ಕೋರ್ಟ್‌ಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ ರಚನೆ ವಿಳಂಬಕ್ಕೆ ಅಸಲಿ ಕಾರಣ?

ಹೈಕೋರ್ಟ್‌, ಜಿಲ್ಲಾ ಕೋರ್ಟ್‌ಗಳಲ್ಲಿನ ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ವಿಚಾರಣೆ ನಡೆಸುವ ಸಮಿತಿಗಳು ರಚನೆಯಾಗಿಲ್ಲ. ಕೋರ್ಟ್‌ಗಳ ಈ ಧೋರಣೆ ಕುರಿತು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣಾ ಸಮಿತಿಗಳ ರಚನೆ ವಿಳಂಬಕ್ಕೆ ಕಾರಣ ಇಲ್ಲಿದೆ

ಲೈಂಗಿಕ ಕಿರುಕುಳ ತಡೆ ಸಮಿತಿಯನ್ನು ಎರಡು ತಿಂಗಳ ಒಳಗಾಗಿ ರಚಿಸುವಂತೆ ಸುಪ್ರೀಂ ಕೋರ್ಟ್‌ ಎಲ್ಲ ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ. ಕಳೆದ ೫ ವರ್ಷಗಳ ಹಿಂದೆಯೇ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ–2013 ಜಾರಿಗೆ ಬಂದಿದೆಯಾದರೂ ಅದರ ಅನುಷ್ಠಾನದಲ್ಲಿ ಕರ್ನಾಟಕ ಹೈಕೋರ್ಟ್‌ ಸೇರಿದಂತೆ ದೇಶದ ಹಲವು ನ್ಯಾಯಾಲಯಗಳು ಹಿಂದೆ ಬಿದ್ದಿವೆ.

ಕೋರ್ಟ್‌ಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ವಕೀಲರುಗಳಿಗೆ ಕೋರ್ಟ್‌ಗಳಲ್ಲಿ ಆಗುತ್ತಿರುವ ಲೈಂಗಿಕ ಕಿರುಕುಳ ದೂರುಗಳ ವಿಚಾರಣೆಗೆ ಪ್ರತ್ಯೇಕವಾಗಿ ಕಾಯಂ ಸಮಿತಿ ರಚಿಸಬೇಕೆಂಬುದು ಸುಪ್ರಿಂ ಕೋರ್ಟ್‌ನ ಆದೇಶವಾಗಿದೆ.

ಪ್ರತಿಭಟನಾನಿರತ ವಕೀಲರ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ವಕೀಲೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಮತ್ತೊಮ್ಮೆ ಈ ಕುರಿತು ಆದೇಶ ಹೊರಡಿಸಿದೆ. ಅದರಲ್ಲೂ ವಿಶೇಷವಾಗಿ, ದೆಹಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಒಂದು ವಾರದ ಗಡುವು ನೀಡಿದೆ.

ಸಮಿತಿ ರಚಿಸಲು ನ್ಯಾಯಾಧೀಶರ ಕೊರತೆ ಮತ್ತು ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಇಲ್ಲದಿರುವುದು ಸೇರಿದಂತೆ ಇನ್ನಿತರೆ ಕಾರಣಗಳನ್ನು ನ್ಯಾಯಾಲಯಗಳು ಮುಂದೊಡ್ಡುತ್ತಿವೆ. ಸಮಿತಿಗಳಿಗೆ ಹಾಲಿ ನ್ಯಾಯಾಧೀಶರನ್ನೇ ಅಧ್ಯಕ್ಷರನ್ನಾಗಿಸಬೇಕು. ವಾಸ್ತವದಲ್ಲಿ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಸಂಖ್ಯೆಯೇ ಕಡಿಮೆ ಇದೆ. ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವ ಕಾರಣದಿಂದಲೇ ಸಾವಿರಾರು ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ವಾಸ್ತವದಲ್ಲಿ ದುಡಿಯುವ ಸ್ಥಳಗಳಲ್ಲಿನ ಲೈಂಗಿಕ ಕಿರುಕುಳಗಳ ಸ್ವರೂಪಗಳನ್ನು ಮೊದಲು ಗುರುತಿಸಿದ್ದೇ ಸುಪ್ರೀಂ ಕೋರ್ಟ್‌. ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲೂ ಇಂತಹ ಪ್ರಕರಣಗಳ ಸಂಬಂಧ ದೂರು ಸಲ್ಲಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿತ್ತು ಸುಪ್ರೀಂ ಕೋರ್ಟ್‌. ಆದರೆ ಈಗ, ಸಮಿತಿ ರಚನೆಗೆ ಮೂಲಭೂತ ಸೌಲಭ್ಯ ಒದಗಿಸಲು ಗಮನ ಹರಿಸದಿರುವುದೇ ವಿಳಂಬಕ್ಕೆ ಮೂಲ ಕಾರಣ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

“ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೊಳಾಗುವ ಸಂತ್ರಸ್ತರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಲು ಕೇಂದ್ರ ಸ್ಥಾಪಿಸಬೇಕು. ದೂರುಗಳ ವಿಚಾರಣೆ ನಡೆಸಲು ಪ್ರತ್ಯೇಕ ಕೊಠಡಿ ಇರಬೇಕು. ದೂರುಗಳ ಸತ್ಯಾಸತ್ಯತೆ ಪರಿಶೀಲಿಸಲು ಪ್ರತ್ಯೇಕವಾಗಿ ತನಿಖಾ ಏಜೆನ್ಸಿ ಮೊರೆಹೋಗಬೇಕು. ಇಷ್ಟೆಲ್ಲ ಕೊರತೆಗಳಿರುವಾಗ ಸಮಿತಿಯನ್ನು ಹೇಗೆ ರಚಿಸಲು ಸಾಧ್ಯ? ಕೊರತೆ ನೀಗಿದ ನಂತರವಷ್ಟೇ ಸಮಿತಿ ರಚನೆ ಮಾಡಬೇಕು. ಆದರೆ, ಸುಪ್ರೀಂ ಕೋರ್ಟ್‌ ಮೂಲಭೂತ ಅಂಶಗಳತ್ತ ಮಾತನಾಡುವುದೇ ಇಲ್ಲ,” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಮಹಿಳಾ ವಕೀಲರೊಬ್ಬರು.

“ಅದೇ ರೀತಿ, ನ್ಯಾಯಾಲಯಗಳಲ್ಲಿ ಇಂಥದ್ದೊಂದು ಸಮಿತಿ ರಚನೆಗೆ ನ್ಯಾಯಾಧೀಶರುಗಳು ಇಚ್ಛಾಶಕ್ತಿಯನ್ನೂ ವ್ಯಕ್ತಪಡಿಸುತ್ತಿಲ್ಲ. ನ್ಯಾಯಾಲಯದ ಆವರಣದೊಳಗೆ ಹೊರಗಿನ ವ್ಯಕ್ತಿಗಳು ಪ್ರವೇಶಿಸುವುದನ್ನು ಅವರು ಸಹಿಸರು. ಹಾಗೆಯೇ, ನ್ಯಾಯಾಲಯಗಳಲ್ಲಿ ಎಲ್ಲವೂ ಸರಿ ಇದೆ ಎಂದು ತೋರಿಸುವ ಇರಾದೆಯೂ ಅವರಿಗಿರಬಹುದು,” ಎನ್ನುತ್ತಾರೆ ಮತ್ತೊಬ್ಬ ಮಹಿಳಾ ವಕೀಲರು

ನ್ಯಾಯಾಲಯಗಳಲ್ಲಿ ಕಂಡುಬರುತ್ತಿರುವ ಲೈಂಗಿಕ ಕಿರುಕುಳಗಳ ಪ್ರಕರಣಗಳ ಕುರಿತು ಮಹಿಳಾ ವಕೀಲರು ಪದೇಪದೇ ದನಿ ಎತ್ತಿದರೂ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವಲ್ಲಿ ನ್ಯಾಯಾಲಯಗಳು ವಿಫಲವಾಗಿವೆ. ಈ ಕುರಿತು ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌ ಲೈಂಗಿಕ ಕಿರುಕುಳ ಪ್ರಕರಣಗಳ ವಿಚಾರಣೆಗೆ ದೂರು ಸಮಿತಿಯನ್ನೇನೂ ರಚಿಸಿತ್ತು. ಹಾಗೆಯೇ, ಲಿಂಗ ಸಂವೇದನಾಶೀಲತೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) 2013 ನಿಯಮಾವಳಿಗಳನ್ನು ಅಂಗೀಕರಿಸಿತ್ತು.ಇಂತಹದೇ ನಿಯಮಾವಳಿಗಳನ್ನು ದೇಶದ ಎಲ್ಲ ಹೈಕೋರ್ಟ್‌ಗಳೂ ರಚಿಸಬೇಕು ಎಂದು ಹೇಳಿದ್ದ ಸುಪ್ರಿಂ ಕೋರ್ಟ್‌ನ ಮಾತಿಗೆ ಬಹುತೇಕ ಉನ್ನತ ನ್ಯಾಯಾಲಯಗಳು ಮನ್ನಣೆ ನೀಡಿದಂತಿಲ್ಲ. ಹೀಗಾಗಿಯೇ ಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಪುನರುಚ್ಚರಿಸಿದೆ.

ಕರ್ತವ್ಯದ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳನ್ನು ತಡೆಯಲು ಸೂಕ್ತ ನಿಯಾಮವಳಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ವಿಶಾಖ ಎಂಬ ಪ್ರಕರಣದಲ್ಲಿ ಆದೇಶಿಸಿತ್ತು. ಹಾಗೆಯೇ, ಲೈಂಗಿಕ ಕಿರುಕುಳ ದೂರು ಬಂದರೆ ಅವುಗಳನ್ನು ತನಿಖೆ ಮಾಡಲು ಸೂಕ್ತ ಸಮಿತಿಯೊಂದನ್ನು ನೇಮಕ ಮಾಡಬೇಕೆಂದು ಅಖೀಲ ಭಾರತ ವಕೀಲರ ಪರಿಷತ್‌ (ಎಐಬಿಸಿ) ಎಲ್ಲ ರಾಜ್ಯಗಳ ಪರಿಷತ್‌ಗೆ ಸೂಚಿಸಿತ್ತು.

ಇದನ್ನೂ ಓದಿ : ಇಂಡಿಯಾದಲ್ಲಿ ಗಟ್ಟಿಯಾಗುತ್ತಿದೆ ಲೈಂಗಿಕ ಶೋಷಣೆ ವಿರುದ್ಧದ ದನಿ #MeToo

ಅದರಂತೆ, ವಕೀಲರು ತಮ್ಮ ಕಚೇರಿಗಳ ಮಹಿಳಾ ಸಹೋದ್ಯೋಗಿಗಳು, ಮಹಿಳಾ ಕಕ್ಷಿದಾರರು ಅಥವಾ ಅದೀನ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳ ಕುರಿತು ತನಿಖೆ ನಡೆಸಲು ಕೆಲ ರಾಜ್ಯಗಳ ರಾಜ್ಯ ವಕೀಲರ ಪರಿಷತ್‌ ‘ಲೈಂಗಿಕ ದೌರ್ಜನ್ಯ ದೂರು ಮತ್ತು ಪರಿಹಾರಾತ್ಮಕ ಸಮಿತಿ (ಎಸ್‌ಎಚ್‌ಸಿಆರ್‌ಸಿ)‘ ರಚಿಸಿದೆ. ವಕೀಲರ ಮಟ್ಟದಲ್ಲಿ ಸಮಿತಿ ರಚನೆಯಾಗಿದೆಯೇ ಹೊರತು ನ್ಯಾಯಾಲಯಗಳಲ್ಲಿ ದುಡಿಯುತ್ತಿರುವ ನೌಕರರ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಸಂಬಂಧ ವಿಚಾರಣೆ ಸಮಿತಿ ರಚಿಸುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಆತಂಕಕಾರಿ.

ಮಹಿಳೆಯರ ವಿರುದ್ಧದ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. 2015ಕ್ಕೆ ಹೋಲಿಸಿದರೆ 2016ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಶೇ.11ರಷ್ಟು ಏರಿಕೆಯಾಗಿದೆಯಾದರೂ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಈ ಹಿಂದೆ ತಮ್ಮ ಬಳಿ ತರಬೇತಿ ಪಡೆಯುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದರೆನ್ನಲಾದ ಆರೋಪ ದೇಶದ ಗಮನ ಸೆಳೆದಿದ್ದನ್ನು ನೆನಪಿಸಿಕೊಳ್ಳಬಹುದು. ಕೋಲ್ಕತ್ತ ಮೂಲದ ರಾಷ್ಟ್ರೀಯ ನ್ಯಾಯಶಾಸ್ತ್ರ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ವಕೀಲೆ, ತನಗೆ ಕಿರುಕುಳ ನೀಡಿದ ನ್ಯಾಯಮೂರ್ತಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ನಿವೃತ್ತ ನ್ಯಾಯಮೂರ್ತಿಯೊಬ್ಬರು ದೆಹಲಿಯ ಹೋಟೆಲ್ ಕೊಠಡಿಯಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದರೆಂದು ಯುವತಿ ಆರೋಪಿಸಿದ್ದರು. 2012ರಲ್ಲಿ ನಡೆದಿದ್ದ ಈ ಪ್ರಕರಣ ಮಹಿಳಾ ವಕೀಲರ ಸಮೂಹದ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಆರೋಪಿತ ನ್ಯಾಯಮೂರ್ತಿ ಇನ್ನಿತರ ಮಹಿಳೆಯರ ಜೊತೆಗೂ ಅಸಭ್ಯವಾಗಿ ನಡೆದುಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

“ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ತೀಚೆಗೆ ಕಂಡುಬರುತ್ತಿವೆ. ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಮತ್ತು ಹಿರಿಯ ವಕೀಲರ ಬಳಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವಕೀಲರು ತಮ್ಮ ಮೇಲಾಧಿಕಾರಿಗಳು ಮತ್ತು ಜಿಲ್ಲಾ ನ್ಯಾಯಾಧೀಶರುಗಳ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯದ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದಾರೆ. ಕೆಲವನ್ನು ರಾಜಿ ಸಂಧಾನ ಮಾಡಿಸಿ ಇತ್ಯರ್ಥಪಡಿಸಲಾಗುತ್ತಿದೆ. ನ್ಯಾಯಾಧೀಶರುಗಳು ಇಂತಹ ಪ್ರಕರಣಗಳಿಂದ ಹೊರತಾಗಿಲ್ಲ,” ಎನ್ನುತ್ತಾರೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ.

ವಿಶಾಖಾ ಪ್ರಕರಣದಲ್ಲಿ ತೀರ್ಪು ಹೊರಬಿದ್ದ ನಂತರ ಸುಪ್ರೀಂ ಕೋರ್ಟ್ ಅಂಗಳದಲ್ಲೂ ಲೈಂಗಿಕ ಕಿರುಕುಳ ದೂರು ಪರಿಹಾರ ಪ್ರಕ್ರಿಯೆಗೆ ಚಾಲನೆ ಸಿಕ್ಕಲು 16 ವರ್ಷಗಳಷ್ಟು ಕಾಯಬೇಕಾಯಿತು. ದೂರು ಪರಿಹಾರದ ವ್ಯವಸ್ಥೆಯೇ ಸರಿ ಇಲ್ಲದಿರುವುದರಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳು ಇತ್ಯರ್ಥವಾಗುವುದಾದರೂ ಹೇಗೆ?

ಚಿತ್ರ: ಪ್ರಾತಿನಿಧಿಕ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More