದೇಕೆ?

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಬಗ್ಗೆ ಹಿಂದೂ ಸಂಘಟನೆಗಳು ಪದೇಪದೇ ಆಕ್ರೋಶ ವ್ಯಕ್ತಪಡಿಸಲು ಕಾರಣವೇನು? ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾಮುಖ್ಯತೆ ಇದೆ ಎನ್ನುವುದೇ ಹಿಂದುತ್ವ ಸಂಘಟನೆಗಳ ಅಸಮಾಧಾನಕ್ಕೆ ಕಾರಣವೇ ಎಂಬ ಕುರಿತ ‘ಸ್ಕ್ರಾಲ್’ ವಿಶ್ಲೇಷಣೆ ಇಲ್ಲಿದೆ

ಉತ್ತರ ಪ್ರದೇಶದ ಅಲಿಗಢದ ಅಚಲ್ ತಲದ ಸುತ್ತಲೂ ಪ್ರತಿ ಎರಡು ಕಟ್ಟಡದಲ್ಲಿ ಒಂದಕ್ಕೆ ಗೋಪುರವಿರುವುದನ್ನು ಕಾಣಬಹುದು. ಅಸಂಖ್ಯಾತ ಸಣ್ಣ, ದೊಡ್ಡ ದೇಗುಲಗಳು, ಕಿರಿದಾದ ಗಲ್ಲಿಗಳ ಪ್ರಾಂತ್ಯವಿದು. ಕನಿಷ್ಠ ನೂರು ಮಂದಿರಗಳಾದರೂ ಇಲ್ಲಿವೆ ಎನ್ನುವುದು ಗಿಲ್ಹರಾಜ್ ಹನುಮಾನ್ ಮಂದಿರದ ಮುಖ್ಯ ಪುರೋಹಿತರಾದ ಕೌಶಲನಾಥ ಯೋಗಿಯ ಅಭಿಪ್ರಾಯ. ಸಾಮಾನ್ಯವಾಗಿ ಹೆಚ್ಚು ಜನರಿಲ್ಲದ ಈ ದೇವಾಲಯದಲ್ಲಿ ೨೦೧೭ರ ಮಾರ್ಚ್ ನಡುವೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸ್ಥಳೀಯ ಹಿಂದೂಗಳು ಅವರ ನೇತೃತ್ವದ ಸಂಘಟನೆ ಹಿಂದೂ ಯುವವಾಹಿನಿ ಸೇರಲು ನೂಕುನುಗ್ಗಲಿನಲ್ಲಿ ದೇವಾಲಯದಲ್ಲಿ ತುಂಬಿಕೊಂಡಿದ್ದರು. “ಕುಳಿತುಕೊಳ್ಳಲೂ ಜಾಗವಿಲ್ಲದಷ್ಟು ಜನರಿದ್ದರು,” ಎನ್ನುತ್ತಾರೆ ಅಲಿಗಢ, ಹಥ್ರಾಸ್, ಈಥಾ ಮತ್ತು ಕಸಗಂಜ್ ಜಿಲ್ಲೆಗಳಲ್ಲಿ ಹಿಂದೂ ಯುವವಾಹಿನಿಯ ಶಾಖೆಗಳ ನೇತೃತ್ವ ವಹಿಸಿರುವ ಕೌಶಲನಾಥ. ಯುವವಾಹಿನಿಯ ಸದಸ್ಯರಾಗುವುದು ಸರಳವಲ್ಲ ಎನ್ನುವುದು ಕೌಶಲನಾಥ ಅಭಿಪ್ರಾಯ. “ಹಲವರು ಸದಸ್ಯರಾಗಲು ಸಾಧ್ಯವಾಗದೆ ಹಿಂತಿರುಗಿದರು. ಇಷ್ಟು ವರ್ಷಗಳ ಕಾಲ ಸದಸ್ಯತ್ವ ಬೇಡವೆಂದು ದೂರವಿದ್ದವರು ಈಗ ಬಂದಿರುವುದೇಕೆ? ಅವರು ನಮ್ಮ ಜೊತೆಗೆ ದೀರ್ಘಕಾಲ ಇರುತ್ತಾರೆಯೇ ಎಂದು ನಾವು ಪರೀಕ್ಷಿಸುತ್ತೇವೆ. ಹಲವರು ನಮ್ಮ ಕೆಲಸಗಳಿಗೆ ಬೆಂಬಲಿಸಿ ನಮ್ಮ ಜೊತೆಗೂಡುತ್ತಾರೆ,” ಎನ್ನುತ್ತಾರೆ ಕೌಶಲನಾಥ.

ದೇವಾಲಯದಿಂದ ಕೆಲವು ಮೀಟರ್‌ಗಳ ದೂರದಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ವಿಶ್ವ ಹಿಂದೂ ಪರಿಷತ್ ಕಚೇರಿಗಳಿವೆ. ವಿದ್ಯಾರ್ಥಿ ಸಂಘಟನೆಗಳಲ್ಲೂ ಕಳೆದ ಎರಡು ವರ್ಷಗಳಲ್ಲಿ ಸದಸ್ಯತ್ವದ ಸಂಖ್ಯೆ ಏರಿದೆ ಎನ್ನಲಾಗಿದೆ. ಹಿಂದೂ ಜಾಗರಣ ಮಂಚ್ ಎನ್ನುವ ಆರೆಸ್ಸೆಸ್‌ನ ಮತ್ತೊಂದು ಸಂಘಟನೆಯೂ ನಗರದಲ್ಲಿಯೇ ಕಚೇರಿ ಹೊಂದಿದೆ. ಇವುಗಳನ್ನು ಹೊರತುಪಡಿಸಿ ಹಿಂದೂ ಜಾಗರಣ ಸಮಿತಿ, ಧರ್ಮ ಜಾಗರಣ ಮಂಚ್ ಮತ್ತು ವಿಶ್ವ ಹಿಂದೂ ಮಹಾಸಂಘ ಮೊದಲಾದ ಹಲವು ಸಣ್ಣ ಸಂಘಟನೆಗಳ ಶಾಖೆಗಳೂ ಇಲ್ಲಿವೆ. ಈ ಸಂಘಟನೆಗಳ ಸದಸ್ಯರ ಸಂಖ್ಯೆಯೂ ಇತ್ತೀಚೆಗೆ ಏರಿದೆ ಎನ್ನುತ್ತದೆ ‘ಸ್ಕ್ರಾಲ್’ ವರದಿ.

ಈ ಹಿಂದುತ್ವ ಬೆಂಬಲಿಗರ ಜನಸಮೂಹವೇ ಮೇ ೨ರಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಅವರ ಫೋಟೋವನ್ನು ನೇತು ಹಾಕಿದ್ದಕ್ಕಾಗಿ ವಿರೋಧ ವ್ಯಕ್ತಪಡಿಸಿರುವುದು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಕಾರ್ಯಕ್ರಮದಲ್ಲಿ ಘೋಷಣೆಗಳನ್ನು ಕೂಗಿ ಅಬ್ಬರ ಎಬ್ಬಿಸಿ ವಿರೋಧಿಸಿರುವುದು ಕೂಡ ಇದೇ ಸಂಘಟನೆಗಳ ಸದಸ್ಯ ಸಮುದಾಯ ಎನ್ನುವುದು ವಿಶ್ವವಿದ್ಯಾಲಯದ ಅಭಿಪ್ರಾಯ. ವಿದ್ಯಾರ್ಥಿಗಳು ಪೊಲೀಸರಿಗೆ ದೂರು ಸಲ್ಲಿಸಲು ಹೋದರೆ ಪೊಲೀಸ್ ಲಾಠಿ ಚಾರ್ಜ್ ಎದುರಿಸಿದ ಹಿನ್ನೆಲೆಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ತಕ್ಷಣವೇ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಯಾಗಿದೆ ಮತ್ತು ಪ್ರತಿಭಟನೆ ಮುಂದುವರಿದಿದೆ. ಹಿಂದುತ್ವ ಸಂಘಟನೆಗಳು ಮಾತ್ರ ಈ ಆರೋಪಗಳನ್ನು ನಿರಾಕರಿಸಿವೆ. ಹಿಂದೂ ಯುವವಾಹಿನಿ ಮತ್ತು ಎಬಿವಿಪಿ ಸಂಘಟನೆಗಳು ತಾವು ವಿಶ್ವವಿದ್ಯಾಲಯದಲ್ಲಿ ಗಲಭೆ ಪ್ರೇರೇಪಿಸಿಲ್ಲ ಎನ್ನುತ್ತವೆ. ಆದರೆ, ಹಿಂದೂ ಜಾಗರಣ ಮಂಚ್‌ನ ಸೋನು ಸವಿತ ಮೇ ೨ರಂದು ಪ್ರತಿಭಟನೆ ಆಯೋಜಿಸಿ ಪ್ರತಿಕೃತಿ ದಹನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಹಿಂದೂ ಯುವವಾಹಿನಿಯ ಅಲಿಗಢ ಘಟಕವು ೨೦೦೭ರಲ್ಲಿ ಕೌಶಲನಾಥ ಅವರು ವೃಂದಾವನದಿಂದ ಇಲ್ಲಿಗೆ ಬಂದ ನಂತರ ಆರಂಭವಾಗಿದೆ. ಗೋಡೆ ಮೇಲೆ ಆದಿತ್ಯನಾಥರ ಫೋಟೋ ನೇತಾಡುತ್ತಿರುವ ಮಂದಿರದ ತಮ್ಮ ಸಣ್ಣ ಕಚೇರಿಯಲ್ಲಿ ಕುಳಿತು, ಹಿಂದೂ ಯುವವಾಹಿನಿಯ ಚಟುವಟಿಕೆಗಳನ್ನು ಕೌಶಲನಾಥ ನಿಯಂತ್ರಿಸುತ್ತಾರೆ. ಕೌಶಲನಾಥರ ನೇತೃತ್ವದಲ್ಲಿ ಪ್ರತಿ ಜಿಲ್ಲೆಯ ಹಿಂದೂ ಯುವವಾಹಿನಿ ಶಾಖೆಗಳಲ್ಲಿ 1,200-1,400 ಸದಸ್ಯರಿದ್ದಾರೆ. “ನಾವು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದೇವೆ. ನನಗೆ ೧.೧೬ ಲಕ್ಷ ಫೇಸ್ಬುಕ್ ಬೆಂಬಲಿಗರಿದ್ದಾರೆ. ಸರ್ಕಾರಿ ಉದ್ಯೋಗಿಗಳಿಗೆ ಸಂಘಟನೆ ಸೇರುವ ಅವಕಾಶವಿರದ ಕಾರಣ ತಮ್ಮ ಮಕ್ಕಳನ್ನು ಸೇರಿಸುತ್ತಾರೆ,” ಎಂದು ಕೌಶಲನಾಥ ಹೇಳುತ್ತಾರೆ. ಮೇ ೨ರ ಘಟನೆ ನಂತರ ವಿದ್ಯಾರ್ಥಿಗಳು ಆರೋಪಿಗಳ ಬಂಧನಕ್ಕೆ ಒತ್ತಡ ಹೇರುತ್ತಿರುವ ಬಗ್ಗೆ ಕೌಶಲನಾಥರನ್ನು ಪ್ರಶ್ನಿಸಿದರೆ, “ನಾನು ಎಸ್‌ಪಿಯವರ ಬಳಿ ಮಾತನಾಡಿದ್ದೇನೆ,” ಎಂಬ ಉತ್ತರ ಸಿಗುತ್ತದೆ. ಮೇ ೨ರ ದಾಳಿಯಲ್ಲಿ ಎಬಿವಿಪಿ ಸಂಘಟನೆಯವರೆಂದು ಹೇಳಲಾಗಿರುವ ಅಮಿತ್ ಗೋಸ್ವಾಮಿ ಬಂಧನವಾಗಿದೆ. ಆದರೆ, ಸಂಘಟನೆಯ ಅಲಿಗಢ ಮುಖ್ಯಸ್ಥ ಯೋಗೇಂದ್ರ ವರ್ಮಾ ಅವರು, “ಅಮಿತ್ ಗೋಸ್ವಾಮಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದನೇ ವಿನಾ ಎಬಿವಿಪಿಯ ಸದಸ್ಯರಾಗಿರಲಿಲ್ಲ,” ಎಂದು ಹೇಳುತ್ತಾರೆ.

ಎಬಿವಿಪಿಯ ಅಲಿಗಢ ಶಾಖೆ ೧೯೪೯ರ ಜುಲೈನಲ್ಲಿ ಆರಂಭವಾಗಿದೆ. ೨೦೧೫ರವರೆಗೆ ಅದರಲ್ಲಿ 6,600 ಸದಸ್ಯರಿದ್ದರು. ಮರುವರ್ಷ ಈ ಸಂಖ್ಯೆ 8,000ಕ್ಕೆ ಏರಿತು. ೨೦೧೭ರಲ್ಲಿ ಒಟ್ಟು 9,465 ಸದಸ್ಯರಿದ್ದರು. “ನಮ್ಮದೇ ಆದರ್ಶ ಹೊಂದಿರುವ ಸರ್ಕಾರವಿದ್ದಾಗ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ,” ಎನ್ನುತ್ತಾರೆ ಯೋಗೇಂದ್ರ ವರ್ಮಾ.

ಇತರ ಹಿಂದುತ್ವ ಸಂಘಟನೆಗಳಂತಲ್ಲದೆ ಎಬಿವಿಪಿ ಸದಸ್ಯರೆಲ್ಲರೂ ವಿದ್ಯಾರ್ಥಿಗಳು. ಅಲಿಗಢದ ಧರ್ಮ್ ಸಮಾಜ ಪದವಿ ಕಾಲೇಜು, ಶ್ರೀ ವರ್ಷನೆ ಕಾಲೇಜು, ಗಗನ್ ವಾಣಿಜ್ಯ ಮತ್ತು ತಂತ್ರಜ್ಞಾನ ಕಾಲೇಜು, ಜ್ಞಾನ ಮಹಾವಿದ್ಯಾಲಯ ಮತ್ತು ಟಿಕಾರಾಂ ಕನ್ಯಾ ಮಹಾವಿದ್ಯಾಲಯ ಮೊದಲಾದ ಕಾಲೇಜುಗಳ ವಿದ್ಯಾರ್ಥಿಗಳು ಎಬಿವಿಪಿ ಸದಸ್ಯರಾಗಿದ್ದಾರೆ. ಮಥುರಾದವರಾದ ಯೋಗೇಂದ್ರ ವರ್ಮಾ ಎಂಬಿಎ ಪದವೀಧರರಾಗಿದ್ದು, ಖಾಸಗಿಯಾಗಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲಿನ ದಾಳಿಯಲ್ಲಿ ಬಂಧನಕ್ಕೆ ಒಳಗಾದ ಮತ್ತೊಬ್ಬ ವ್ಯಕ್ತಿ ಯೋಗೇಶ್ ವರ್ಷನೆ ಅವರ ಹಿಂದೂ ಜಾಗರಣ ಮಂಚ್ ಸದಸ್ಯತ್ವವನ್ನು ಕಳೆದ ಜನವರಿಯಲ್ಲಿ ರದ್ದು ಮಾಡಲಾಗಿದೆ. ೧೯೩೫ರಲ್ಲಿ ಆರಂಭವಾಗಿರುವ ಹಿಂದೂ ಜಾಗರಣ ವೇದಿಕೆ ೨೦೦-೪೦೦ ಸದಸ್ಯರನ್ನು ಹೊಂದಿದೆ. ೨೦೧೪ರವರೆಗೆ ಕೌಶಲನಾಥರ ಹಿಂದೂ ಜಾಗರಣ ಮಂಚ್ ‘ಘರ್ ವಾಪ್ಸಿ’ ಕಾರ್ಯಕ್ರಮಗಳ ಮೇಲೆ ಒತ್ತು ನೀಡಿತ್ತು. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ತಮ್ಮ ಮೂಲ ಹಿಂದೂ ಧರ್ಮಕ್ಕೆ ಕರೆತರುವ ಕಾರ್ಯಕ್ರಮವಿದು. ಈ ಕಾರ್ಯಕ್ರಮಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

ಹಿಂದೂ ಜಾಗರಣ ಮಂಚ್‌ನಲ್ಲಿ ಇತ್ತೀಚೆಗೆ ಸದಸ್ಯರ ಸಂಖ್ಯೆ ಏರಿಕೆಯಾಗಿಲ್ಲ ಎಂದು ಸವಿತಾ ಹೇಳುತ್ತಾರೆ. ವಿದ್ಯಾರ್ಥಿಗಳು ವ್ಯಾಪಕವಾಗಿ ನಮ್ಮ ಜೊತೆಗೂಡಲು ಬಯಸಿದ್ದಾರೆ ಎನ್ನುವ ಅವರು, ಕಳೆದ ವರ್ಷ ರಂಜಾನ್ ಸಂದರ್ಭದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಆಹಾರ ಕೊಡದೆ ಇರುವ ವಿಚಾರವನ್ನು ಎತ್ತಿರುವುದಾಗಿ ನೆನಪಿಸಿಕೊಂಡರು.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಅಲಿಗಢ ಪರಂಪರೆಯ ಭಾಗವಾಗಿದೆ. ಇಲ್ಲಿ ಅಲಿಗಢದಿಂದ ಹೊರಗೆ ಉತ್ತರ ಪ್ರದೇಶದವರೂ ಅಲ್ಲದ ಸುಮಾರು 35,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ನಲ್ಲಿ ಇದು ಹತ್ತರೊಳಗೆ ಬರುತ್ತದೆ. ಆದರೆ, ಇದು ಮುಸ್ಲಿಂ ಸಮುದಾಯದ ಜೊತೆಗೆ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಣ್ಣು ವಿಶ್ವವಿದ್ಯಾಲಯದ ಮೇಲಿದೆ. ಕೌಶಲನಾಥ ಮತ್ತು ಎಬಿವಿಪಿಯ ಯೋಗೇಂದ್ರ ವರ್ಮಾ ಇಬ್ಬರೂ ವಿಶ್ವವಿದ್ಯಾಲಯ ತಮಗೆ ಅತಿ ಮುಖ್ಯ ಎನ್ನುತ್ತಾರೆ. “ವಿಶ್ವವಿದ್ಯಾಲಯದಲ್ಲಿ ನಮ್ಮ ಶಾಖೆಯಿಲ್ಲ. ಆದರೆ, ಪ್ರಾಂತ್ಯದಲ್ಲಿರುವ ಕೇವಲ ಒಂದೇ ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವ ಕಾರಣದಿಂದ ಅದರ ಮೇಲೆ ಕಣ್ಣಿಟ್ಟಿರುತ್ತೇವೆ,” ಎನ್ನುತ್ತಾರೆ ಯೋಗೇಂದ್ರ ವರ್ಮಾ. ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸಂಸ್ಥೆ ಎನ್ನುವ ಸ್ಥಾನಮಾನ ಕೊಟ್ಟಿರುವುದನ್ನು ಪ್ರಶ್ನಿಸಿ ಪ್ರಚಾರಾಭಿಯಾನ ನಡೆಸುವ ಯೋಜನೆ ಅವರಿಗಿದೆ. ಈ ಸ್ಥಾನಮಾನದಿಂದಾಗಿ ಕೆಲವೇ ಹಿಂದೂಗಳಿಗೆ ವಿಶ್ವವಿದ್ಯಾಲಯದಲ್ಲಿ ಸ್ಥಾನ ಸಿಗುತ್ತಿದೆ ಎನ್ನುತ್ತಾರವರು.

ಇದನ್ನೂ ಓದಿ : ಅಲಿಘಡ ಮುಸ್ಲಿಂ ವಿವಿಯಲ್ಲಿ ಜಿನ್ನಾ ಫೋಟೋ | ಬಿಜೆಪಿ ಸಂಸದನಿಂದ ಆಕ್ಷೇಪ

ಅಲಿಗಢ ವಿಶ್ವವಿದ್ಯಾಲಯ ರಾಷ್ಟ್ರವಿರೋಧಿ ವಿದ್ಯಾರ್ಥಿಗಳಿಗೆ ಸ್ಥಾನ ನೀಡಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಆರೋಪವನ್ನು ಹಿಂದುತ್ವ ಸಂಘಟನೆಗಳು ಹೇರುತ್ತವೆ. “ಭಾರತದಲ್ಲಿ ವಿದ್ಯಾರ್ಥಿಗಳ ಇಸ್ಲಾಮಿಕ್ ಚಳವಳಿ (ಸಿಮಿ) ಅಲಿಗಢದಲ್ಲಿಯೇ ಹುಟ್ಟಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಯಾಕೂಬ್ ಮೆನನ್ ಮತ್ತು ಮೆಮನ್ ವಾನಿ ಮೊದಲಾದವರನ್ನು ಬೆಂಬಲಿಸುತ್ತಾರೆ,” ಎನ್ನುತ್ತಾರೆ ಕೌಶಲನಾಥ. ಸಿಮಿ ಚಟುವಟಿಕೆಗಳನ್ನು ೨೦೦೦ದಲ್ಲಿಯೇ ಭಾರತದಲ್ಲಿ ನಿಷೇಧಿಸಲಾಗಿದೆ. ೨೦೧೫ರಲ್ಲಿ ಮೆಮನ್‌ರನ್ನು, ೧೯೯೩ರ ಮುಂಬೈ ಬಾಂಬ್ ಸ್ಫೋಟದ ಆರೋಪದಲ್ಲಿ ನೇಣಿಗೇರಿಸಲಾಗಿದೆ. ಕೌಶಲನಾಥ್ ಅವರು ವಿಶ್ವವಿದ್ಯಾಲಯವು ಮೆಮನ್‌ನ್ನು ಬೆಂಬಲಿಸುತ್ತದೆ ಎಂದು ಆರೋಪಿಸುತ್ತಾರೆ. “ಮುಸ್ಲಿಂ ಅಧ್ಯಾಪಕರು ತಮ್ಮ ಸಮುದಾಯದ ವಿದ್ಯಾರ್ಥಿಗಳ ಕಡೆಗೆ ತಾರತಮ್ಯ ತೋರಿಸುತ್ತಾರೆ,” ಎಂಬುದು ಯೋಗೇಂದ್ರ ವರ್ಮಾ ಅವರ ಆರೋಪ.

ಆದರೆ, ವಿಶ್ವವಿದ್ಯಾಲಯದಲ್ಲಿ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚಾಗಿ ಹಿಂದುತ್ವ ಸಂಘಟನೆಗಳ ಪ್ರಯತ್ನಗಳಿಗೆ ಬೆಲೆ ನೀಡುವುದಿಲ್ಲ. ರಂಜಾನ್ ಸಮಯದಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಆಹಾರ ಒದಗಿಸುವುದಿಲ್ಲ ಎನ್ನುವ ಹಿಂದುತ್ವ ಸಂಘಟನೆಗಳ ಆರೋಪಕ್ಕೆ ಹಿಂದೂ ವಿದ್ಯಾರ್ಥಿಗಳೇ ವಿರೋಧ ವ್ಯಕ್ತಪಡಿಸಿದ್ದರು. “೧೦೦ಕ್ಕೂ ಕಡಿಮೆ ಮಂದಿ ಆಹಾರ ಸೇವಿಸುವ ಸಂದರ್ಭದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಹಿಂದೂಗಳಿಗೆ ಕಡ್ಡಾಯವಾಗಿ ಉಪವಾಸವನ್ನು ಹೇರಿಲ್ಲ,” ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ವಿದ್ಯಾರ್ಥಿಯೊಬ್ಬರು ಹೇಳಿಕೆ ನೀಡಿದ್ದರು. ಆದರೆ, ಆ ವಿದ್ಯಾರ್ಥಿ ತಮ್ಮ ಹೇಳಿಕೆಗಾಗಿ ಬಹಳ ಟೀಕೆಗಳನ್ನು ಎದುರಿಸಿದ್ದಲ್ಲದೆ, ‘ಸ್ಕ್ರಾಲ್’ ಮಾತನಾಡಿಸಿದಾಗ ಬಹಿರಂಗವಾಗಿ ತಮ್ಮ ಪರಿಚಯ ಹೇಳಿಕೊಳ್ಳಲು ಹಿಂಜರಿದರು.

ಈ ಬಾರಿಯೂ ಮೇ ೨ರ ದಾಳಿಯ ನಂತರ ಹಿಂದೂ ಸಂಘಟನೆಗಳು ಅದೇ ಕತೆಯನ್ನು ಹೇಳುತ್ತವೆ. ವಿಶ್ವವಿದ್ಯಾಲಯ ಸಮುದಾಯ ಹೇಳುವ ಅಭಿಪ್ರಾಯವನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಹಿಂದೂ ಜಾಗರಣ ಮಂಚ್‌ನ ಕಾರ್ಯಕರ್ತರು ಪ್ರತಿಭಟನೆ ಮಾಡಲು ಬಯಸಿದ್ದರೇ ವಿನಾ ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿ ತರುವ ಉದ್ದೇಶವಿರಲಿಲ್ಲ ಎನ್ನುವುದು ಹಿಂದೂ ಸಂಘಟನೆಗಳ ಅಭಿಪ್ರಾಯ. ವಿದ್ಯಾರ್ಥಿಗಳೇ ಹಿಂಸೆಗೆ ಇಳಿದಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಎನ್ನುತ್ತಾರೆ. ಇದೇ ಕಾರಣದಿಂದ ಲಾಠಿ ಚಾರ್ಜ್ ಆಗಿದೆ ಎನ್ನುವುದು ಹಿಂದೂ ಸಂಘಟನೆಗಳ ಹೇಳಿಕೆ. ಲಾಠಿ ಚಾರ್ಜ್‌ನಿಂದ ದೊಂಬಿಯನ್ನು ನಿಯಂತ್ರಿಸಲಾಯಿತು ಎಂದು ಸಮರ್ಥಿಸಿಕೊಳ್ಳುತ್ತಾರೆ. “ವಿದ್ಯಾರ್ಥಿಗಳೇ ಪೊಲೀಸ್ ಮತ್ತು ಫೋಟೋ ಜರ್ನಲಿಸ್ಟ್ ಮೇಲೆ ದಾಳಿ ನಡೆಸಿದ್ದರು,” ಎನ್ನುತ್ತಾರೆ ಸೋನು ಸವಿತಾ. ಈ ನಡುವೆ, ನಗರದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ವಿಚಾರಕ್ಕೂ ಬೆಂಬಲಿಸಲು ಸಿದ್ಧರಿಲ್ಲ ಎಂದು ಕೂಡ ಕೌಶಲನಾಥ ಹೇಳುತ್ತಾರೆ. “ವಿಷಯ ಪರಿಹಾರಕ್ಕಾಗಿ ನಾವು ವಿಧಾನಸಭೆ ಮತ್ತು ಸಂಸತ್ತಿಗೂ ಹೋಗಬಹುದು,” ಎನ್ನುವುದು ಕೌಶಲನಾಥ ಅಭಿಪ್ರಾಯ.

ಆದರೆ, ವಿಶ್ವವಿದ್ಯಾಲಯಕ್ಕೆ ಅಲಿಗಢದ ನಿವಾಸಿಗಳ ಬೆಂಬಲವಿದೆ. ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನಿವಾಸಿಗಳು ನೀರು ಮತ್ತು ಆಹಾರ ಸರಬರಾಜು ಮಾಡಿದ್ದಾರೆ. ಆದರೆ, ನಗರದಲ್ಲಿ ಹಿಂಸೆ ಏರುವ ಆತಂಕ ವಿದ್ಯಾರ್ಥಿ ನಾಯಕರು ಮತ್ತು ಅಧ್ಯಾಪಕರನ್ನು ಕಾಡುತ್ತಿದೆ. ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವಾಸಿಂ ಶೇಖ್ ಖಾನ್ ಅವರ ಪ್ರಕಾರ, ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಉತ್ತಮ ಉದ್ಯಮ ವ್ಯವಹಾರವಿರುವ ಹಿನ್ನೆಲೆಯಲ್ಲಿ ಶಾಂತಿಯುತ ಪರಿಸರವಿರಲಿದೆ. “ಒಂದು ಕಡೆ ಅಶಾಂತಿ ಎದ್ದರೆ, ಮತ್ತೊಂದು ಕಡೆ ಶಾಂತಿ ಪ್ರಯತ್ನವಾಗಲಿದೆ,” ಎನ್ನುತ್ತಾರೆ ಶೇಖ್ ಖಾನ್. ವಿಶ್ವವಿದ್ಯಾಲಯದ ಹಿಂದಿ ಪ್ರೊಫೆಸರ್ ಅಜಯ್ ಬಿಸಾರಿಯಾ ಅವರು ಮಾತ್ರ ಅಶಾಂತಿ ಭುಗಿಲೇಳುವ ಭಯದಲ್ಲಿದ್ದಾರೆ. “ಅರ್ಥ ವ್ಯವಸ್ಥೆಯಿಂದ ಶಾಂತಿ ನಿರೀಕ್ಷಿಸಲಾಗದು. ಎಲ್ಲರೂ ತಮ್ಮ ಮನೆಗಳಲ್ಲಿ ಮತ್ತು ಸಣ್ಣ ಗುಂಪುಗಳಲ್ಲಿ ವ್ಯವಹರಿಸುತ್ತಾರೆ. ಅವರು ಪರಸ್ಪರ ಸಂವಹನವಿರುವ ದೊಡ್ಡ ಗುಂಪುಗಳಲ್ಲಿ ವ್ಯವಹರಿಸುವುದಿಲ್ಲ,” ಎನ್ನುವುದು ಅಜಯ್ ಅಭಿಪ್ರಾಯ.

ಕಳೆದ ಎರಡು ದಶಕಗಳಲ್ಲಿ ಅಲಿಗಢದ ಕ್ಷೇತ್ರವಾರು ವ್ಯಾಪ್ತಿಯೂ ಹೆಚ್ಚಾಗಿದ್ದು, ಸಮುದಾಯಗಳೂ ವಿಸ್ತಾರಗೊಂಡಿವೆ. ೨೦೧೧ರ ಜನಗಣತಿ ಪ್ರಕಾರ, ಅಲಿಗಢದಲ್ಲಿ ಶೇ.5.36ರಷ್ಟು ಹಿಂದೂಗಳು ಮತ್ತು ಶೇ.42.64ರಷ್ಟು ಮುಸ್ಲಿಮರಿದ್ದರು. ಹಳೇ ಪ್ರಾಂತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ಜೊತೆಗೇ ವಾಸವಾಗಿದ್ದರೂ, ಹೊಸದಾಗಿ ಸೇರಿದ ಪ್ರಾಂತಗಳಲ್ಲಿ ಅವರ ನಡುವೆ ಅಂತರ ಹೆಚ್ಚಾಗಿದೆ. ಹಿಂದೂ ಜಾಗರಣ ಮಂಚ್ ಸದ್ಯ ಅಲಿಗಢದ ಹಲವು ಕಾಲನಿಗಳು ಮತ್ತು ಕೊಳೆಗೇರಿಗಳಲ್ಲಿ ಗ್ರಾಮ ರಕ್ಷಾ ಸಮಿತಿಗಳನ್ನು ರಚಿಸಿದೆ. ಹಿಂದೂ ಯುವವಾಹಿನಿ ಸದಸ್ಯರು 10-12 ತಂಡಗಳಲ್ಲಿ ಹಂಚಿಕೊಂಡು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ. ರಂಜಾನ್ ಸಂದರ್ಭದಲ್ಲಿ ಜಾಗರಣೆಯಂತಹ ಕಾರ್ಯಕ್ರಮವನ್ನು ಮೈಕ್‌ಗಳನ್ನು ಹಾಕಿಕೊಂಡು ನಡೆಸುವುದನ್ನು ಹಿಂದುತ್ವ ಸಂಘಟನೆಗಳ ಸಾಧನೆ ಎಂದು ಕೌಶಲನಾಥ್ ಹೇಳಿಕೊಳ್ಳುತ್ತಾರೆ. ಬಿಸಾರಿಯಾ ಹೇಳುವ ಪ್ರಕಾರ, ೧೯೯೦ರಲ್ಲಿ ಅಲಿಗಢ ಕೋಮುಗಲಭೆಗೆ ಸಾಕ್ಷಿಯಾಗಿತ್ತು. ೧೯೯೨ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನಂತರ ಅಲಿಗಢದಲ್ಲಿ ಹಿಂದೂ ಮತ್ತು ಮುಸ್ಲಿಂ ಜನಾಂಗಗಳ ಧ್ರುವೀಕರಣ ಆರಂಭವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More