ಪಿಎನ್‌ಬಿ ಹಗರಣ: ಅಲಹಾಬಾದ್ ಬ್ಯಾಂಕ್ ಸಿಇಒ ಅಧಿಕಾರಕ್ಕೆ ಕೇಂದ್ರದ ಕತ್ತರಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದ ₹13700 ಕೋಟಿ ರು. ಹಗರಣದ ಹಿನ್ನಲೆಯಲ್ಲಿ ಅಲಹಾಬಾದ್ ಬ್ಯಾಂಕ್ ಸಿಇಒ ಉಷಾ ಅನಂತಸುಬ್ರಮಣಿಯನ್ ಅಧಿಕಾರಕ್ಕೆ ಕತ್ತರಿ ಹಾಕಲು ಕೇಂದ್ರ ವಿತ್ತ ಸಚಿವಾಲಯ ಮುಂದಾಗಿದೆ. ಹಗರಣದ ನಂತರ ಕೇಂದ್ರದ ಮೊದಲ ಕಠಿಣ ಕ್ರಮ ಇದು!

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಇಬ್ಬರೂ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,700 ಕೋಟಿ ರುಪಾಯಿ ವಂಚಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಅಲಹಾಬಾದ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಉಷಾ ಅನಂತಸುಬ್ರಮಣಿಯನ್ ಅವರ ಅಧಿಕಾರಕ್ಕೆ ಕತ್ತರಿ ಹಾಕಲು ಕೇಂದ್ರ ವಿತ್ತ ಸಚಿವಾಲಯ ಸೂಚಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ನಡೆದ ನಂತರ ಕೇಂದ್ರ ಸರ್ಕಾರ ಕೈಗೊಂಡಿರುವ ಅತಿ ಕಠಿಣ ಕ್ರಮ ಇದಾಗಿದೆ. ಅಲಹಾಬಾದ್ ಬ್ಯಾಂಕ್ ಆಡಳಿತ ಮಂಡಳಿಗೆ ಸೂಚನೆ ನೀಡಿರುವ ವಿತ್ತ ಸಚಿವಾಲಯವು, ಎಂಡಿ ಮತ್ತು ಸಿಇಒ ಉಷಾ ಅನಂತಸುಬ್ರಮಣಿಯನ್ ಅವರ ಎಲ್ಲ ಅಧಿಕಾರಗಳನ್ನು ವಾಪಸು ಪಡೆಯುವಂತೆ ಸೂಚಿಸಿದೆ.

ಉಷಾ ಅನಂತಸುಬ್ರಮಣಿಯನ್ ಅವರು ಅಲಹಾಬಾದ್ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ನೇಮಕ ಆಗುವ ಮುನ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಉಷಾ ಅಧಿಕಾರದ ಅವಧಿಯಲ್ಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ನಕಲಿ ಒಪ್ಪಂದ ಪತ್ರ ಬಳಸಿಕೊಂಡು ಹೆಚ್ಚಿನ ಅಕ್ರಮ ವಹಿವಾಟು ನಡೆಸಿದ್ದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಇಬ್ಬರು ಎಕ್ಸಿಕ್ಯೂಟಿವ್ ಡೈರೆಕ್ಟರ್‌ಗಳ ಎಲ್ಲ ಅಧಿಕಾರವನ್ನು ಹಿಂದಕ್ಕೆ ಪಡೆಯುವಂತೆಯೂ ವಿತ್ತ ಸಚಿವಾಲಯ ಸೂಚಿಸಿದೆ. ಸೋಮವಾರ ವಿತ್ತ ಇಲಾಖೆ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

13,700 ಕೋಟಿ ರುಪಾಯಿ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಪ್ರಕರಣದ ಪ್ರಮುಖ ಆರೋಪ ನೀರವ್ ಮೋದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಹಣಕಾಸು ಇಲಾಖೆ ಈ ಕ್ರಮ ಕೈಗೊಂಡಿದೆ. ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಷಾ ಅನಂತಸುಬ್ರಮಣಿಯನ್ ಅವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ.

ಅಲಹಾಬಾದ್ ಎಂಡಿ ಮತ್ತು ಸಿಇಒ ಆಗುವ ಮುನ್ನ ಉಷಾ ಅನಂತಸುಬ್ರಮಣಿಯನ್ ಅವರು 2015-2017ರ ಅವಧಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಡಿ ಮತ್ತು ಸಿಒಒ ಆಗಿ ಕಾರ್ಯನಿರ್ವಹಿಸಿದ್ದರು. ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್‌ಗಳಾದ ಬ್ರಹ್ಮಾಜಿ ರಾವ್ ಮತ್ತು ಸಂಜೀವ್ ಸರಣ್, ಜನರಲ್ ಮ್ಯಾನೆಜರ್ (ಇಂಟರ್‌ನ್ಯಾಷನಲ್ ಆಪರೇಷನ್) ನೆಹಾಲ್ ಅಹದ್ ಅವರನ್ನು ಹೆಸರಿಸಿದೆ.

ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹಲು ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹೆಸರು ಬಳಸಿಕೊಂಡು ಬೇರೆ ಬ್ಯಾಂಕುಗಳಿಗೆ ವಂಚಿಸಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕನ್ನೇ ಗ್ಯಾರಂಟರ್ (ಖಾತರಿದಾರ) ಆಗಿ ಮಾಡಿಕೊಂಡು ಬೇರೆ ಬೇರೆ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರು. ಪಿಎನ್‌ಬಿಯೇ ಗ್ಯಾರಂಟರ್ ಆಗಿದ್ದರಿಂದ ಬೇರೆ ಬ್ಯಾಂಕುಗಳು ಯಾವುದೇ ತಕರಾರು ಮಾಡದೆ ಸಲೀಸಾಗಿ ಸಾಲ ನೀಡಿದ್ದವು. ಬ್ಯಾಂಕ್‌ಗಳನ್ನು ವಂಚಿಸಲು ನೀರವ್ ಮಾಡಿದ ಕಾರ್ಯತಂತ್ರ ಬ್ಯಾಂಕ್‌ಗಳಿಗೆ ಗೊತ್ತಾಗಿಲ್ಲ. ನೀರವ್ ಮೋದಿಗೆ ಸೇರಿದ ಮೂರು ಡೈಮಂಡ್ ಕಂಪನಿಗಳು, ಮೆಹುಲ್ ಚೊಕ್ಸಿಗೆ ಸೇರಿದ ಗೀತಾಂಜಲಿ ಜೆಮ್ಸ್ ಮಾಲಿಕತ್ವದ ಇತರ ಕಂಪನಿಗಳು ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಳೀಯ ಶಾಖೆಯಲ್ಲಿ ಕರೆಂಟ್ ಅಕೌಂಟ್ (ಚಾಲ್ತಿ ಖಾತೆ) ಹೊಂದಿವೆ.

ಈ ಕಂಪನಿಗಳು ವಿದೇಶಿ ಕಂಪನಿಗಳಿಂದ ಕಚ್ಚಾ ಹರಳುಗಳನ್ನು ಖರೀದಿಸುತ್ತಿದ್ದವು. ಖರೀದಿಸಿದ ಹರಳುಗಳಿಗೆ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿ ಮಾಡುತ್ತಿದ್ದವು. ಕಚ್ಚಾ ಹರಳು ಮಾರಾಟ ಮಾಡುವ ವಿದೇಶಿ ಕಂಪನಿಗಳು ವಿದೇಶದಲ್ಲಿರುವ ಭಾರತೀಯ ಬ್ಯಾಂಕುಗಳಲ್ಲೇ ಖಾತೆ ಹೊಂದಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕಿರಿಯ ಅಧಿಕಾರಿಯೊಬ್ಬ ನೀರವ್ ಮೋದಿ, ಮೆಹುಲ್ ಚೊಕ್ಸಿ ಒಡೆತನದ ಕಂಪನಿಗಳು ಹರಳು ಮಾರಿದ ಕಂಪನಿಗಳಿಗೆ ಹಣ ಪಾವತಿಸಲು ವಿದೇಶದಲ್ಲಿರುವ ಭಾರತೀಯ ಬ್ಯಾಂಕುಗಳ ಶಾಖೆಯಿಂದ ಅಲ್ಪಾವಧಿ ಸಾಲ ಪಡೆಯಲು ಅವಕಾಶ ಆಗುವಂತೆ ಒಪ್ಪಂದ ಪತ್ರವನ್ನು (ಲೆಟರ್ ಆಫ್ ಅಂಡರ್‌ಟೇಕಿಂಗ್) ನೀಡಿದ್ದ.

ಇದನ್ನೂ ಓದಿ : ಇಚ್ಛಾವರ್ತಿ ಸುಸ್ತಿದಾರರ ಪಾಸ್ಪೋರ್ಟ್ ಜಪ್ತಿ ಮಾಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್

ಒಪ್ಪಂದ ಪತ್ರದ ಪ್ರಕಾರ, ಈ ಕಂಪನಿಗಳು ಪಡೆಯುವ ಸಾಲಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತರಿದಾರನಾಗಿತ್ತು. ಈ ಖಾತರಿ ಪತ್ರವನ್ನು ಬಳಸಿಕೊಂಡು ನೀರವ್, ವಿದೇಶದಲ್ಲಿ ಶಾಖೆ ಹೊಂದಿರುವ ಭಾರತೀಯ ಬ್ಯಾಂಕುಗಳಿಂದ ಸಾಲ ಪಡೆಯುತ್ತಿದ್ದ. ವ್ಯವಹಾರ ವಿದೇಶದಲ್ಲೇ ನಡೆಯುತ್ತಿದ್ದರಿಂದ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ಯಾರಂಟರ್ ಆಗಿದ್ದರಿಂದ ಯಾವುದೇ ತರಕಾರಿರಲ್ಲದೆ ಸಾಲ ಪಾವತಿ ಆಗುತ್ತಿತ್ತು. ಅಲ್ಲದೆ, ದೇಶೀಯವಾಗಿ ಪಾವತಿ ಮಾಡಲು ನೆಫ್ಟ್ ವ್ಯವಸ್ಥೆ ಬಳಸಲಾಗುತ್ತದೆ. ವಿದೇಶದಲ್ಲಿರುವ ಶಾಖೆಗಳ ಮೂಲಕ ಪಾವತಿ ಮಾಡಲು ಸ್ವಿಫ್ಟ್ ವ್ಯವಸ್ಥೆ ಬಳಸಲಾಗುತ್ತದೆ. ಸ್ವಿಫ್ಟ್ ವ್ಯವಸ್ಥೆ ಬಳಸಿದ್ದರಿಂದಾಗಿ ಹೆಚ್ಚಿನ ಗಮನ ಹೋಗಿಲ್ಲ.

ಹೀಗಾಗಿ, 2011ರಿಂದಲೂ ಈ ವಂಚನೆ ನಡೆದಿದೆ. ಆಗೆಲ್ಲ ಪಡೆದ ಸಾಲವನ್ನು ಆಯಾ ಬ್ಯಾಂಕುಗಳ ಶಾಖೆಗೆ ಸಕಾಲದಲ್ಲಿ ಮರುಪಾವತಿ ಮಾಡಿದ ನೀರವ್ ಮೋದಿ ಮತ್ತು ಮೆಹಲು ಚೊಕ್ಸಿ 2015-17ರ ನಡುವೆ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಸದೆ ವಂಚಿಸಿದ್ದಾರೆ. ಹೀಗಾಗಿ, ಆ ಅವಧಿಯಲ್ಲಿ ಎಂಡಿ ಮತ್ತು ಸಿಇಒ ಆಗಿದ್ದ ಉಷಾ ಮತ್ತು ಇಬ್ಬರು ಎಕ್ಸಿಕ್ಯೂಟಿವ್ ಡೈರೆಕ್ಟರ್‌ಗಳನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ಈಗ ಆರೋಪ ಪಟ್ಟಿಯಲ್ಲಿ ಹೆಸರು ಉಲ್ಲೇಖಿಸಿರುವುದರಿಂದ ಈ ಮೂವರ ಅಧಿಕಾರ ಮೊಟಕುಗೊಳಿಸಲು ಕೇಂದ್ರ ವಿತ್ತ ಸಚಿವಾಲಯ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More