ರಾಜ್ಯಪಾಲರ ಆಯ್ಕೆಯಲ್ಲಿ ಜನರ ಸಮ್ಮತಿ ಕುರಿತು ಮತ್ತೊಮ್ಮೆ ಆಲೋಚಿಸಲು ಇದು ಸಕಾಲ

ಒಕ್ಕೂಟ ರಾಜಕೀಯವನ್ನು ಗೌರವಿಸಬೇಕೆಂದು ಒತ್ತಾಯಿಸುವುದಕ್ಕೆ ಹಾಗೂ ರಾಜ್ಯಪಾಲರ ಪಾತ್ರ ಮತ್ತು ಅವರನ್ನು ಆಯ್ಕೆ ಮಾಡುವಾಗ ಆ ರಾಜ್ಯದ ಜನರ ಸಮ್ಮತಿ ಬಗ್ಗೆ ಪುನರಾಲೋಚನೆ ಮಾಡುವುದಕ್ಕೆ ಇದು ಸಕಾಲ ಎನ್ನುತ್ತಾರೆ ರಾಜ್ಯದ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಟಿ ವೆಂಕಟೇಶ್

ನಮ್ಮಲ್ಲಿ ಬಹಳಷ್ಟು ಜನರಿಗೆ ಗಣಿತದ ಸಮಸ್ಯೆ ಇರುತ್ತದೆ. ಅಸಾಮಾನ್ಯ ಅಧಿಕಾರ ಹೊಂದಿರುವ ವ್ಯಕ್ತಿಯೊಬ್ಬನಿಗೆ ಗಣಿತದ ಸಮಸ್ಯೆ ಇಲ್ಲದಿದ್ದರೂ ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲವೆಂಬಂತೆ ಆತ ಉದ್ದೇಶಪೂರ್ವಕವಾಗಿ ವರ್ತಿಸಿದರೆ ಅದೊಂದು ಗಂಭೀರ ಸಮಸ್ಯೆ. ಕರ್ನಾಟಕದ ರಾಜ್ಯಪಾಲರ ವರ್ತನೆ ಕೂಡ ಇಂತಹದ್ದೇ ಉದ್ದೇಶಪೂರ್ವಕ ಕೃತ್ಯ. ಅದು ಈ ನೆಲದ ಕಾನೂನಿನ ಉಲ್ಲಂಘನೆ, ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ವಿರುದ್ಧವಾದುದು, ಈ ರಾಷ್ಟ್ರರಾಜ್ಯದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಹಾಗೂ ಸಂವಿಧಾನದಡಿಯಲ್ಲಿ ಅವರಿಗೆ ನೀಡಲಾಗಿರುವ ಅಧಿಕಾರದ ದುರುಪಯೋಗ.

ರಾಜ್ಯಪಾಲರು ತಮ್ಮ ಹುದ್ದೆಯ ಘನತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಅದು ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ನಡೆದ ಇಂತಹುದೇ ಘಟನೆಗಳನ್ನು ನೆನಪಿಗೆ ತರುತ್ತದೆ. ರಾಜ್ಯಪಾಲರು ಇಂತಹ ಕೆಲಸ ಮಾಡಿದಾಗಲೆಲ್ಲಾ ಸುಪ್ರೀಂ ಕೋರ್ಟು ಪದೇ ಪದೇ ಟೀಕಿಸಿದೆ, ಛೀಮಾರಿ ಹಾಕಿದೆ ಹಾಗೂ ಅವರ ಆದೇಶಗಳನ್ನು ಬದಿಗೆ ಸರಿಸಿದೆ. ಎಂಥವರು ರಾಜ್ಯಪಾಲರಾಗಬೇಕು ಎಂಬುದನ್ನು ಸರ್ಕಾರಿಯ ಆಯೋಗ ಸ್ಪಷ್ಟವಾಗಿ ಹೇಳಿದೆ. ಅದರ ಪ್ರಕಾರ ರಾಜ್ಯಪಾಲರಾಗುವವರು ಬದುಕಿನ ಕೆಲವು ಕ್ಷೇತ್ರದಲ್ಲಿ ಘನ ವ್ಯಕ್ತಿಯಾಗಿರಬೇಕು; ರಾಜ್ಯದ ಹೊರಗಿನವರಾಗಿರಬೇಕು; ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕ ಕಡಿದುಕೊಂಡ ವ್ಯಕ್ತಿಯಾಗಿರಬೇಕು; ಸ್ಥಳೀಯ ರಾಜಕೀಯದೊಂದಿಗೆ ಸಂಪರ್ಕವಿಟ್ಟುಕೊಂಡಿರಬಾರದು; ಹಾಗೂ ಸ್ಥಳೀಯ ರಾಜಕೀಯದಲ್ಲಿ, ಅದರಲ್ಲೂ ಇತ್ತೀಚಿನ ಸ್ಥಳೀಯ ರಾಜಕೀಯದಲ್ಲಿ ಅವರು ಗಣನೀಯವಾಗಿ ಭಾಗವಹಿಸಿರಬಾರದು.

ಆದರೆ, ಇವೆಲ್ಲಾ ಮಾರ್ಗದರ್ಶನಗಳ ನಡುವೆಯೂ ರಾಜಕಾರಣಿಗಳೇ ರಾಜ್ಯಪಾಲರಾಗಿ ನೇಮಕವಾಗುತ್ತಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಬಹಳಷ್ಟು ಸಲ ರಾಜ್ಯಪಾಲರು ರಾಜ್ಯದ ವಿರೋಧ ಪಕ್ಷದ ಅಣತಿಯಂತೆ ನಡೆಯುವುದನ್ನೂ ನೋಡಿದ್ದೇವೆ. ರಾಜ್ಯದ ಆಡಳಿತದಲ್ಲಿ ಋಣಾತ್ಮಕವಾಗಿ ಹಸ್ತಕ್ಷೇಪ ಮಾಡುವುದು, ತುರ್ತಾಗಿ ಆಗಬೇಕಾದ ಕೆಲಸಗಳಿಗೆ ಮಂಜೂರಾತಿ ನೀಡದಿರುವುದು ಅಥವಾ ಅಂತಹ ಕಡತಗಳಿಗೆ ಸಹಿ ಮಾಡದೇ ತಮ್ಮ ಬಳಿಯೇ ಅನಿರ್ದಿಷ್ಟವಾಗಿ ಇಟ್ಟುಕೊಂಡು ಕುಳಿತುಕೊಳ್ಳುವುದು ಮುಂತಾದ ಕೆಲಸಗಳನ್ನು ರಾಜ್ಯಪಾಲರು ಮಾಡುತ್ತಿರುವುದನ್ನು ಕಂಡಿದ್ದೇವೆ.

ಕರ್ನಾಟಕದಲ್ಲೀಗ ಕಲಸುಮೇಲೋಗರದ ಭರ್ಜರಿ ನಾಟಕವೊಂದು ನಡೆಯುತ್ತಿದೆ. ಮಾಧ್ಯಮಗಳು, ಅದರಲ್ಲೂ ನಿರ್ದಿಷ್ಟವಾಗಿ ಹಣ ಪಡೆದು ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳು ಪೂರ್ವಗ್ರಹಪೀಡಿತ ಪಕ್ಷಪಾತಿ ಅಭಿಪ್ರಾಯಗಳನ್ನು ಅಬ್ಬರದಿಂದ ಪ್ರಚಾರ ಮಾಡುತ್ತಿವೆ. ಸರ್ಕಾರ ರಚನೆಯ ವಿಷಯದಲ್ಲಿ ನಡೆಯುತ್ತಿರುವ ಒಂದೊಂದು ಕೆಟ್ಟ ವಿದ್ಯಮಾನವೂ ಮತದ ಮೌಲ್ಯವನ್ನು ಕೊಲ್ಲುತ್ತಿದೆ.

ಹಾಗೆ ನೋಡಿದರೆ, ಈ ಪ್ರಕರಣದಲ್ಲಿ ಯಾವುದೇ ಗೊಂದಲವಾಗಲೀ ಅಥವಾ ತಾಂತ್ರಿಕ ಕಠಿಣತೆಯಾಗಲೀ ಇಲ್ಲ. ಈ ಕೆಳಗೆ ನೀಡಿರುವ ಅಂಶಗಳು ಪ್ರಕರಣದ ಸರಳತೆಯನ್ನು ಮತ್ತು ಸೂಕ್ತ ತೀರ್ಮಾನದ ಅಗತ್ಯವನ್ನು ಎತ್ತಿ ತೋರುತ್ತವೆ.

ಭಾರತ ಚುನಾವಣಾ ಆಯೋಗದ ನೇತೃತ್ವದಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗಳು ಬಹುತೇಕ ಶಾಂತಿಯುತವಾಗಿ ಮುಗಿದಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದ ಈ ಚುನಾವಣೆಯಲ್ಲಿ ಮತದಾರರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಬೆಂಗಳೂರಿನಂತಹ ನಗರ ಕೇಂದ್ರಗಳನ್ನು ಹೊರತುಪಡಿಸಿದರೆ ಉಳಿದಂತೆ ಇಡೀ ರಾಜ್ಯದ ಜನ ದೊಡ್ಡ ಸಂಖ್ಯೆಯಲ್ಲಿ ಈ ಚುನಾವಣೆಯಲ್ಲಿ ಭಾಗವಹಿಸಿದ್ದು ಅನುಕರಣೀಯ. 222 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಚುನಾವಣಾ ಆಯೋಗವು 221 ಅಭ್ಯರ್ಥಿಗಳನ್ನು ಚುನಾಯಿತರು ಎಂದು ಘೋಷಿಸಿದೆ (ಎಚ್ ಡಿ ಕುಮಾರಸ್ವಾಮಿಯವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ).

ಚುನಾವಣಾ ಆಯೋಗವು ಪದ್ಧತಿಯ ಪ್ರಕಾರ ಚುನಾವಣೆಯ ವರದಿಯನ್ನು ಸಲ್ಲಿಸಿ ಮಾನ್ಯತೆ ಪಡೆದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕ್ರಮವಾಗಿ 104, 78 ಹಾಗೂ 38 ಸ್ಥಾನಗಳನ್ನು ಪಡೆದಿದ್ದು ಇವುಗಳ ಜೊತೆಗೆ ಇತರ ಇಬ್ಬರು ಆಯ್ಕೆಯಾಗಿದ್ದಾರೆಂದು ಸ್ಪಷ್ಟವಾಗಿ ಹೇಳಿದೆ.

ಕೂಡಲೇ ಬಿಜೆಪಿಯ ಯಡಿಯೂರಪ್ಪನವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ತಮ್ಮದು ಏಕೈಕ ದೊಡ್ಡ ಪಕ್ಷವಾಗಿದ್ದು ತಾವು ಇತರರ ಬೆಂಬಲದಿಂದ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಹೇಳುವ ಮೂಲಕ ಸರ್ಕಾರ ರಚನೆಗೆ ಹಕ್ಕುಮಂಡಿಸಿದರು. ಇದಾದ ಕೂಡಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ತಮ್ಮ ಮೈತ್ರಿಕೂಟದಲ್ಲಿ 117 ಶಾಸಕರಿದ್ದು ಸರ್ಕಾರ ರಚಿಸುವುದಕ್ಕೆ ಬೇಕಿರುವ ಸರಳ ಬಹುಮತ ಇದೆ ಎಂದು ಹೇಳಿಕೊಂಡು ಸರ್ಕಾರ ರಚನೆಗೆ ಅವರೂ ಹಕ್ಕು ಮಂಡಿಸಿದರು.

ರಾಜ್ಯಪಾಲರ ಬಳಿ ಚುನಾವಣಾ ಆಯೋಗವು ಸಲ್ಲಿಸಿದ ವರದಿ ಇತ್ತು. ಅದರಲ್ಲಿ, ತಾವು ಯಾವ ಪಕ್ಷಕ್ಕೆ ಸೇರಿದ್ದಾರೋ ಆ ಪಕ್ಷವನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಶಾಸಕರ ಹೆಸರು ಮತ್ತು ಇತರ ವಿವರಗಳಿದ್ದವು. ಅವರ ಬಳಿ ಬಿಜೆಪಿಯ ಬಿ ಎಸ್ ಯಡಿಯೂರಪ್ಪನವರು ಸರ್ಕಾರ ರಚನೆಗಾಗಿ ಸಲ್ಲಿಸಿದ ಹಕ್ಕುಮಂಡನೆ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಎಚ್ ಡಿ ಕುಮಾರಸ್ವಾಮಿಯವರು ಸರ್ಕಾರ ರಚನೆಗಾಗಿ ಸಲ್ಲಿಸಿದ ಹಕ್ಕುಮಂಡನೆಗಳೆರಡೂ ಇದ್ದವು. ಎರಡೂ ಕಡೆಯಿಂದ ನೀಡಲಾದ ಶಾಸಕರ ಪಟ್ಟಿಯನ್ನು ನೋಡಿದರೆ ಎರಡೂ ಪಟ್ಟಿಯಲ್ಲಿ ಕಾಣಿಸಿಕೊಂಡ ಒಂದೂ ಹೆಸರು ಇರಲಿಲ್ಲ. ಅಲ್ಲದೇ 222 ಶಾಸಕರಲ್ಲಿ ಯಾರೊಬ್ಬರ ಹೆಸರೂ ಕಾಣೆಯಾಗಿರಲಿಲ್ಲ.

ಇಂತಹ ಸಂದರ್ಭದಲ್ಲಿ ಸರ್ಕಾರ ರಚನೆಗೆ ಯಾರನ್ನು ಕರೆಯಬೇಕು ಎಂಬ ಪ್ರಶ್ನೆ ಏಳುತ್ತದೆ. ರಾಜ್ಯಪಾಲರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇದ್ದಿದ್ದರೆ ಬಹುಮತಕ್ಕೆ ಅಗತ್ಯವಿರುವಷ್ಟು ಶಾಸಕರನ್ನು ಹೊಂದಿರುವ ಕುಮಾರಸ್ವಾಮಿಯವರನ್ನೇ ಕರೆಯಬೇಕಾಗಿತ್ತು. ಎಲ್ಲರೂ ನಿರೀಕ್ಷಿಸಿದ್ದೂ ಅದನ್ನೆ.

ಕರ್ನಾಟಕದ ಜನರಿಗೆ ಅಚ್ಚರಿ ಮತ್ತು ಆಘಾತ ಆಗುವ ಹಾಗೆ ರಾಜ್ಯಪಾಲರು ತಮಗಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ನೆಲದ ಕಾನೂನನ್ನು ಗಾಳಿಗೆ ತೂರಿ, ಶಾಸನಸಭೆ ಮತ್ತು ಸಂವಿಧಾನಗಳಿಗೆ ಅಗೌರವ ತೋರಿ ಬಿಜೆಪಿಯ ಬಿ ಎಸ್ ಯಡಿಯೂರಪ್ಪನವರನ್ನು ಸರ್ಕಾರ ರಚಿಸುವುದಕ್ಕೆ ಆಹ್ವಾನಿಸಿದರು. ಯಡಿಯೂರಪ್ಪನವರು ತಮಗೆ ಸರಳ ಬಹುಮತಕ್ಕೆ ಬೇಕಾದಷ್ಟು ಸಂಖ್ಯೆಯ ಶಾಸಕರು ಇಲ್ಲ, 8 ಶಾಸಕರ ಕೊರತೆ ಇದೆ ಎಂದು ಹೇಳುತ್ತಾ ಹತ್ತು ದಿನಗಳಲ್ಲಿ ತಾವು ಇತರರ ಬೆಂಬಲ ಪಡೆದು ಬಹುಮತ ಸಾಬೀತುಪಡಿಸುತ್ತೇವೆ ಎಂದು ತಮ್ಮ ಹಕ್ಕು ಮಂಡನೆಯಲ್ಲಿ ಹೇಳಿದ್ದರು. ಇನ್ನೊಂದೆಡೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಚುನಾವಣೋತ್ತರ ಮೈತ್ರಿಕೂಟದಲ್ಲಿ ಸರಳ ಬಹುಮತಕ್ಕೆ ಬೇಕಾಗುವಷ್ಟು ಸದಸ್ಯರಿದ್ದರು. ಹೀಗಿದ್ದರೂ ರಾಜ್ಯಪಾಲರು ಸರಳ ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯೆಯ ಸದಸ್ಯರನ್ನು ಹೊಂದಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಪರಿಗಣ ಸದೇ ಅಗತ್ಯ ಸಂಖ್ಯಾಬಲವಿಲ್ಲದ ಬಿಜೆಪಿಯ ಬಿ ಎಸ್‌ ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸುವುದಕ್ಕೆ ಕರೆದಿದ್ದು ಪ್ರಜಾತಂತ್ರವನ್ನು ಅಣಕಿಸುವ ಕೃತ್ಯ. ಮಾತ್ರವಲ್ಲ, ಅಗತ್ಯ ಸಂಖ್ಯಾಬಲ ಗಳಿಸುವುದಕ್ಕಾಗಿ ಇತರ ಸದಸ್ಯರನ್ನು ಖರೀದಿ ಮಾಡುವ ಕುದುರೆ ವ್ಯಾಪಾರಕ್ಕೆ ಉತ್ತೇಜನ ನೀಡುವ ಕೃತ್ಯವೂ ಹೌದು.

ಇತ್ತೀಚಿನ ಉದಾಹರಣೆಗಳನ್ನು ನೋಡಿದರೆ ಇದೇ ಬಿಜೆಪಿ ಮೂರು ರಾಜ್ಯಗಳಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ, ಆದರೆ ಸರಳ ಬಹುಮತಕ್ಕೆ ಬೇಕಾಗುವಷ್ಟು ಸದಸ್ಯಬಲವನ್ನು ಹೊಂದಿರದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟಿದೆ. ಆ ಸಮಯದಲ್ಲಿ ಬಹುಮತಕ್ಕೆ ಬೇಕಾದ ಸದಸ್ಯ ಬೆಂಬಲವನ್ನು ಹೊಂದಿರುವ ಚುನಾವಣೋತ್ತರ ಮೈತ್ರಿಕೂಟವನ್ನೇ ರಾಜ್ಯಪಾಲರು ಸರ್ಕಾರ ರಚಿಸುವುದಕ್ಕೆ ಆಹ್ವಾನಿಸಬೇಕು ಎಂದು ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಮತ್ತು ಇತರ ಸುಪ್ರಸಿದ್ಧ ಕಾನೂನು ತಜ್ಞರು ಜೋರಾಗಿ ವಾದಿಸಿ ಒತ್ತಾಯ ಮಾಡಿದ್ದರು. ಇದೇ ಕಾನೂನು ದಿಗ್ಗಜರು ಈಗ ಕರ್ನಾಟಕದ ವಿಷಯದಲ್ಲಿ ತಮ್ಮ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಕೊಡುವ ಸಲುವಾಗಿ ತಮ್ಮದೇ ನಿಲುವುಗಳಿಗೆ ತದ್ವಿರುದ್ಧವಾಗಿ ಮಾತಾಡುತ್ತಿದ್ದಾರೆ. ವಿಚಿತ್ರವೆಂಬಂತೆ ಈ ಮೂರು ರಾಜ್ಯಗಳ ರಾಜ್ಯಪಾಲರುಗಳು ಇವರ ವಾದಸರಣಿಯನ್ನು ಮೌನವಾಗಿ ಪುರಸ್ಕರಿಸಿ ಕಾಂಗ್ರೆಸ್ಸಿಗೆ ಸರ್ಕಾರ ರಚಿಸುವ ಅವಕಾಶವನ್ನು ನಿರಾಕರಿಸಿದ್ದರು. ಈಗ ಕರ್ನಾಟಕದ ರಾಜ್ಯಪಾಲರು ಅದೇ ವಾದಸರಣಿಯನ್ನು ತಿರಸ್ಕರಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸುವ ಅವಕಾಶವನ್ನು ನಿರಾಕರಿಸಿದ್ದಾರೆ.

ರಾಮೇಶ್ವರ ಪ್ರಸಾದ್ ಠಾಕೂರ್ ಮತ್ತಿತರರು ಹಾಗೂ ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಈ ಎಲ್ಲಾ ಅಂಶಗಳನ್ನು ವಿವರಿಸಿ, ರಾಜಕಾರಣ ಗಳು ಜಾಣತನ ಪ್ರದರ್ಶಿಸಬೇಕು, ನೆಲದ ಕಾನೂನಿಗೆ ಮತ್ತು ಸರ್ಕಾರಿಯ ಆಯೋಗದ ಶಿಫಾರಸ್ಸುಗಳನ್ನು ಗೌರವಿಸಬೇಕು ಎಂದು ಮನವಿ ಮಾಡಿದೆ.

ಇದನ್ನೂ ಓದಿ : ರಾಜ್ಯಪಾಲ ವಜುಬಾಯಿ ವಾಲ ನಡೆಗೆ ಖಂಡನೆ, ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಾನೂನು ತಜ್ಞರು ಈಗ ರಾಜಕೀಯ ಪಕ್ಷಗಳೊಂದಿಗಿನ ತಮ್ಮ ಸಂಬಂಧಗಳಿಗನುಗುಣವಾಗಿ ಪರಿಸ್ಥಿತಿಯನ್ನು ವ್ಯಾಖ್ಯಾನ ಮಾಡುತ್ತಾ ಕಚ್ಚಾಡುತ್ತಿದ್ದಾರೆ. ಸರ್ಕಾರ ರಚನೆಯ ವಿಷಯದಲ್ಲಿ ನಡೆಯುತ್ತಿರುವ ಈ ಎಲ್ಲಾ ವಿದ್ಯಮಾನಗಳು ಕರ್ನಾಟಕದ ಜನತೆಗೆ ಮತ್ತು ಅವರ ಅಭಿಲಾಷೆಗಳಿಗೆ ಆಗುತ್ತಿರುವ ಅವಮಾನ. ನಿಜ, ಜನರು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸಿದರು. ಯಾವೊಂದು ಪಕ್ಷಕ್ಕೂ ಬಹುಮತ ನೀಡದ ಅವರ ತೀರ್ಮಾನದಲ್ಲೇ ನೀವು ಯಾರೇ ಆಗಿದ್ದರೂ ಪರಸ್ಪರ ಕೈಜೋಡಿಸಿ ಜನಸ್ನೇಹಿ ನೀತಿಗಳನ್ನು ಜಾರಿಗೆ ತನ್ನಿ ಎಂಬ ಸಂದೇಶವೂ ಇದೆ. ಆದರೆ, ಕರ್ನಾಟಕದ ರಾಜ್ಯಪಾಲರಿಗೆ ಈ ಸಂದೇಶ ಕೇಳಿಸದಿರುವುದು, ಅರ್ಥವಾಗದಿರುವುದು ನೋವಿನ ಸಂಗತಿ.

ಒಕ್ಕೂಟ ರಾಜಕೀಯಕ್ಕೆ ಉತ್ತಮ ಗೌರವ ಬೇಕು ಎಂದು ಒತ್ತಾಯ ಮಾಡುವುದಕ್ಕೆ ಇದು ಸಕಾಲವಲ್ಲವೆ? ರಾಜ್ಯದ ರಾಜ್ಯಪಾಲರ ಪಾತ್ರ ಮತ್ತು ಅವರನ್ನು ಆಯ್ಕೆ ಮಾಡುವಾಗ ಆ ರಾಜ್ಯದ ಜನರ ಸಮ್ಮತಿ ಬಗ್ಗೆ ಪುನರಾಲೋಚನೆ ಮಾಡುವುದಕ್ಕೆ ಇದು ಸರಿಯಾದ ಸಮಯ ಅಲ್ಲವೆ?

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More