ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಬದಲಾವಣೆ ಸಾಧ್ಯವಿದೆಯೇ?

ಬಹುಮತ ಇಲ್ಲದಿದ್ದರೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲರ ನಿರ್ಧಾರ ಕಾನೂನು ಸಂಘರ್ಷಕ್ಕೆ ಎಡೆಮಾಡಿದೆ. ಇದರಿಂದ ಸಂವಿಧಾನಕ್ಕೆ ಆಗಿರುವ ಅಪಚಾರಗಳೇನು ಎಂದು ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್ ವಿಶ್ಲೇಷಿಸಿದ್ದಾರೆ

ನಾನು ಕಂಡ ಹಾಗೆ, ಮತ ಎಣಿಕೆಯ ಪರಿಣಾಮಗಳು ಹೊರಬರುತ್ತಿದ್ದ ಹೊತ್ತಿನಲ್ಲಿ ಆಗಿನ್ನೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತೀವ್ರ ಮುಜುಗರ ಅನುಭವಿಸುತ್ತಿದ್ದರಾದರೂ ತಕ್ಷಣ ಎಚ್ಚೆತ್ತುಕೊಂಡು, ರಾಜ್ಯದ ಹಿತಾಸಕ್ತಿಯನ್ನು ಬಯಸಿ ತಮ್ಮೆಲ್ಲ ಹಳೆಯ ರಾಗ-ದ್ವೇಷ ಮರೆತು, ಧೈರ್ಯದಿಂದ “ಎಚ್‌ ಡಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿ. ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ,’’ ಎಂದು ಘೋಷಿಸಿದರು. ಕೋಮುವಾದಿ ಪಕ್ಷದ ದುರಾಡಳಿತಕ್ಕೆ ಕರ್ನಾಟಕವನ್ನು ಬಲಿ ಕೊಡಬಾರದೆಂಬ ದೃಷ್ಟಿಯಿಂದ ತಕ್ಷಣ ಕಾರ್ಯತತ್ಪರರಾದರು. ಹೃದಯ ವೈಶಾಲ್ಯತೆ ಮೆರೆದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡರಿಗೆ ಕರೆ ಮಾಡಿ, ಕುಮಾರಸ್ವಾಮಿ ನಾಯಕತ್ವಕ್ಕೆ ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಲಿದೆ ಎಂದು ಹೇಳಿದರು. ಬಳಿಕ, ರಾಜ್ಯದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದವು. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್‌ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ಅವರ ನಾಯಕತ್ವಕ್ಕೆ ಕಾಂಗ್ರೆಸ್ ಬೆಂಬಲವನ್ನು ಅಧಿಕೃತವಾಗಿ ನೀಡಿದರು.

ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಎಲ್ಲರನ್ನೂ ಕಾರ್ಯೋನ್ಮುಖರನ್ನಾಗಿ ಮಾಡಿದ್ದ ಸಮಯ. ಮಧ್ಯಾಹ್ನ ೧೨ರ ವೇಳೆಗಾಗಲೇ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ಬಿಜೆಪಿ ಪಕ್ಷವು ಕ್ರಮೇಣ ಹಿನ್ನಡೆಗೆ ಜಾರಿತು. ಯಾರಿಗೂ ಸರಳ ಬಹುಮತ ಬರುದೆನ್ನುವುದು ಸಾಬೀತಾಗುತ್ತಿದ್ದಂತೆ, ಕುಮಾರಸ್ವಾಮಿ ಅವರು ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿ ರಾಜಭವನಕ್ಕೆ ಮನವಿ ಕೊಟ್ಟರು. ಇದನ್ನು ತಿಳಿದ ಯಡಿಯೂರಪ್ಪ ಅವರು ತಮ್ಮ ದೆಹಲಿ ಪ್ರವಾಸವನ್ನು ರದ್ದು ಮಾಡಿ, ರಾಜಭವವನಕ್ಕೆ ತೆರಳಿ ಸಂಜೆ ೫ಕ್ಕೆ ರಾಜ್ಯಪಾಲರ ಭೇಟಿಗೆ ಅನುಮತಿ ಪಡೆದರು. ಮೊದಲು ಕೋರಿಕೆ ಸಲ್ಲಿಸಿದ್ದ ಕುಮಾರಸ್ವಾಮಿಗೆ ಸಂಜೆ ೫.೩೦ಕ್ಕೆ ಭೇಟಿಯ ಅವಕಾಶ ದೊರೆಯಿತು. ಇಂಥದ್ದೊಂದು ಯುಕ್ತಿ ಮೆರೆಯುವ ಮೂಲಕ ಸರ್ಕಾರ ರಚನೆಗೆ ತಾವೇ ಮೊದಲು ಪ್ರಸ್ತಾಪ ಮಂಡಿಸಿದ್ದು ಎಂದು ಬಿಂಬಿಸಲು ಯಡಿಯೂರಪ್ಪ ಮತ್ತವರ ಪಕ್ಷ ಪ್ರಯತ್ನಿಸಿತು!

ಬಳಿಕ, ಪಕ್ಷದ ಕೆಲವು ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿಯಾದ ಯಡಿಯೂರಪ್ಪ, “ನಾನು ಸರ್ಕಾರ ರಚಿಸುತ್ತೇನೆ. ಅವಕಾಶ ಕೊಡಿ,’’ ಎಂದು ಕೇಳಿದರು. ಆ ಸಂದರ್ಭ ರಾಜ್ಯಪಾಲರ ಮುಂದಿದ್ದ ಅಂಕಿ-ಅಂಶಗಳ ಪ್ರಕಾರ, ಕೇವಲ ೧೦೪ ಶಾಸಕರು ಬಿಜೆಪಿ ಮತ್ತು ಯಡಿಯೂರಪ್ಪ ಅವರ ಬೆಂಬಲಕ್ಕಿದ್ದರು. ಆ ಸನ್ನಿವೇಶದಲ್ಲಿ ಯಡಿಯೂರಪ್ಪ ಅಪ್ಪಿತಪ್ಪಿಯೂ ತಮಗೆ ಬಹುಮತವಿದೆ ಎನ್ನುವ ಮಾತನ್ನು ಹೇಳಿಲ್ಲ. ಎಷ್ಟು ಜನ ಶಾಸಕರ ಬೆಂಬಲ ಇದೆ ಎನ್ನುವುದನ್ನೂ ಪ್ರಸ್ತಾಪಿಸಿರಲಿಲ್ಲ. ಬೆಂಬಲ ಕೊಡಬಹುದಾದ ಬಿಜೆಪಿಯೇತರ ಸದಸ್ಯರ ಹೆಸರು ಮತ್ತು ಸಂಖ್ಯೆಯನ್ನೂ ನೀಡಿರಲಿಲ್ಲ. ಆ ಕ್ಷಣ ರಾಜ್ಯಪಾಲರ ಮುಂದಿದ್ದ ಪ್ರಸ್ತಾಪ ಯಡಿಯೂರಪ್ಪ ಪರ ೧೦೪ ಶಾಸಕರ ಬೆಂಬಲವಿದೆ ಎನ್ನುವುದಷ್ಟೇ ಆಗಿತ್ತು.

ಆದರೆ, ಕಾಂಗ್ರೆಸ್ ಮತ್ತು ತಮ್ಮ ಪಕ್ಷದ ಕೆಲವು ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಎಚ್‌ ಡಿ ಕುಮಾರಸ್ವಾಮಿ, ೧೧೭ ಶಾಸಕರ ಬೆಂಬಲ ಇರುವುದನ್ನು ಸಂಖ್ಯೆ ಮತ್ತು ಹೆಸರುಗಳ ಸಮೇತ ಅವರಿಗೆ ಸಲ್ಲಿಸಿದರು. ಇಂಥ ಸನ್ನಿವೇಶದಲ್ಲಿ ರಾಜ್ಯಪಾಲರ ಮುಂದಿದ್ದ ಪ್ರಶ್ನೆ ಅಲ್ಪ ಬಲದ ಸರ್ಕಾರ ರಚನೆಗೆ ಅವಕಾಶ ನೀಡಬೇಕಾ ಅಥವಾ ಬಹುಸಂಖ್ಯೆಯ ಶಾಸಕ ಬಲದ ಸರ್ಕಾರ ರಚನೆಯಾಗಬೇಕಾ ಎನ್ನುವುದಾಗಿತ್ತು. ವಿಶೇಷವಾಗಿ ಒಂದು ಮಾತು ಗಮನಿಸಬೇಕು. ಯಡಿಯೂರಪ್ಪ ತಮ್ಮ ಪ್ರಸ್ತಾಪದಲ್ಲಿ ತಮಗೆ ಬಹುಮತ ಇರುವುದರ ಬಗ್ಗೆ ಎಲ್ಲಿಯೂ ಹೇಳದಿದ್ದಾರೂ, “ಮುಂದೆ ಬಹುಮತ ಸಾಬೀತು ಮಾಡುತ್ತೇನೆ. ಅದಕ್ಕೆ ಅವಕಾಶ ಕೊಡಿ,’’ ಎಂದು ಕೇಳಿದ್ದರು. ಆ ಸಂದರ್ಭದಲ್ಲಿ, “ನಿಮಗೆ ಬೆಂಬಲ ನೀಡುವ ಶಾಸಕರು ಯಾರು, ಎಷ್ಟು ಸಂಖ್ಯೆ, ಯಾವ ಪಕ್ಷದಿಂದ ಬರುತ್ತಿದ್ದಾರೆ, ಹೇಗೆ ಮತ್ತು ಯಾಕೆ ಬರುತ್ತಾರೆ, ಅದು ಪಕ್ಷಾಂತರ ಆಗುವುದಿಲ್ಲವೇ, ಪಕ್ಷಾಂತರ ಸಂವಿಧಾನಬಾಹಿರ ಅಲ್ಲವೇ?’’ ಎಂದೆಲ್ಲ ಯಡಿಯೂರಪ್ಪ ಅವರನ್ನು ರಾಜ್ಯಪಾಲರು ಪ್ರಶ್ನಿಸಬಹುದಿತ್ತು. ಆದರೆ, ಈ ರೀತಿ ಪ್ರಶ್ನಿಸಿ, ಸ್ಪಷ್ಟೀಕರಣ ಪಡೆದ ಮಾಹಿತಿಯನ್ನು ರಾಜಭವನ ಬಹಿರಂಗಗೊಳಿಸಿಲ್ಲ.

ಭಾರತದ ಸಂವಿಧಾನದ ಪ್ರಕಾರ, ಮುಖ್ಯಮಂತ್ರಿ ನೇಮಕದ ಅಧಿಕಾರ ಇರುವುದು ರಾಜ್ಯಪಾಲರಿಗೆ. ಅವಕಾಶ ಪಡೆದ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಉತ್ತರದಾಯಿತ್ವ ಹೊಂದಿರಬೇಕು. ಅಂದರೆ, ಬಹುಸಂಖ್ಯಾತ ಶಾಸಕರ ವಿಶ್ವಾಸವನ್ನು, ಬೆಂಬಲವನ್ನು ಪಡೆದಿರಬೇಕು. ಇದು ಕನಿಷ್ಠ ಅರ್ಹತೆ. ಸಂವಿಧಾನದ ೧೬೪ನೇ ಪರಿಚ್ಛೇದದ ಪ್ರಕಾರ, ಈ ಅರ್ಹತೆ ಇಲ್ಲದಿರುವವರನ್ನು ಮುಖ್ಯಮಂತ್ರಿ ಮಾಡಲು ರಾಜ್ಯಪಾಲರಿಗೆ ಅಧಿಕಾರವಿಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯ ವಿಶೇಷವಾಗಿ ಎರಡು ಮೊಕದ್ದಮೆಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ವಿಶ್ಲೇಷಿಸಿದೆ. ಈ ಎರಡೂ ಪ್ರಕರಣಗಳಲ್ಲಿ ಘಂಟಾಘೋಷದಂತೆ ಹೇಳಿರುವ ವಿಚಾರ ಏನೆಂದರೆ;

1. ರಾಜ್ಯಪಾಲರದ್ದು ಪರಮಾಧಿಕಾರ ಅಲ್ಲ.

2. ಸಂವಿಧಾನದ ಚೌಕಟ್ಟಿನಲ್ಲಿ ಮಾತ್ರ ಪ್ರಯೋಗ ಮಾಡಬೇಕಾದ ಅಧಿಕಾರವದು.

ಅಂದರೆ, ರಾಜ್ಯಪಾಲರು ಅಭ್ಯರ್ಥಿಯ ನಡತೆಯನ್ನಾಗಲೀ, ಆತನ ಪಕ್ಷದ ಸಾಧನೆಯನ್ನಾಗಲೀ ಪರಿಗಣಿಸದೆ, ಆತ ಬಹುಸಂಖ್ಯೆಯ ಶಾಸಕರ ಬೆಂಬಲ ಹೊಂದಿದ್ದಾನೆಯೇ, ಇಲ್ಲವೇ ಎನ್ನುವ ಒಂದೇ ಪ್ರಶ್ನೆ ಕೇಳಿ, ಉತ್ತರ ಕಂಡುಕೊಂಡ ಬಳಿಕ ನೇಮಕ ಮಾಡಬೇಕು.

ಈ ವಿಚಾರವನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಎಸ್‌ ಆರ್‌ ಬೊಮ್ಮಾಯಿ ಮೊಕದ್ದಮೆ ಮತ್ತು ಬಿಹಾರದ ರಾಮೇಶ್ವರ ಪ್ರಸಾದ್ ಮೊಕದ್ದಮೆಗಳಲ್ಲಿ ಬಹಳ ಗಂಭೀರವಾಗಿ, ನೇರವಾಗಿ ಮತ್ತು ಸ್ಪಷ್ಟವಾಗಿ ಘೋಷಣೆ ಮಾಡಿದೆ. “ಯಾವುದೇ ಅಡ್ಡದಾರಿ ಹಿಡಿಯುವಂತಿಲ್ಲ,’’ ಎಂದು ರಾಜ್ಯಪಾಲರಿಗೆ ಎಚ್ಚರಿಕೆ ಕೊಟ್ಟಿದೆ. ಬಹುಸಂಖ್ಯಾತ ಸದಸ್ಯರ ಪ್ರಸ್ತಾಪವನ್ನು ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದಕ್ಕೆ ತಪ್ಪಿದರೆ ಪ್ರಜಾತಂತ್ರ ಸರ್ವನಾಶವಾಗುತ್ತದೆ ಎಂದೂ ಎಚ್ಚರಿಸಿದೆ. ಅಲ್ಲದೆ, ರಾಮೇಶ್ವರ ಪ್ರಸಾದ್ ಮೊಕದ್ದಮೆಯಲ್ಲಿ ಆಗಿನ ಬಿಹಾರ ರಾಜ್ಯಪಾಲ ಬೂಟಾಸಿಂಗ್ ನಡೆಗೆ ಛೀಮಾರಿಯನ್ನೂ ಹಾಕಿದೆ.

‘ರಾಮೇಶ್ವರ ಪ್ರಸಾದ್ ಮತ್ತು ಇತರರು ವರ್ಸಸ್ ಯೂನಿಯನ್‌ ಆಫ್ ಇಂಡಿಯಾ’ ಮೊಕದ್ದಮೆ ತೀರ್ಪಿನ ಪ್ಯಾರ ೧೬೫ರಲ್ಲಿ ಹೇಳಿರುವ ಮಾತು, ಭಾಷೆ ಸ್ಪಷ್ಟ ಮತ್ತು ಕಠೋರವಾಗಿದೆ:

  • ರಾಜ್ಯಪಾಲರು ಬಹುಸಂಖ್ಯಾತ ಬೆಂಬಲದ ಪ್ರಸ್ತಾಪವನ್ನು ತಿರಸ್ಕರಿಸಿ ಕಾನೂನುಬಾಹಿರವಾಗಿ ಬಹುಮತ ಸಂಪಾದಿಸಲು ಅನುವು ಮಾಡಿಕೊಡಬಾರದು.
  • ಅವಕಾಶ ನೀಡಿದರೆ ಅದು ಕಾನೂನುಬಾಹಿರವಾಗಿ, ನೀತಿಗೆಟ್ಟ ಮಾರ್ಗದಲ್ಲಿ ಬೆಂಬಲ ಗಳಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
  • ಅಂತಹ ಅಧಿಕಾರವನ್ನು ಸಂವಿಧಾನ ರಾಜ್ಯಪಾಲರಿಗೆ ನೀಡಿಲ್ಲ. ಅಂತಹ ಅಧಿಕಾರ ಪ್ರಜಾತಂತ್ರದ ಮೌಲ್ಯವಾದ ಬಹುಮತದ ಆಡಳಿತಕ್ಕೆ ವಿರುದ್ಧವಾಗಿದೆ.
  • ರಾಜ್ಯಪಾಲ ಸ್ವೇಚ್ಛಾಡಳಿತ ನಡೆಸುವ ಸರ್ವಾಧಿಕಾರಿಯಲ್ಲ. ಅಂತಹ ಅಧಿಕಾರವನ್ನು ರಾಜ್ಯಪಾಲರಿಗೆ ಕೊಟ್ಟಿದ್ದೇ ಆದಲ್ಲಿ ಘೋರ ಪರಿಣಾಮಗಳು ಉಂಟಾಗುತ್ತವೆ.

ಸುಪ್ರೀಂ ಕೋರ್ಟ್ ಇಷ್ಟೊಂದು ಕಠಿಣವಾಗಿ ರಾಜ್ಯಪಾಲರಿಗೆ ಎಚ್ಚರಿಕೆ ಕೊಟ್ಟಿದ್ದಾಗ್ಯೂ, ರಾಜ್ಯದಿಂದ ರಾಜ್ಯಕ್ಕೆ ರಾಜ್ಯಪಾಲರಾದವರು ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯ ನಡೆಸುತ್ತಲೇ ಇದ್ದಾರೆಯೇ ಎನ್ನುವ ಪ್ರಶ್ನೆ ಮೂಡದಿರದು. ತೀರಾ ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇಮಕ ಮಾಡಿದ ರಾಜ್ಯಪಾಲರುಗಳು ಮೇಘಾಲಯ, ಮಣಿಪುರ ಮತ್ತು ಗೋವಾದಲ್ಲಿ ಅತಿದೊಡ್ಡ ಪಕ್ಷಕ್ಕೆ ಮೊದಲ ಅವಕಾಶ ಎನ್ನುವ ಕಲ್ಪನೆಗೆ ವಿರುದ್ಧವಾಗಿ ಬಹುಸಂಖ್ಯಾತ ಶಾಸಕರ ಬೆಂಬಲ ಹೊಂದಿದ ಪಕ್ಷಗಳಿಗೆ ಆಡಳಿತ ಕೊಡುವಂತೆ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದಾರೆ. ಈಗ ಅದೇ ಮೋದಿ ಸರ್ಕಾರ ನೇಮಿಸಿದ ರಾಜ್ಯಪಾಲರು ಕರ್ನಾಟಕದಲ್ಲಿ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಎರಡರಲ್ಲಿ ಇರುವ ಸಾಮ್ಯತೆ, ಬಿಜೆಪಿ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿರುವುದು. ಹಾಗಾದರೆ, ಬಿಜೆಪಿ ಅನುಕೂಲಕ್ಕೆ ತಕ್ಕಂತೆ ಸಂವಿಧಾನವು ಬದಲಾಗುತ್ತದೆಯೇ? ಮೇಘಾಲಯ, ಮಣಿಪುರ, ಗೋವಾಕ್ಕೆ ಕೊಟ್ಟಿರುವ ಸಂವಿಧಾನಕ್ಕೆ ವಿರುದ್ಧವಾದ ಸಂವಿಧಾನವೊಂದನ್ನು ದೇಶದ ಸಂವಿಧಾನ ಕರ್ನಾಟಕಕ್ಕೆ ಕೊಟ್ಟಿದೆಯೇ? ಇದು ಕರ್ನಾಟಕದ ಜನತೆ ರಾಜ್ಯಪಾಲರನ್ನು ಕೇಳಲೇಬೇಕಾದ ಮೂಲಭೂತ ಪ್ರಶ್ನೆ. '೧೦೪' ಮತ್ತು '೭೮+೩೯' ಇದರಲ್ಲಿ ಯಾವುದು ೧೧೧ಕ್ಕಿಂತ ದೊಡ್ಡ ಸಂಖ್ಯೆಯಾಗಿ ಬಹುಮತವನ್ನು ನಿರ್ಧರಿಸುತ್ತದೆ? ಒಬ್ಬ ಶಾಲಾ ವಿದ್ಯಾರ್ಥಿ ಬಗೆ ಹರಿಸಬಹುದಾದಂತ ಈ ಲೆಕ್ಕಾಚಾರವನ್ನು ರಾಜ್ಯಪಾಲರಿಗೆ ತಿಳಿಸಿ ಹೇಳಲೇಬೇಕಿದೆ.

ಇದರರ್ಥ, ಕರ್ನಾಟಕದ ರಾಜ್ಯಪಾಲರು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಮಂಡಿಸಿದ ಪ್ರಸ್ತಾಪಗಳನ್ನು ಕಾನೂನಿನಡಿ ಪರಿಶೀಲಿಸಿ, ಸಂವಿಧಾನದ ಚೌಕಟ್ಟಿನೊಳಗೆ ಆದೇಶ ನೀಡಬೇಕಾಗಿತ್ತು. ಆದರೆ, ಬಹುಸಂಖ್ಯಾತ ಸದಸ್ಯ ಬಲದ ಸರ್ಕಾರ ರಚಿಸಲು ಅವಕಾಶ ನೀಡದೆ, ಅಲ್ಪಸಂಖ್ಯೆಯ ಸದಸ್ಯರನ್ನು ಹೊಂದಿರುವ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ರಾಜ್ಯಪಾಲರ ಉದ್ಧಟತನದ ವರ್ತನೆ ಮತ್ತು ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ. ಬಹುಮತ ಇದೆ ಎಂದು ಹೇಳಿಕೊಳ್ಳಲೂ ಸಾಧ್ಯವಿಲ್ಲದ ಒಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕದ ಜನತೆಯ ಮೇಲೆ ಹೇರಿದ್ದು ಪ್ರಜಾತಂತ್ರದ ಭೀಕರ ಕಗ್ಗೊಲೆಯಾಗಿದೆ. ಹಿಂದೆ, ಸರ್ವೋಚ್ಚ ನ್ಯಾಯಾಲಯ ಎಚ್ಚರಿಸಿದ್ದಂತೆ ಈ ರಾಜ್ಯಪಾಲರ ಕ್ರಮವು ಜನತಂತ್ರದ ಮೇಲೆ ಘೋರ ಪರಿಣಾಮ ಬೀರಿದೆ. ಕಾನೂನಿನ ಆಡಳಿತ ಮತ್ತು ಸಂವಿಧಾನದ ಘನತೆ ಎರಡನ್ನೂ ರಾಜ್ಯಪಾಲರು ನಾಶ ಮಾಡಿದ್ದಾರೆ. ಈಗ ಕರ್ನಾಟಕದ ಬೆಳವಣಿಗೆಗಳಿಗೆ ಸಂಬಂಧಿಸಿದ ಮೊಕದ್ದಮೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ ಅದರ ಸಾಧಕ-ಬಾಧಕಗಳನ್ನು ಚರ್ಚಿಸದೆ, ಅದು ನೀಡುವ ಆದೇಶಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ.

ಇದನ್ನೂ ಓದಿ : ಕುತೂಹಲದ ಕೇಂದ್ರವಾದ ರಾಜಭವನ; ಸರ್ಕಾರ ರಚಿಸಲು ಜೆಡಿಎಸ್‌-ಕಾಂಗ್ರೆಸ್‌, ಬಿಜೆಪಿ ಕಸರತ್ತು

ಅದರಾಚೆಗೆ, ಕರ್ನಾಟಕದ ಜನತೆ ಎಚ್ಚೆತ್ತುಕೊಂಡು ಸಂವಿಧಾನವನ್ನು ರಕ್ಷಿಸುವುದಲ್ಲದೆ, ತಾವು ನೀಡಿದ ಜನಾದೇಶವನ್ನು ಸಂರಕ್ಷಿಸಿಕೊಳ್ಳಲು ತಮ್ಮ ಕ್ಷೇತ್ರದ ಶಾಸಕರು ಯಾವ ಸನ್ನಿವೇಶದಲ್ಲೂ ಪಕ್ಷಾಂತರ ಮಾಡದಂತೆ ಎಚ್ಚರ ವಹಿಸಬೇಕು. ಸದನದಲ್ಲಿ ಬೆಂಬಲ ಸಾಬೀತು ಮಾಡಲು ೧೫ ದಿನಗಳ ಕಾಲಾವಕಾಶ ನೀಡುವ ಮೂಲಕ, ಕುದುರೆ ವ್ಯಾಪಾರ ಮಾಡಿ ಪಕ್ಷಾಂತರಿಗಳ ಸರ್ಕಾರ ಕಟ್ಟುವುದಕ್ಕೆ ಅನುವು ಮಾಡಿಕೊಟ್ಟಿರುವ ರಾಜ್ಯಪಾಲರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈಗಾಗಲೇ ಬಂಡವಾಳಶಾಹಿಗಳು ಕುದುರೆ ವ್ಯಾಪಾರಕ್ಕೆ ದಂಡು ಕಟ್ಟಿ ಬರುತ್ತಿರುವ ಚಿತ್ರಣ ಕರ್ನಾಟಕವನ್ನು ಬಲಿ ತೆಗೆದುಕೊಳ್ಳುವ ಆತಂಕ ಸೃಷ್ಟಿಸಿದೆ. ಜನತೆಯ ಜಾಗೃತ ನಡತೆ ಮಾತ್ರ ಈ ಬಂಡವಾಳಶಾಹಿಗಳು ಮತ್ತು ಪಕ್ಷಾಂತರಿಗಳಿಂದ ಕರ್ನಾಟಕವನ್ನು ರಕ್ಷಿಸಬಹುದಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More