ಟ್ವಿಟರ್ ಸ್ಟೇಟ್‌ | ಕುದುರೆ ವ್ಯಾಪಾರವೂ ಒಂದು ಕಲೆ ಎನ್ನುವ ಬಿಜೆಪಿಪರ ಸಾಹಿತಿ

ಸರ್ಕಾರ ರಚಿಸುವ ನಿರ್ಣಯದ ಸವಾಲು ರಾಜ್ಯಪಾಲ ವಾಜುಬಾಯಿ ವಾಲ ಮುಂದಿದೆ. ರಾಜ್ಯಪಾಲರು ಸರ್ಕಾರ ರಚನೆಗೆ ಯಾರನ್ನು ಕರೆಯುತ್ತಾರೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ಕೆಲವರು ಸರ್ಕಾರ ರಚನೆಗೆ ನಡೆಯುವ ಕುದುರೆ ವ್ಯಾಪಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸಂಪೂರ್ಣ ಬಹುಮತ ದೊರೆಯದೆ ಇರುವ ಸಂದರ್ಭ ಸರ್ಕಾರ ರಚಿಸುವ ವಿಚಾರದಲ್ಲಿ ಒಂದು ನಿರ್ಣಯ ತೆಗೆದುಕೊಳ್ಳಬೇಕಾದ ಸವಾಲು ರಾಜ್ಯಪಾಲ ವಾಜುಬಾಯಿ ವಾಲ ಅವರ ಮುಂದಿದೆ. ರಾಜ್ಯಪಾಲರು ಮೊದಲು ಸರ್ಕಾರ ರಚನೆಗೆ ಯಾರನ್ನು ಕರೆಯುತ್ತಾರೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಬಿಜೆಪಿ ಪರ ವ್ಯಕ್ತಿಗಳು ರಾಜ್ಯಪಾಲರು ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿದ ಪಕ್ಷವನ್ನೇ ಸರ್ಕಾರ ರಚನೆಗೆ ಕರೆಯಬೇಕು ಎಂಬ ಅಭಿಪ್ರಾಯ ನೀಡುತ್ತಿದ್ದರೆ, ಕಾಂಗ್ರೆಸ್‌ ಪರವಾಗಿರುವವರು ಜೆಡಿಎಸ್‌ ಮತ್ತು ಕಾಂಗ್ರೆಸ್ ಪರ ಸರ್ಕಾರಕ್ಕೆ ಅವಕಾಶ ಕೊಡಬೇಕು ಎಂದು ವಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಚರ್ಚೆ ಬಹಳ ಕುತೂಹಲಕರವಾಗಿದೆ.

ಲೇಖಕಿ ಶೋಭಾ ಡೇ ಅವರು ಟ್ವೀಟ್ ಮಾಡಿ, “ಪ್ರಮುಖ ನಿರ್ಣಯವೊಂದನ್ನು ಕೇಂದ್ರ ಸರ್ಕಾರದ ಆದೇಶದಂತೆ ನಡೆಯುವ ರಾಜ್ಯಪಾಲರಿಗೆ ಬಿಟ್ಟುಬಿಡುವುದು ಪ್ರಜಾಸತ್ತಾತ್ಮಕವೇ/ ಪಾರದರ್ಶಕವೆ,” ಎಂದು ಪ್ರಶ್ನಿಸಿದ್ದಾರೆ. ಶೋಭಾ ಅವರಿಗೆ ಉತ್ತರಿಸಿದ ಅಂಕಣಕಾರರಾದ ರೂಪಾ ಸುಬ್ರಹ್ಮಣ್ಯಂ, “ಕಾಂಗ್ರೆಸ್ ದಶಕಗಳಿಂದ ಪರಿಪೂರ್ಣತೆ ಪಡೆದಿರುವಂತಹ ಕೆಲಸವನ್ನೇ ಈಗ ಬಿಜೆಪಿ ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವಲ್ಲಿ ಕಾಂಗ್ರೆಸ್ ಬಹಳಷ್ಟು ಕೊಡುಗೆ ನೀಡಿರುವುದರಲ್ಲಿ ಸಂಶಯವೇ ಇಲ್ಲ. ಇಂದಿರಾ ಗಾಂಧಿ ಅವರು ಪ್ರಮುಖ ರಾಜ್ಯಗಳಿಗೆ ದುರ್ಬಲ ರಾಜ್ಯಪಾಲರನ್ನು ನೇಮಿಸುತ್ತಿದ್ದುದೂ ತಿಳಿದ ವಿಷಯ. ಅದು ಪ್ರಜಾಸತ್ತಾತ್ಮಕವೇ ಅಥವಾ ಪಾರದರ್ಶಕವೇ ಎಂದು ಯಾರೂ ಪ್ರಶ್ನಿಸುತ್ತಿರಲಿಲ್ಲ,” ಎಂದು ಹೇಳಿದ್ದಾರೆ. ಹೀಗೆ ದುರ್ಬಲ ರಾಜ್ಯಪಾಲರು ಪ್ರಮುಖ ನಿರ್ಧಾರವೊಂದನ್ನು ಪಾರದರ್ಶಕವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕರ್ನಾಟಕದ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಪತ್ರಕರ್ತ ರಾಹುಲ್ ಕನ್ವಲ್, “ಕುಮಾರಸ್ವಾಮಿ ಅವರು ವಾಜುಭಾಯ್ ವಾಲಾ ಅವರಿಗೆ ಗೋವಾ ಮತ್ತು ಮಣಿಪುರ ರಾಜ್ಯಪಾಲರು ಚುನಾವಣಾ ನಂತರದ ಅತೀ ದೊಡ್ಡ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿರುವುದನ್ನು ವಿವರಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಬಳಿ ಬಹುಮತದ ಶಾಸಕರಿದ್ದರೂ ಬಿಜೆಪಿ ಸರ್ಕಾರ ರಚಿಸಲು ತರಾತುರಿಯಲ್ಲಿದೆ. ಬಿಜೆಪಿಯ ಆಪರೇಶನ್ ಕಮಲ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ,” ಎಂದು ವಿವರ ನೀಡಿ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿಯವರು ಇತರ ರಾಜ್ಯಗಳನ್ನು ಉದಾಹರಣೆಯಾಗಿ ನೀಡಿರುವ ಹಿನ್ನೆಲೆಯಲ್ಲಿ ವಾಸ್ತವದಲ್ಲಿ ಈ ಲೆಕ್ಕಾಚಾರ ಹೇಗಿರುತ್ತದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ವಕೀಲ ಸಿದ್ ಅವರು ಟ್ವೀಟ್ ಮಾಡಿ ಗೋವಾ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದಾರೆ. “೨೦೧೭ರಲ್ಲಿ ಗೋವಾದಲ್ಲಿ ರಾಜ್ಯಪಾಲರು ಅತೀ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವನ್ನು ಅಧಿಕಾರ ರಚಿಸಲು ಕರೆಯದೆ, ಅತೀ ಹೆಚ್ಚು ಬಹುಮತವನ್ನು ತೋರಿಸಿದ ಮೈತ್ರಿಕೂಟವನ್ನು ಅಧಿಕಾರ ರಚಿಸಲು ಆಹ್ವಾನಿಸಿರುವುದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಹೀಗಾಗಿ ಸಂಖ್ಯೆ ತಮ್ಮ ಬಳಿಯಿದ್ದರೆ ಅಧಿಕಾರ ರಚಿಸಲು ಅವಕಾಶ ಪಡೆಯಬಹುದು ಎನ್ನುವುದನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ,” ಎಂಬ ವಿವರವನ್ನು ನೀಡಿ ಟ್ವೀಟ್ ಮಾಡಿದ್ದಾರೆ ಸಿದ್. ಪತ್ರಕರ್ತೆ ಸಾಗರಿಕಾ ಘೋಷ್ ಅವರೂ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. “ಎಸ್‌ಆರ್ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಎತ್ತಿಹಿಡಿದಿರುವುದು: ‘ಒಂದು ರಾಜಕೀಯ ಪಕ್ಷವು ಮತ್ತೊಂದು ರಾಜಕೀಯ ಪಕ್ಷದ ಜೊತೆಗೂಡಿ ಬಹುಮತವಿದೆ ಎಂದು ತೋರಿಸಿದಲ್ಲಿ, ರಾಜ್ಯಪಾಲರು ಆ ಮೈತ್ರಿಕೂಟ ಬಹುಮತವನ್ನು ಅನೈತಿಕ ಮಾದರಿಯಲ್ಲಿ ಪಡೆದುಕೊಂಡಿಲ್ಲ ಎನ್ನುವುದನ್ನು ತಿಳಿದ ನಂತರ ಅಧಿಕಾರ ರಚನೆ ಮಾಡದಂತೆ ತಡೆಯುವಂತಿಲ್ಲ. ರಾಜ್ಯಪಾಲರು ಸರ್ವಾಧಿಕಾರಿ ರಾಜಕೀಯ ಮಧ್ಯವರ್ತಿಗಳಲ್ಲ’ ಎಂದು ಹೇಳಿದೆ” ಎಂದು ಸಾಗರಿಕಾ ಘೋಷ್ ಟ್ವೀಟ್ ಮಾಡಿದ್ದಾರೆ. “ಮೊದಲನೆಯದಾಗಿ ಕರ್ನಾಟಕ ವಿಧಾನಸಭೆಗೆ ಆರಿಸಿ ಬಂದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಡಬೇಕು. ಎರಡನೆಯದಾಗಿ ಕಳೆದ ವರ್ಷ ಗೋವಾದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ನಿಯಮವನ್ನು ಮುರಿದಿರುವುದು ಬಿಜೆಪಿ,” ಎಂದು ಲೇಖಕ ಸದಾನಂದ ಧುಮೆ ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಟ್ವೀಟಿಗರು ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ರಚಿಸಿಯೇ ಬಿಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ವಾಜುಬಾಯಿವಾಲ ಹೆಸರಿನ ಬದಲಾಗಿ ಅಮಿತ್ ಶಾ ಎಂದೇ ಹೇಳಿ. ಎರಡೂ ಒಂದೇ. ಬಿಜೆಪಿ ಕರ್ನಾಟಕದಲ್ಲಿ ಸರ್ಕಾರ ರಚಿಸಲಿದೆ ಎಂದು ಯೋಗೇಂದ್ರ ಯಾದವ್ ಹೇಳಿರುವುದು ಸರಿ,” ಎಂದು ಪತ್ರಕರ್ತೆ ಸಂಜುಕ್ತಾ ಬಸು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಯೋಗೇಂದ್ರ ಯಾದವ್ ಅವರು, “ಕೆಲವೇ ದಿನಗಳಲ್ಲಿ ನನ್ನ ಮಾತಿನ ಸತ್ಯ ನಿಮಗೆ ಅರಿವಾಗಲಿದೆ. ಏನೇ ಆದರೂ ಬಿಜಪಿ ಸರ್ಕಾರ ರಚಿಸಿಯೇ ತೀರುತ್ತದೆ,” ಎಂದು ಟ್ವೀಟ್ ಮಾಡಿದ್ದಾರೆ. “ಬಿಜೆಪಿ ಮೇಘಾಲಯ, ಮಿಜೋರಾಂ, ಗೋವಾದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಮೌನವಾಗಿತ್ತು. ಹಣ ಸುರಿದು ಶಾಸಕರನ್ನು ಕೊಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಶಾಸಕರನ್ನು ಹೀಗೆ ಹಣಕೊಟ್ಟು ಕೊಂಡುಕೊಳ್ಳಬಹುದು ಎನ್ನುವುದೇ ಬಹಳ ದೊಡ್ಡ ವಿಪರ್ಯಾಸ,” ಎಂದು ಸಂಜುಕ್ತಾ ಉತ್ತರದ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯಿಂದ ಜೆಡಿಎಸ್‌ ಶಾಸಕರಿಗೆ ೧೦೦ ಕೋಟಿ ರುಪಾಯಿ ಆಮಿಷ: ಎಚ್‌ಡಿಕೆ ಆರೋಪ

ಬಿಜೆಪಿ ಅಧಿಕಾರ ರಚಿಸಲು ಕುದುರೆ ವ್ಯಾಪಾರಕ್ಕೆ ಇಳಿಯಬಹುದು ಎನ್ನುವ ಊಹೆಯೇ ಬಹಳಷ್ಟು ಮಂದಿ ಆ ಬಗ್ಗೆ ಚರ್ಚೆ ಮಾಡುವಂತೆ ಪ್ರೇರೇಪಿಸಿದೆ. ಸಾಮಾನ್ಯವಾಗಿ ಬಿಜೆಪಿ ಪರ ಟ್ವೀಟ್ ಮಾಡುವ ಜನಪ್ರಿಯ ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿ, “ಯಾರಿಗೂ ಸ್ಪಷ್ಟ ಬಹುಮತ ಸಿಗದೆ ಇದ್ದಾಗ ನೈತಿಕ ದಾರಿಯೇ ಇರುವುದಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ನೈತಿಕವಾಗಿ ನಡೆದುಕೊಳ್ಳಬೇಕು ಎಂದು ಹೇಳುವ ವ್ಯರ್ಥ ಕೆಲಸ ಮಾಡುವುದು ಬೇಡ. ಕುದುರೆ ವ್ಯಾಪಾರವೂ ಒಂದು ಕಲೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮತ್ತೊಂದು ಪರೀಕ್ಷೆ. ಯಾರು ಚೆನ್ನಾಗಿ ವ್ಯಾಪಾರ ಮಾಡುತ್ತಾರೆ ನೋಡೋಣ,” ಎಂದು ಟ್ವೀಟ್ ಮಾಡಿದ್ದಾರೆ. ನೈತಿಕತೆ ಅಗತ್ಯವಿಲ್ಲ ಎನ್ನುವ ಚೇತನ್ ಭಗತ್ ಅವರ ಟ್ವೀಟ್‌ಗೆ ಹಲವು ಟ್ವೀಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ರಾಹುಲ್ ಕನ್ವಲ್ ಟ್ವೀಟ್ ಮಾಡಿ, “ಪುಸ್ತಕಗಳನ್ನು ಬರೆಯುವುದು ಒಂದು ಕಲೆ. ಕುದುರೆ ವ್ಯಾಪಾರ ಅಪರಾಧ. ಅಕ್ರಮ ಕೆಲಸವನ್ನು ವೈಭವೀಕರಿಸಬೇಡಿ. ಶಾಸಕರನ್ನು ಖರೀದಿಸುವುದು ಮತ್ತು ಮಾರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಅಂತಹ ಅಪರಾಧಗಳ ವಿರುದ್ಧ ಪ್ರಜೆಗಳು ಧ್ವನಿ ಎತ್ತಬೇಕು. ವಿಧಾನಸೌಧಕ್ಕೆ ಯಾರೇ ಸೂಟ್‌ಕೇಸ್ ತಂದರೂ ಅದನ್ನು ವಿರೋಧಿಸಬೇಕು,”ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಚೇತನ್ ಭಗತ್, “ನಾನು ಇದನ್ನು ಪರಿಸ್ಥಿತಿ ಗಮನಿಸಿ ಹೇಳಿದ್ದೇನೆ. ಯಾರಿಗೂ ಸ್ಪಷ್ಟಬಹುಮತ ಸಿಗದೆ ಇರುವಾಗ ಪರಿಹಾರವಿರುವುದಿಲ್ಲ. ಕುದುರೆವ್ಯಾಪಾರವೆಂದರೆ ಹಣಮಾತ್ರವಲ್ಲ, ನಿಜವಾದ ರಾಜಕೀಯವನ್ನೂ ಹೇಳಬಹುದು. ೩೮ ಸ್ಥಾನಗಳನ್ನು ಪಡೆದ ಪಕ್ಷದ ಮುಖಂಡನನ್ನು ಮುಖ್ಯಮಂತ್ರಿ ಮಾಡುವುದೂ ಕುದುರೆ ವ್ಯಾಪಾರದಷ್ಟೇ ಕೆಟ್ಟದಾಗಿರುತ್ತದೆ,” ಎಂದು ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಬಹಳ ರಾಷ್ಟ್ರನಿಷ್ಠ ಬದ್ಧತೆ ಇರುವ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಗೆ ತಮ್ಮ ನೈತಿಕ ಮೌಲ್ಯ ಪ್ರಕಟಿಸಲು ಇರುವ ಅವಕಾಶವಿದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. “ಬಿಜೆಪಿ ಪಕ್ಷದ ನಿಜವಾದ ಮೌಲ್ಯವನ್ನು ತೋರಿಸಬೇಕೆಂದಿದ್ದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರವನ್ನು ರಚಿಸಲು ಅವಕಾಶ ಕೊಡಬೇಕು. ಆ ಸರ್ಕಾರ ಬಿದ್ದು ಹೋದರೆ ಸ್ಪಷ್ಟ ಬಹುಮತದಿಂದ ಬಿಜೆಪಿ ಮರಳಿ ಅಧಿಕಾರಕ್ಕೆ ಬರಬಹುದು. ಇನ್ಯಾವುದೇ ಹೆಜ್ಜೆಯೂ ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡಲಿದೆ,” ಎಂದು ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಟ್ವೀಟ್ ಮಾಡಿದ್ದಾರೆ. ಕುದುರೆ ವ್ಯಾಪಾರಕ್ಕೆ ಸಂಬಂಧಿಸಿ ಹಲವು ರೀತಿಯ ಚರ್ಚೆಗಳು ಟ್ವಿಟರ್‌ನಲ್ಲಿ ನಡೆದಿದೆ.

ಆದರೆ ಪ್ರಜಾಪ್ರಭುತ್ವದಲ್ಲಿ ನೈತಿಕ ಮೌಲ್ಯಗಳು ಅಗತ್ಯ ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಗೋವಾದಲ್ಲಿ ಬಿಜೆಪಿ ಹಿಂದಿನ ಬಾಗಿಲಲ್ಲಿ ಸರ್ಕಾರ ರಚಿಸಿದೆ. ಬಿಜೆಪಿ ಮತ್ತು ಪಿಡಿಪಿ ಸರ್ಕಾರ ರಚನೆಯನ್ನೂ ನಾನು ಟೀಕಿಸಿದ್ದೆ. ಬಿಜೆಪಿ ಜೊತೆಗೆ ನಿತೀಶ್ ಕುಮಾರ್ ಅವರನ್ನೂ ವಿರೋಧಿಸಿದ್ದೇನೆ,” ಎಂದು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ. ಕೆಲವರು ಮಾಧ್ಯಮವೊಂದರಲ್ಲಿ ಬಿಜೆಪಿ ವಕ್ತಾರರು ಅಮಿತ್‌ ಶಾ ಹೇಗಾದರೂ ಸರ್ಕಾರ ರಚಿಸುವ ಚಾಣಕ್ಯ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದನ್ನು ಟ್ವೀಟ್ ಮಾಡಿ ವಿರೋಧಿಸಿದ್ದಾರೆ. “ಮಧ್ಯಾಹ್ನ, ಕಾಂಗ್ರೆಸ್ ಮತಪ್ರಮಾಣ ಅತ್ಯಧಿಕ. ಬಿಜೆಪಿಯ ಬಳಿ ಅತ್ಯಧಿಕ ಸ್ಥಾನಗಳಿವೆ ಎನ್ನುವ ವಿಚಾರ ಮುಂದೆ ಬಂದಾಗ ಮಾಧ್ಯಮದ ವಿಶ್ಲೇಷಕರ ಅಭಿಪ್ರಾಯ, ‘ನೈತಿಕ ಜಯ ಮುಖ್ಯವಲ್ಲ, ರಾಹುಲ್ ಗಾಂಧಿ ಬಿಜೆಪಿಯನ್ನು ಸೋಲಿಸಲಾರರು’ ಎಂದು ಹೇಳುತ್ತಾರೆ. ಸಂಜೆಗಾಗುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚಿಸುವ ನಿರ್ಧಾರವಾಗುತ್ತದೆ. ಆಗ ಅದೇ ವಿಶ್ಲೇಷಕರ ಅಭಿಪ್ರಾಯ, ‘ಕೇವಲ ಬಿಜೆಪಿಯನ್ನು ಸೋಲಿಸಲು ರಾಹುಲ್ ನೈತಿಕತೆಯನ್ನು ಬಿಡುವಂತಿಲ್ಲ’ ಎಂದು ಹೇಳುತ್ತಾರೆ” ಎಂದು ಸಾಹಿತಿ ರಘು ಕಾರ್ನಾಡ್ ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಅವರೂ ಪಕ್ಷಗಳು ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಸೂಯಶ್ ಗಾರ್ಗ್‌ ಟ್ವೀಟ್ ಮಾಡಿ, ನೈತಿಕವಾಗಿ ಸರಿಯೇ ಅಥವಾ ತಪ್ಪೇ ಎನ್ನುವುದು ಮುಖ್ಯವಲ್ಲ. ೪೦ ಶಾಸಕರ ಪಕ್ಷದ ಮುಖಂಡ ಮುಖ್ಯಮಂತ್ರಿಯಾದರೆ ಸ್ಥಿರತೆಯ ಗ್ಯಾರಂಟಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಮೈತ್ರಿಕೂಟ ಎಷ್ಟು ಸ್ಥಿರವಾಗಿರುತ್ತದೆ ಎನ್ನುವ ಬಗ್ಗೆ ಟ್ವಿಟರ್‌ನಲ್ಲಿ ಹಲವು ಚರ್ಚೆಗಳು ನಡೆದಿವೆ. ಯೋಗೇಂದ್ರ ಯಾದವ್ ಪ್ರಕಾರ ಮತದಾರರಿಗೆ ಇನ್ನೂ ಪರಿಣಾಮಕಾರಿ ಪರ್ಯಾಯ ಸಿಕ್ಕಿಲ್ಲ. ಇದೇ ಕಾರಣದಿಂದ ಯಾರಿಗೂ ಸ್ಪಷ್ಟ ಬಹುಮತ ಕೊಡಲಾಗಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More