80 ಡಾಲರ್ ಗಡಿ ದಾಟಿದ ಕಚ್ಚಾತೈಲ; ಇನ್ನು ಬೆಲೆ ಏರಿಕೆ ಬಿಸಿಗೆ ಸಿದ್ಧರಾಗಿ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ (ಬ್ರೆಂಟ್ ಕ್ರೂಡ್) 80 ಡಾಲರ್ ಮುಟ್ಟಿದೆ. 2014 ನವೆಂಬರ್ ನಂತರ ಇದೇ ಮೊದಲ ಬಾರಿಗೆ ಈ ಮಟ್ಟಕ್ಕೆ ಏರಿದೆ. ಈ ದರ ವರ್ಷ್ಯಾಂತ್ಯಕ್ಕೆ ಏರುವ ಅಂದಾಜು ಮಾರುಕಟ್ಟೆ  ತಜ್ಞರದಾಗಿತ್ತು. ಆದರೆ, ಆರು ತಿಂಗಳು ಮುಂಚೆಯೇ ಅಪಾಯ ಎದುರಾಗಿದೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗುರುವಾರದ ವಹಿವಾಟಿನಲ್ಲಿ 80 ಡಾಲರ್ ಗಡಿದಾಟಿದೆ. ಇದು 2014 ನವೆಂಬರ್ ನಂತರ ಅತಿ ಗರಿಷ್ಠ ದರ ಇದಾಗಿದೆ. ದಿನದ ವಹಿವಾಟಿನಲ್ಲಿ 80 ಡಾಲರ್ ಗಡಿದಾಟಿ ಮತ್ತೆ ಕೊಂಚ ಕೆಳಕ್ಕೆ ಇಳಿದಿದೆ. ಆದರೆ, ಏರುಗತಿಯಲ್ಲಿರುವ ಕಚ್ಚಾ ತೈಲ 80 ಡಾಲರ್ ಗಡಿದಾಟಿ ಸಾಗಲು ಬಹಳ ಸಮಯ ಬೇಕಿಲ್ಲ. ಈ ವಾರಾಂತ್ಯಕ್ಕೆ 80ರ ಗಡಿ ದಾಟಬಹುದು.

ಕಚ್ಚಾ ತೈಲ 80 ಡಾಲರ್ ಮುಟ್ಟುವುದೆಂದರೆ ಭಾರತದ ಆರ್ಥಿಕತೆ ಮೇಲೆ ದೊಡ್ಡ ಹೊರೆಯೇ ಬಿದ್ದಂತೆ. ಏಕೆಂದರೆ 2014 ನವೆಂಬರ್ ನಂತರ ಇಳಿಜಾರಿನಲ್ಲಿ ಸಾಗಿದ ಕಚ್ಚಾ ತೈಲ ದರವು ಭಾರತದ ಆರ್ಥಿಕತೆಯು ಕ್ಷಿಪ್ರವಾಗಿ ಅಭಿವೃದ್ಧಿ ಸಾಧಿಸಲು ಪೂರಕವಾಗಿತ್ತು. ಪ್ರಧಾನಿ ನರೇಂದ್ರಮೋದಿ ಅವರ ನಾಲ್ಕು ಅವಧಿಯಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಸ್ಥಿರವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣವೇ ಕಚ್ಚಾ ತೈಲ ಬೆಲೆ ಇಳಿಜಾರಿನಲ್ಲಿ ಇದ್ದದ್ದು.

ಈಗ 80ರ ನಿರ್ಣಾಯಕ ಮಟ್ಟ ಮುಟ್ಟಿದೆ. ಸದ್ಯಕ್ಕೆ ಆತಂಕ ಏಕೆಂದರೆ ಆರು ತಿಂಗಳ ನಂತರ ಬರಬಹುದಾದ ಭಾರಿ ಹೊರೆ ಈಗಲೇ ನಮ್ಮ ಮೇಲೆ ಬಿದ್ದಿದೆ. ಬಹುತೇಕ ಮಾರುಕಟ್ಟೆ ತಜ್ಞರು ವರ್ಷಾಂತ್ಯಕ್ಕೆ 80ರ ಗಡಿದಾಟಬಹುದು ಎಂಬ ಅಂದಾಜು ಮಾಡುತ್ತಿದ್ದರು. ಅಲ್ಲಿಯವರೆಗೂ 60-70 ಡಾಲರ್ ಆಜುಬಾಜಿನಲ್ಲಿ ಇರುತ್ತದೆಂಬ ಅಂದಾಜಿನಲ್ಲೇ ಇದ್ದರು. ಆದರೆ, ಜಾಗತಿಕ ರಾಜಕೀಯ ಅಸ್ಥಿರತೆಯಿಂದಾಗಿ ತೈಲ ಉತ್ಪನ್ನ ಗಣನೀಯವಾಗಿ ಕುಸಿಯುತ್ತಿದೆ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಈಗಾಗಲೇ ಕಚ್ಚಾ ತೈಲ ಉತ್ಪಾದನೆಯನ್ನು ತಗ್ಗಿಸಿವೆ. ರಷ್ಯಾ ಸಹ ಅದೇ ಹಾದಿಯಲ್ಲಿದೆ. ವಿಯೇಟ್ನಾಂನಿಂದ ಜಾಗತಿಕ ಮಾರುಕಟ್ಟೆಗೆ ಬರುತ್ತಿದ್ದ ಕಚ್ಚಾ ತೈಲ ಪ್ರಮಾಣವೂ ಕುಸಿದಿದೆ. ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ. ತತ್ಪರಿಣಾಮ ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳು ಮುಂದುವರೆಯುತ್ತಿರುವುದರಿಂದ ಆ ರಾಷ್ಟ್ರದ ತೈಲ ಉತ್ಪಾದನೆಯೂ ಗಣನೀಯವಾಗಿ ತಗ್ಗಿದೆ.

ಜಾಗತಿಕ ಆರ್ಥಿಕತೆ ಬೆಳೆದಂತೆ ತೈಲ ಉತ್ಪನ್ನಗಳ ಬಳೆಕೆಯು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುತ್ತದೆ. ಈ ಏರಿಕೆಗೆ ಪೂರಕವಾಗಿ ಉತ್ಪಾದನೆಯೂ ಹೆಚ್ಚಳವಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕಚ್ಚೈ ತಾಲ ಬೆಲೆ ತೀವ್ರ ಕುಸಿದು 29 ಡಾಲರ್ ಗೆ ಇಳಿದ ನಂತರ ತೈಲ ರಫ್ತು ರಾಷ್ಟ್ರಗಳ ಆರ್ಥಿಕತೆಯೂ ಹಿನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ತಗ್ಗಿಸಿ ದರ ಏರಿಸಲು ನಿರ್ಧರಿಸಿವೆ. ರಷ್ಯಾ ಕೂಡಾ ಅದಕ್ಕೆ ಬೆಂಬಲಿಸಿದೆ. ಈ ಎಲ್ಲಾ ಅಂತಾರಾಷ್ಟ್ರೀಯ ವಿದ್ಯಮಾನಗಳು ಭಾರತದ ಆರ್ಥಿಕತೆಯನ್ನು ಅಲುಗಾಡಿಸುತ್ತಿವೆ.

ಆದರೆ ಈ ಬೆಳವಣಿಗೆಗಳಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ಅಂದಾಜಿಸುವಲ್ಲಿ ವಿತ್ತ ಸಚಿವಾಲಯ ಅಧಿಕಾರಿಗಳು ವಿಫಲರಾದಂತಿದೆ. ಎರಡು ವಾರಗಳ ಹಿಂದೆಯಷ್ಟೇ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಆತಂಕ ಪಡುವಷ್ಟು ಹೆಚ್ಚಾಗಿಲ್ಲ ಮತ್ತು ಈಗಿರುವ ದರವೇ ಹೆಚ್ಚಿದೆ. ಅದು ಇಳಿಯುತ್ತದೆ ಹೊರತು ಏರುವುದಿಲ್ಲ ಎಂದು ಹೇಳಿದ್ದರು. ಈ ಕಾರಣ ಮುಂದಿಟ್ಟುಕೊಂಡು ಗ್ರಾಹಕರ ಮೇಲೆ ಹೊರೆ ತಗ್ಗಿಸಲು ಎಕ್ಸೈಜ್ ಸುಂಕ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿದ್ದರು.

ಆಗ ಕಚ್ಚಾ ತೈಲದರ ಸುಮಾರು 74 ಡಾಲರ್ ಆಜುಬಾಜಿನಲ್ಲಿತ್ತು. ಈ ಅವಧಿಯಲ್ಲಿ ಸುಮಾರು ಶೇ.8-9ರಷ್ಟು ಏರಿದೆ. ಪ್ರತಿ ಡಾಲರ್ ಏರಿಕೆಯಿಂದ ಬೊಕ್ಕಸಕ್ಕೆ ಸುಮಾರು 900 ಕೋಟಿ ರುಪಾಯಿ ಹೊರೆ ಬೀಳುತ್ತದೆ. ಈಗ ಸುಮಾರು 6 ಡಾಲರ್ ಗಳಷ್ಟು ಏರಿಕೆಯಾಗಿದೆ ಎಂದರೆ ಮೇಲ್ನೋಟದ ಅಂದಾಜಿನಲ್ಲಿ 5400 ಕೋಟಿ ರುಪಾಯಿ ಹೆಚ್ಚಿನ ಹೊರೆ ಬಿದ್ದಿದೆ.

ಪರಿಣಾಮಗಳು ನಾವು ಅಂದಾಜಿಸುವುದಕ್ಕಿಂತಲೂ ಕಠಿಣವಾಗಿರುತ್ತವೆ. ಈಗ ಕಚ್ಚಾ ತೈಲ ರಫ್ತು ಮಾಡುವ ದೇಶಗಳು ಉತ್ಪಾದನೆ ತಗ್ಗಿಸಿವೆ. ಈ ನಿರ್ಧಾರದಿಂದಾಗಿ ನಿತ್ಯವ ಏರುಹಾದಿಯಲ್ಲೇ ಸಾಗಿದೆ. ಈಗ ಏರುತ್ತಿರುವ ತೀವ್ರಗತಿ ಗಮನಿಸಿದರೆ ವರ್ಷ್ಯಾಂತಕ್ಕೆ 100 ಡಾಲರ್ ದಾಟುವ ಸಾಧ್ಯತೆ ಇದೆ. ಈಗ 80 ಡಾಲರ್ ದಾಟುತ್ತಿರುವ ಹೊತ್ತಿನಲ್ಲೇ ನಮ್ಮ ಆರ್ಥಿಕತೆ ಮೇಲೆ ಭಾರಿ ಹೊರೆ ಬೀಳುತ್ತಿದೆ. ಇನ್ನು 100 ಡಾಲರ್ ದಾಟಿದರೆ ಗತಿ ಏನು? ವರ್ಷ್ಯಾಂತಕ್ಕೆ 100 ಡಾಲರ್ ಮಟ್ಟುವ ಕಚ್ಚಾ ತೈಲ ಅಷ್ಟಕ್ಕೆ ಸ್ಥಿರವಾಗಿ ನಿಲ್ಲುತ್ತದೆ ಎಂಬ ಗ್ಯಾರಂಟಿ ಏನು? ಮತ್ತಷ್ಟು ಏರುವುದಿಲ್ಲ ಎಂದು ನಂಬುವುದಾದರೂ ಹೇಗೆ? ಈ ಹಿಂದೆ ಮನಮೋಹನ ಸಿಂಗ್ ಅವಧಿಯಲ್ಲಿ 140 ಡಾಲರ್ ಗೆ ಏರಿದ ಉದಾಹರಣೆ ಇದೆ.

ಇದನ್ನೂ ಓದಿ : ಮುಂಬೈನಲ್ಲಿ ಪೆಟ್ರೋಲ್ 80 ರುಪಾಯಿ, ಬೆಂಗಳೂರಿಗೂ ಬರಲಿದೆ ಇದೇ ದರ

ಈಗಿನ ಬೇಡಿಕೆ ಮತ್ತು ಇಂಧನಾಧಾರಿತ ಆರ್ಥಿಕತೆಯಿಂದಾಗಿ ಪೆಟ್ರೇಲ್, ಡಿಸೇಲ್ ದರ ಏರಿಕೆಯು ನಮ್ಮ ಜೀವನದ ಬಹುತೇಕ ಸರಕು ಸೇವೆಗಳ ದರ ಏರಿಕೆಗೆ ಕಾರಣವಾಗುತ್ತವೆ. ಈಗಾಗಲೇ ಮುಂಬಯಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 80 ರುಪಾಯಿ ದಾಟಿದೆ. ಬೆಂಗಳೂರಿನಲ್ಲಿ 77 ರುಪಾಯಿ ಸಮೀಪಿಸುತ್ತಿದೆ. ಅಂತಾರಾಷ್ಟ್ರೀಯ ತೈಲ ದರ ಏರಿಕೆಗೆ ಅನುಗುಣವಾಗಿ ದರ ಏರಿಸುತ್ತಿರುವ ತೈಲ ಕಂಪನಿಗಳು ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 100 ಡಾಲರ್ ದಾಟಿದರೆ ಏನು ಮಾಡುತ್ತವೆ? ಅನಿವಾರ್ಯವಾಗಿ ಪೆಟ್ರೋಲ್ ದರವನ್ನು 100ರ ಸಮೀಪಕ್ಕೆ ಒಯ್ಯುತ್ತವೆ.

ಆ ಹಂತದಲ್ಲಿ ಕೇಂದ್ರ ಸರ್ಕಾರ ಈಗ ವಿಧಿಸುತ್ತಿರುವ 19.45 ರುಪಾಯಿ ಎಕ್ಸೈಜ್ ಸುಂಕವನ್ನು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಸುಮಾರು 12 ರುಪಾಯಿ ಮೌಲ್ಯವರ್ಧಿತ ತೆರಿಗೆಯನ್ನುಹಂತ ಹಂತವಾಗಿ ತಗ್ಗಿಸಬಹುದು. ಅಷ್ಟಾದರೂ ಹಣದುಬ್ಬರ ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ. ಆದರೆ, ನಮ್ಮ ದೇಶದ ಮುಂದಿರುವ ಅತಿ ದೊಡ್ಡ ಸವಾಲು ಎಂದರೆ ಒಂದು ವೇಳೆ ಕಚ್ಚೈ ತೈಲ ಪೂರೈಕೆ ಪ್ರಮಾಣ ತಗ್ಗಿದರೆ? ಬೆಲೆ ಏರಿದರೂ ಅರಗಿಸಿಕೊಳ್ಳಬಹುದು. ದೇಶೀಯ ಬೇಡಿಕೆಯಷ್ಟೂ ಪೂರೈಕೆ ಆಗದೇ ಇದ್ದರೆ? ತೈಲ ಕೊರತೆಯಿಂದಾಗುವ ಆಹಾಕಾರ ಅತಿ ಅಪಾಯಕಾರಿಯಾದುದು. ಬೆಲೆ ಎಷ್ಟೇ ಏರಿದರೂ ತೈಲ ಕೊರತೆಯಂತಹ ಪರಿಸ್ಥಿತಿ ಬರುವುದಿಲ್ಲ, ಬರಬಾರದು ಎಂದಷ್ಟೇ ನಾವು ಆಶಿಸಬಹುದು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More