ರಾಜ್ಯದಲ್ಲಿ ಅತಂತ್ರ ವಿಧಾನಸಭೆ; ರಾಜ್ಯಪಾಲರ ಮುಂದೆ ಇರುವ ಆಯ್ಕೆಗಳೇನು?

ಕರ್ನಾಟಕದಲ್ಲಿ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರಿಗೆ ಮೈತ್ರಿಕೂಟ ಪಕ್ಷ ಹಾಗೂ ಬಿಜೆಪಿ ಮುಖಂಡರು ತಮ್ಮ ಹಕ್ಕನ್ನು ಮಂಡಿಸಿದ್ದಾರೆ. ರಾಜ್ಯಪಾಲರು ಈ ಸಂಬಂಧ ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಕಾನೂನಿನ ಪಾತ್ರ ಹೇಗಿರಬೇಕು ಎಂಬುದರ ವಿವರಣೆ ಇಲ್ಲಿದೆ

ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲಿ ಯಾರು ಸರ್ಕಾರ ರಚನೆಗೆ ಅರ್ಹರು ಎಂಬ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿದೆ. ಇಂಥ ಸಂದರ್ಭದಲ್ಲಿ ಈ ಹಿಂದೆ ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರಗಳು ಕರ್ನಾಟಕದ ಬಿಕ್ಕಟ್ಟು ಪರಿಹರಿಸುವಲ್ಲಿ ಸಹಾಯವಾಗಲಿದೆ.

ಕೆಪಿಸಿಸಿ ಅಧ್ಯಕ್ಷರು ಮತ್ತು ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ‘ಗೋವಾ ಮಾದರಿ’ಯೇ ಕರ್ನಾಟಕದಲ್ಲೂ ಅನ್ವಯವಾಗಲಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಗೋವಾದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಅಲ್ಲಿನ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿರುವಾಗ, ಇಲ್ಲಿನ ರಾಜ್ಯಪಾಲರು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಅವರ ಆಗ್ರಹ.

ಗೋವಾದಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡದೇ ಬಿಜೆಪಿ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್‌ ತಳೆದಿದ್ದ ಈ ನಿಲುವು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೂ ಕಾನೂನಿನ ಬಲ ತಂದುಕೊಡಲಿದೆ ಎಂದೇ ಭಾವಿಸಲಾಗುತ್ತಿದೆ.

ಮುಖ್ಯಮಂತ್ರಿಯ ಆಯ್ಕೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸಂವಿಧಾನವು ಯಾವುದೇ ನಿರ್ದಿಷ್ಟ ನಿಯಮಗಳನ್ನು ಒಳಗೊಂಡಿಲ್ಲ. ೧೬೪ನೇ ವಿಧಿಯು ಮುಖ್ಯಮಂತ್ರಿಯು ರಾಜ್ಯಪಾಲರಿಂದ ನೇಮಕಗೊಳ್ಳಬೇಕು ಎಂಬುದಾಗಿ ಮಾತ್ರ ಹೇಳುತ್ತದೆ. ರಾಜ್ಯಪಾಲರು ಯಾರನ್ನು ಬೇಕಾದರೂ ಮುಖ್ಯಮಂತ್ರಿಯನ್ನಾಗಿ ನೇಮಿಸಲು ಸ್ವತಂತ್ರರು ಎಂಬುದು ಇದರ ಅರ್ಥವಲ್ಲ. ಸಂಸದೀಯ ಪದ್ಧತಿಯ ನಡಾವಳಿಯ ಪ್ರಕಾರ ರಾಜ್ಯಪಾಲರು, ವಿಧಾನಸಭೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕಾಗುತ್ತದೆ.

ಆದರೆ ಯಾವುದೇ ಪಕ್ಷ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯದಿದ್ದರೆ ರಾಜ್ಯಪಾಲರು ಮುಖ್ಯಮಂತ್ರಿಯ ಆಯ್ಕೆ ಮತ್ತು ನೇಮಕಾತಿಯಲ್ಲಿ ತಮ್ಮ ವಿವೇಚನಾಧಿಕಾರ ಚಲಾಯಿಸಬಹುದು. ಅಂತಹ ಸಂದರ್ಭದಲ್ಲಿ ರಾಜ್ಯಪಾಲರು ಸಾಮಾನ್ಯವಾಗಿ ಅತ್ಯಂತ ದೊಡ್ಡ ಪಕ್ಷದ ಅಥವಾ ಮೈತ್ರಿಕೂಟದ ನಾಯಕನನ್ನು ಮುಖ್ಯಮಂತ್ರಿಯಾಗಿ ನೇಮಿಸಿ, ಒಂದು ತಿಂಗಳೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸುವಂತೆ ಅವರನ್ನು ಕೇಳಿಕೊಳ್ಳಬಹುದು.

ಅತಂತ್ರ ಸ್ಥಿತಿ ನಿರ್ಮಾಣದ ಸಂದರ್ಭದಲ್ಲಿ ರಾಜ್ಯಪಾಲರು ಅನುಸರಿಸಬಹುದಾದ ಕ್ರಮಗಳ ಬಗ್ಗೆ ಗೋವಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೂಡ ಅದಕ್ಕೆ ಮತ್ತಷ್ಟು ಸ್ಪಷ್ಟತೆ ಒದಗಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಸ್ಥಾನ ಪಡೆದ ಪಕ್ಷದ ನಾಯಕರನ್ನು ಸರ್ಕಾರ ರಚಿಸಲು ಮೊದಲು ಕರೆಯುವ ಪರಿಪಾಠ ನಡೆಯುತ್ತಿಲ್ಲ. ರಾಜ್ಯಪಾಲರು ಭದ್ರ ಸರ್ಕಾರ ನೀಡಲಬಲ್ಲ ಮತ್ತು ಬಹುಮತ ಇರುವ ವಿವಿಧ ಪಕ್ಷಗಳ ಮೈತ್ರಿಕೂಟಕ್ಕೆ ಅವಕಾಶ ನೀಡುತ್ತ ಬಂದಿದ್ದಾರೆ. ಗೋವಾ ಮತ್ತು ಮೇಘಾಲಯ ಪ್ರಕರಣಗಳು ಇತ್ತೀಚಿನ ಹೊಸ ನಿದರ್ಶನಗಳು.

ಇಂತಹ ಸಂದರ್ಭಗಳಲ್ಲಿ ರಾಜ್ಯಪಾಲರ ವಿವೇಚನಾಧಿಕಾರದ ಬಗ್ಗೆಯೂ ಚರ್ಚೆ ನಡೆಯುತ್ತಿವೆ. “ಸಂವಿಧಾನದ ನಡವಳಿಕೆ ಪ್ರಕಾರ ವಿವೇಚನೆ ಎಂದರೆ ನ್ಯಾಯಸಮ್ಮತವಾಗಿರಬೇಕು. ಯಾವುದೇ ವಿಷಯದಲ್ಲೂ ಅನುಮಾನಕ್ಕೆ ದಾರಿ ಮಾಡಿಕೊಡಬಾರದು. ವಿವೇಚನೆ ಒಂದು ಕರ್ತವ್ಯ ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ.ವಸ್ತುಸ್ಥಿತಿ ಆಧರಿಸಿ ಸಕಾರಣಗಳನ್ನು ನೀಡಿ ವಿವೇಚನಾಧಿಕಾರವನ್ನು ಚಲಾಯಿಸಬೇಕು,” ಎನ್ನುತ್ತಾರೆ ಹಿರಿಯ ಕಾನೂನು ತಜ್ಞ ಬಿ ಟಿ ವೆಂಕಟೇಶ್‌.

ಗೋವಾದಲ್ಲಿ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕಿಂತ ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ವ್ಯಕ್ತಪಡಿಸಿದೆ. ಇದರ ಪ್ರಕಾರ ಕರ್ನಾಟಕ ರಾಜ್ಯಪಾಲರು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಬೇಕಾಗುತ್ತದೆ. ಒಂದು ವೇಳೆ ಬಿಜೆಪಿಗೆ ಅವಕಾಶ ಕೊಟ್ಟರೆ ಗೋವಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಉಲ್ಲಂಘಿಸಿದಂತಾಗುತ್ತದೆ. ಅದು ರಾಜ್ಯ ಬಿಜೆಪಿಗೆ ಪ್ರತಿಕೂಲವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಗೋವಾದಲ್ಲಿ ಹೆಚ್ಚು ಮತ ಪಡೆದಿದ್ದ ಕಾಂಗ್ರೆಸ್,‌ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿರಲಿಲ್ಲ. ಅಲ್ಲದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಶಾಸಕರ ಸಂಖ್ಯೆಯನ್ನು ಉಲ್ಲೇಖಿಸಿರಲಿಲ್ಲ. ಇದು ಸುಪ್ರೀಂ ಕೋರ್ಟ್‌ ವಿಚಾರಣೆ ವೇಳೆಯಲ್ಲಿ ಪ್ರಸ್ತಾಪವಾಗಿತ್ತು.“ಕಾಂಗ್ರೆಸ್ಸಿಗೆ ಬಹುಮತ ಇದ್ದಿದ್ದರೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲವೇಕೆ? ಅತಂತ್ರ ವಿಧಾಸನಭೆ ರಚನೆಯಾಗಿದ್ದನ್ನು ಒಪ್ಪುತ್ತೇನೆ. ಆದರೆ ೨೨ ಶಾಸಕರ ಬೆಂಬಲ ಇರುವ ಕಾರಣವೇ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು . ಇದು ಚುನಾವಣೋತ್ತರ ಮೈತ್ರಿ,” ಎಂದು ಗೋವಾದ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಶಾಸಕರ ಸಂಖ್ಯೆಯನ್ನು ಉಲ್ಲೇಖಿಸಿ ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಅವಕಾಶ ಮಾಡಿಕೊಡಲು ರಾಜ್ಯಪಾಲರಿಗೆ ಯಾವ ಅವಕಾಶಗಳೂ ಇಲ್ಲ ಎಂದು ಹೇಳಲಾಗುತ್ತಿದೆ.ಈ ಹಿಂದೆಯೂ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕಿಂತ ಬಹುಮತಕ್ಕೆ ಅಗತ್ಯವಾದ ಸಂಖ್ಯಾ ಬಲ ಹೊಂದಿರುವ ಪಕ್ಷಗಳಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ೨೦೦೪ರ ಕರ್ನಾಟಕ ವಿಧಾನಸಭೇ ಚುನಾವಣೆಯಲ್ಲಿ ೭೯ ಶಾಸಕರ ಬಲದೊಂದಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಜಯಗಳಿಸಿತ್ತು. ಆದರೆ ಕಾಂಗ್ರೆಸ್‌(೬೫) ಮತ್ತು ಜೆಡಿಎಸ್‌(೫೮) ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಕೂಟಕ್ಕೆ ಆಗಿನ ರಾಜ್ಯಪಾಲ ಟಿ ಎನ್ ಚತುರ್ವೇದಿ ಅವರು ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದರು.

ಇದನ್ನೂ ಓದಿ : ಬಿಜೆಪಿಯಿಂದ ಜೆಡಿಎಸ್‌ ಶಾಸಕರಿಗೆ ೧೦೦ ಕೋಟಿ ರುಪಾಯಿ ಆಮಿಷ: ಎಚ್‌ಡಿಕೆ ಆರೋಪ

ಅಲ್ಲದೆ, ಬಹಮತವಿಲ್ಲದ ಏಕೈಕ ದೊಡ್ಡ ಪಕ್ಷ ಹಾಗೂ ಬಹುಮತ ಸಾಧಿಸಿರುವ ಮೈತ್ರಿ ಪಕ್ಷಗಳ ಪೈಕಿ ಯಾವುದನ್ನು ಪರಿಗಣಿಸಬೇಕು ಎಂಬ ಗೊಂದಲವೂ ಈ ಹಿಂದೆಯೇ ನಿವಾರಣೆಯಾಗಿದೆ. ೧೯೮೯ರಲ್ಲಿ ಅಂದಿನ ರಾಷ್ಟ್ರಪತಿ ಆರ್ ವೆಂಕಟರಾಮನ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಚುನಾವಣೆ ನಡೆದ ನಂತರ ಯಾವುದೇ ಪಕ್ಷ ಅಥವಾ ಚುನಾವಣಾ ಪೂರ್ವ ಮೈತ್ರಿಕೂಟ ಬಹುಮತ ಪಡೆಯಲು ವಿಫಲವಾದಲ್ಲಿ ಮೈತ್ರಿಯ ಮೂಲಕ ಬಹುಮತ ಗಳಿಸುವ ಪಕ್ಷದ ನಾಯಕರಿಗೆ ದೇಶದ ಪ್ರಧಾನಿಯಾಗಲು ಅವಕಾಶ ಕಲ್ಪಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ಉಲ್ಲೆಖಿಸಿದ್ದರು. ಅಂದು ಜನತಾದಳ ಮೈತ್ರಿಕೂಟ ಬಹುಮತ ಪಡೆಯದಿದ್ದರೂ ವಿ ಪಿ ಸಿಂಗ್‌ ಅವರಿಗೆ ಸರ್ಕಾರ ರಚಿಸಲು ಅವಕಾಶ ದೊರೆತಿತ್ತು. ಇನ್ನು ಕೆಲವೊಮ್ಮೆ ಹೆಚ್ಚು ಸ್ಥಾನ ಗಳಿಸಿದ ಪಕ್ಷ ಅಥವಾ ಮೈತ್ರಿ ಪಕ್ಷಕ್ಕೆ ಸೇರದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಾಗಿ ಸರ್ಕಾರ ರಚನೆಗೆ ಅವಕಾಶ ಕೋರಿದಲ್ಲಿ ಅದಕ್ಕೂ ಸಮ್ಮತಿ ನೀಡಲು ಅವಕಾಶಗಳಿವೆ.ದೇಶದಲ್ಲಿ ಇಂತಹ ಮೈತ್ರಿ ಸರ್ಕಾರದ ಅನೇಕ ಉದಾಹರಣೆಗಳಿವೆ. 2005ರಲ್ಲಿ ಜಾರ್ಖಂಡ್ನ 81 ಸ್ಥಾನಗಳ ಪೈಕಿ ಬಿಜೆಪಿ 30 ಸ್ಥಾನಗಳನ್ನು ಗಳಿಸಿತ್ತು. ಹಾಗೂ ಜೆಎಂಎಂ ಪಕ್ಷದ 17 ಮತಗಳು ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಿತ್ತು. 1952ರಲ್ಲಿ ಮದ್ರಾಸ್, 2002ರಲ್ಲಿ ಜಮ್ಮುಕಾಶ್ಮೀರ, 2013ರಲ್ಲಿ ನವದೆಹಲಿಯಲ್ಲಿ ಕೂಡ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More