ಟ್ವಿಟರ್ ಸ್ಟೇಟ್ | ಶಾ ರೂಪಿಸಿದ ಕಾರ್ಯತಂತ್ರ ಮಾತ್ರವಷ್ಟೇ ಚಾಣಕ್ಯನೀತಿಯೇ?

ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿರುವುದನ್ನು ಟೀಕಿಸುತ್ತಿರುವ ಟಿವಿ ನಿರೂಪಕರ ಬಗ್ಗೆ ಟ್ವೀಟಿಗರು ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಇಂತಹ ತಂತ್ರಗಳನ್ನು ಚಾಣಕ್ಯನೀತಿ ಎಂದು ಹೊಗಳುವ ಮಾಧ್ಯಮಗಳೇ ಈಗ ಟೀಕಿಸುತ್ತಿರುವುದನ್ನು ಹಲವರು ಪ್ರಶ್ನಿಸಿದ್ದಾರೆ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಕಸರತ್ತು ಬಗ್ಗೆ ಟ್ವಿಟರ್‌ನಲ್ಲಿ ಬಹಳ ರೋಚಕವಾದ ಚರ್ಚೆ ನಡೆದಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಮನವಿ ಕೊಟ್ಟಿರುವುದಕ್ಕೆ ಬಿಜೆಪಿ ಟೀಕಿಸುತ್ತಿರುವುದು ಟ್ವೀಟಿಗರಿಗೆ ಬಹಳ ತಮಾಷೆಯಾಗಿ ಕಂಡಿದೆ. ಈ ಹಿಂದೆ ಮಣಿಪುರ, ಗೋವಾ, ಮೇಘಾಲಯದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಬಹುಮತ ಪಡೆದಿದ್ದರೂ ಬಿಜೆಪಿ ಹಿಂದಿನ ಬಾಗಿಲಿನಿಂದ ಸರ್ಕಾರ ರಚಿಸಿರುವುದನ್ನು ಎಲ್ಲರೂ ಅಮಿತ್ ಶಾ ಅವರ ‘ಚಾಣಕ್ಯ ನೀತಿ’ ಎಂದು ಪ್ರಶಂಸಿಸಿದ್ದರು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅದೇ ಚಾಣಕ್ಯನೀತಿ ಪ್ರದರ್ಶಿಸಿದಾಗ ಅದೇ ಜನರು ಟೀಕಿಸುತ್ತಿರುವುದು ಟ್ವೀಟಿಗರ ಚರ್ಚೆಗೆ ಆಹಾರವಾಗಿದೆ.

“ಹಲವು ಹಿರಿಯ ಮಾಧ್ಯಮ ನಿರೂಪಕರು ಗೋವಾ, ಮಣಿಪುರ ಮತ್ತು ಮೇಘಾಲಯದಲ್ಲಿ ಬಿಜೆಪಿ ಅಧಿಕಾರ ರಚಿಸಿದಾಗ ಚಾಣಕ್ಯ ನೀತಿ ಎಂದು ಹೊಗಳಿತ್ತು. ಆದರೆ ಈಗ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸುತ್ತಿರುವಾಗ ಏಕೆ ಬಾಲಸುಟ್ಟ ಬೆಕ್ಕಿನಂತಾಡುತ್ತಿದ್ದಾರೆ,” ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಪರ ಸುಪ್ರೀಂ ಕೋರ್ಟ್ ವಕೀಲ ಜೈವೀರ್ ಶೆರ್ಗಿಲ್ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಸೈಕತ್ ದತ್ ಅವರು ಹಿಂದೆ ಬಿಜೆಪಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಅರುಣ್ ಜೇಟ್ಲಿ ಅವರ ಟ್ವೀಟ್ನ ಸ್ಕ್ರೀನ್ಶಾಟ್ಗಳನ್ನು ಹಾಕಿ, “ಇದು ಕರ್ನಾಟಕದ ರಾಜ್ಯಪಾಲರಿಗೆ ಮಾರ್ಗದರ್ಶನವಾಗಬೇಕು,” ಎಂದು ಹೇಳಿದ್ದಾರೆ. ಅರುಣ್ ಜೇಟ್ಲಿ ಅವರು ತಮ್ಮ ಟ್ವೀಟ್ಗಳಲ್ಲಿ, “ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸುವಾಗು ಅತೀ ದೊಡ್ಡ ಪಕ್ಷವನ್ನೇ ಕರೆಯಬೇಕೆಂದೇನಿಲ್ಲ. ಸರ್ಕಾರ ರಚಿಸುವ ಸಾಮರ್ಥ್ಯವಿರುವವರನ್ನು ಕರೆಯಬೇಕು,” ಎನ್ನುವ ಹೇಳಿಕೆ ನೀಡಿದ್ದರು. ಪತ್ರಕರ್ತ ಎಂ ಕೆ ವೇಣು ಅವರೂ ಬಿಜೆಪಿ ಇತ್ತೀಚೆಗೆ ಬಹುಮತವಿಲ್ಲದಿದ್ದರೂ ರಚಿಸಿದ ಸರ್ಕಾರಗಳ ಬಗ್ಗೆ ಅಮಿತ್ ಶಾ ಅವರ ಮಾಸ್ಟರ್ ಸ್ಟ್ರೋಕ್, ಚಾಣಕ್ಯನೀತಿ ಎನ್ನುತ್ತಿದ್ದವರೇ ಈ ಬಾರಿ ಟೀಕಿಸುತ್ತಿದ್ದಾರಲ್ಲ ಎಂದು ಅಣಕಿಸಿದ್ದಾರೆ. ಹಿಂದೆ ಅಮಿತ್ ಶಾ ಅವರನ್ನು ಹೊಗಳಿದ ನಿರೂಪಕರಿಗೆ ಈಗ ನೈತಿಕತೆ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಹಳಷ್ಟು ಪತ್ರಕರ್ತರು ಮತ್ತು ಕಾಂಗ್ರೆಸ್ಪರ ಟ್ವೀಟಿಗರು ಅಮಿತ್ ಶಾ ‘ಚಾಣಕ್ಯನೀತಿ’ ಸಂಬಂಧಿಸಿ ಟ್ವೀಟ್ಗಳನ್ನು ಹಾಕಿದ್ದು, ಹೀಗಿವೆ:

ಇದನ್ನೂ ಓದಿ : ಸಮ್ಮಿಶ್ರ ಸರ್ಕಾರ ರಚನೆಗೆ ಕಸರತ್ತು; ರಾಜ್ಯಪಾಲರ ಮುಂದಿರುವ ದಾರಿಗಳೇನು?

ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿದ್ದರೂ, ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರ ಪಡೆಯಲು ಸಾಕಷ್ಟು ಕಸರತ್ತುಗಳನ್ನು ನಡೆಸಲಿದೆ ಎನ್ನುವ ಸಂಶಯವನ್ನು ಅನೇಕ ಟ್ವೀಟಿಗರು ವ್ಯಕ್ತಪಡಿಸಿದ್ದಾರೆ. ವಕೀಲ ಸಿದ್ ಅವರು ಟ್ವೀಟ್ ಮಾಡಿ, “ಕಾಂಗ್ರೆಸ್- ಜೆಡಿಎಸ್ ಒಟ್ಟಾಗಿ ೧೧೮ ಸ್ಥಾನಗಳನ್ನು ಪಡೆದಿವೆ. ಆದರೆ ಬಿಜೆಪಿ ಕೇವಲ ೧೦೪ ಸ್ಥಾನಗಳನ್ನಷ್ಟೇ ಪಡೆದಿದೆ. ಹೀಗಿರುವಾಗ ೧೧೧ ಸ್ಥಾನಗಳಿಲ್ಲದ ಬಿಜೆಪಿ ಮತ್ತೊಂದು ಪಕ್ಷದ ೯ ಶಾಸಕರಿಗೆ ಲಂಚ ಕೊಟ್ಟು ಕರೆಸಿಕೊಳ್ಳಬೇಕಷ್ಟೇ. ಹೀಗಿರುವಾಗ ಯಾವ ಆಯ್ಕೆ ಸೂಕ್ತವೆನಿಸುತ್ತದೆ?” ಎಂದು ಹೇಳಿದ್ದಾರೆ. ಪತ್ರಕರ್ತ ಸಿದ್ಧಾರ್ಥ ಅವರು ಮಾತ್ರ, ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿ ಬಹುಮತ ಪಡೆದ ಬಿಜೆಪಿಯನ್ನೇ ಅಧಿಕಾರ ರಚನೆಗೆ ಆಹ್ವಾನಿಸಲಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ಹರ್ತೋಶ್ ಸಿಂಗ್ ಬಾಲ್ ಅವರು, ಮಾಧ್ಯಮದಲ್ಲಿ ನಿರೂಪಕರು ಕಾಂಗ್ರೆಸ್ ಅಧಿಕಾರ ಕಬಳಿಸಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪ ಹೊರಿಸುತ್ತಿರುವುದನ್ನು ಟೀಕಿಸಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರೂ ಬಿಜೆಪಿ ಅಧಿಕಾರ ಕಬಳಿಸಲು ಪ್ರಯತ್ನಿಸುವ ಸಾಧ್ಯತೆ ಇರುವ ಸಂಶಯ ವ್ಯಕ್ತಪಡಿಸಿದ್ದಾರೆ. “ರಾಜ್ಯಪಾಲರು ಬಿಜೆಪಿಯನ್ನು ಮೊದಲು ಸರ್ಕಾರ ರಚನೆಗೆ ಕರೆದರೆ ಅವರ ಬಳಿ ಬಹುಮತ ರಚನೆಗೆ ೨೧ ದಿನಗಳು ಇರುತ್ತವೆ. ಯಾವುದೇ ರೀತಿಯ ಡೀಲ್ಗಳನ್ನು ಮಾಡಿ ಅಧಿಕಾರ ಕಬಳಿಸಲು ಅಷ್ಟು ದಿನ ಸಾಕು,” ಎನ್ನುವುದು ಬರ್ಖಾ ದತ್ ಅಭಿಪ್ರಾಯವಾಗಿದೆ. ಪತ್ರಕರ್ತರಾದ ಮಿತಾಲಿ ಸರನ್ ಹಾಗೂ ಎಂಕೆ ವೇಣು ಮೊದಲಾದವರೂ ಬಿಜೆಪಿ ಕುದುರೆ ವ್ಯಾಪಾರಕ್ಕೆ ಇಳಿಯುವ ಸಂಶಯಗಳನ್ನೇ ಟ್ವೀಟ್ ಮಾಡಿದ್ದಾರೆ. ಕೆಲವರು ಬಿಜೆಪಿ ಮುಖ್ಯ ಕಚೇರಿಯಲ್ಲಿ ಅಮಿತ್ ಶಾ ಅವರು ಕರ್ನಾಟಕದಲ್ಲಿ ಹೇಗಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿರುವುದನ್ನು ಟ್ವೀಟ್ ಮಾಡಿದ್ದಾರೆ.

ಆದರೆ, ಬಹಳಷ್ಟು ಮಂದಿ ಕರ್ನಾಟಕದಲ್ಲಿ ಯಾರ ಜೊತೆಗೆ ಸರ್ಕಾರ ರಚಿಸಬೇಕು ಎನ್ನುವ ನಿರ್ಧಾರವನ್ನು ಜೆಡಿಎಸ್‌ಗೆ ಬಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಎಸ್ಪಿ ಅಧಿಕೃತ ಟ್ವಿಟರ್ ಖಾತೆಯು, ಮಾಯಾವತಿಯವರು ದೇವೇಗೌಡರ ಜೊತೆಗೆ ಮಾತನಾಡಿ ಕಾಂಗ್ರೆಸ್ ಜೊತೆಗೆ ಸರ್ಕಾರ ರಚಿಸುವಂತೆ ಸಲಹೆ ನೀಡಿರುವುದನ್ನು ತಿಳಿಸಿದೆ. ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯಾಗುವುದನ್ನು ಬೆಂಬಲಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಬಹುಮತ ಹೊಂದಿದ್ದರೂ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಡಲಿಲ್ಲ ಎನ್ನುವುದನ್ನು ಅವರು ನೆನಪಿಸಿಕೊಂಡಿದ್ದಾರೆ. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ, “ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಸ್ ಜೊತೆಗೂಡಿ ಸರ್ಕಾರ ರಚಿಸಿದಲ್ಲಿ ತಪ್ಪಾಗದು. ಬಿಜೆಪಿಯೂ ಇಂತಹ ಸಂದರ್ಭವನ್ನು ಹೀಗೇ ಬಳಸಿಕೊಳ್ಳುತ್ತಿತ್ತು,” ಎಂದು ಹೇಳಿದ್ದಾರೆ. ಬಹಳಷ್ಟು ಟ್ವೀಟಿಗರು ರಾಜ್ಯಪಾಲರು ಬಿಜೆಪಿಗೆ ಮೊದಲ ಅವಕಾಶ ಕೊಡಲಿದ್ದಾರೆ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.

ಬಹಳಷ್ಟು ಮಂದಿ ಬಿಜೆಪಿಗೆ ಕರ್ನಾಟಕ ಮೊದಲಿನಿಂದಲೂ ಕಬ್ಬಿಣದ ಕಡಲೆಯಾಗಿತ್ತು ಎನ್ನುವ ಅಭಿಪ್ರಾಯ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ನಂತರವೂ ಬಿಜೆಪಿ ಅಧಿಕಾರ ರಚಿಸಲು ಸಾಧ್ಯವಾಗದೇ ಇರುವ ಬಗ್ಗೆ ಬಿಜೆಪಿ ಪರಿತಪಿಸುತ್ತಿದೆ ಎಂದು ಅಣಕವಾಡಿದ್ದಾರೆ. ಹಲವರು ಆರಂಭದಲ್ಲಿ ಗೆಲುವಿನ ಸಂತೋಷದಲ್ಲಿ ಸಿಹಿ ಹಂಚುತ್ತಿದ್ದ ಬಿಜೆಪಿ, ಸಂಜೆಯಾಗುವಾಗ ಸಪ್ಪೆ ಮೋರೆ ಹಾಕಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ೨೧ ರ್ಯಾಲಿಗಳನ್ನು ಮಾಡಿದರೂ ಬಿಜೆಪಿ ಪೂರ್ಣ ಬಹುಮತ ಪಡೆಯಲು ಸಾಧ್ಯವಾಗಿರುವುದು ಮೋದಿ ಅಲೆ ಕಡಿಮೆಯಾಗಿರುವ ಸಂಕೇತ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More