ಸಮ್ಮಿಶ್ರ ಸರ್ಕಾರ ರಚನೆಗೆ ಕಸರತ್ತು; ರಾಜ್ಯಪಾಲರ ಮುಂದಿರುವ ದಾರಿಗಳೇನು?

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ ಹಾತೊರೆಯುತ್ತಿದೆ. ಸರಳ ಬಹುಮತ ಪಡೆಯದಿದ್ದರೂ ಅದರ ಕನಸು ಕಮರಿಲ್ಲ. ಈ ನಡುವೆ, ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆಗಳು ಹೆಚ್ಚಿವೆ. ಕರ್ನಾಟಕದ ರಾಜಕಾರಣದ ಅಚ್ಚರಿ ಬೆಳವಣಿಗೆಗಳಿಗೆ ರಾಜಭವನ ಮತ್ತೊಮ್ಮೆ ಸಾಕ್ಷಿಯಾಗಿದೆ

ಕರ್ನಾಟಕ ರಾಜಕಾರಣ ಇದೀಗ ಕುತೂಹಲಕರ ಘಟ್ಟಕ್ಕೆ ಬಂದುನಿಂತಿದೆ. ಸರ್ಕಾರ ರಚನೆಗೆ ಕನಿಷ್ಠ ೧೧೧ ಸ್ಥಾನ ಅಗತ್ಯವಾಗಿದೆ. ಆದರೆ ಈಗ ಬಿಜೆಪಿ ೧೦೪ ಸ್ಥಾನ ಪಡೆದಿದೆ. ಸರಳ ಬಹುಮತ ಪಡೆಯಲು ಬಿಜೆಪಿಗೆ ಇನ್ನೂ ೭ ಸ್ಥಾನ ಬೇಕಿದೆ. ಕಾಂಗ್ರೆಸ್‌ ೭೮ ಮತ್ತು ಜೆಡಿಎಸ್‌ ೩೮ ಸ್ಥಾನ ಪಡೆದಿದೆ. ಹೀಗಾಗಿ, ಯಾವ ಪಕ್ಷವೂ ಸರಳ ಬಹುಮತ ಪಡೆಯದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಯಾರು ರಚಿಸಲಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಸರ್ಕಾರ ರಚನೆಯ ಕಸರತ್ತು ಕಡೆಗೆ ರಾಜ್ಯಪಾಲರ ಅಂಗಳಕ್ಕೆ ಬಂದು ತಲುಪಿದೆ. ಎರಡೂ ಪಕ್ಷಗಳ ಮುಖಂಡರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಹೇಗೆ ಚಲಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಗೋವಾ ಸೂತ್ರ ರಾಜ್ಯದಲ್ಲೂ ಮರುಕಳಿಸಬಹುದೇ ಎಂಬ ಪ್ರಶ್ನೆ ಎದ್ದಿದೆ.

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ರಾಜ್ಯಪಾಲರು ನಿರ್ಣಾಯಕ ಪಾತ್ರವನ್ನು ನಿಭಾಯಿಸಲಿದ್ದಾರೆ. ಅತಿ ಹೆಚ್ಚು ಬಹುಮತ ಪಡೆದ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು. ಬಹುಮತ ಸಾಬೀತುಪಡಿಸಲು ಅವಕಾಶ ನೀಡಬಹುದು. ಅಗತ್ಯಬಿದ್ದರೆ ಪಕ್ಷ ಹೊಂದಿರುವ ಬಹುಮತದ ಸಂಖ್ಯೆ ಬಗ್ಗೆ ಸಾಕ್ಷ್ಯಧಾರ ಕೊಡಿ ಎಂದು ಕೇಳಬಹುದು. ಆ ಪಕ್ಷ ಅಗತ್ಯ ಸಂಖ್ಯೆಯನ್ನು ನೀಡಲು ವಿಫಲವಾದಲ್ಲಿ ಅವಕಾಶವನ್ನು ನಿರಾಕರಿಸಬಹುದು.

ಅದೇ ರೀತಿ, ರಾಜ್ಯಪಾಲರು ಮೈತ್ರಿ ಪಕ್ಷಗಳು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಲ್ಲಿ ಅವಕಾಶ ಕೊಡಬಹುದು. ಬಹುಮತ ಸಾಬೀತುಪಡಿಸಿ ಎಂದು ಕೇಳಬಹುದು. ಆದರೆ, ಈ ಎರಡೂ ಅವಕಾಶಗಳನ್ನು ಒದಗಿಸುವುದು ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ಬಿಟ್ಟದ್ದು. ಇನ್ನು, ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಂದರ್ಭವಿದ್ದಲ್ಲಿ ಪುನಃ ಆಯೋಗದ ಮೊರೆಹೋಗಬಹುದು. ಆಯೋಗ ವಿಶ್ಲೇ‍ಷಿಸಿರುವಂತೆ, ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದ ಪಕ್ಷಗಳು ಅಗತ್ಯ ಸಂಖ್ಯಾಬಲ ಹೊಂದಿದ್ದರೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬಹುದು.

೩೮ ಸ್ಥಾನ ಪಡೆದಿರುವ ಜೆಡಿಎಸ್‌ಗೆ ಬೆಂಬಲ ನೀಡಲು ಎಐಸಿಸಿ ಘೋಷಿಸುತ್ತಿದ್ದಂತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, “ನೂತನ ಸರ್ಕಾರ ರಚನೆಗೆ ಕಾಂಗ್ರೆಸ್‌ ನೀಡಿರುವ ಬೆಂಬಲವನ್ನು ನಾನು ಸ್ವೀಕರಿಸಿದ್ದೇನೆ. ಈ ಹಿನ್ನೆಲೆಯಲ್ಲಿ, ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ,” ಎಂದು ತಮ್ಮ ಹಕ್ಕನ್ನು ಮಂಡಿಸಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್‌, ಸಿದ್ದರಾಮಯ್ಯ ಅವರ ನಿಯೋಗವೂ ರಾಜ್ಯಪಾಲರನ್ನು ಭೇಟಿ ಮಾಡಿ ಬೆಂಬಲ ನೀಡಿರುವುದನ್ನು ಖಚಿತಪಡಿಸಿ ಸರ್ಕಾರ ರಚನೆಗೆ ಅವಕಾಶ ನೀಡಲು ಕೋರಿದ್ದಾರೆ.

ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಂತೆ ಬಿಜೆಪಿ ಕೂಡ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಬಹುಮತ ಸಾಬೀತುಪಡಿಸಲು ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ. ಆದರೆ, ರಾಜ್ಯಪಾಲರು ಇದುವರೆಗೂ ತಮ್ಮ ತೀರ್ಮಾನವನ್ನು ಪ್ರಕಟಿಸಿಲ್ಲ.

“ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಸರ್ಕಾರ ರಚನೆಯಲ್ಲಿ ಭಾಗಿ ಆಗಿರುವ ಬಗ್ಗೆ ಮಾಡಿಕೊಂಡಿರುವ ಒಪ್ಪಂದವನ್ನು ರಾಜ್ಯಪಾಲರಿಗೆ ತಲುಪಿಸಿ, ಮೈತ್ರಿ ಪಕ್ಷಗಳು ಪಡೆದಿರುವ ಸರಳ ಬಹುಮತದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಬಹುಮತ ಇರುವ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಆದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಆಹ್ವಾನ ನೀಡಬೇಕು. ಒಂದು ವೇಳೆ, ಬಿಜೆಪಿಯೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಸರಳ ಬಹುಮತ ಪಡೆಯದ ಕಾರಣ ಆ ಪಕ್ಷಕ್ಕೆ ಅವಕಾಶವನ್ನು ನಿರಾಕರಿಸಬಹುದು,” ಎನ್ನುತ್ತಾರೆ, ರಾಜ್ಯದ ಮಾಜಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ ಟಿ ವೆಂಕಟೇಶ್‌.

“ಚುನಾವಣೆಯ ಫಲಿತಾಂಶದ ಚಿತ್ರಣದ ಬಗ್ಗೆ ಚುನಾವಣಾ ಆಯೋಗವೂ ರಾಜ್ಯಪಾಲರಿಗೆ ಮಾಹಿತಿ ನೀಡಿರುತ್ತೆ. ಹೀಗಾಗಿ ಪಕ್ಷಗಳ ಬಲಾಬಲದ ಬಗ್ಗೆಯೂ ಅವರಿಗೆ ಗೊತ್ತಿರುತ್ತೆ. ಕಾಂಗ್ರೆಸ್‌ನಿಂದ ಪಡೆದಿರುವ ಬೆಂಬಲ ಪತ್ರ ಮತ್ತು ಒಪ್ಪಂದ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಬೇಕು. ಮೈತ್ರಿ ಪಕ್ಷಗಳು ಹೊಂದಿರುವ ಬಹುಮತವನ್ನು ಪರಿಶೀಲಿಸಿದ ನಂತರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು,” ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ ವಿ ಧನಂಜಯ.

“ಸರಳ ಬಹುಮತ ಪಡೆಯದ ಸಂದರ್ಭಗಳಲ್ಲಿ ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಬಳಸುತ್ತಾರೆ. ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಲು ಅವಕಾಶಗಳಿವೆಯಾದರೂ, ಮೈತ್ರಿ ಮಾಡಿಕೊಂಡು ಸೂಕ್ತ ಸಂಖ್ಯಾಬಲವನ್ನು ಪ್ರದರ್ಶಿಸುವ ಪಕ್ಷವನ್ನು ಸರ್ಕಾರ ರಚನೆಗೆ ಅವಕಾಶ ನೀಡಬಹುದು,” ಎನ್ನುತ್ತಾರೆ ಮತ್ತೊಬ್ಬ ಕಾನೂನು ತಜ್ಞರು.

ಈ ಹಿಂದೆಯೂ, ಅಂದರೆ ೨೦೦೪ರಲ್ಲೂ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಇದ್ದದ್ದರಿಂದ ಮತ್ತು ಮರು ಚುನಾವಣೆಗೆ ಹೋಗಲು ಯಾವುದೇ ರಾಜಕೀಯ ಪಕ್ಷಗಳು ಆಸಕ್ತಿ ತೋರದೆ ಇದ್ದುದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ೨೦೦೪ರಲ್ಲಿ ಬಿಜೆಪಿ ಮೊದಲ ಬಾರಿಗೆ ಹೆಚ್ಚು ಸ್ಥಾನ ಗಳಿಸಿದ್ದರೂ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಈ ಚುನಾವಣೆಗೆ ಮೊದಲು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಎರಡನೇ ಸ್ಥಾನ ಮತ್ತು ಜೆಡಿಎಸ್‌ ಮೂರನೇ ಸ್ಥಾನಕ್ಕೆ ಇಳಿದಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಮತ್ತು ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್‌ ಸರ್ಕಾರ ರಚಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದನ್ನೂ ಓದಿ : ಫಲಿತಾಂಶ ಅತಂತ್ರ; ಮತದಾರರು ಮತ್ತು ಪಕ್ಷಗಳ ಲೆಕ್ಕಾಚಾರ ಹಳಿ ತಪ್ಪಿದ್ದೆಲ್ಲಿ?

ಗೋವಾ ಸೂತ್ರ ಪುನರಾವರ್ತನೆ?: ಸಮ್ಮಿಶ್ರ ಸರ್ಕಾರ ರಚಿಸಲು ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಗೋವಾ ಸೂತ್ರ ರಾಜ್ಯದಲ್ಲೂ ಪುನರಾವರ್ತನೆ ಆಗಲಿದೆ ಎನ್ನಲಾಗಿದೆ. ಈ ಹಿಂದೆ ಗೋವಾದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ಬಹುಮತಕ್ಕೆ ಅಗತ್ಯ ಸಂಖ್ಯೆ ಸಿಗದೆ ಇದ್ದಾಗ ಇತರ ಪಕ್ಷಗಳ ಜೊತೆ ಮಾತುಕತೆಗೆ ಕಾಂಗ್ರೆಸ್ ವಿಳಂಬ ಮಾಡಿದ್ದರ ಪರಿಣಾಮ ಅಧಿಕಾರ ಕೈತಪ್ಪಿತ್ತು.

ಗೋವಾದಲ್ಲಿ 13 ಸ್ಥಾನ ಗೆದ್ದಿದ್ದ ಬಿಜೆಪಿ, ಹೊಸ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿತ್ತು. ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳ (ಎಂಜಿಪಿ) ತಲಾ ಮೂವರು ಶಾಸಕರ, ಇಬ್ಬರು ಪಕ್ಷೇತರ ಶಾಸಕರ, ಎನ್‌ಸಿಪಿಯ ಒಬ್ಬ ಶಾಸಕನ ಬೆಂಬಲ ಪತ್ರವನ್ನು ಸಲ್ಲಿಸಿದ್ದ ಪರಿಕ್ಕರ್, ರಾಜ್ಯಪಾಲರನ್ನು ಮನವರಿಕೆ ಮಾಡಿಕೊಡುವಲ್ಲಿ ಸಫಲವಾಗಿದ್ದರು. ಪ್ರಮಾಣವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮನೋಹರ್‌ ಪರಿಕ್ಕರ್‌ ಅವರಿಗೆ ಸೂಚಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More