ಗುರುಗ್ರಾಮದ ನಮಾಜು ವಿವಾದ ಪ್ರಕರಣ ಎತ್ತುತ್ತಿರುವ ಪ್ರಶ್ನೆಗಳೇನು?

ಭೂಕಬಳಿಕೆ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಮಾಡಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ವಾದಿಸುತ್ತಿದ್ದರೆ, ಮಸೀದಿ ಕಟ್ಟಿಕೊಳ್ಳಲು ಅವಕಾಶ ನೀಡದಿರುವುದೇ ಸಮಸ್ಯೆಗೆ ಕಾರಣ ಎಂದು ಮುಸ್ಲಿಂ ಸಮುದಾಯ ಹೇಳುತ್ತಿದೆ. ಹರ್ಯಾಣದಲ್ಲಿ ನಡೆದ ಘಟನೆಗಳ ಚರ್ಚೆ ಇಲ್ಲಿದೆ

ಹರ್ಯಾಣದ ಗುರುಗ್ರಾಮದಲ್ಲಿ ನಡೆದ ನಮಾಜ್ ವಿವಾದ, ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರ ಪ್ರಾರ್ಥನೆ ಕುರಿತ ಚರ್ಚೆ ಹುಟ್ಟುಹಾಕಿದೆ. ಎರಡು ವಾರಗಳ ಹಿಂದೆ ಸಂಯುಕ್ತ ಹಿಂದೂ ಸಂಘರ್ಷ ಸಮಿತಿ ಗುರುಗ್ರಾಮದ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಪ್ರಾರ್ಥನೆ ವೇಳೆ ಅಲ್ಲಿಗೆ ಆಗಮಿಸಿದ ಹಿಂದೂ ಕಾರ್ಯಕರ್ತರು ಜೈ ಶ್ರೀರಾಂ, ಅಯೋಧ್ಯೆ, ವಂದೇ ಮಾತರಂ ಮತ್ತಿತರ ಘೋಷಣೆಗಳನ್ನು ಕೂಗಿದರು. ಭೂಕಬಳಿಕೆ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ, ‘ಭೂ ಜಿಹಾದ್’ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಬಳಿಕ ಗುರುಗ್ರಾಮದ ಇತರ ಪ್ರದೇಶಗಳಲ್ಲಿ ಕೂಡ ಪ್ರಾರ್ಥನೆ ಸಲ್ಲಿಸದಂತೆ ಒತ್ತಡ ಹೇರಲಾಗಿತ್ತು. ಪರಿಣಾಮ, ಪೊಲೀಸರ ಸಮ್ಮುಖದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು.

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, “ಮಸೀದಿ ಅಥವಾ ಈದ್ಗಾ ಒಳಗೆ ನಮಾಜು ಮಾಡಬೇಕು. ಅಲ್ಲಿ ಸ್ಥಳಾವಕಾಶದ ಕೊರತೆಯಿದ್ದರೆ, ಮುಸ್ಲಿಮರು ತಮ್ಮ ಖಾಸಗಿ ಸ್ಥಳಗಳಲ್ಲಿ ನಮಾಜ್‌ ಮಾಡಿಕೊಳ್ಳಲಿ,” ಎಂದು ಹೇಳಿದ್ದರು. ಇದು ಮತ್ತೊಂದು ವಿವಾದವನ್ನು ಹುಟ್ಟುಹಾಕಿತು. “ಪ್ರಾರ್ಥನೆ ನಿಲ್ಲಿಸುವುದಾಗಿ ಹೇಳಿಲ್ಲ,” ಎಂದು ಸ್ಪಷ್ಟಪಡಿಸಿದ ಕಟ್ಟರ್, “ಮುಸ್ಲಿಂ ರಾಷ್ಟ್ರಗಳಲ್ಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ. ಗುರುಗ್ರಾಮದ ಆಡಳಿತ ಯಾವ ರೀತಿಯ ನಿರ್ಣಯ ಕೈಗೊಳ್ಳುತ್ತದೆ ಎಂದು ದೇಶ ಎದುರುನೋಡುತ್ತಿದೆ. ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು,” ಎಂಬ ಎಚ್ಚರಿಕೆ ನೀಡಿದ್ದರು. ಕಟ್ಟರ್ ಹೇಳಿಕೆಯನ್ನು ಹಿಂದೂಪರ ಸಂಘಟನೆಗಳು ಸ್ವಾಗತಿಸಿದ್ದವು.

ಗುರುಗ್ರಾಮದಲ್ಲಿ ಪ್ರಾರ್ಥನೆ ನಡೆದ ಮೈದಾನದ ಸಮೀಪ ಕೊಳೆಗೇರಿ ಇದ್ದು, ಅಲ್ಲಿ ಬಾಂಗ್ಲಾದೇಶ ವಲಸಿಗರು ಮತ್ತು ರೋಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದ್ದವು. ಗುರುಗ್ರಾಮದಲ್ಲಿ ಮುಸ್ಲಿಂ ಸಮುದಾಯ ನಡೆಸುತ್ತಿರುವ 9 ಅಕ್ರಮಗಳ ಪಟ್ಟಿಯನ್ನೂ ನೀಡಿದ್ದವು. ಇತ್ತ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹಿಂದೂ ಕ್ರಾಂತಿದಳದ ಮುಖ್ಯಸ್ಥ ರಾಜೀವ್ ಮಿತ್ತಲ್, “ವಿವಾದಿತ ಪ್ರದೇಶಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬಾರದು. ಗುರುಗ್ರಾಮದಲ್ಲಿ ವಿದೇಶಿ ನಿರಾಶ್ರಿತರು ಭೂಕಬಳಿಕೆ ಮಾಡಬಾರದು,” ಎಂದು ಹೇಳಿದ್ದಾರೆ. ಮತ್ತೊಂದೆಡೆ, ಎಬಿವಿಪಿ ಮುಖಂಡ ಮಹಾವೀರ್ ಪ್ರಸಾದ್, “ಗುರುಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಮುಸ್ಲಿಮರ ಜನಸಂಖ್ಯೆ 2 ಲಕ್ಷದಷ್ಟಿತ್ತು. ಈಗ 9 ಲಕ್ಷ ಮೀರಿದೆ. ಇವರು ಸ್ಥಳೀಯ ಮುಸ್ಲಿಂರಲ್ಲ. ಅವರ ಗುರುತು ಪತ್ತೆಯಾಗಿಲ್ಲ. ಇದು ಕೇವಲ ನಮಾಜ್ ಕುರಿತ ವಿವಾದ ಅಲ್ಲ. ಬದಲಿಗೆ, ದೇಶದ ಭದ್ರತೆಯ ಪ್ರಶ್ನೆ. ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ನಿರಾಶ್ರಿತರು ಇಲ್ಲಿ ನೆಲೆಯೂರಿದ್ದಾರೆ. ಸರ್ಕಾರ ಕೈಕಟ್ಟಿ ಕುಳಿತಿದೆ. ಹಾಗಿರುವಾಗ ನಾವು ಬಳೆ ತೊಟ್ಟುಕೊಂಡು ಕೂರಬೇಕೇ?,” ಎಂದು ಪ್ರಶ್ನಿಸಿದ್ದಾರೆ.

ಮುಸ್ಲಿಂ ಮುಖಂಡರು ಘಟನೆಯನ್ನು ರಾಜಕೀಯ ಪಿತೂರಿಯ ಭಾಗ ಎಂದಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದಿ ಹಿಂದೂ’ ಪತ್ರಿಕೆಯೊಂದಿಗೆ ಮಾತನಾಡಿರುವ ಮತ್ಲೂಬ್ ಅಹಮದ್ ಎಂಬುವವರು, ತಮ್ಮ ನೆರೆಯ ಪ್ರದೇಶದಲ್ಲಿ ವಿಸ್ತೀರ್ಣಗೊಳ್ಳುತ್ತಿರುವ ದೇವಸ್ಥಾನದ ಪ್ರದೇಶವನ್ನು ಉಲ್ಲೇಖಿಸಿ, “ದೇಶದಲ್ಲಿ ದೇಗುಲಗಳನ್ನು ಬೆಳೆಯಲು ಬಿಡಲಾಗುತ್ತಿದೆಯೇ ವಿನಾ ಮಸೀದಿಗಳನ್ನಲ್ಲ. ಈಗ ನಮಾಜ್ ಮಾಡಲು ಕೂಡ ತಡೆಯೊಡ್ಡಲಾಗುತ್ತಿದೆ,” ಎಂದಿದ್ದಾರೆ.

ಇದನ್ನೂ ಓದಿ : ಅಲಿಗಢ ವಿಶ್ವವಿದ್ಯಾಲಯ ಪದೇಪದೇ ಶಿಕ್ಷಣೇತರ ಕಾರಣಕ್ಕೆ ಸುದ್ದಿ ಆಗುವುದೇಕೆ?

ಗುರುಗ್ರಾಮದಲ್ಲಿ ಮಸೀದಿ ಕಟ್ಟಿಕೊಳ್ಳಲು ಕೂಡ ಅವಕಾಶವಿಲ್ಲ ಎಂದು ಅಂಜುಮಾನ್ ಟ್ರಸ್ಟ್ ಮಸೀದಿಯ ಅಧ್ಯಕ್ಷ ಅಸ್ಲಾಂ ಖಾನ್ ಎಂದು ಬೇಸರ ವ್ಯಕ್ತಪಡಿಸಿದ್ದು, “2004ರಲ್ಲಿ ಹರ್ಯಾಣ ಸರ್ಕಾರದಿಂದ ಮಸೀದಿ ನಿರ್ಮಾಣಕ್ಕೆ ಜಾಗ ನೀಡಲಾಗಿತ್ತು. ಆದರೆ, ಸ್ಥಳೀಯರ ವಿರೋಧದಿಂದಾಗಿ ಮಸೀದಿ ನಿರ್ಮಾಣವಾಗಲಿಲ್ಲ. ಹಾಗಾಗಿ ಬಯಲಿನಲ್ಲಿ ಉದ್ಯಾನದಲ್ಲಿ ಪ್ರಾರ್ಥನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ,” ಎಂದು ಹೇಳಿದ್ದಾರೆ.

ಇತ್ತ, ವಕ್ಫ್ ಬೋರ್ಡ್ ಹಾಗೂ ಹಳ್ಳಿಗಳಲ್ಲಿ ಮುಸ್ಲಿಮರಿಗಾಗಿ ಮೀಸಲಿಟ್ಟ ಜಮೀನು ಒತ್ತುವರಿಯಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿರುವ ಜಿಲ್ಲಾಡಳಿತ, ಮುಸ್ಲಿಂ ಸಮುದಾಯ ಪ್ರಾರ್ಥನೆಗಾಗಿ ಜಾಗ ಪಡೆಯಲು ಮುಂದಾದರೆ ಸಹಾಯ ಮಾಡುವುದಾಗಿ ಸ್ಪಷ್ಟಪಡಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More