ಇದು ಕೇವಲ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟವಲ್ಲ, ತ್ರಿಪಕ್ಷೀಯ ಕೂಟ!

ರಾಜ್ಯದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಮೈತ್ರಿಕೂಟ, ದ್ವಿಪಕ್ಷೀಯದ್ದಲ್ಲ, ತ್ರಿಪಕ್ಷೀಯ ಒಕ್ಕೂಟ. ಕಾಂಗ್ರೆಸ್‌ಮತ್ತು ಜೆಡಿಎಸ್‌ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಈ ಕುರಿತು ಅರ್ಜಿಯಲ್ಲಿ ಪ್ರತಿಪಾದಿಸಲಾದ ಪ್ರಮುಖ ಅಂಶಗಳತ್ತ ಇಣುಕುನೋಟ ಇಲ್ಲಿದೆ

ಕರ್ನಾಟಕದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಎಸ್‌ಪಿಯನ್ನೊಳಗೊಂಡ ತ್ರಿಪಕ್ಷೀಯ ಮೈತ್ರಿಕೂಟಕ್ಕೆ ಮನ್ನಣೆ ಕೊಡಬೇಕು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಲ್ಲಿಸಿರುವ ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ. ಇದುವರೆಗೂ ದ್ವಿಪಕ್ಷೀಯ ಒಕ್ಕೂಟ ಎಂದು ಹೇಳಲಾಗುತ್ತಿತ್ತಾದರೂ ತ್ರಿಪಕ್ಷೀಯ ಮೈತ್ರಿಕೂಟದ ಕುರಿತು ಅರ್ಜಿಯಲ್ಲಿ ಉಲ್ಲೇಖಿಸಿರುವುದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಬಿಎಸ್‌ಪಿಯ ಮಾಯಾವತಿ ಅವರು ಕೂಡ ರಾಜ್ಯಪಾಲರು ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿರುವುದು, ತ್ರಿಪಕ್ಷೀಯ ಮೈತ್ರಿಕೂಟಕ್ಕೆ ಬಲ ಬಂದಂತಾಗಿದೆ. ಅಲ್ಲದೆ, ಈ ಮೈತ್ರಿಕೂಟದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಜೊತೆ ಒಕ್ಕಲಿಗರು, ದಲಿತರು ಇದ್ದಾರೆ ಎಂಬ ಸಂದೇಶವನ್ನು ರವಾನಿಸಿದಂತಾಗಿದೆ.

ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪರ ಅರ್ಜಿದಾರರು ಇದಕ್ಕೆ ಆಧಾರವನ್ನೂ ಒದಗಿಸಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ೪೩ ಪುಟಗಳನ್ನು ಒಳಗೊಂಡಿರುವ ಅರ್ಜಿಯಲ್ಲಿ ಮೈತ್ರಿಕೂಟ ಹೊಂದಿರುವ ಸಂಖ್ಯಾಬಲವನ್ನು ವಿವರಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದ ವಿವಿಧ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳತ್ತಲೂ ಅರ್ಜಿಯಲ್ಲಿ ಗಮನ ಸೆಳೆಯಲಾಗಿದೆ. ರಾಮೇಶ್ವರ್‌ ಪ್ರಸಾದ್‌ ಮತ್ತು ಭಾರತ ಸರ್ಕಾರ (೨೦೦೬), ಚಂದ್ರಕಾಂತ ಕವಳೇಕರ್‌ ಮತ್ತು ಭಾರತ ಸರ್ಕಾರ (೨೦೧೭) ಎಸ್‌ ಆರ್‌ ಬೊಮ್ಮಾಯಿ ಮತ್ತು ಭಾರತ ಸರ್ಕಾರ (೧೯೯೪) ಪ್ರಕರಣಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದೆ. ಪ್ರಮುಖವಾಗಿ, ರಾಮೇಶ್ವರ್‌ ಪ್ರಸಾದ್‌ ಮತ್ತು ಭಾರತ ಸರ್ಕಾರದ (೨೦೦೬) ಪ್ರಕರಣಗಳನ್ನು ಪ್ರಸ್ತಾಪಿಸಿದೆ.

“ಸರ್ಕಾರ ರಚನೆ ಸಂಬಂಧ ರಾಜ್ಯಪಾಲರು ಚಲಾಯಿಸುವ ಅಧಿಕಾರದ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಬಹುಮತ ಸಾಧಿಸಿರುವ ಪಕ್ಷ ಅಥವಾ ಮೈತ್ರಿ ಒಕ್ಕೂಟ ಹೊಂದಿರುವ ಬಲಾಬಲ ಮೇಲ್ನೋಟಕ್ಕೆ ಕಂಡುಬಂದಲ್ಲಿ ರಾಜ್ಯಪಾಲರಿಗೆ ಯಾವುದೇ ಆಯ್ಕೆಗಳಿಲ್ಲ,” ಎಂದು ಹೇಳಿರುವುದನ್ನು ಅರ್ಜಿಯಲ್ಲಿ ಗಮನ ಸೆಳೆದಿದೆ.

“ಸ್ಥಿರ ಸರ್ಕಾರವನ್ನು ರೂಪಿಸಲು ಬಹುಮತ ಸಾಧಿಸಿರುವ ರಾಜಕೀಯ ಪಕ್ಷಗಳ ಮೈತ್ರಿಕೂಟಕ್ಕೆ ರಾಜ್ಯಪಾಲರು ಅವಕಾಶವನ್ನು ನಿರಾಕರಿಸುವಂತಿಲ್ಲ. ಆದರೆ, ಕರ್ನಾಟಕದ ರಾಜ್ಯಪಾಲರು ವ್ಯಕ್ತಿನಿಷ್ಠತೆ ಕಾರಣದಿಂದ ಈ ಅವಕಾಶವನ್ನು ನಿರಾಕರಿಸಿದ್ದಾರೆ. ಇದು ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾದದು. ಇದೊಂದು ಅಕ್ರಮ ಮತ್ತು ಅನೈತಿಕ ವಿಧಾನ. ಇಂತಹ ಅಧಿಕಾರ ರಾಜ್ಯಪಾಲರಿಗಿಲ್ಲ. ಅಲ್ಲದೆ, ರಾಜ್ಯಪಾಲರು ಒಂದು ನಿರಂಕುಶ ಒಂಬುಡ್ಸ್‌ಮನ್‌ ಅಲ್ಲ. ಇಂತಹ ಅಧಿಕಾರ ಹೊಂದಿದ್ದೇ ಆದಲ್ಲಿ ಅದರ ಪರಿಣಾಮಗಳು ಭಯಾನಕವಾಗಿರಲಿದೆ,” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಿಟ್‌ ಅರ್ಜಿ ಸಲ್ಲಿಸುವವರೆಗೂ ಬಿಜೆಪಿ ತಾನು ಹೊಂದಿದೆ ಎಂದು ಹೇಳುತ್ತಿರುವ ಬಹುಮತವನ್ನು ಪ್ರದರ್ಶಿಸಿಲ್ಲ. ಅಲ್ಲದೆ, ಶಾಸಕರ ಬೆಂಬಲ ಪತ್ರಗಳನ್ನು ಹಾಜರುಪಡಿಸಿಲ್ಲ. ಹೀಗಾಗಿ, ಬಹುಮತದ ಹಾದಿಯಲ್ಲಿ ಬಿಜೆಪಿ ಇನ್ನೂ ಅರ್ಧದಾರಿಯಲ್ಲೇ ಇದೆ. ಯಾವುದೇ ಸಂದರ್ಭದಲ್ಲೂ ಕಾನೂನು, ಸಂವಿಧಾನಾತ್ಮಕ ವಿಧಾನಗಳ ಮೂಲಕ ಬಿಜೆಪಿ ಬಹುಮತದ ಬೆಂಬಲವನ್ನು ಪಡೆಯುವುದಿಲ್ಲ,” ಎಂದು ಅರ್ಜಿಯಲ್ಲಿ ಗಮನ ಸೆಳೆಯಲಾಗಿದೆ. “ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲಾಗುವುದು ಎಂದು ಬಿಜೆಪಿ ಹೇಳಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಹೊರತುಪಡಿಸಿದರೆ ಶಾಸಕಾಂಗವೇ ರಾಜಕೀಯ ಕಾರ್ಯಕಾರಿಣಿಯಾಗಿದೆ,” ಎಂದು ಹೇಳಲಾಗಿದೆ.

“ಶಾಸಕಾಂಗ ಸಭೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್‌- ಜೆಡಿಎಸ್‌- ಬಿಎಸ್ಪಿ ಮೈತ್ರಿಕೂಟವು ತಾನು ಹೊಂದಿರುವ ಶಾಸಕರ ಬೆಂಬಲವನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ೧೧೬ ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು ಹಾಜರುಪಡಿಸಿದೆ. ಆದರೂ ರಾಜ್ಯಪಾಲರು ಈ ಅಂಶಗಳನ್ನು ಪರಿಗಣಿಸಿಲ್ಲ. ರಾಜ್ಯಪಾಲರು ಕೈಗೊಂಡಿರುವ ನಿರ್ಧಾರ ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಿಕ ಮತ್ತು ಅವಾಸ್ತವತೆಗಳಿಂದ ಕೂಡಿದ್ದು ದೋಷಪೂರಿತವಾಗಿದೆ,” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ : ಮೋದಿ, ಅಮಿತ್ ಶಾ ಅನುಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ!

ಮೈತ್ರಿಕೂಟವನ್ನು ಪ್ರತಿನಿಧಿಸಿರುವ ಅರ್ಜಿದಾರರು ಎಸ್‌ ಆರ್‌ ಬೊಮ್ಮಾಯಿ ಪ್ರಕರಣವನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ತ್ರಿಪಕ್ಷೀಯ ಮೈತ್ರಿಕೂಟವನ್ನು ಆಹ್ವಾನಿಸುವಲ್ಲಿ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ಬಿಜೆಪಿಗೆ ಲಾಭದಾಯಕವಾಗಿದೆ. ಈ ಮೂಲಕ, ರಾಜ್ಯಪಾಲರು ಪ್ರಜಾಪ್ರಭುತ್ವವನ್ನು ಹಾಳುಗೆಡವಿದ್ದಾರೆ. ಇದು ನಿಜಕ್ಕೂ ಅಸಹ್ಯಕರ ಎಂದು ಬಣ್ಣಿಸಿದ್ದಾರೆ.

“ವಾಮಮಾರ್ಗದಿಂದ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ಹಣ ಮತ್ತು ತೋಳ್ಬಲ ಪ್ರದರ್ಶನ ಮಾಡಿದೆ. ತ್ರಿಪಕ್ಷೀಯ ಒಕ್ಕೂಟವು ಶಾಸನಸಭೆಯಲ್ಲಿ ಅಗತ್ಯ ಇರುವ ಸಂಖ್ಯಾಬಲ ಹೊಂದಿದ್ದು, ಸರ್ಕಾರ ರಚಿಸಲು ಸಮರ್ಥವಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹೇಗಾದರೂ ಮಾಡಿ ಬಹುಮತವಿಲ್ಲದಿದ್ದರೂ ಸರ್ಕಾರ ರಚಿಸಲು ಮುಂದಾಗಿದೆ. ಇದಕ್ಕೆ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ, ಅಗತ್ಯ ಸಂಖ್ಯಾಬಲ ಹೊಂದಿರುವ ಮೈತ್ರಿಕೂಟಕ್ಕೆ ಆಹ್ವಾನ ನೀಡದಂತೆ ಪ್ರಯತ್ನಿಸಲಾಗಿದೆ. ಇದಕ್ಕಾಗಿ ಎಲ್ಲ ರೀತಿಯಿಂದಲೂ ಅಸಂವಿಧಾನಿಕವಾಗಿ ಮತ್ತು ಕಾನೂನುಬಾಹಿರ ವಿಧಾನಗಳನ್ನು ಬಳಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ,” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More