ವಿದೇಶದಲ್ಲಿ ಕೈಕೊಟ್ಟ ಭಾರತದ ಮತಯಂತ್ರ; ಚುನಾವಣಾ ಆಯೋಗಕ್ಕೆ ತಲೆನೋವು 

ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾ ರಾಷ್ಟ್ರಕ್ಕೆ ಭಾರತದಿಂದ ಮತಯಂತ್ರಗಳನ್ನು ರಫ್ತು ಮಾಡಲಾಗಿತ್ತು. ಆದರೆ ಅಲ್ಲಿನ ವಿರೋಧಪಕ್ಷವೊಂದು ಮತಯಂತ್ರಗಳ ನಿಸ್ಪಕ್ಷಪಾತ ಕಾರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದೆ ಎನ್ನುತ್ತದೆ ‘ಎಕನಾಮಿಕ್ ಟೈಮ್ಸ್’ ವರದಿ

ದಕ್ಷಿಣ ಆಫ್ರಿಕಾದ ಪುಟ್ಟ ದೇಶ ಬೋಟ್ಸ್‌ವಾನಾದಲ್ಲಿ ಭಾರತದಿಂದ ಆಮದು ಮಾಡಿಕೊಳ್ಳಲಾದ ಮತಯಂತ್ರಗಳು (ಇವಿಎಂ) ಕೈ ಕೊಟ್ಟಿದ್ದು ಅಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮತಯಂತ್ರಗಳ ಬಗ್ಗೆ ಕಳೆದ ಒಂದು ವರ್ಷದಿಂದ ಭಾರತದಲ್ಲಿ ಚರ್ಚೆ ನಡೆಯುತ್ತಿದ್ದು ಬೋಟ್ಸ್‌ವಾನಾದ ಬೆಳವಣಿಗೆ 2019ರಲ್ಲಿ ಇವಿಎಂ ಮೂಲಕ ಚುನಾವಣೆ ನಡೆಸಬೇಕೆಂದಿರುವ ಚುನಾವಣಾ ಆಯೋಗಕ್ಕೆ ಭಾರಿ ಪೆಟ್ಟು ನೀಡಿದೆ.

ವಜ್ರಗಳ ತವರು ಬೋಟ್ಸ್‌ವಾನಾದಲ್ಲಿ ಮತಯಂತ್ರಗಳ ಮೂಲಕ ಚುನಾವಣೆ ನಡೆಸಲು ಸಂವಿಧಾನಾತ್ಮಕ ತಿದ್ದುಪಡಿ ತಂದ ಬೋಟ್ಸ್‌ವಾನಾ ಡೆಮಾಕ್ರಟಿಕ್ ಪಕ್ಷದ (ಬಿಡಿಪಿ) ವಿರುದ್ಧ ಅಲ್ಲಿನ ಪ್ರಮುಖ ಪ್ರತಿಪಕ್ಷ ಬೋಟ್ಸ್‌ವಾನಾ ಕಾಂಗ್ರೆಸ್ ಪಕ್ಷ (ಬಿಸಿಪಿ) ನ್ಯಾಯಾಲಯದ ಮೊರೆ ಹೋಗಿದೆ. ಬಿಡಿಪಿ ಪರವಾಗಿ ಮತಗಳು ಲಭಿಸುವಂತೆ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಬಿಸಿಪಿ ಆರೋಪಿಸಿದೆ. ಮತದಾನ ಪ್ರಕ್ರಿಯೆಯನ್ನು ಚುರುಕುಗೊಳಿಸಲಿದೆ ಎಂಬ ಕಾರಣಕ್ಕೆ ಅಲ್ಲಿನ ಸ್ವತಂತ್ರ ಚುನಾವಣಾ ಆಯೋಗ (ಐಇಸಿ) ಮತಯಂತ್ರಗಳ ಬಳಕೆಗೆ ಒತ್ತು ನೀಡಿತ್ತು.

ಅಲ್ಲಿನ ಸರ್ಕಾರ ಮತ್ತು ಚುನಾವಣಾ ಆಯೋಗಗಳು ಭಾರತೀಯ ಚುನಾವಣಾ ಆಯೋಗದ ತಜ್ಞರ ಮೊರೆ ಹೋಗಿದ್ದು ಇವಿಎಂ ಕಾರ್ಯಕ್ಷಮತೆಯನ್ನು ಕೋರ್ಟ್ ಎದುರು ಸಾಬೀತುಪಡಿಸುವಂತೆ ಕೋರಿವೆ. ಮತಯಂತ್ರಗಳ ಕುರಿತಾದ ಅನುಮಾನಗಳನ್ನು ಪರಿಹರಿಸಲು ಮತಯಂತ್ರ ಹಾಗೂ ವಿವಿಪ್ಯಾಟ್ ಕಾರ್ಯ ನಿರ್ವಹಿಸುವ ಪರಿಯನ್ನು ಕೋರ್ಟಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿವೆ. ಈ ಸಲುವಾಗಲಿ ನಾಲ್ಕೈದು ಮತಯಂತ್ರಗಳನ್ನು ಕಳಿಸಿಕೊಡುವಂತೆ ಕೋರಲು ಸ್ವತಃ ಬೋಟ್ಸ್‌ವಾನಾದ ಚುನಾವಣಾ ಆಯುಕ್ತರನ್ನು ಒಳಗೊಂಡ ನಿಯೋಗ ಬುಧವಾರ ಭಾರತೀಯ ಚುನಾವಣಾ ಆಯೋಗದ ಕದ ತಟ್ಟಿದೆ. ಭಾರತದಲ್ಲಿಯೂ ಮತಯಂತ್ರಗಳ ಕಾರ್ಯಕ್ಷಮತೆ ವಿರುದ್ಧ ಧ್ವನಿಗಳು ಎದ್ದಿರುವ ಹಿನ್ನೆಲೆಯಲ್ಲಿ ಈ ಹೊಸ ದೂರು ಚುನಾವಣಾ ಆಯೋಗವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಬೋಟ್ಸ್‌ವಾನಾದಲ್ಲಿ ಪ್ರಾತ್ಯಕ್ಷಿಕೆ ನಡೆಸಲು ತೆರಳುತ್ತಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಳೆದ ವರ್ಷ ಆಮ್ ಆದ್ಮಿ ಪಕ್ಷದಿಂದ ಭಾರಿ ವಿರೋಧ ಎದುರಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಒಂದೆಡೆ ಭಾರತೀಯ ಚುನಾವಣೆಗೆ ಬಳಸಿದ ಯಾವುದೇ ಮತಯಂತ್ರಗಳನ್ನು ಪ್ರಾತ್ಯಕ್ಷಿಕೆಗೆ (ಹ್ಯಾಕಥಾನ್) ಬಳಸಲು ಬಿಇಎಲ್ ನಿರಾಕರಿಸಿದ್ದು, ಹೀಗೆ ಒಂದು ದೇಶದಲ್ಲಿ ಬಳಕೆಯಾದ ಮತಯಂತ್ರಗಳನ್ನು ಬೇರೊಂದು ದೇಶಕ್ಕೆ ಕೊಂಡೊಯ್ದು ಅಲ್ಲಿ ಹ್ಯಾಕಥಾನ್ ನಡೆಸಬಹುದೇ ಎಂಬ ಪ್ರಶ್ನೆಗಳೆದ್ದಿವೆ.

ಇದನ್ನೂ ಓದಿ : ಇವಿಎಂ ವಿಚಾರವನ್ನು ಪ್ರಧಾನಿಯವರು ಖುದ್ದು ಪ್ರಸ್ತಾಪಿಸಿದ್ದರ ಮರ್ಮವೇನು?

ಬೋಟ್ಸ್‌ವಾನಾ ಕೋರಿಕೆಗೆ ಸಂಬಂಧಿಸಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಇಡೀ ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಮೂಲಗಳು ‘ಇಕನಾಮಿಕ್ ಟೈಮ್ಸ್’ಗೆ ತಿಳಿಸಿವೆ. ಜನಸಂಖ್ಯೆ ವಿರಳವಾಗಿರುವ ಬೋಟ್ಸ್‌ವಾನಾದಲ್ಲಿ 57 ಕ್ಷೇತ್ರಗಳಿದ್ದು 6000 ಮತಗಟ್ಟೆಗಳಿವೆ. ಇವಿಎಂಗಳನ್ನು ಹ್ಯಾಕಥಾನ್ ಗೆ ಒಳಪಡಿಸಿದರೆ ಗೊಂದಲಗಳು ನಿವಾರಣೆಯಾಗಿ ಮುಂದಿನ ಬಾರಿಯೂ ಮತಯಂತ್ರಗಳನ್ನು ಬಳಸಲು ಅನುಕೂಲವಾಗಲಿದೆ ಎಂದು ಕಾನೂನು ಮತ್ತು ತಾಂತ್ರಿಕ ಪರಿಣತರನ್ನು ಒಳಗೊಂಡ ಬೋಟ್ಸ್‌ವಾನಾ ನಿಯೋಗ ಭಾರತೀಯ ಚುನಾವಣಾ ಆಯೋಗವನ್ನು ಕೋರಿದೆ. ಇವಿಎಂ ಬಳಕೆ ಸಂಬಂಧ ಸಂಬಂಧ ಕಳೆದ ಆರು ತಿಂಗಳಿನಿಂದ ಬೋಟ್ಸ್‌ವಾನಾ ಚುನಾವಣಾ ಆಯೋಗ ಭಾರತೀಯ ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿತ್ತು. ಬೋಟ್ಸ್‌ವಾನಾದಲ್ಲಿ ಮತಗಟ್ಟೆಗಳ ಸಂಖ್ಯೆ ಕಡಿಮೆ ಇರುವುದನ್ನು ಪರಿಗಣಿಸಿದ ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಹೊಸಯಂತ್ರಗಳನ್ನು ತಯಾರಿಸಿ ರವಾನಿಸಬಹುದು ಎಂದು ಚಿಂತಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More