ನಗರ ಭಾರತಕ್ಕೆ ನೀಡಿದ ಆಶ್ವಾಸನೆಗಳನ್ನು 4 ವರ್ಷ ಕಳೆದರೂ ಈಡೇರಿಸದ ಬಿಜೆಪಿ

40 ಕೋಟಿ ಯುವಜನರನ್ನು ಕುಶಲ ಕಾರ್ಯಪಡೆಯಾಗಿ ಅಭಿವೃದ್ಧಿ ಮಾಡುವ ಗುರಿಯನ್ನು ಬಿಜೆಪಿ ಸರ್ಕಾರ ಹಾಕಿಕೊಂಡಿತ್ತು. ಆದರೆ, ಈ ಗುರಿಯಲ್ಲಿ ಶೇ.12 ಮಾತ್ರವೇ ಸಾಧಿಸುವುದಕ್ಕೆ ಆಗಿದೆ. ಈ ಕುರಿತು ‘ದಿ ವೈರ್’ ಜಾಲತಾಣಕ್ಕೆ ಟಿಕಂದರ್ ಪನ್ವಾರ್ ಬರೆದ ಲೇಖನದ ಭಾವಾನುವಾದ ಇಲ್ಲಿದೆ

ನಗರ ಭಾರತದ ಪಾಲಿಗೆ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷಗಳ ಆಡಳಿತವು ಚುನಾವಣೆಗೆ ಮುನ್ನ ಬಿಜೆಪಿ ನೀಡಿದ ಆಶ್ವಾಸನೆಗಳಿಗೆ ತದ್ವಿರುದ್ಧವಾಗಿ ಅಪಾಯಕಾರಿ ಆಡಳಿತಾವಧಿಯಾಗಿ ಪರಿಣಮಿಸಿದೆ.

ನಗರಗಳಲ್ಲೇ ಹೆಚ್ಚಿನ ಪ್ರಭಾವವಿರುವ ಹಾಗೂ ನಗರ ಪ್ರದೇಶದ ಪಕ್ಷವೆಂದೇ ಪರಿಗಣಿಸಲ್ಪಡುವ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ನಗರಗಳ ಅಭಿವೃದ್ಧಿಗಾಗಿ ತಮ್ಮ ಹಿಂದೆ ಅಧಿಕಾರದಲ್ಲಿದ್ದವರಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಮಾಡುತ್ತದೆ ಎಂದೇ ನಗರವಾಸಿಗಳು ನಿರೀಕ್ಷಿಸಿದ್ದರು. ಆದರೆ, ಕೇಂದ್ರದಲ್ಲಿ ನಾಲ್ಕು ವರ್ಷಗಳ ಆಡಳಿತವನ್ನು ಪೂರೈಸಿರುವ ಬಿಜೆಪಿ ನಗರವಾಸಿಗಳ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿ ಮಾಡಿ ನಿರಾಶೆ ಹುಟ್ಟಿಸಿದೆ.

ನಗರವಾಸಿ ಎಂದರೆ ಯಾರು?

ಇಂದು ಭಾರತದ ಮೂರನೇ ಒಂದರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ ಕನಿಷ್ಠ 7,935 ಸಣ್ಣ ಮತ್ತು ದೊಡ್ಡ ನಗರಗಳು ಹಾಗೂ 468 ಪ್ರಥಮ ಸ್ಥರದ ನಗರಗಳು ಇವೆ. ಪ್ರಥಮ ಹಂತ (ಟಯರ್-೧) ನಗರಗಳು ಎಂದರೆ 1,00,000ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳು. ಶೇಕಡ 70ರಷ್ಟು ನಗರವಾಸಿಗಳು ಟಯರ್-೧ ನಗರಗಳಲ್ಲೇ ನೆಲೆಯೂರಿದ್ದಾರೆ.

ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಮೂರನೇ ಎರಡರಷ್ಟು ಹಾಗೂ ಒಟ್ಟಾರೆ ಸರ್ಕಾರಿ ಆದಾಯದಲ್ಲಿ ಶೇಕಡ 90ರಷ್ಟು ಬರುವುದು ಈ ನಗರಗಳಿಂದಲೇ. ಆದ್ದರಿಂದ ಈ ನಗರಗಳನ್ನು ಭಾರತದ ಶಕ್ತಿಕೇಂದ್ರಗಳು ಎಂದೇ ಕರೆಯಲಾಗುತ್ತದೆ. ಇಂತಹ ನಗರಗಳಲ್ಲಿ ವಾಸಿಸುವ ಜನರು ತಮ್ಮ ಭವಿಷ್ಯ ಸುರಕ್ಷಿತವಾಗಿರಲೆಂದು, ಉಜ್ವಲವಾಗಿರಲೆಂದು ಬಹಳಷ್ಟು ಬಯಕೆ, ಆಕಾಂಕ್ಷೆ, ಭರವಸೆಗಳನ್ನು ಇಟ್ಟುಕೊಂಡಿರುತ್ತಾರೆ. ಬೃಹತ್ ನಗರಗಳಲ್ಲಿ ವಾಸಿಸುವ ಜನರಲ್ಲಿ ಶೇಕಡ 40ರಷ್ಟು ಮಂದಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ಕೊಳಚೆ ಪ್ರದೇಶಗಳಲ್ಲಿ ನೆಲೆಯೂರಿದ್ದಾರೆ. ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರಗಳಲ್ಲಿ ಕೊಳಚೆ ಪ್ರದೇಶ ನಿವಾಸಿಗಳ ಪ್ರಮಾಣ ಶೇಕಡ 60ಕ್ಕಿಂತ ಜಾಸ್ತಿಯಿದೆ.

ನಗರಗಳಿಗೆ ಬಿಜೆಪಿ ಕೊಟ್ಟಿದ್ದ ಆಶ್ವಾಸನೆಗಳು

  • ಎಲ್ಲರನ್ನೂ ಒಳಗೊಂಡ ಸಮ್ಮಿಳಿತ, ಸುಸ್ಥಿರ ಅಭಿವೃದ್ಧಿ.
  • ಹಳ್ಳಿ ಮತ್ತು ನಗರಗಳಲ್ಲಿ ಉತ್ತಮ ಬದುಕಿನ ಗುಣಮಟ್ಟ, ಎಲ್ಲರಿಗೂ ಮೂಲಭೂತ ಸೌಕರ್ಯಗಳು.
  • ಬೃಹತ್ ಪ್ರಮಾಣದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ವಸತಿ ಮತ್ತು ಸಾರಿಗೆ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಕ್ರಮಗಳು. 100 ನವ ನಗರಗಳಲ್ಲಿ ಸುಸ್ಥಿರ ಹಾಗೂ ಅಗತ್ಯದ ಪ್ರಮುಖ ಮೂಲಸೌಕರ್ಯಗಳ ಅಭಿವೃದ್ಧಿ.
  • ಈಗಿರುವ ನಗರ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಮೂಲಭೂತ ಮೂಲಸೌಕರ್ಯಗಳಿಂದ ಸಾರ್ವಜನಿಕ ಉಪಯೋಗದ ತ್ಯಾಜ್ಯ ಮತ್ತು ನೀರು ನಿರ್ವಹಣೆಯಂತಹ ಸೇವೆಗಳೆಡೆಗೆ ಗಮನಹರಿಸುವುದು.
  • ಬಡವರ ಸಬಲೀಕರಣ.

ಈ ಗುರಿಗಳನ್ನು ಸಾಧಿಸುವುದಕ್ಕೆ ಅನುಸರಿಸಲಾಗುವ ಕ್ರಮಗಳು

  • ಸ್ಥಳೀಯ ಆಡಳಿತವನ್ನು ಸಶಕ್ತಗೊಳಿಸುವುದು.
  • ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು.
  • ಎಲ್ಲರಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದು.
  • ಮೂಲಭೂತ ಸೌಕರ್ಯಗಳಲ್ಲಿ ಹಾಗೂ ನೀರು, ವಿದ್ಯುತ್ ಮತ್ತು ಸಾರಿಗೆ ಮುಂತಾದ ಸೇವಾ ಸೌಲಭ್ಯಗಳಲ್ಲಿ ಇರುವ ಕೊರತೆಗಳನ್ನು ನಿವಾರಿಸುವುದು.

ಇವುಗಳಲ್ಲಿ ಈಡೇರಿಸಿದ್ದು ಎಷ್ಟು?

ಕೊಟ್ಟ ಭರವಸೆಗಳಿಗೆ ಹೋಲಿಸಿದರೆ ಬಿಜೆಪಿಯ ಕಾರ್ಯಸಾಧನೆ ಏನೇನೂ ಅಲ್ಲ ಎಂದೇ ಹೇಳಬೇಕಾಗುತ್ತದೆ. ನಗರಗಳಲ್ಲಿರುವ 2 ಕೋಟಿ ಕಡುಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುವುದಾಗಿ ಬಿಜೆಪಿ ಮಾತುಕೊಟ್ಟಿತ್ತು. ಆದರೆ, ಇತ್ತೀಚಿನ ಸಾಧನೆಯ ವರದಿಯನ್ನು ನೋಡಿದರೆ ಕೇವಲ 3.61 ಲಕ್ಷ ಮನೆಗಳನ್ನು ಮಾತ್ರ ಕಟ್ಟಿರುವುದು ಕಂಡುಬರುತ್ತದೆ. ಅಂದರೆ, ಕೊಟ್ಟ ಭರವಸೆಯಲ್ಲಿ ಶೇಕಡ 1.8ರಷ್ಟನ್ನು ಮಾತ್ರ ಈಡೇರಿಸುವುದಕ್ಕೆ ಸಾಧ್ಯವಾಗಿದೆ. ಕುತೂಹಲಕಾರಿ ವಿಷಯ ಎಂದರೆ, ಈ 3.61 ಲಕ್ಷ ಮನೆಗಳಲ್ಲಿ ಶೇಕಡ 87ರಷ್ಟು ಮನೆಗಳು ಹೊಸದಾಗಿ ಕಟ್ಟಿದವುಗಳಲ್ಲ. ಅವು ಈಗಾಗಲೇ ಪ್ರಾರಂಭವಾಗಿದ್ದ ಯೋಜನೆಗಳ ಮುಂದುವರಿಕೆ ಅಥವಾ ವಿವಿಧ ಕಾರ್ಯಕ್ರಮಗಳ ಸಮ್ಮಿಲನದಿಂದ ನಿರ್ಮಾಣ ಮಾಡಿದ ಮನೆಗಳಾಗಿವೆ.

ಬಿಜೆಪಿ ಘೋಷಿಸಿದ್ದ 100 ಸ್ಮಾರ್ಟ್ ಸಿಟಿ ಯೋಜನೆ ನಗರಗಳ ಮೂಲಸೌರ್ಯಗಳನ್ನು ವ್ಯವಸ್ಥಿತವಾಗಿ ಯೋಜಿಸುವ ಕಡೆಗೆ ಇಟ್ಟ ಮಹತ್ವಪೂರ್ಣ ಹೆಜ್ಜೆ ಎಂದೇ ಪರಿಗಣ ಸಲ್ಪಟ್ಟಿತ್ತು. ವಾಸ್ತವದಲ್ಲಿ ಈ ನಗರಗಳು ಅಭಿವೃದ್ಧಿ ಮತ್ತು ಯೋಜನೆಯಲ್ಲಿ ಉಳಿದ ನಗರಗಳಿಗೆ ಮಾದರಿಯಾಗಬೇಕಿತ್ತು. ಆದರೆ, 100 ಸ್ಮಾಟ್ ಸಿಟಿ ಯೋಜನೆ ಸಂಪೂರ್ಣವಾಗಿ ಠುಸ್ ಪಟಾಕಿಯಾಗಿಹೋಯಿತು. ಇವತ್ತಿನ ವಾಸ್ತವ ಏನೆಂದರೆ, ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಮಾತಾಡುವುದಕ್ಕೆ ಖುದ್ದು ಬಿಜೆಪಿಗೂ ಕೂಡ ಇಷ್ಟವಿಲ್ಲ.

ಈ ಸ್ಮಾರ್ಟ್ ಸಿಟಿಗಳಲ್ಲಿ ಎರಡು ಬಗೆಯ ಬಂಡವಾಳ ಹೂಡಿಕೆಯ ವ್ಯೂಹತಂತ್ರಗಳಿವೆ. ನಗರದ ಗಾತ್ರವನ್ನಾಧರಿಸಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪ್ರದೇಶಾಧಾರಿತ ಅಭಿವೃದ್ಧಿ ಹಾಗೂ ಸಂಚಾರ ನಿರ್ವಹಣೆ, ಸಾರಿಗೆ ಮುಂತಾದವುಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪರಿಹಾರಗಳನ್ನು ಅಳವಡಿಸುವ ಸಮಗ್ರ ನಗರಾಭಿವೃದ್ಧಿ. ಪ್ರದೇಶಾಧಾರಿತ ಅಭಿವೃದ್ಧಿಯು ಚಿಕ್ಕ ನಗರಗಳಿಗಾಗಿ ಮಾಡಿದ್ದು ಅದರಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದಕ್ಕೆ ಯೋಜಿಸಲಾಗಿತ್ತು. ಆದರೆ, ಒಟ್ಟಾರೆ ನಗರ ಜನಸಂಖ್ಯೆಯ ಶೇಕಡ 9ರಷ್ಟು ಮಾತ್ರ ಇರುವ ಈ ಚಿಕ್ಕನಗರಗಳು ಒಟ್ಟು ಸ್ಮಾರ್ಟ್ ಸಿಟಿ ಬಜೆಟ್‍ನ ಶೇಕಡ 90ರಷ್ಟನ್ನು ನುಂಗುತ್ತಿವೆ.

ಇದನ್ನೂ ಓದಿ : ದೇಶದ ಸಾಮಾಜಿಕ ನೀತಿಗಳಿಗೆ ಮೋದಿ ನೇತೃತ್ವದ ಸರ್ಕಾರ ಕೊಟ್ಟ ಪೆಟ್ಟು ಎಂಥದ್ದು?

ಈ ಸ್ಮಾರ್ಟ್ ಸಿಟಿ ಚೌಕಟ್ಟು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸ್ಥಳೀಯ ನಗರಾಡಳಿತಗಳ ಅಧಿಕಾರಕ್ಕೆ ಸವಾಲೊಡ್ಡುತ್ತವೆ. ಸ್ಮಾರ್ಟ್ ಸಿಟಿ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ವಿಶೇಷ ಉದ್ದೇಶ ವಾಹನವನ್ನು (ಎಸ್‍ಪಿವಿ) ಕಂಪನಿ ಕಾಯ್ದೆಯಡಿಯಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಆದರೆ, ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸ್ಥಳೀಯ ಮುನಿಸಿಪಾಲಿಟಿ ಅದರಲ್ಲಿ ಸದಸ್ಯನಾಗಿರುವುದಿಲ್ಲ. ಇದರ ಮುಖ್ಯಸ್ಥನಾಗಿ ಯಾವುದೋ ಒಬ್ಬ ಅಧಿಕಾರಶಾಹಿಯೋ ಅಥವಾ ವಿಶ್ವಬ್ಯಾಂಕಿನ ಅಧಿಕಾರಿಯೋ ನೇಮಕವಾಗುತ್ತಾರೆ. ಅವರು ಸ್ಥಳೀಯ ಮುನಿಸಿಪಾಲಿಟಿಗೆ ಉತ್ತರದಾಯಿಯಾಗಿರುವುದಿಲ್ಲ. ಸ್ಥಳೀಯ ನಗರಾಡಳಿತದಲ್ಲಿ ಈ ರೀತಿ ಆಮೂಲಾಗ್ರ ಬದಲಾವಣೆ ತರುವ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಅನೇಕ ನಗರಗಳು ನಿರಾಕರಿಸಿವೆ.

ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ಕೂಡ ಆಮೆಗತಿಯಲ್ಲಿ ನಡೆಯುತ್ತಿದೆ. ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ 60 ನಗರಗಳಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ಹಣದಲ್ಲಿ ಶೇಕಡ 7ರಷ್ಟು ಮಾತ್ರವೇ ಬಂದಿದೆ. ಆಯ್ಕೆಯಾದ ನಗರಗಳ ಪೈಕಿ ಶೇಕಡ 70ರಷ್ಟು ನಗರಗಳಲ್ಲಿ ಶೇಕಡ 5ರಷ್ಟು ಕೆಲಸ ಮಾತ್ರ ಪೂರ್ಣವಾಗಿದೆ. ನಗರಾಭಿವೃದ್ಧಿಯನ್ನು ಸಾಂಸ್ಥಿಕ ಚೌಕಟ್ಟಿನೊಳಗೆ ತರುವುದಕ್ಕಾಗಿ ಸ್ಥಳೀಯ ನಗರಾಡಳಿತಗಳನ್ನು ಸಬಲೀಕರಣಗೊಳಿಸುವಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ.

ನಗರಗಳಲ್ಲಿ ಬಡಜನರನ್ನು ತಮ್ಮ ನೆಲೆಗಳಿಂದ ಒಕ್ಕಲೆಬ್ಬಿಸುವುದು ಅನಿರ್ಬಂಧಿತವಾಗಿ ಮುಂದುವರಿದಿದೆ. ಹಾದಿಬೀದಿಗಳಲ್ಲಿ ವ್ಯಾಪಾರ ನಡೆಸುವುದನ್ನು ಅಧಿಕೃತಗೊಳಿಸುವ 2014ರ ಬೀದಿ ವ್ಯಾಪಾರಿಗಳ ಕಾಯ್ದೆ ಸರಿಯಾಗಿ ಅನುಷ್ಠಾನವೇ ಆಗುತ್ತಿಲ್ಲ. ನಗರಗಳಲ್ಲಿ ವಸತಿರಹಿತರ ಸಂಖ್ಯೆ ಕಳೆದ ನಾಲ್ಕಾರು ವರ್ಷಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ನಗರದ ಬಡಬಗ್ಗರನ್ನು ಅವರ ಮನೆಗಳಿಂದ ಹೊರದಬ್ಬಿ ಅವರ ಸುಮಾರು 54,000 ಮನೆಗಳನ್ನು ನೆಲಸಮ ಮಾಡಿರುವುದನ್ನು ದಾಖಲಿಸಲಾಗಿದೆ.

ನಗರ ಪ್ರದೇಶಗಳ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಪ್ರಾರಂಭಿಸಿದ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಎಂದರೆ ಪುನಶ್ಚೇತನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್ (Atal Mission for Rejuvenation and Urban Transformation ) ಅಥವಾ ಸಂಕ್ಷಿಪ್ತವಾಗಿ ಅಮೃತ್. ಈ ಯೋಜನೆಯು ನಗರಗಳಲ್ಲಿ ನೀರು ಮತ್ತು ನೈರ್ಮಲ್ಯೀಕರಣದ ಸಮಸ್ಯೆಗಳನ್ನು ನಿವಾರಿಸಬೇಕಿತ್ತು. ಈ ಯೋಜನೆಯಡಿಯಲ್ಲಿ ನಗರದ ಕೊಳಚೆ ಪ್ರದೇಶಗಳಲ್ಲಿ ಮತ್ತು ಇನ್ನಿತರ ಭಾಗಗಳಲ್ಲಿ ನೀರು ಮತ್ತು ನೈರ್ಮಲ್ಯೀಕರಣ ಜಾಲಗಳು ಇನ್ನಷ್ಟು ಅಭಿವೃದ್ಧಿ ಕಾಣಬೇಕಿತ್ತು.

ಆದರೆ, ವಾಸ್ತವದಲ್ಲಿ ಅಂತಹದ್ದೇನೂ ಆದಂತೆ ಕಾಣುವುದಿಲ್ಲ. ಅಮೃತ್ ಯೋಜನೆ ಒಂದು ಆಕರ್ಷಕ ಘೋಷಣೆಯಾಗಿಯೇ ಉಳಿದಿದೆಯೇ ಹೊರತು ಅನುಷ್ಠಾನವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ, ಬಡ ನಗರವಾಸಿಗಳ ನೀರಿನ ಸಮಸ್ಯೆಯನ್ನು ಈಡೇರಿಸುವುದಕ್ಕಾಗಿ ಕೇಂದ್ರ ಸರ್ಕಾರ ಒದಗಿಸುವ ಹಣದ ಪಾಲು ಶೇಕಡ 19ರಷ್ಟು ಮಾತ್ರ ಇರುವುದು. ಪರಿಣಾಮವಾಗಿ, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಬಡವರಿಗೆ ಕುಡಿಯುವುದಕ್ಕೆ ನೀರು ದೊರೆಯುತ್ತಿಲ್ಲ. ಆದ್ದರಿಂದ ಅವರು ದುಬಾರಿ ಬೆಲೆ ತೆತ್ತು ಕುಡಿಯುವ ನೀರನ್ನು ಕೊಂಡುಕೊಳ್ಳಬೇಕಾದ ಅನಿವಾರ್ಯ ಒತ್ತಡಕ್ಕೆ ಸಿಲುಕಿದ್ದಾರೆ. ಖಾಸಗಿ ನೀರು ಸರಬರಾಜುದಾರರ ಜೊತೆ ಸ್ಥಳೀಯ ನಗರಾಡಳಿತಗಳ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕೈಜೋಡಿಸಿ ನಗರಗಳಲ್ಲಿ ಬಡಬಗ್ಗರು ವಾಸಿಸುವ ಪ್ರದೇಶಗಳಿಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜಾಗುವಂತೆ ನೋಡಿಕೊಂಡು ಖಾಸಗಿ ನೀರು ಮಾರಾಟಗಾರರ ಹಿತಾಸಕ್ತಿ ಕಾಯುತ್ತಿದ್ದಾರೆ.

ಸ್ವಚ್ಛ ಭಾರತ ಯೋಜನೆಯ ಕೇಂದ್ರ ಸರ್ಕಾರದ ಜಾಹಿರಾತು ವೆಚ್ಛದಲ್ಲಿ ಬಹುಪಾಲನ್ನು ನುಂಗಿಹಾಕಿತೇ ವಿನಾ ವಾಸ್ತವದಲ್ಲಿ ಭಾರತ ಸ್ವಚ್ಛವಾಗಲಿಲ್ಲ. 2014ರ ಅಕ್ಟೋಬರ್‌ನನಲ್ಲಿ ಚಾಲನೆಗೊಂಡ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ದೇಶದಲ್ಲಿ ಒಂದು ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲುಶೌಚ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಹಾಗೂ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದಕ್ಕೆ ಉತ್ತೇಜಿಸುವುದಾಗಿತ್ತು.

ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಮಾಡಿದ ಭರಾಟೆಯ ಅಭಿಯಾನಕ್ಕೆ ಹೋಲಿಸಿದರೆ ತಳಮಟ್ಟದಲ್ಲಿ ಆಗಿರುವ ಪ್ರಗತಿ ಮಾತ್ರ ಏನೇನೂ ಅಲ್ಲ. 1.04 ಕೋಟಿ ಶೌಚಾಲಯ ನಿರ್ಮಾಣಕ್ಕೆ ಗುರಿ ಹಾಕಿಕೊಂಡಿದ್ದರೂ ಅದರಲ್ಲಿ ಸಾಧನೆಯಾಗಿದ್ದು ಕೇವಲ ಶೇಕಡ 34ರಷ್ಟು ಮಾತ್ರ. ಕೊಳಚೆನೀರು ಸಂಸ್ಕರಣ ಘಟಕಗಳಿಲ್ಲದಿರುವದರಿಂದ ನಗರದ ಕೊಚ್ಚೆಯನ್ನು ಸಮೀಪದ ನದಿ, ನಾಲೆಗಳಿಗೆ ಬಿಡುವ ಪರಿಪಾಠ ಹಾಗೆಯೇ ಮುಂದುವರೆದಿದೆ. ಒಂದು ಅಂದಾಜಿನ ಪ್ರಕಾರ ನಗರ ಭಾರತದಲ್ಲಿ ಸೃಷ್ಟಿಯಾಗುವ ತ್ಯಾಜ್ಯದಲ್ಲಿ ಶೇಕಡ 78ರಷ್ಟು ಸಂಸ್ಕರಣೆಯಾಗದೆ ಹಾಗೇ ಉಳಿಯುತ್ತಿದೆ. ನಗರ ತ್ಯಾಜ್ಯ ನಿರ್ವಹಣೆಗಾಗಿ ಕಾರ್ಯಸಾಧು ಕಾರ್ಯಕ್ರಮಗಳನ್ನು ಯೋಜಿಸುವುದಕ್ಕೆ ವಿಫಲವಾಗಿರುವುದರ ಬಗ್ಗೆ ನಗರಾಭಿವೃದ್ಧಿಗಾಗಿನ ಸಂಸದೀಯ ಸ್ಥಾಯಿ ಸಮಿತಿ (2017-18) ಕೂಡ ಪ್ರಸ್ತುತ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದೆ.

ದುಸ್ಥಿತಿಯ ಮುಂದುವರಿಕೆ

ಭಾರತದಲ್ಲಿ ಶೇಕಡ 90ರಷ್ಟು ಕಾರ್ಮಿಕ ಪಡೆ ಅಸಂಘಟಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಕಟುಸತ್ಯ. ಮೂಲಭೂತ ಸೌಲಭ್ಯಗಳು ಮೊದಲಿಗೆ ಲಭ್ಯವಾಗಬೇಕಾಗಿದ್ದು ಈ ಕೆಲಸಗಾರರಿಗೆ. ಬಿಜೆಪಿ ಸರ್ಕಾರವು ರಾಷ್ಟ್ರೀಯ ನಗರ ಜೀವನೋಪಾಯಮಾರ್ಗಗಳ ಮಿಷನ್ ಎಂಬ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ವಾಸ್ತವದಲ್ಲಿ ಇದು ಹಿಂದಿನ ಯುಪಿಎ ಸರ್ಕಾರ ಪ್ರಾರಂಭಿಸಿದ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯೇ ಆಗಿದ್ದು ಹೆಸರನ್ನು ಮಾತ್ರ ಬದಲಾಯಿಸಲಾಗಿದೆ. ಬಿಜೆಪಿ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿದಾಗಿನಿಂದಲೂ ಇದರ ಅನುಷ್ಠಾನ ಇತರ ಯೋಜನೆಗಳಿಗೆ ಹೋಲಿಸಿದರೆ ತೀರಾ ಮಂದಗತಿಯಲ್ಲಿದೆ.

‘ಬ್ಲೂಮ್‌ಬರ್ಗ್’ ವರದಿಯ ಪ್ರಕಾರ, ಭಾರತದ ಶೇಕಡ 30ರಷ್ಟು ಯುವಕರು ಉದ್ಯೋಗದಲ್ಲೂ ಇಲ್ಲ, ಶಿಕ್ಷಣವನ್ನೂ ಪಡೆಯುತ್ತಿಲ್ಲ ಅಥವಾ ಯಾವುದೇ ತರಬೇತಿಯಲ್ಲೂ ಇಲ್ಲ. ಜನಸಂಖ್ಯೆಯ ಹೆಚ್ಚಳದಿಂದ ದೇಶಕ್ಕೆ ಲಾಭವಾಗುವ ಬದಲಿಗೆ ಜನಸಂಖ್ಯೆ ಹೆಚ್ಚಳವೇ ಒಂದು ದುಸ್ವಪ್ನವಾಗಬಹುದು ಎಂದು ಅದು ಎಚ್ಚರಿಸಿದೆ. ಅಮೆರಿಕದಲ್ಲಿ ಶೇಕಡ 52ರಷ್ಟು, ಇಂಗ್ಲೆಂಡಿನಲ್ಲಿ ಶೇಕಡ 68ರಷ್ಟು, ಜರ್ಮನಿಯಲ್ಲಿ ಶೇಕಡ 75ರಷ್ಟು, ಜಪಾನಿನಲ್ಲಿ ಶೇಕಡ 86ರಷ್ಟು, ಕೋರಿಯಾದಲ್ಲಿ ಶೇಕಡ 96ರಷ್ಟು ಹಾಗೂ ಚೀನಾದಲ್ಲಿ ಶೇಕಡ 50ರಷ್ಟು ಕುಶಲ ಕಾರ್ಮಿಕ ಪಡೆಯಿದ್ದರೆ ಭಾರತದಲ್ಲಿ ಭಾರತದಲ್ಲಿ ಶೇ 4.69ರಷ್ಟು ಮಾತ್ರವೇ ಕುಶಲ ಕಾರ್ಮಿಕ ಪಡೆಯಿದೆ.

ಭಾರತದ 40 ಕೋಟಿ ಯುವಜನತೆಯನ್ನು ವಿವಿಧ ಕ್ಷೇತ್ರಗಳಲ್ಲಿ ಕುಶಲ ಕಾರ್ಯಪಡೆಯಾಗಿ ಅಭಿವೃದ್ಧಿ ಮಾಡುವ ಗುರಿಯನ್ನು ಬಿಜೆಪಿ ಸರ್ಕಾರ ಹಾಕಿಕೊಂಡಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಈ ಗುರಿಯಲ್ಲಿ ಶೇಕಡ 12ರಷ್ಟನ್ನು ಮಾತ್ರವೇ ಸಾಧಿಸುವುದಕ್ಕೆ ಆಗಿದೆ. ಇನ್ನೊಂದು ಅಪಾಯಕಾರಿ ಬೆಳವಣಿಗೆ ಎಂದರೆ ಭಾರತದ ಶೇಕಡ 69ರಷ್ಟು ಉದ್ಯೋಗಗಳ ಮೇಲೆ ಸ್ವಯಂ ಚಾಲಿತ ಯಾಂತ್ರಿಕತೆಯ ಕರಾಳ ನೆರಳು ಹಬ್ಬಿದೆ. ಇದು ನಿರುದ್ಯೋಗ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಲಿವೆ. ಮುಂದಿನ ದಿನಗಳಲ್ಲಿ ಸಾರಾಂಶದಲ್ಲಿ ಹೇಳುವುದಾದರೆ, ಮೋದಿ ಸರ್ಕಾರದ ಕಳೆದ ನಾಲ್ಕು ವರ್ಷಗಳ ಆಡಳಿತ ನಗರವಾಸಿಗಳ ಪಾಲಿಗೆ ಒಂದು ರೀತಿಯ ದುಃಸ್ವಪ್ನವೇ ಆಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ನಗರ ಪ್ರದೇಶಗಲಲ್ಲಿ ನಡೆದಿರುವ ಬೃಹತ್ ತೆರವು ಕಾರ್ಯಾಚರಣೆಯು ಹಾದಿ-ಬೀದಿಗಳನ್ನು ಅವಲಂಬಿಸಿರುವ ಅಸಂಘಟಿತ, ಅನೌಪಚಾರಿಕ ಆರ್ಥಿಕ ವಲಯವನ್ನು ಬಹುತೇಕ ನಿರ್ಮೂಲನೆ ಮಾಡಿದೆ. ಇದರೊಟ್ಟಿಗೆ ನೋಟು ರದ್ಧತಿ, ಜಿಎಸ್‌ಟಿಯಂತಹ ಕ್ರಮಗಳು ಈ ವಲಯದಲ್ಲಿನ ಉದ್ಯೋಗಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ.

ಟಿಕಂದರ್ ಪನ್ವಾರ್ ಅವರು ಜನರಿಂದ ನೇರವಾಗಿ ಆಯ್ಕೆಯಾದ ಶಿಮ್ಲಾದ ಉಪಮೇಯರ್. ಪ್ರಸ್ತುತ ಅವರು ಆಲ್ ಇಂಡಿಯಾ ಅರ್ಬನ್ ಫೋರಂನಲ್ಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More