ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ಇರುವ ಸಮರ್ಥನೆಗಳೇನು?

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಅವಕಾಶ ವಂಚಿತವಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚನೆಯ ಹಕ್ಕನ್ನು ಪಡೆಯಲು ಅರ್ಜಿಯಲ್ಲಿ ಏನೆಂದು ಸಮರ್ಥಿಸಿಕೊಂಡಿವೆ ಎಂಬುದರ ವಿವರಣೆ ಇಲ್ಲಿದೆ

ಬಿಜೆಪಿ ಶಾಸಕಾಂಗ ನಾಯಕ ಯಡಿಯೂರಪ್ಪ ಅವರನ್ನು ಸರ್ಕಾರ ರಚನೆಗೆ ಏಕೆ ಆಹ್ವಾನ ನೀಡಬಾರದು ಎಂದು ಕಾಂಗ್ರೆಸ್‌-ಜೆಡಿಎಸ್‌ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ತಮ್ಮ ಪರವಾಗಿರುವ ವಾದಗಳನ್ನು ಸಮರ್ಥಿಸಿಕೊಳ್ಳುವ ಹಲವು ಅಂಶಗಳು ಸೇರಿದಂತೆ ಸರ್ಕಾರಿಯಾ ಆಯೋಗದ ಶಿಫಾರಸುಗಳನ್ನೂ ಪ್ರಸ್ತಾಪಿಸಿದೆ. ಸರ್ಕಾರ ರಚನೆ ಸಂಬಂಧ ರಾಜಭವನದ ಜೊತೆ ಸಾಧಿಸಿದ್ದ ನಿರಂತರ ಸಂಪರ್ಕದ ಮಾಹಿತಿಯನ್ನೂ ಅರ್ಜಿಯಲ್ಲಿ ಒದಗಿಸಲಾಗಿದೆ.

ಕೇವಲ ೧೦೪ ಶಾಸಕರ ಬಲ ಹೊಂದಿರುವ ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಮೇ ೧೬ರಂದು ಆಹ್ವಾನಿಸುವ ಮೂಲಕ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಸರ್ಕಾರ ರಚಿಸಲು ಸಂಪೂರ್ಣ ಬಹುಮತ ಹೊಂದದ ಪಕ್ಷದ ನಾಯಕನನ್ನು ಆಹ್ವಾನಿಸುವ ಮೂಲಕ ಸಂವಿಧಾನದ ನಡವಳಿಗಳಿಗೆ ರಾಜ್ಯಪಾಲರು ವ್ಯತಿರಿಕ್ತ ವರ್ತನೆ ಪ್ರದರ್ಶಿಸಿದ್ದಾರೆ. ಹೀಗಾಗಿಯೇ ರಿಟ್‌ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎಂದು ಸಮರ್ಥಿಸಿಕೊಳ್ಳಲಾಗಿದೆ.

ಅತಂತ್ರ ಸ್ಥಿತಿ ನಿರ್ಮಾಣವಾಗುವ ಸನ್ನಿವೇಶದಲ್ಲಿ ಏಕೈಕ ಅತಿ ದೊಡ್ಡ ಪಕ್ಷವನ್ನು ಆಹ್ವಾನಿಸಬೇಕು ಎಂದು ಸರ್ಕಾರಿಯಾ ಆಯೋಗ ಮಾಡಿರುವ ಶಿಫಾರಸನ್ನು ಅರ್ಜಿಯಲ್ಲಿ ಉಲ್ಲೇಖಿಸಿದೆ. ಚುನಾವಣೆಗೆ ಮುನ್ನ ರಚಿಸಿಕೊಂಡಿರುವ ಪಕ್ಷಗಳ ಒಕ್ಕೂಟ, ಸ್ವತಂತ್ರರು ಸೇರಿದಂತೆ ಇತರರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಪಡೆದಿರುವ ಏಕೈಕ ಅತಿ ದೊಡ್ಡ ಪಕ್ಷ, ಸಮ್ಮಿಶ್ರ ಸರ್ಕಾರದಲ್ಲಿನ ಎಲ್ಲ ಪಾಲುದಾರರೊಂದಿಗೆ ರಚಿಸಿರುವ ಚುನಾವಣಾ ಒಕ್ಕೂಟಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರಿ ಆಯೋಗ ಮಾಡಿರುವ ಶಿಫಾರಸುಗಳತ್ತ ಅರ್ಜಿಯಲ್ಲಿ ಗಮನ ಸೆಳೆಯಲಾಗಿದೆ.

ಶಾಸನಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿದ ಪಕ್ಷದ ನಾಯಕನನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಬೇಕು ಎಂಬುದು ಆಯೋಗದ ಶಿಫಾರಸಿನಲ್ಲಿ ಸ್ಪಷ್ಟವಾಗಿದೆ. ಆದರೂ ಮೇ ೧೫ರಂದು ಬಿಜೆಪಿಯನ್ನು ಆಹ್ವಾನಿಸಿ ಬಹುಮತ ಸಾಬೀತುಪಡಿಸಿ ಎಂದು ಸೂಚಿಸಿರುವುದು ಅಸಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ಸಮರ್ಥಿಸಿಕೊಂಡಿದೆ.

ಪಕ್ಷ ಅಥವಾ ಮೈತ್ರಿ ಪಕ್ಷಗಳ ಶಾಸಕರು ಬೆಂಬಲ ವ್ಯಕ್ತಪಡಿಸಿ ಪತ್ರಗಳನ್ನು ನೀಡಿದರೆ ಸರ್ಕಾರ ರಚಿಸಲು ಹಕ್ಕು ಇದೆ ಎಂದರ್ಥ. ಹೀಗಾಗಿ, ಮೊದಲಿಗೆ ಬಹುಮತ ಸಾಧಿಸಿರುವ ಪಕ್ಷಕ್ಕೆ ಆಹ್ವಾನ ನೀಡಬೇಕಿರುವುದು ಸಂವಿಧಾನಾತ್ಮಕ ಕರ್ತವ್ಯ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೇ ೧೫ರಂದೇ ಚುನಾವಣೋತ್ತರ ಮೈತ್ರಿಕೂಟ ರಚಿಸಿವೆ. ಸರ್ಕಾರ ರಚಿಸಲು ಕಾಂಗ್ರೆಸ್‌ ಬೇಷರತ್ತಾಗಿ ಜೆಡಿಎಸ್‌ಗೆ ಬೆಂಬಲ ನೀಡಿದೆ. ಲಿಖಿತ ಬೆಂಬಲ ಪಡೆದ ನಂತರ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ರಾಜ್ಯಪಾಲರನ್ನು ಮೇ ೧೫ರಂದು ಭೇಟಿಯಾಗಿದ್ದರು. ಅಲ್ಲದೆ, ಬೆಂಬಲ ವ್ಯಕ್ತಪಡಿಸಿ ಸಹಿ ಮಾಡಿರುವ ಶಾಸಕರ ಪತ್ರಗಳನ್ನು ರಾಜ್ಯಪಾಲರಿಗೆ ಒಪ್ಪಿಸಲಾಗಿದೆ. ಇದರಲ್ಲಿ ಬಹುಜನ ಸಮಾಜ ಪಕ್ಷವೂ (ಬಿಎಸ್‌ಪಿ) ಮೈತ್ರಿಕೂಟಕ್ಕೆ ಬೆಂಬಲ ನೀಡಿರುವ ಕಾರಣ ಮೈತ್ರಿಕೂಟದ ಶಾಸಕರ ಸಂಖ್ಯೆ ೧೧೬ಕ್ಕೇರಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹೀಗಾಗಿ, ರಾಜ್ಯಪಾಲರು ಈ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಮತ್ತು ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದೆ.

ಇದನ್ನೂ ಓದಿ : ಬಿಹಾರ, ಗೋವಾ ರಾಜಕೀಯದಲ್ಲಿ ಸಂಚಲನ ಮೂಡಿಸಿದ ‘ಕರ್ನಾಟಕ‌ ಮಾದರಿ’

ಗೋವಾ ವಿಧಾನಸಭೆ ಅತಂತ್ರವಾಗಿದ್ದ ಸಂದರ್ಭದಲ್ಲೂ ೧೭ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್‌ಗೆ ಅವಕಾಶ ನೀಡದೆ, ೨೧ ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿ ಮೈತ್ರಿಕೂಟವನ್ನು ಅಲ್ಲಿನ ರಾಜ್ಯಪಾಲರು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿಯೂ ರಾಜ್ಯಪಾಲರ ಕ್ರಮವನ್ನು ಅತಿ ದೊಡ್ಡ ಏಕೈಕ ಪಕ್ಷವಾಗಿರುವ ಕಾಂಗ್ರೆಸ್ ಪ್ರಶ್ನಿಸಿತ್ತು. ಹಲವು ರಾಜ್ಯಗಳಲ್ಲಿನ ಚುನಾವಣೋತ್ತರ ಮೈತ್ರಿಕೂಟಗಳಿಗೆ ಸರ್ಕಾರ ರಚಿಸಲು ಇದೇ ರೀತಿ ಅವಕಾಶ ನೀಡಲಾಗಿದೆ ಎಂದು ಗಮನ ಸೆಳೆದಿದೆ.

ಆದರೆ, ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸುವಂತೆ ಆಹ್ವಾನಿಸಿರುವುದು ಅಕ್ರಮವಾಗಿದೆಯಲ್ಲದೆ, ಇದೊಂದು ನಿರಂಕುಶ ಮತ್ತು ಅಸಂವಿಧಾನಾತ್ಮಕವಾಗಿದೆ ಎಂದು ಒತ್ತಿ ಹೇಳಿದೆ. ಬಹುಮತ ಸಾಧಿಸಿರುವ ಮೈತ್ರಿಕೂಟಕ್ಕೆ ಅವಕಾಶ ನೀಡದೆ, ಸರ್ಕಾರ ರಚನೆಯಿಂದ ಮೈತ್ರಿಕೂಟವನ್ನು ತಡೆಹಿಡಿಯಲಾಗಿದೆ. ಇದು ಸಂವಿಧಾನದ ೧೪ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More