ಕರಾವಳಿ ಪೊಲೀಸ್ ಕೇಸರೀಕರಣಕ್ಕೆ ಮತ್ತೊಂದು ನಿದರ್ಶನ ಹುಸೈನಬ್ಬ ಪ್ರಕರಣ!

ಕರಾವಳಿಯ ಕೋಮುದ್ವೇಷದ ಸಾಮಾಜಿಕ ಪರಿಸ್ಥಿತಿ ಸುಧಾರಣೆ ಮತ್ತು ಪೊಲೀಸ್ ವ್ಯವಸ್ಥೆಗೆ ಅಂಟಿರುವ ಕೇಸರೀಕರಣದ ಕಳಂಕದಿಂದ ಹೊರಬರಲು ಅಲ್ಲಿನ ಪೊಲೀಸರ ಸಾಮೂಹಿಕ ವರ್ಗಾವಣೆ ಅಗತ್ಯ ಎಂಬ ವಾದ ಚಾಲ್ತಿಯಲ್ಲಿದೆ. ಉಡುಪಿಯ ಇತ್ತೀಚಿನ ಘಟನೆಯಿಂದ ಈ ವಾದಕ್ಕೆ ಪುಷ್ಟಿ ಸಿಕ್ಕಿದೆ

ಉಡುಪಿ ಜಿಲ್ಲೆಯ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಡಿ ಎನ್ ಕುಮಾರ್, ಜೀಪ್ ಚಾಲಕ ಗೋಪಾಲ, ಮುಖ್ಯಪೇದೆ ಮೋಹನ್ ಕೊತ್ವಾಲ್ ಸೇರಿದಂತೆ ಈವರೆಗೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರಕರಣದಲ್ಲಿ ಭಜರಂಗದಳ ಕಾರ್ಯಕರ್ತರೆನ್ನಲಾದ ಸುರೇಶ್ ಮೆಂಡನ್, ಪ್ರಸಾದ್ ಕೊಂಡಾಡಿ, ಉಮೇಶ್ ಶೆಟ್ಟಿ, ರತನ್, ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕ ಸೇರಿದಂತೆ ಒಟ್ಟು ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೋಕಟ್ಟೆ ನಿವಾಸಿಯಾದ ಹುಸೈನಬ್ಬ ಮೇ ೨೯ರಂದು ಇಬ್ಬರು ಪರಿಚಿತರೊಂದಿಗೆ ವಾಹನವೊಂದರಲ್ಲಿ ದನಗಳನ್ನು ತುಂಬಿಕೊಂಡು ಪೆರ್ಡೂರು ಸಮೀಪದ ಶೀನಬೆಟ್ಟು ಎಂಬಲ್ಲಿ ಬರುತ್ತಿರುವಾಗ ಪೊಲೀಸರ ಸಮ್ಮುಖದಲ್ಲೇ ಭಜರಂಗ ದಳದ ಸುರೇಶ್ ಮತ್ತಿತರ ತಂಡ ಅವರ ಮೇಲೆ ದಾಳಿ ನಡೆಸಿತು. ಆಗ ವಾಹನದಲ್ಲಿದ್ದ ಇಬ್ಬರು ತಪ್ಪಿಸಿಕೊಂಡು ಓಡಿ ಹೋದರು. ೬೧ ವಯಸ್ಸಿನ ವಯೋಮಾನದ ಹುಸೈನಬ್ಬನನ್ನು ಹಿಡಿದ ಭಜರಂಗದಳದ ಕಾರ್ಯಕರ್ತರು ಆತನಿಗೆ ಪೊಲೀಸರ ಎದುರೇ ಮನಸೋಇಚ್ಛೆ ಹೊಡೆದರು. ದನ ಸಾಗಣೆಯ ವಾಹನವನ್ನು ಜಖಂಗೊಳಿಸಿದರು. ನಂತರ ತೀವ್ರ ಪೆಟ್ಟುಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಹುಸೈನಬ್ಬ ಅವರನ್ನು ಪೊಲೀಸ್ ಜೀಪಿನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಅವರ ಜೀವ ಹೋಯಿತು.

ನಂತರ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಘಟನೆ ನಡೆದ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಹುಸೈನಬ್ಬ ಶವ ಇಟ್ಟು, ತಪ್ಪಿಸಿಕೊಂಡು ಓಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿರಬಹುದು ಎಂದು ಕಥೆ ಕಟ್ಟಿದರು. ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಎಂಬ ಎಲ್ಲ ವಿವರವನ್ನು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಸ್ವತಃ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇದು, ಹುಸೈನಬ್ಬ ಅನುಮಾನಾಸ್ಪದ ಸಾವಿನ ಕುರಿತು ಈವರೆಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಶಗಳು. ಈ ವಿಷಯದಲ್ಲಿ ದಕ್ಷಿಣ ಕನ್ನಡದ ಈ ಹೊತ್ತಿನ ವಾತಾವರಣದ ಹಿನ್ನೆಲೆಯಲ್ಲಿ, ದಿಟ್ಟತನದಿಂದ ಪ್ರಕರಣದ ತನಿಖೆ ನಡೆಸಿ ಸ್ವತಃ ತಮ್ಮದೇ ಸಹೋದ್ಯೋಗಿಗಳೇ ಭಾಗಿಯಾಗಿದ್ದರೂ, ಯಾವ ಮುಲಾಜಿಲ್ಲದೆ ತಪ್ಪಿತಸ್ಥ ಪೊಲೀಸರನ್ನು ಬಂಧಿಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ವೃತ್ತಿನಿಷ್ಠೆ ಮೆಚ್ಚುವಂತಹದ್ದೇ.

ಆದರೆ, ಈ ಪ್ರಕರಣ ಕರಾವಳಿಯ ಪೊಲೀಸ್ ವ್ಯವಸ್ಥೆಯಲ್ಲಿನ ಕರಾಳ ಮುಖವೊಂದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಕರಾವಳಿಯ ಧಾರ್ಮಿಕ ಸಂಘಟನೆಗಳ ಗೋರಕ್ಷಣೆ, ನೈತಿಕ ಪೊಲೀಸ್‌ಗಿರಿ ಹೆಸರಿನ ಗೂಂಡಾಗಿರಿ, ಕೋಮುಗಲಭೆ, ಕೋಮುದ್ವೇಷದ ಕೊಲೆ-ಸುಲಿಗೆಗಳ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಪಾರದರ್ಶಕವಾಗಿ ನಡೆದುಕೊಳ್ಳುವ ಬಗ್ಗೆ ದಶಕಗಳಿಂದಲೂ ಅನುಮಾನಗಳಿವೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಭಜರಂಗ ದಳ ಮಾಜಿ ಮುಖಂಡ ಮಹೇಂದ್ರ ಕುಮಾರ್ ಅವರೇ ಹತ್ತು ವರ್ಷಗಳ ಹಿಂದೆಯೇ ಕರಾವಳಿ ಪೊಲೀಸರ ಮತೀಯಮನಸ್ಥಿತಿಯ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು.

ಸ್ವತಃ ಬಿಜೆಪಿ ನಾಯಕ, ಶಾಸಕ ಗಣೇಶ್ ಕಾರ್ಣಿಕ್ ಅವರೇ ಕರಾವಳಿ ಪೊಲೀಸರು ಮತ್ತು ಹಿಂದೂ ಸಂಘಟನೆಗಳ ನಡುವಿನ ಆಪ್ತ ನಂಟಿನ ಬಗ್ಗೆ ಹೇಳುತ್ತ, ಕರಾವಳಿಯ ಶೇ.೬೦ರಷ್ಟು ಪೊಲೀಸರು ತಮ್ಮವರು ಎಂದಿರುವುದು ಕಟುಕು ಕಾರ್ಯಾಚರಣೆಯೊಂದರ ವೇಳೆ ಬಹಿರಂಗವಾಗಿ ವರ್ಷಗಳ ಹಿಂದೆ ಭಾರಿ ಸದ್ದು ಮಾಡಿತ್ತು. ಆ ಬಳಿಕ ಕೂಡ ಹಲವು ಸಂದರ್ಭಗಳಲ್ಲಿ ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಯ ಕೆಲವು ವಿಭಾಗಗಳಲ್ಲಿ ಪೊಲೀಸ್ ವ್ಯವಸ್ಥೆಯ ಒಳಗೇ ಇರುವ ತೀವ್ರವಾದಿ ಮತೀಯ ಮನೋಭಾವ ಬೆಳಕಿಗೆ ಬಂದಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಷ್ಟೇ ಅಲ್ಲ, ಶಾಸಕಾಂಗದ ಮಟ್ಟದಲ್ಲಿಯೂ ಚರ್ಚೆ ನಡೆದಿತ್ತು.

೨೦೦೮ರ ಮಂಗಳೂರು ಚರ್ಚ್ ದಾಳಿ ಸಂದರ್ಭದಲ್ಲಿಯೂ ಪೊಲೀಸರ ಬಹುಸಂಖ್ಯಾತರ ಪರ ಧೋರಣೆ ರಾಜ್ಯಾದ್ಯಂತ ಜನ ಹುಬ್ಬೇರಿಸುವಂತೆ ಮಾಡಿತ್ತು. ದಾಳಿಗೊಳಗಾದ ಚರ್ಚಿನಲ್ಲಿ ಪ್ರಾರ್ಥನಾನಿರತ ಅಲ್ಪಸಂಖ್ಯಾತರ ಮೇಲೆ ಪೊಲೀಸರು ಏಕಾಏಕಿ ಮುಗಿಬಿದ್ದು, ಮಹಿಳೆಯರು, ಮಕ್ಕಳೆನ್ನದೆ ಎಲ್ಲರ ಮೇಲೆ ಭೀಕರ ಲಾಠಿ ಪ್ರಹಾರ ನಡೆಸಿದ ಘಟನೆ ಈಗಲೂ ಸಾರ್ವಜನಿಕರ ನೆನಪಲ್ಲಿದೆ.

ಕರಾವಳಿ ಪೊಲೀಸ್ ಪಡೆಯಲ್ಲಿ ಪೇದೆಗಳಿಂದ ಸಬ್‌ಇನ್ಸ್‌ಪೆಕ್ಟರ್‌ ಹಂತದವರೆಗೆ ಕೇಸರೀಕರಣದ ಪ್ರಭಾವ ಭಾರೀ ಪ್ರಮಾಣದಲ್ಲಿದೆ ಎಂಬುದನ್ನು ವಿವಿಧ ಪ್ರಕರಣಗಳ ಕುರಿತ ಸತ್ಯಶೋಧನಾ ವರದಿಗಳೂ ಹೇಳಿವೆ. ಅಷ್ಟೇ ಅಲ್ಲ; ಅಲ್ಲಿ ಕೆಲಸ ಮಾಡಿಬಂದಿರುವ ಹಲವು ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತರು ಕೂಡ ಕೇಸರೀಕರಣದ ಮಾತನ್ನು ಖಾಸಗೀ ವಲಯಯದಲ್ಲಿ ಹಂಚಿಕೊಳ್ಳುತ್ತಾರೆ.

ಕರಾವಳಿಯ ಕೋಮು ಗಲಭೆಗಳಿಗೂ, ಪೊಲೀಸ್ ವ್ಯವಸ್ಥೆಯ ಕೇಸರೀಕರಣಕ್ಕೂ ಅವಿನಾಭಾವ ಸಂಬಂಧವಿರುವುದು ೧೯೬೦ರ ದಶಕದಿಂದಲೂ ಕಾಣುತ್ತದೆ. ೧೯೯೮ರ ಸುರತ್ಕಲ್ ಗಲಭೆಯಲ್ಲಿ ಕೂಡ, ಹಿಂದೂ ಹುಡುಗಿಯೊಂದಿಗೆ ಜೊತೆಯಾಗಿ ಓಡಾಡಿದ ಕಾರಣಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ದಾಳಿಗೊಳಗಾದ ಮುಸ್ಲಿಂ ಯುವಕನ ವಿರುದ್ಧವೇ ಪೊಲೀಸರು ಆರಂಭದಲ್ಲಿ ದೂರು ದಾಖಲಿಸಿದ್ದರೇ ವಿನಾ ದಾಳಿ ನಡೆಸಿದವರ ವಿರುದ್ಧ ಅಲ್ಲ! ಇಂತಹ ನಿದರ್ಶನಗಳು ಕರಾವಳಿಯುದ್ದಕ್ಕೂ ಸಾಲುಸಾಲು ಸಿಗುತ್ತವೆ ಎಂಬುದು ವಿಚಿತ್ರವೇನೂ ಅಲ್ಲ!

ಇದನ್ನೂ ಓದಿ : ಕದಡಿದ ಕರಾವಳಿ | ನೆಮ್ಮದಿ ಕೊಟ್ಟವನ ಬದುಕಿಗೇ ಕೊಳ್ಳಿ ಇಟ್ಟಿತಾ ಕೋಮುದ್ವೇಷ?

ಪೊಲೀಸರ ಇಂತಹ ಪಕ್ಷಪಾತಿ ಧೋರಣೆಯೇ ಕರಾವಳಿಯ ಇಂದಿನ ಕೋಮುದ್ವೇಷದ ವಾತಾವರಣಕ್ಕೆ ಮತ್ತೊಂದು ಕಾರಣ ಎಂಬಷ್ಟರಮಟ್ಟಿಗೆ ಅಲ್ಲಿನ ಪೊಲೀಸ್ ವ್ಯವಸ್ಥೆ ಧರ್ಮದ ನೆಲೆಯ ಮೇಲೆ ಧ್ರುವೀಕರಣಗೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ.

೨೦೦೮-೦೯ರ ವ್ಯಾಪಕ ಚರ್ಚ್‌ ದಾಳಿ, ಪಬ್‌ ದಾಳಿ, ಹೋಂಸ್ಟೇ ಮೇಲಿನ ದಾಳಿಗಳ ಸಂದರ್ಭದಲ್ಲೇ ಕರಾವಳಿಯ ಪೊಲೀಸ್ ವ್ಯವಸ್ಥೆಯ ಈ ಅಪಾಯಕಾರಿ ಬೆಳವಣಿಗೆಯ ಬಗ್ಗೆ ಸಾರ್ವಜನಿಕ ಚರ್ಚೆಗಳು ಆರಂಭವಾಗಿದ್ದವು. ಕರಾವಳಿಯಲ್ಲಿ ನಿಷ್ಪಕ್ಷಪಾತಿ ಪೊಲೀಸ್ ವ್ಯವಸ್ಥೆ ಬರಬೇಕಾದರೆ, ಈಗಿರುವ ಅಲ್ಲಿನ ಪೇದೆಯಿಂದ ಪಿಎಸ್‌ಐವರೆಗಿನ ಪೊಲೀಸ್ ಸಿಬ್ಬಂದಿಯನ್ನು ಹಂತಹಂತವಾಗಿ ಸಾಮೂಹಿಕ ವರ್ಗಾವಣೆ ಮಾಡಬೇಕು. ಆ ಮೂಲಕ ಕೇಸರೀಕರಣ ಹೊರತಾದ ಪೊಲೀಸರು ಅಲ್ಲಿನ ಠಾಣೆಗಳಿಗೆ ಬಂದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು.

ಹಿಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಮುಂದೆಯೂ ಕಳೆದ ಬಾರಿಯ ಕಲ್ಲಡ್ಕ ಗಲಭೆ ವೇಳೆ ಈ ಪ್ರಶ್ನೆ ಎದುರಾಗಿತ್ತು. ಆದರೆ, ಚುನಾವಣೆಯ ಹೊಸ್ತಿಲಲ್ಲಿ ಅಂತಹದ್ದೊಂದು ನಿರ್ಧಾರ ಕೈಗೊಳ್ಳಲು ಅವರು ಹಿಂದೇಟು ಹಾಕಿದ್ದರು. ಇದೀಗ ಮತ್ತೆ ಹುಸೈನಬ್ಬ ಪ್ರಕರಣದಲ್ಲಿ ಪೊಲೀಸರೇ ನಿರ್ದಿಷ್ಟ ಸಂಘಟನೆಗಳ ಕಾರ್ಯಕರ್ತರಂತೆ ನಡೆದುಕೊಂಡಿರುವುದು ಜಗಜ್ಜಾಹೀರಾಗಿದೆ. ಆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕರಾವಳಿ ಪೊಲೀಸ್ ವ್ಯವಸ್ಥೆ ಶುದ್ಧೀಕರಣದ ಪ್ರಶ್ನೆ ಕೇಳಿಬರತೊಡಗಿದೆ. ಹೊಸ ಗೃಹ ಸಚಿವರ ಎದುರು ಸದ್ಯಕ್ಕೆ ಇರುವ ತತಕ್ಷಣದ ಪ್ರಶ್ನೆ ಕೂಡ ಬಹುಶಃ ಇದೇ ಆಗಿರಲಿದೆ. ಸರ್ಕಾರ ಕರಾವಳಿಯ ಆರೋಗ್ಯ ಮತ್ತು ಪೊಲೀಸ್ ವ್ಯವಸ್ಥೆಗೆ ಅಂಟಿರುವ ಕಳಂಕ ತೊಡೆಯುವ ನಿಟ್ಟಿನಲ್ಲಿ ಸರ್ಕಾರ ಅಂತಹದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳುವುದೇ ಎಂಬುದು ಸದ್ಯದ ಕುತೂಹಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More