ಕಾವೇರಿ ನೀರು ಹಂಚಿಕೆ ಸ್ಕೀಂ ಕರಡನ್ನು ಸುಪ್ರೀಂಗೆ ಸಲ್ಲಿಸಿದ ಕೇಂದ್ರ ಸರ್ಕಾರ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕರ್ನಾಟಕ, ತಮಿಳುನಾಡಿನ ನಡುವೆ ಎದ್ದಿದ್ದ ವಿವಾದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ‘ಸ್ಕೀಂ’ ಕರಡನ್ನು ಸುಪ್ರೀಂಗೆ ಸಲ್ಲಿಸಿದೆ. ಈ ಮೂಲಕ ಬಹುದಿನಗಳ ವಿವಾದಕ್ಕೆ ತೆರೆ ಬೀಳಲಿದೆಯಾ ಎಂಬುದನ್ನು ಕಾದುನೋಡಬೇಕಿದೆ

ಕಾವೇರಿ ನದಿ ನೀರು ಸಂಗ್ರಹ, ಬಳಕೆ ಹಾಗೂ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಕಡೆಗೂ ಮುಂದಾಗಿದೆ. ನೀರು ಹಂಚಿಕೆ ಕುರಿತ ಸ್ಕೀಂ ರಚಿಸುವ ಬಗೆಗಿನ ಕರಡನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಈ ಮೂಲಕ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಮಾದರಿಯಲ್ಲೇ ಸ್ಕೀಂ ರಚನೆ ಮಾಡಲು ಕೇಂದ್ರ ತೀರ್ಮಾನಿಸಿದೆ.

ನಿರ್ವಹಣಾ ಮಂಡಳಿ ರಚನೆ ಸಂಬಂಧ ಎರಡು ರಾಜ್ಯಗಳ ನಡುವೆ ಎದ್ದಿದ್ದ ವಿವಾದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಸ್ಕೀಂ’ ಹೆಸರಿನಲ್ಲಿ ಪ್ರಾಧಿಕಾರ ರಚನೆಗೆ ಮುಂದಾಗಿದೆ ಎಂಬುದು ತಿಳಿದುಬಂದಿದೆ.

ಕೇಂದ್ರ ಸಲ್ಲಿಸಿರುವ ಸ್ಕೀಂನಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿಗೆ ಸೇರಿದ ಜಲಸಂಪನ್ಮೂಲ ತಜ್ಞರು, ಅನುಭವಿ ತಂತ್ರಜ್ಞರು, ಐಎಎಸ್‌ ಅಧಿಕಾರಿಗಳು ಹಾಗೂ ಪರಿಸರವಾದಿಗಳಿರುತ್ತಾರೆ. ಸ್ಕೀಂನ ಖರ್ಚುವೆಚ್ಚದ ಶೇ.40 ರಷ್ಟು ಕರ್ನಾಟಕ ಹಾಗೂ ತಮಿಳುನಾಡು, ಶೇ. 15 ರಷ್ಟು ಕೇರಳ ಹಾಗೂ ಶೇ. 5 ರಷ್ಟು ಪಾಂಡಿಚೇರಿ ಭರಿಸಬೇಕೆಂದು ಹೇಳಲಾಗಿದೆ.

ಕಾವೇರಿ ನದಿ ನೀರು ಹಂಚಿಕೆ, ನಿಯಂತ್ರಣ ಹಾಗೂ ಸಂಗ್ರಹದ ಬಗೆಗಿನ ನಿರ್ಣಯವನ್ನು ಸ್ಕೀಂ ತೆಗೆದುಕೊಳ್ಳಲಿದೆ. ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುವ ಸ್ಕೀಂ ತಿಂಗಳಿಗೆ ಮೂರು ಬಾರಿ ನೀರಿನ ಒಳಹರಿವು, ಹಂಚಿಕೆ ಹಾಗೂ ಸಂಗ್ರಹದ ಕುರಿತು ಪರಿಶೀಲನೆ ನಡೆಸಿ, ಮಾಹಿತಿಯನ್ನು ಸರ್ಕಾರಗಳಿಗೆ ಸಲ್ಲಿಸಲಿದೆ. ಬಿಳಿಗುಂಡ್ಲು ಬಳಿಯ ನೀರು ಮಾಪನ ಕೇಂದ್ರದಲ್ಲಿ ಒಳಹರಿವಿನ ಪ್ರಮಾಣ ಹಾಗೂ ನೀರಿನ ಅಳತೆ ಮಾಡುವುದು ಸ್ಕೀಂನ ಹೊಣೆಗಾರಿಕೆಯಾಗಿದೆ.

ಆಯಾ ರಾಜ್ಯಗಳಿಗೆ ನೀರಿನ ಅವಶ್ಯಕತೆ, ಬೆಳೆ ಪದ್ದತಿ, ಮಳೆ ಪ್ರಮಾಣ, ಕುಡಿಯುವ ಹಾಗೂ ನೀರಾವರಿಗಾಗಿ ಬಳಸಿಕೊಳ್ಳುವ ನೀರಿನ ಪರಿಶೀಲಿಸಿ ಎಷ್ಟು ನೀರು ಹಂಚಿಕೆ ಮಾಡಬೇಕೆಂಬುದನ್ನು ಸ್ಕೀಂ ನಿರ್ಧರಿಸಲಿದೆ. ಇದಕ್ಕಾಗಿ ನಾಲ್ಕು ರಾಜ್ಯಗಳ ಜಲಸಂಪನ್ಮೂಲ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ : ಕಾವೇರಿ ವಿವಾದದ ಅಗ್ನಿಪರೀಕ್ಷೆಯಲ್ಲಿ ಕೇಂದ್ರದ ‘ಚುನಾವಣಾ ಸ್ಕೀಂ’ ಏನಿದ್ದೀತು?

ಸಂಗ್ರಹ ಮಾಡಿರುವ ದಾಖಲೆ ಹಾಗೂ ಮಾಹಿತಿಗಳನ್ನು ರಾಜ್ಯಗಳಿಗೆ ಕೊಡುವುದು ಸ್ಕೀಂನ ಕರ್ತವ್ಯವಾಗಿದ್ದು, ಸ್ಕೀಂನಲ್ಲಿ ಕಾರ್ಯನಿರ್ವಹಿಸುವ ಸದಸ್ಯರು ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಆಯ್ಕೆಯಾಗಬೇಕು. ಸ್ಕೀಂನ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿ ಇರಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಕರಡಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ‘ದಿ ಸ್ಟೇಟ್‌’ ನೊಂದಿಗೆ ಮಾತನಾಡಿರುವ ಕೃಷಿ ಹಾಗೂ ಜಲಸಂಪನ್ಮೂಲ ತಜ್ಞ ನರಸಿಂಹಪ್ಪ, “ಕಾವೇರಿ ಜಲನಿರ್ವಹಣಾ ಮಂಡಳಿ ಮಾದರಿಯಲ್ಲೇ ಕಾವೇರಿ ಸ್ಕೀಂನ ಕಾರ್ಯ ವಿಧಾನಗಳಿರುತ್ತವೆ. ಇದು ವೈಜ್ಞಾನಿಕ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ ಎಂಬ ನಂಬಿಕೆ ನನಗಿದೆ. ಸ್ಕೀಂನಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಹಾಗೂ ಕೇರಳ ರಾಜ್ಯಗಳ ನೀರಾವರಿ ತಜ್ಞರು, ಅಧಿಕಾರಿಗಳು ಹಾಗೂ ಎಂಜನೀಯರ್‌ಗಳು ಇರುತ್ತಾರೆ. ಇದರಲ್ಲಿ ರಾಜಕಾರಣಿಗಳನ್ನು ಸೇರ್ಪಡೆ ಮಾಡುವುದು, ಬಿಡುವುದು ಸಂಸತ್ತಿನಲ್ಲಿ ತೀರ್ಮಾನಿಸಲಾಗುತ್ತದೆ. ಸ್ಕೀಂ ಇರಲಿ, ಮಂಡಳಿ ಇರಲಿ, ಯೋಜನೆಯೇ ಇರಲಿ. ಅವು ಸುಪ್ರೀಂ ಕೋರ್ಟ್‌ ಆದೇಶದನ್ವಯವೇ ಕಾರ್ಯನಿರ್ವಹಿಸಬೇಕಾಗುತ್ತದೆ. ಎರಡು ರಾಜ್ಯಗಳ ನಡುವೆ ಹೊಂದಾಣಿಕೆ ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ,” ಎಂದು ತಿಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More