ಕಾಂಗ್ರೆಸ್‌ನಲ್ಲಿದ್ದರೂ ಬಿಜೆಪಿ ಸರ್ಕಾರದ ಮಂತ್ರಿ; ಇದು ಮಣಿಪುರದ ಮಾದರಿ!

ಮಣಿಪುರದಲ್ಲೊಂದು ‘ಮಾದರಿ’ ಇದೆ. ಅದು ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳುವ ಬಿಜೆಪಿಯ ವಿಶೇಷ ಮಾದರಿ! ಕರ್ನಾಟಕದಲ್ಲಿ ನಡೆಯುತ್ತಿರುವ ವಿಚಿತ್ರ ತಿರುವುಗಳ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಮಾದರಿ ಮತ್ತೆ ಗಮನ ಸೆಳೆಯುತ್ತಿದೆ

ರಾಷ್ಟ್ರೀಯ ಮಾಧ್ಯಮಗಳು ಕ್ಷಣಕ್ಷಣದ ವಿವರ ನೀಡುವುದರೊಂದಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ದೇಶದ ಬಹುತೇಕ ಕಡೆ ಗಮನ ಸೆಳೆದಿವೆ. ಆದರೆ, ಮಣಿಪುರದ ಮೊದಲ ಬಿಜೆಪಿ ಸರ್ಕಾರವನ್ನು ಸ್ಥಿರವಾಗಿ ಉಳಿಸಲು ನಡೆಯುತ್ತಿರುವ ಯತ್ನಗಳು ಮಾತ್ರ ಮುಖ್ಯವಾಹಿನಿ ಮಾಧ್ಯಮಗಳಿಂದ ಮರೆಯಾಗಿವೆ ಎಂದು ಜಾಲತಾಣ ‘ದಿ ವೈರ್’ ಉಲ್ಲೇಖಿಸಿದೆ.

2017ರ ಮಾರ್ಚ್‌ನಲ್ಲಿ ನಡೆದ ಮಣಿಪುರ ವಿಧಾನಸಭೆ ಚುನಾವಣೆ ಬಳಿಕ 28 ಸ್ಥಾನಗಳನ್ನು ಪಡೆದು ಕೇವಲ ಮೂರು ಸ್ಥಾನಗಳಿಂದ ಅಧಿಕಾರ ವಂಚಿತವಾದ ಕಾಂಗ್ರೆಸ್ ಬದಲು, 21 ಸ್ಥಾನಗಳನ್ನು ಪಡೆದ ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿದಿತ್ತು. ಎರಡನೇ ಸ್ಥಾನ ಪಡೆದು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಿದ್ದ ಬಿಜೆಪಿ, ಸ್ಥಳೀಯ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯೊಂದಿಗೆ (ಎನ್‌ಪಿಪಿ) ಒಪ್ಪಂದ ಮಾಡಿಕೊಂಡು ಸರ್ಕಾರ ರಚಿಸಿತು. ಎನ್‌ಪಿಎಫ್ ಮತ್ತು ಎನ್‌ಪಿಪಿ ಪಕ್ಷಗಳ ತಲಾ ನಾಲ್ಕು ಅಭ್ಯರ್ಥಿಗಳು ಹಾಗೂ ಪಕ್ಷೇತರ ಶಾಸಕ ಅಶಾಬ್ ಉದ್ದೀನ್ (ಕುತೂಹಲದ ಸಂಗತಿ ಎಂದರೆ, ಇವರು ಕೂಡ ಬಹುಮತ ಸಾಬೀತು ದಿನದವರೆಗೆ ನಾಪತ್ತೆಯಾಗಿದ್ದರು) ಬೆಂಬಲದ ಹೊರತಾಗಿಯೂ ಅದು ಪಡೆದದ್ದು ಕೇವಲ 30 ಸ್ಥಾನಗಳು ಮಾತ್ರ. 60 ಸದಸ್ಯರಿರುವ ವಿಧಾನಸಭೆಯಲ್ಲಿ ಬಹುಮತ ಗಳಿಸಲು ಅದಕ್ಕೆ ಇನ್ನೂ ಒಂದು ಸ್ಥಾನದ ಅಗತ್ಯವಿತ್ತು.

ಆ ಒಂದು ಸ್ಥಾನ ಪಡೆಯಲು ಮಣಿಪುರದ ಚುನಾವಣಾ ಇತಿಹಾಸದಲ್ಲಿ ಮಾತ್ರವಲ್ಲ, ದೇಶದ ರಾಜಕೀಯ ಇತಿಹಾಸದಲ್ಲೇ ಯಾರೂ ಊಹಿಸಲಾರದಂತಹ ಹೆಜ್ಜೆಯೊಂದನ್ನು ಬಿಜೆಪಿ ಇರಿಸಿತು. ಕಾಂಗ್ರೆಸ್ ಶಾಸಕ ತವನವೋಜಾಂ ಶ್ಯಾಂಕುಮಾರ್ ಸಿಂಗ್ ಅವರನ್ನು ರಾಜಕೀಯವಾಗಿ ‘ಬೇಟೆ’ಯಾಡಿತು. ರಾಜಿನಾಮೆ ಕೂಡ ನೀಡದೆ ಸಿಂಗ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಗೆ ಮುಂದಾದರು.

ಕಾಂಗ್ರೆಸ್ ಟಿಕೆಟ್ ಪಡೆದು ಆಂಡ್ರೋ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಗ್ ಅವರಿಗೆ ಎನ್ ಬಿರೇನ್ ಸಿಂಗ್ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆಯಿತು. ಸಂವಿಧಾನದ ಹತ್ತನೇ ವಿಧಿಯನ್ನು ಉಲ್ಲಂಘಿಸಿದ್ದರೂ ಬಿಜೆಪಿ ನಾಯಕಿ, ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಸಿಂಗ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಸಿಂಗ್ ಪ್ರಸ್ತುತ ಕಂದಾಯ, ಪುನರ್ವಸತಿ, ಗ್ರಾಹಕ ವ್ಯವಹಾರಗಳ ಇಲಾಖೆ ಸೇರಿದಂತೆ ಹಲವು ಖಾತೆಗಳನ್ನು ಅನುಭವಿಸುತ್ತಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಸಿಂಗ್ ಅವರಿಗೆ ಕಾಂಗ್ರೆಸ್ ಶೋಕಾಸ್ ನೋಟಿಸ್ ಜಾರಿ ಮಾಡಿತಾದರೂ ಅದನ್ನು ಅವರು ನಿರ್ಲಕ್ಷಿಸಿದರು ಎನ್ನಲಾಗುತ್ತಿದೆ. ಪರಿಣಾಮ, 2017ರ ಮಾರ್ಚ್‌ನಲ್ಲಿ ಸಿಂಗ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಕಾಂಗ್ರೆಸ್ ಆದೇಶ ಹೊರಡಿಸಿತು.

“ವಿರೋಧಪಕ್ಷದ ಸದಸ್ಯರಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡದೆ ಆಡಳಿತಾರೂಢ ಮೈತ್ರಿ ಪಕ್ಷವನ್ನು ನೇರವಾಗಿ ಸೇರಿದ್ದು ದೇಶದ ಇತಿಹಾಸದಲ್ಲಿಯೇ ಮೊದಲು,” ಎಂದು ಸ್ಥಳೀಯ ವರದಿಗಾರರೊಂದಿಗೆ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಟಿ ಎನ್ ಹಾವೊಕಿಪ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಸಿಂಗ್ ವಿರುದ್ಧ ಸ್ಪೀಕರ್ ಅವರಿಗೆ ದೂರು ನೀಡಿ ಪಕ್ಷಾಂತರ ವಿರೋಧ ಕಾಯ್ದೆಯಡಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಕೋರಲಾಯಿತು. ಆದರೆ ಬಿಜೆಪಿ ಸದಸ್ಯರೇ ಆಗಿದ್ದ ಸ್ಪೀಕರ್ ಯುಮ್ನಂ ಖೇಮಚಂದ್ ಮತ್ತು ಉಪ ಸಭಾಧ್ಯಕ್ಷ ಕೊಂಗ್ಕಾಂ ರೊಬಿಂದ್ರೋ ಅವರು ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದಾಗಿ ಎರಡು ತಿಂಗಳು ಕಳೆದರೂ ಮಣಿಪುರ ಹೈಕೋರ್ಟ್ ಕೂಡ ಕ್ರಮಕ್ಕೆ ಮುಂದಾಗಲಿಲ್ಲ. ಈಗಲೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅವರು ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ,” ಎನ್ನುತ್ತಾರೆ ಎಂಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ರಾಜಕುಮಾರ್ ಇಮೋ ಸಿಂಗ್.

ಈ ಮಧ್ಯೆ, ಸಂವಿಧಾನದ ಹತ್ತನೇ ವಿಧಿಯ ಉಲ್ಲಂಘನೆ ಮತ್ತಷ್ಟು ಹೆಚ್ಚಾಯಿತು. ಗಿನ್ಸುವಾನ್ಹೋ ಜೌ, ಗಮ್ತಾವ್ ಹೋಕಿಪ್, ಥೋಕೊಚಾಂ ಲೋಕೇಶ್ವರ್ ಸಿಂಗ್, ಪಾವೋನಂ ಬ್ರೊಜೆನ್, ಯೆಂಕೋಂ ಸುರಚಂದ್ರ ಸಿಂಗ್, ಒಯ್ನಂ ಲುಖೋಯಿ ಸಿಂಗ್, ಸನಾಸಂ ಬಿರಾ ಸಿಂಗ್, ಕ್ಷತ್ರಿಮಯುಂ ಬಿರೇನ್ ಸಿಂಗ್ ಸೇರಿದಂತೆ ಈವರೆಗೆ ಕಾಂಗ್ರೆಸ್ಸಿಗೆ ರಾಜಿನಾಮೆ ನೀಡದೆ ಎಂಟು ಶಾಸಕರು ಬಿಜೆಪಿಗೆ ಹಾರಿದ್ದಾರೆ. ಸಂವಿಧಾನಬಾಹಿರವಾಗಿ ನಡೆದುಕೊಂಡರೂ ಸಾರ್ವಜನಿಕವಾಗಿ ಇವರು ಬಿಜೆಪಿ ಸೇರಿದ್ದಾರೆ. ಹೀಗಾಗಿ, ಬಿಜೆಪಿಯ ಶಾಸಕ ಸ್ಥಾನಗಳ ಸಂಖ್ಯೆ 21ರಿಂದ ಮೂವತ್ತಕ್ಕೆ ಏರಿದೆ. ಕಾಂಗ್ರೆಸ್ಸಿನಲ್ಲಿ 28ರಿಂದ 19ಕ್ಕೆ ಕುಸಿದಿದೆ.

ಕಳೆದ ಮೂರು ದಶಕಗಳಿಂದ ರಾಜ್ಯ ರಾಜಕೀಯವನ್ನು ಹತ್ತಿರದಿಂದ ಗಮನಿಸುತ್ತಿರುವ ಇಂಫಾಲ ಮೂಲದ ಪತ್ರಕರ್ತ ಲಾಬಾ ಯೆಂಬೆಂ ಹೇಳುವುದು ಹೀಗೆ: “ಆಸಕ್ತಿಕರ ವಿಚಾರ ಎಂದರೆ, ಪಕ್ಷಾಂತರ ನಿಷೇಧ ಕಾಯ್ದೆಯ ಅಸ್ತ್ರವನ್ನು ತಪ್ಪಿಸುವ ಉದ್ದೇಶದಿಂದ ಬಿಜೆಪಿ ಸೇರಿರುವ ಇವರೆಲ್ಲರೂ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸ್ಥಾನದಲ್ಲಿ ಕೂರದೆ ವಿರೋಧಪಕ್ಷಕ್ಕೆ ಮೀಸಲಿಟ್ಟ ಆಸನಗಳನ್ನೇ ಅಲಂಕರಿಸುತ್ತಾರೆ. ಇದು ಮಣಿಪುರಕ್ಕೆ ಮಾತ್ರ ಸಂಬಂಧಿಸಿದ ಸಮಸ್ಯೆಯಲ್ಲ, ಇಡೀ ಸಂವಿಧಾನದ ಸ್ಪಷ್ಟ ಉಲ್ಲಂಘನೆ,” ಎನ್ನುತ್ತಾರೆ.

ಅಕ್ರಮವಾಗಿಯೋ ಸಕ್ರಮವಾಗಿಯೋ ಹೀಗೆ ಪಕ್ಷ ಬದಲಿಸಿರುವುದರಿಂದ ಪ್ರಮುಖ ಪ್ರಾದೇಶಿಕ ಪಕ್ಷಗಳಾಗಿದ್ದ ಎನ್‌ಪಿಎಫ್ ಮತ್ತು ಎನ್‌ಪಿಪಿ ರಾಜ್ಯದಲ್ಲಿ ತಮ್ಮ ಪ್ರಭಾವ ಕಳೆದುಕೊಂಡಿವೆ. ಅದು ನಾಗಾಲ್ಯಾಂಡಿನ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಅಲ್ಲಿ ನೂತನವಾಗಿ ಸ್ಥಾಪನೆಯಾದ ನ್ಯಾಷನಲ್ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ ಜೊತೆ ಎನ್‌ಪಿಎಫ್ ಮತ್ತು ಎನ್‌ಪಿಪಿ ಮೈತ್ರಿಗೆ ಮುಂದಾದದವು. ಆದರೆ, ಮಣಿಪುರ ಬಿಜೆಪಿ ಇದಕ್ಕೆ ಸಮ್ಮತಿ ಸೂಚಿಸಲಿಲ್ಲ. ಪರಿಣಾಮ ಮೈತ್ರಿಯಿಂದ ಹೊರಬರುವುದಾಗಿ ಎನ್‌ಪಿಎಫ್ ಎಚ್ಚರಿಸಿತು. ಆದರೆ ಈ ಬೆದರಿಕೆಗಳಿಗೆ ಜಗ್ಗದ ಬಿಜೆಪಿ ನಾಗಾಲ್ಯಾಂಡಿನಲ್ಲಿ ಎನ್‌ಪಿಎಫ್ ಜೊತೆ ಮೈತ್ರಿ ಕಡಿದುಕೊಳ್ಳಲು ಕೂಡ ಸಿದ್ಧ ಎಂದಿತು.

ಕಳೆದ ಮಾರ್ಚ್‌ನಲ್ಲಿ ಆಮ್ ಆದ್ಮಿ ಪಕ್ಷದ 20 ಶಾಸಕರ ಅನರ್ಹತೆ ಕುರಿತಂತೆ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸದನದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪ್ರಸ್ತಾಪಿಸಿತು. ರಾಜ್ಯಪಾಲರಿಗೆ ಬಿಜೆಪಿ ಸಲ್ಲಿಸಿರುವ, ಎನ್ ಬಿರೇನ್ ಸಿಂಗ್ ಅವರನ್ನು ಬೆಂಬಲಿಸಿದ ಶಾಸಕರ ಪಟ್ಟಿಯಲ್ಲಿ ಶ್ಯಾಂಕುಮಾರ್ ಸಿಂಗ್ ಕಾಂಗ್ರೆಸ್ ಶಾಸಕ ಎಂದು ಉಲ್ಲೇಖಿಸಿರುವುದನ್ನು ಮನವರಿಕೆ ಮಾಡಿಕೊಟ್ಟಿತು. ಮಾಜಿ ಉಪಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಗೈಕಾಂಗಾಮ್ ಗಂಗ್ಮೇಯಿ ಅವರು ಈ ಸಂಬಂಧ ಸ್ಪೀಕರ್ ಹಾಗೂ ರಾಷ್ಟ್ರಪತಿಯವರಿಗೆ ಪತ್ರ ಬರೆದರೂ ಯಾವುದೇ ಫಲಿತಾಂಶ ದೊರೆಯಲಿಲ್ಲ ಎಂದು ಆರೋಪಿಸಿರುವುದಾಗಿ ತಿಳಿದುಬಂದಿದೆ.

“ರಾಜ್ಯ ಕಾಂಗ್ರೆಸ್ ಘಟಕ ಪಕ್ಷಾಂತರ ಮಾಡಿರುವ ಉಳಿದ ಎಂಟು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲು ನಿರ್ಧರಿಸಿದೆ. ಆ ಶಾಸಕರು ಬಿಜೆಪಿಯಲ್ಲಿ ವಿವಿಧ ರಾಜಕೀಯ ಹುದ್ದೆಗಳನ್ನು ಕೂಡ ಅನುಭವಿಸುತ್ತಿದ್ದಾರೆ. ಈ ರೀತಿ ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿಯಿಂದ ಅವರು ತಪ್ಪಿಸಿಕೊಂಡಿದ್ದಾರೆ,” ಎನ್ನುತ್ತಾರೆ ಶಗೋಲ್ ಬಂದ್ ವಿಧಾನಸಭಾಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಇಮೋ ಸಿಂಗ್.

ಇದನ್ನೂ ಓದಿ : ರಾಜ್ಯಪಾಲ ವಜುಬಾಯಿ ವಾಲ ನಡೆಗೆ ಖಂಡನೆ, ಕಾಂಗ್ರೆಸ್‌ನಿಂದ ಪ್ರತಿಭಟನೆ

‘ಮಣಿಪುರ ಮಾದರಿ’ ಅನುಸರಿಸಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆಗಳ ಕುರಿತು ಮಾತನಾಡಿರುವ ಅವರು, “ಸುಲಭವಾಗಿ ಕರ್ನಾಟಕದಲ್ಲಿ ಇದನ್ನು ಜಾರಿಮಾಡಲು ಸಾಧ್ಯವಿಲ್ಲ ಅನ್ನಿಸುತ್ತದೆ. ಕಾರಣ, ಮಣಿಪುರದ ಹಾಗಲ್ಲದೆ ಕರ್ನಾಟಕದ ಬೆಳವಣಿಗೆ ಮಾಧ್ಯಮಗಳಲ್ಲಿ ಅಪಾರ ಚರ್ಚೆಗೆ ಗ್ರಾಸವಾಗಿದೆ. ನಮ್ಮಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದು ಯಾವ ಕ್ರಮ ಕೈಗೊಂಡರೂ ತಪ್ಪಾಗದು!” ಎಂದಿದ್ದಾರೆ.

ಹೆಸರು ತಿಳಿಸಲು ಬಯಸದ ಸ್ಥಳೀಯ ಪತ್ರಕರ್ತರು ಹೇಳುವ ಪ್ರಕಾರ, ಮಾಜಿ ಪತ್ರಕರ್ತರೂ ಆಗಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ಇಲ್ಲಿನ ಕೆಲವು ಸಂಪಾದಕರೊಂದಿಗೆ ನಂಟು ಹೊಂದಿರುವುದರಿಂದ ಪಕ್ಷಾಂತರ ವಿಚಾರ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವಾಗಲಿಲ್ಲ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More