ನೀವು ಗಾಢ ನಿದ್ರೆಯಲ್ಲಿದ್ದಾಗ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?

ಯಡಿಯೂರಪ್ಪ ಅಂದುಕೊಂಡಂತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ಬಳಿಕ ಬುಧವಾರ ತಡರಾತ್ರಿ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಕಾನೂನು ಸಮರದ ಸ್ವಾರಸ್ಯ ಇಲ್ಲಿದೆ

ತಮ್ಮ ಚುನಾವಣಾಪೂರ್ವ ಘೋಷಣೆಯಂತೆ ಬಿ ಎಸ್ ಯಡಿಯೂರಪ್ಪ ಅವರು ಮೇ ೧೭ರ ಗುರುವಾರ ಬೆಳಗ್ಗೆ ೯ಕ್ಕೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸರ್ಕಾರ ರಚನೆಗೆ ಬಿಜೆಪಿಯ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಬುಧವಾರ ರಾತ್ರಿ ೯ಕ್ಕೆ ನೀಡಿದ ಆಹ್ವಾನವನ್ನು ಪ್ರಶ್ನಿಸಿ ತಡರಾತ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಹವಾಲನ್ನು ಬೆಳಗಿನ ಜಾವದವರೆಗೆ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ ಬೆಳಗಿನ ಜಾವದ ಹೊತ್ತಿಗೆ, “ಪ್ರಮಾಣವಚನಕ್ಕೆ ತಡೆ ನೀಡಲಾಗದು. ರಾಜ್ಯಪಾಲರ ತೀರ್ಮಾನಕ್ಕೆ ನ್ಯಾಯಾಲಯ ತಡೆ ನೀಡುವುದಿಲ್ಲ,” ಎಂದು ಹೇಳಿತ್ತು. ಆ ಮೂಲಕ ಯಡಿಯೂರಪ್ಪ ಪ್ರಮಾಣವಚನಕ್ಕೆ ತಕ್ಷಣಕ್ಕೆ ಎದುರಾಗಿದ್ದ ಆತಂಕ ದೂರವಾಗಿತ್ತು.

ಆದರೆ, ಅದೇ ಹೊತ್ತಿಗೆ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮದ ಕಾನೂನು ಸಾಧ್ಯಾಸಾಧ್ಯತೆಯ ಕುರಿತ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಶುಕ್ರವಾರದ ವಿಚಾರಣೆಯ ವೇಳೆಗೆ ಯಡಿಯೂರಪ್ಪ ಅವರನ್ನು ಬೆಂಬಲಿಸಿರುವ ಶಾಸಕರ ಪಟ್ಟಿಯನ್ನು ಒದಗಿಸುವಂತೆಯೂ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಶರದ್ ಅರವಿಂದ್ ಬೊಡ್ಬೆ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಶುಕ್ರವಾರ ವಿಚಾರಣೆ ಮುಂದುವರಿಯಲಿದೆ.

ನ್ಯಾಯಪೀಠದ ಮುಂದೆ ಬುಧವಾರ ತಡರಾತ್ರಿ, ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಬಿಜೆಪಿ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಖುಲ್ ರೋಹಟಗಿ, ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿ ತಮ್ಮ ವಾದ ಮಂಡಿಸಿದರು. ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೂಡ ವಿಚಾರಣೆಗೆ ಹಾಜರಾಗಿದ್ದರು.

ಸರ್ಕಾರ ರಚನೆಯ ವಿಷಯದಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬ ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ನ್ಯಾಯಾಲಯ ಅಡ್ಡಬರುವಂತಿಲ್ಲ ಎಂದು ಮುಕುಲ್ ರೋಹಟಗಿ ವಾದಿಸಿದರು. ಆದರೆ, ಶಾಸಕರ ಸಂಖ್ಯಾಬಲದ ವಿವರವನ್ನು ನ್ಯಾಯಪೀಠದ ಮುಂದಿಟ್ಟ ಅಭಿಷೇಕ್ ಸಿಂಘ್ವಿ, “ಕಾಂಗ್ರೆಸ್ ಮತ್ತು ಜೆಡಿಎಸ್‌ ತಮ್ಮ ಚುನಾವಣೋತ್ತರ ಮೈತ್ರಿ ಮತ್ತು ತಮಗಿರುವ ಸದಸ್ಯಬಲದ ಕುರಿತು ಮೇ ೧೫ರಂದೇ ರಾಜ್ಯಪಾಲರಿಗೆ ಮನವರಿಕೆ ಮಾಡಿವೆ. ಆದರೆ, ಬಿಜೆಪಿಗೆ ಯಾವುದೇ ಬಹುಮತವಿಲ್ಲ,” ಎಂದು ಪ್ರತಿವಾದ ಮಂಡಿಸಿದರು.

ಅಲ್ಲದೆ, ಸರ್ಕಾರಿಯಾ ಕಮೀಷನ್ ಶಿಫಾರಸುಗಳನ್ನು ಉಲ್ಲೇಖಿಸಿದ ಸಿಂಘ್ವಿ, ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿದರು. ಆದರೆ, ಮಧ್ಯಪ್ರವೇಶಿಸಿದ ನ್ಯಾಯಪೀಠ, “ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರಲ್ಲವೇ?” ಎಂದು ಪ್ರಶ್ನಿಸಿತು. ಆದರೆ, ಸಿಂಘ್ವಿ, “ಇಲ್ಲ, ಸರ್ಕಾರಿಯಾ ಕಮೀಷನ್ ಪ್ರಕಾರ ಬಹುಮತಕ್ಕೆ ಅಗತ್ಯ ಸದಸ್ಯಬಲ ಹೊಂದಿರುವ ಮೈತ್ರಿಕೂಟವನ್ನು ಆಹ್ವಾನಿಸಬೇಕಿತ್ತು,” ಎಂದರು. ಜೊತೆಗೆ, ಗೋವಾ ಸರ್ಕಾರ ರಚನೆಯ ವಿಷಯದಲ್ಲಿ ಸರ್ಕಾರಿಯಾ ಕಮೀಷನ್ ಕುರಿತ ತೀರ್ಮಾನವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿತ್ತು ಎಂಬುದನ್ನೂ ಪೀಠದ ಮುಂದೆ ಉಲ್ಲೇಖಿಸಿದರು.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ, ತಮಗೆ ಬಹುಮತ ಸಾಬೀತಿಗೆ ಏಳು ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದರೆ, ರಾಜ್ಯಪಾಲರು ೧೫ ದಿನ ಅವಕಾಶ ನೀಡಿದ್ದಾರೆ ಎಂಬ ಅಂಶವನ್ನೂ ಪ್ರಸ್ತಾಪಿಸಿದ ಸಿಂಘ್ವಿ, “ಅಷ್ಟೊಂದು ದೀರ್ಘ ಕಾಲಾವಕಾಶ ನೀಡುವುದು, ಕುದುರೆ ವ್ಯಾಪಾರದಂತಹ ಸಂವಿಧಾನ ವಿರೋಧಿ ಪಾಪಕೃತ್ಯಕ್ಕೆ ಅವಕಾಶ ನೀಡಿದಂತೆ,” ಎಂದೂ ಹೇಳಿದರು.

ಆಗ, ನ್ಯಾ.ಸಿಕ್ರಿ ಅವರು, “ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಆ ಪಕ್ಷ ತಾನು ಬಹುಮತ ಸಾಬೀತು ಮಾಡುವುದಾಗಿ ಹೇಳಿದೆ. ಆದರೆ, ನೀವು ಅವರಿಗೆ ಇತರ ಯಾರ ಬೆಂಬಲವೂ ಇಲ್ಲ ಎನ್ನುತ್ತಿದ್ದೀರಿ, ಏನಿದು?” ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಯಾಗಿ, “ಬಿಜೆಪಿ ಸದ್ಯ ೧೦೪ ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್‌ನ ಎಂಟು ಮಂದಿ ಶಾಸಕರು ಪಕ್ಷ ತೊರೆದು ಆ ಪಕ್ಷಕ್ಕೆ ಬೆಂಬಲ ನೀಡದೆ ಇದ್ದಲ್ಲಿ ಅವರು ಬಹುಮತ ಪಡೆಯುವುದು ಸಾಧ್ಯವೇ ಇಲ್ಲ,” ಎಂಬ ಅಂಶವನ್ನೂ ಸಿಂಘ್ವಿ ಪ್ರಸ್ತಾಪಿಸಿದರು.

ಆಗ ನ್ಯಾಯಪೀಠ, “ಆದರೆ, ಶಾಸಕರನ್ನು ಪಕ್ಷಾಂತರ ಮಾಡುವುದು ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಕಾನೂನುಬಾಹಿರ,” ಎಂದು ಅಭಿಪ್ರಾಯಪಟ್ಟಿತು.

ಇದನ್ನೂ ಓದಿ : ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ರಾಮ್ ಜೇಠ್ಮಲಾನಿ ಅರ್ಜಿ
ಇದನ್ನೂ ಓದಿ : ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಬದಲಾವಣೆ ಸಾಧ್ಯವಿದೆಯೇ?

ನ್ಯಾ.ಎಸ್ ಎ ಬೋಡ್ಬೆ, “ಒಂದು ವೇಳೆ ನ್ಯಾಯಾಲಯ ಈಗ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿದರೆ, ಯಾವುದೇ ಸರ್ಕಾರ ರಚನೆಯಾಗದೆ ಇರಬಹುದು,” ಎಂದು ಅಭಿಪ್ರಾಯಪಟ್ಟರು. ಅಲ್ಲದೆ, “ಸಂವಿಧಾನದ ೩೬೧ನೇ ವಿಧಿಯನ್ವಯ ರಾಜ್ಯಪಾಲರಿಗೆ ಕೆಲವು ವಿಶೇಷಾಧಿಕಾರಗಳಿವೆ,” ಎಂಬುದನ್ನೂ ನೆನಪಿಸಿದರು.

ಆಗ ಸಿಂಘ್ವಿ ಅವರು, “ಮೇಘಾಲಯ, ಮಣಿಪುರ ಮತ್ತು ಗೋವಾದ ಉದಾಹರಣೆಗಳನ್ನು ನೀಡಿ, ಆ ರಾಜ್ಯಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅದಕ್ಕೆ ಸರ್ಕಾರ ರಚನೆಗೆ ಅಗತ್ಯ ಬಹುಮತವಿರಲಿಲ್ಲ. ಆದರೆ, ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಯ ಅವಕಾಶ ನೀಡುವ ಬದಲಾಗಿ, ಅಲ್ಲೆಲ್ಲ ಚುನಾವಣೋತ್ತರ ಮೈತ್ರಿಕೂಟಕ್ಕೆ ಅವಕಾಶ ನೀಡಲಾಗಿತ್ತು. ದೆಹಲಿಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಕಾಂಗ್ರೆಸ್ ಬೆಂಬಲದೊಂದಿಗೆ ಎಎಪಿಗೆ ಸರ್ಕಾರ ರಚನೆಯ ಅವಕಾಶ ನೀಡಲಾಗಿತ್ತು. ಜಾರ್ಖಂಡ್‌ನಲ್ಲಿ ಕೂಡ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಕಾಂಗ್ರೆಸ್-ಜೆಎಂಎಂ ಮೈತ್ರಿಗೆ ಅವಕಾಶ ನೀಡಲಾಗಿತ್ತು,” ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಆದರೆ, “ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರ ಬಳಸಿ ಬಿಜೆಪಿಯ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ನ್ಯಾಯಾಲಯ ಅವರ ಆ ವಿವೇಚನಾ ಅಧಿಕಾರದಲ್ಲಿ ಮಧ್ಯಪ್ರವೇಶ ಮಾಡಲಾಗದು,” ಎಂದು ನ್ಯಾ.ಸಿಕ್ರಿ ಹೇಳಿದರು.

ಆಗ, “ಇನ್ನು ೫-೬ ಗಂಟೆಗಳಲ್ಲಿ, ಮಾರನೇ ದಿನವೇ ಪ್ರಮಾಣವಚನಕ್ಕೆ ಅವಕಾಶ ನೀಡಿರುವುದು ಸಮಸ್ಯೆಗೆ ಕಾರಣವಾಗಲಿದೆ. ಅದನ್ನು ನೋಡಿಕೊಂಡು ಸುಪ್ರೀಂ ಕೋರ್ಟ್ ಮೂಕಪ್ರೇಕ್ಷಕನಾಗಿ ಇರಲಾಗದು,” ಎಂದು ಸಿಂಘ್ವಿ ಮನವಿ ಮಾಡಿದರು.

ಅಲ್ಲದೆ, ಪ್ರಮಾಣವಚನ ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಕೋರಿ ತಾವು ಸಲ್ಲಿಸಿರುವ ಅರ್ಜಿ, ರಾಜ್ಯಪಾಲರ ಪರಮಾಧಿಕಾರವನ್ನು ಪ್ರಶ್ನಿಸುತ್ತಿಲ್ಲ; ಬದಲಾಗಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ಮಾತ್ರ ಪ್ರಶ್ನಿಸುತ್ತಿದೆ ಎಂದು ಸಿಂಘ್ವಿ ವಿವರಿಸಿದರು. ಅಲ್ಲದೆ, ರಾಜ್ಯಪಾಲರು ತಮ್ಮ ಆ ನಿರ್ಧಾರಕ್ಕೆ (ಅಗತ್ಯ ಸಂಖ್ಯೆಯ ಶಾಸಕರ ಬೆಂಬಲವಿಲ್ಲದೆಯೂ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದು) ಸೂಕ್ತ ಕಾರಣಗಳನ್ನೂ ನೀಡಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಹಾಗೇ, ರಾಜ್ಯಪಾಲರ ಆ ತೀರ್ಮಾನ ನ್ಯಾಯಾಲಯದ ವಿಮರ್ಶೆಗೊಳಪಡಬೇಕಿದೆ ಎಂದೂ ವಾದಿಸಿದರು.

ಇದನ್ನೂ ಓದಿ : ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ರಾಮ್ ಜೇಠ್ಮಲಾನಿ ಅರ್ಜಿ
ಇದನ್ನೂ ಓದಿ : ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಬದಲಾವಣೆ ಸಾಧ್ಯವಿದೆಯೇ?

ಅವರ ವಾದ ಮುಗಿಯುತ್ತಿದ್ದಂತೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿ, “ಇದು ಕಾನೂನು ಪ್ರಶ್ನೆಯ ಮಾತಲ್ಲ ಅಥವಾ ತಮ್ಮ ಆ ನಿರ್ಧಾರಕ್ಕೆ ಮುನ್ನ ರಾಜ್ಯಪಾಲರು ಯಾವೆಲ್ಲ ಅಂಶಗಳನ್ನು ಪರಿಗಣಿಸಿದ್ದಾರೆ ಎಂಬುದು ಕೂಡ ತಿಳಿದಿಲ್ಲ. ಹಾಗಾಗಿ ಸದ್ಯಕ್ಕೆ ಇದು ಇಡಿಯಾಗಿ ಊಹಾಪೋಹದ ಮೇಲೆ ನಿಂತಿರುವ ಪ್ರಕರಣ.,” ಎಂದು ಹೇಳಿದರು.

ಆ ನಡುವೆ, ಮತ್ತೊಮ್ಮೆ, “ಪ್ರಮಾಣವಚನ ಕಾರ್ಯಕ್ರಮವನ್ನು ನ್ಯಾಯಾಲಯ ಎರಡು ದಿನಗಳ ಕಾಲ ಮುಂದೂಡಿ, ಪ್ರಕರಣದ ವಿವರ ವಿಚಾರಣೆ ನಡೆಸಬೇಕು,” ಎಂದು ಸಿಂಘ್ವಿ ಮನವಿ ಮಾಡಿದರು.

ಮುಕುಲ್ ರೋಹಟಗಿ ಅವರು ಪ್ರತಿಕ್ರಿಯಿಸಿ, “ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಪರಿಗಣಿಸಲೇಬಾರದಿತ್ತು. ಅದರಲ್ಲೂ ಮಧ್ಯರಾತ್ರಿ ಹೊತ್ತಲ್ಲಿ, ಯಾಕೂಬ್ ಮೆಮನ್ (ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಹೋರಾತ್ರಿ ನೀಡಿದ ತೀರ್ಪಿನಲ್ಲಿ ಶಿಕ್ಷೆಗೊಳಗಾದ ಉಗ್ರಗಾಮಿ) ಪ್ರಕರಣದಲ್ಲಿ ಮಾತ್ರ ನಡೆದಂತೆ ವಿಚಾರಣೆ ನಡೆಸುವ ಜರೂರು ಇರಲಿಲ್ಲ,” ಎಂದು ಹೇಳಿದರು.

ಮೂಲ: ಇಂಡಿಯಾ ಲೀಗಲ್‌ ಲೈವ್.ಕಾಂ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More