‘ಸಿಟಿ ಜನಕ್ಕೆ ವೋಟರ್ ಐಡಿ ಮುಖ್ಯ, ವೋಟಿಂಗ್ ಅಲ್ಲ’ ಎಂಬ ವ್ಯಂಗ್ಯ ನಿಜವಾಯಿತೇ?

ಪ್ರತಿ ಬಾರಿ ವ್ಯವಸ್ಥೆಯನ್ನು ಖಂಡಿಸುವ ಸಂದರ್ಭಗಳಲ್ಲಿ ಮತದಾನದ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಮಾತನಾಡುವುದು ನಗರವಾಸಿಗಳು. ಆದರೆ, ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸುವ ವಿಚಾರದಲ್ಲಿ ಮಾತ್ರ ಈ ಪಾಠ ಕಲಿಸುವ ಪ್ರವೃತ್ತಿ ಕಂಡುಬರುವುದಿಲ್ಲ!

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಒಮ್ಮೆ ಗಮನಿಸಿದಲ್ಲಿ ನಗರ ಪ್ರದೇಶಗಳು ಉತ್ಸಾಹದಿಂದ ಮತ ಚಲಾಯಿಸದೆ ಇರುವುದು ಕಾಣಿಸುತ್ತದೆ. ಅದು ಬೆಂಗಳೂರು ಇರಬಹುದು ಅಥವಾ ಮಂಗಳೂರೇ ಇರಬಹುದು ಅಥವಾ ದೂರದ ರಾಯಚೂರು ಜಿಲ್ಲೆಯೇ ಇರಬಹುದು. ಎಲ್ಲ ಕಡೆಗಳಲ್ಲಿಯೂ ನಗರವಾಸಿಗಳು ಮತದಾನದತ್ತ ಆಸಕ್ತಿ ತೋರಿಸದೆ ಇರುವ ಪ್ರವೃತ್ತಿ ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.

ರಾಯಚೂರು ಜಿಲ್ಲೆಯಲ್ಲಿ ಕೆಲವೊಂದು ಸಣ್ಣಪುಟ ಲೋಪದೋಷಗಳು, ಚಿಕ್ಕ ಗಲಾಟೆಯ ಮಧ್ಯ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವ ಕಾರಣ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.65.75ರಷ್ಟು ಮತದಾನವಾಗಿದೆ. ಒಟ್ಟು 16,081,47 ಮತದಾರರಲ್ಲಿ 794017 ಪುರುಷ, 813759 ಮಹಿಳೆ ಮತದಾರರು ಇದ್ದರು. ಮೇ 12ರಂದು ನಡೆದ ಚುನಾವಣೆಯಲ್ಲಿ ಒಟ್ಟು 10,57,398 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 53774 ಪುರುಷ, 519650 ಮಹಿಳೆಯರು. ಈ ಮೂಲಕ ಒಟ್ಟು 65.75ರಷ್ಟು ಮತದಾನವಾಗಿದೆ. ಈ ಪೈಕಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಿಂಧನೂರು ಕ್ಷೇತ್ರದಲ್ಲಿ ಶೇ.69.36ರಷ್ಟು ಮತದಾನವಾಗಿದ್ದು, ಅತಿ ಹೆಚ್ಚಿನ ಮತದಾನ ನಡೆದ ಕ್ಷೇತ್ರವಾಗಿ ಹೊರಹೊಮ್ಮಿದೆ. ರಾಯಚೂರು ಗ್ರಾಮೀಣ- ಶೇ.69.13, ರಾಯಚೂರು ನಗರ-ಶೇ.53.97, ಮಾನವಿ-ಶೇ.62.77, ದೇವದುರ್ಗ-ಶೇ.68.96, ಲಿಂಗಸೂಗೂರು-ಶೇ.67.76, ಮಸ್ಕಿ-ಶೇ.68.63ರಷ್ಟು ಮತದಾನವಾಗಿದೆ. ಆದರೆ, ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಯಚೂರು ನಗರದಲ್ಲಿಯೇ ಅತ್ಯಂತ ಕಡಿಮೆ ಮತದಾನವಾಗಿರುವುದು.

ಚಿಂತಕರ ಚಾವಡಿಯಲ್ಲಿನ ಒಂದು ಅಭಿಪ್ರಾಯದಂತೆ ಪಟ್ಟಣ, ನಗರ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರಿಗೆ ಮತದಾನ ಮಹತ್ವದ ಅರಿವು ಹೊಂದಿರುತ್ತಾರೆ; ಉತ್ತಮ ನಾಯಕನ ಆಯ್ಕೆಗಾಗಿ ಮತದಾನ ಮಾಡಬೇಕೆಂಬ ಕನಿಷ್ಠ ಜ್ಞಾನ ಇರುತ್ತದೆ ಎನ್ನುವ ಗುಣಾತ್ಮಕ ಅಭಿಪ್ರಾಯವಿದೆ. ಇಷ್ಟೆಲ್ಲ ಅಭಿಪ್ರಾಯಗಳ ಮಧ್ಯೆ, ಗ್ರಾಮೀಣ ಪ್ರದೇಶದಲ್ಲಿ ಆಗುವಷ್ಟು ಮತದಾನ ನಗರ ಪ್ರದೇಶದಲ್ಲಿ ಕಂಡುಬರದಿರುವುದು ವಿಪರ್ಯಾಸ. ಇದಕ್ಕೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರವೇ ಸಾಕ್ಷಿ. ರಾಯಚೂರು ನಗರದಲ್ಲಿ ಒಟ್ಟು 2,282,62 ಮತದಾರರಿದ್ದಾರೆ. ಇದರಲ್ಲಿ 1,14,420 ಪುರುಷ, 1,13,716 ಮಹಿಳಾ ಮತದಾರರಿದ್ದರೆ. ಸದ್ಯದ ವಿಧಾನಸಭಾ ನಡೆದ ಚುನಾವಣೆಯಲ್ಲಿ 1,23,182 ಮತದಾರರು ಮತದಾನ ಮಾಡಿದ್ದು, 63,014 ಪುರುಷರು, 60,166 ಮಹಿಳಾ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ; ಶೇಕಡ 53.97ರಷ್ಟು ಮಾತ್ರ ಮತದಾನವಾಗಿದೆ.

ನಗರ ಪ್ರದೇಶದಲ್ಲಿ ಸಾಮಾನ್ಯವಾಗಿ ವಿದ್ಯಾವಂತರು ವಾಸಿಸುವ ಕಾರಣ ಮತದಾನ ಪ್ರಮಾಣ ಹೆಚ್ಚಳವಾಗಬೇಕು. ಆದರೆ ಇದೀಗ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇರುವ ಮತದಾನ ಜಾಗೃತಿ, ನಗರದಲ್ಲಿ ವಾಸಿಸುವವರಿಗೆ ಯಾಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ನಗರ ನಿವಾಸಿಗಳು ಕೇವಲ ತಮ್ಮ ಅವಶ್ಯಕತೆಗೆ ಮಾತ್ರ ವೋಟರ್ ಐಡಿ ಬಳಕೆ ಮಾಡುತ್ತಾರೆ. ಅಲ್ಲದೆ, ಶಾಸನಬದ್ಧವಾದ ತಮ್ಮ ಕರ್ತವ್ಯವನ್ನು ಪಾಲಿಸದೆಯೇ ವ್ಯವಸ್ಥೆಯನ್ನು ತೆಗಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಮತದಾನ ಮಾಡಲೆಂದು ಸಾರ್ವಜನಿಕವಾಗಿ ರಜೆ ಕೊಟ್ಟರೆ, ಅದನ್ನು ದುರುಪಯೋಗ ಮಾಡಿಕೊಂಡು ಸ್ವಂತ ಕೆಲಸಗಳನ್ನು ಮಾಡಿಕೊಳ್ಳುವವರೇ ಹೆಚ್ಚಾಗಿರುತ್ತಾರೆ ಎಂಬ ಅಭಿಪ್ರಾಯಕ್ಕೆ ಪುಷ್ಟಿ ಬಂದಿದೆ.

ಇದನ್ನೂ ಓದಿ : ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹೊಗರ್ತಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಅದೇ ಕಾರಣದಿಂದಾಗಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಶೇ.೭೦ಕ್ಕೂ ದಾಟಿ ಮತದಾನ ಆದರೆ, ಬೆಂಗಳೂರು ನಗರದಲ್ಲಿ ಶೇ.೫೦ರೊಳಗೆ ಮತದಾನ ಮುಗಿಯುತ್ತದೆ! ಈ ಬಾರಿಯ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನ ದಾಖಲಿಸಿದ ಪ್ರದೇಶವೆಂದರೆ ಬೆಂಗಳೂರು ನಗರ. ದಕ್ಷಿಣ ಕನ್ನಡ ಗ್ರಾಮಾಂತರ ಪ್ರದೇಶಗಳಲ್ಲಿ ಶೇ.೭೦ರ ಮೇಲೆ ಮತದಾನವಾದರೆ, ಮಂಗಳೂರು ನಗರದಲ್ಲಿ ಕಡಿಮೆ ಮತದಾನವಾಗಿದೆ. ಈ ಬಾರಿ ಎಲ್ಲ ನಗರ ಪ್ರದೇಶಗಳಲ್ಲೂ ಇದೇ ಟ್ರೆಂಡ್ ಕಂಡುಬಂದಿದೆ.

ಪ್ರತಿ ಬಾರಿ ವ್ಯವಸ್ಥೆಯನ್ನು ಖಂಡಿಸುವ ಸಂದರ್ಭಗಳಲ್ಲಿ ಮತದಾನದ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಮಾತನಾಡುವುದು ನಗರವಾಸಿಗಳು. ಆದರೆ, ಚುನಾವಣೆ ಸಂದರ್ಭದಲ್ಲಿ ಇದನ್ನು ಮರೆಯುತ್ತಿರುವುದು ದುರಂತದ ಜೊತೆಗೆ ವ್ಯಂಗ್ಯಕ್ಕೂ ಕಾರಣವಾಗಿದೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More