ರಾಜ್ಯ ಸರ್ಕಾರದ ಕೈಯಲ್ಲಿದೆ ೫೭ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಬಡ್ತಿ ಭವಿಷ್ಯ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲ ರಚನೆ ಕಸರತ್ತಿನ ನಡುವೆಯೇ, ವಿವಾದಕ್ಕೀಡಾಗಿದ್ದ ಐಎಎಸ್‌, ಐಪಿಎಸ್‌ ಬಡ್ತಿ ಪ್ರಕರಣ ಮತ್ತೆ ಸದ್ದು ಮಾಡಿದೆ. ಬಡ್ತಿ ಆದೇಶ ಹಿಂಪಡೆಯುವ ಸಂಬಂಧ ರಾಜ್ಯ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ

ರಾಜ್ಯದ ೩೪ ಕೆಎಎಸ್‌ ಮತ್ತು ೨೩ ಕೆಪಿಎಸ್ ಅಧಿಕಾರಿಗಳಿಗೆ ಐಎಎಸ್‌ ಮತ್ತು ಐಪಿಎಸ್‌ಗೆ ನೀಡಿದ್ದ ಬಡ್ತಿಯನ್ನು ಹಿಂಪಡೆದುಕೊಳ್ಳುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಬಡ್ತಿ ಹೊಂದಿರುವ ೫೭ ಅಧಿಕಾರಿಗಳ ಭವಿಷ್ಯ ಈಗ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ. ಮಂತ್ರಿಮಂಡಲ ರಚನೆ ಕಸರತ್ತಿನಲ್ಲಿ ಮುಳುಗಿರುವ ರಾಜ್ಯ ಸರ್ಕಾರ, ಐಎಎಸ್‌ ಮತ್ತು ಐಪಿಎಸ್‌ಗೆ ನೀಡಿರುವ ಬಡ್ತಿ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ.

ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನ ಕಟಕಟೆಯಲ್ಲಿ ನಿಂತಿದೆ. ಇದರ ಬೆನ್ನಲ್ಲೇ, ಐಎಎಸ್‌ ಮತ್ತು ಐಪಿಎಸ್‌ ಬಡ್ತಿ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದ್ದರೂ ಈವರೆಗೂ ಬಡ್ತಿ ಆದೇಶವನ್ನು ಹಿಂಪಡೆದಿಲ್ಲ. ಇದು ಮುಂದಿನ ದಿನಗಳಲ್ಲಿ ನ್ಯಾಯಾಂಗ ನಿಂದನೆಗೆ ದಾರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಟ್ಟು ೫೭ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ಬದ್ಧರಾಗಿರುವಂತೆ ‘ಷರತ್ತುಬದ್ಧ’ವಾಗಿ ಐಎಎಸ್ ಮತ್ತು ಐಪಿಎಸ್‌ಗೆ ರಾಜ್ಯ ಸರ್ಕಾರ ಬಡ್ತಿ ನೀಡಿತ್ತು. ಈ ಸಂಬಂಧ ಕಳೆದ ಫೆಬ್ರವರಿ ೨೭ರಂದು ಆದೇಶಿಸಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಮುಖ ದೂರುದಾರ ಖಲೀಲ್ ಅಹ್ಮದ್‌ ಮತ್ತಿತರರು ಐಎಎಸ್ ಮತ್ತು ಐಪಿಎಸ್‌ಗೆ ನೀಡಿದ್ದ ಬಡ್ತಿ ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಂದು ಕೇಂದ್ರ ಆಡಳಿತ ಸುಧಾರಣೆ ಇಲಾಖೆ, ಪ್ರಧಾನಮಂತ್ರಿ ಮತ್ತು ಯುಪಿಎಸ್ಸಿಗೆ ಪತ್ರ ಬರೆದಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯ ಅಂತಿಮ ತೀರ್ಪಿಗೆ ಬದ್ಧರಾಗಿರುವಂತೆ ‘ಷರತ್ತುಬದ್ಧ’ವಾಗಿ ಒಟ್ಟು ೫೭ ಅಧಿಕಾರಿಗಳಿಗೆ ಐಎಎಸ್ ಮತ್ತು ಐಪಿಎಸ್‌ಗೆ ರಾಜ್ಯ ಸರ್ಕಾರ ಬಡ್ತಿ ನೀಡಿತ್ತು. ಈ ಸಂಬಂಧ ಕಳೆದ ಫೆಬ್ರವರಿ ೨೭ರಂದು ಆದೇಶಿಸಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಮುಖ ದೂರುದಾರ ಖಲೀಲ್ ಅಹ್ಮದ್‌ ಮತ್ತಿತರರು, ಐಎಎಸ್ ಮತ್ತು ಐಪಿಎಸ್‌ಗೆ ನೀಡಿದ್ದ ಬಡ್ತಿ ಆದೇಶವನ್ನು ಹಿಂಪಡೆದುಕೊಳ್ಳಬೇಕು ಎಂದು ಕೇಂದ್ರ ಆಡಳಿತ ಸುಧಾರಣೆ ಇಲಾಖೆ, ಪ್ರಧಾನಮಂತ್ರಿ ಮತ್ತು ಯುಪಿಎಸ್ಸಿಗೆ ಪತ್ರ ಬರೆದಿದ್ದರು.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶದ ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹೈಕೋರ್ಟ್‌ ಆದೇಶದ ಅನುಸಾರ ಕೆಪಿಎಸ್‌ಸಿ ಏನು ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಬಂದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
ಕೆ ರತ್ನಪ್ರಭಾ, ಮುಖ್ಯ ಕಾರ್ಯದರ್ಶಿ

ಈ ಪತ್ರಕ್ಕೆ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಳೆದ ಮೇ ೨೭ರಂದು ಪ್ರತಿಕ್ರಿಯಿಸಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ದೂರುದಾರ ಖಲೀಲ್‌ ಅಹ್ಮದ್‌ ಅವರಿಗೆ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಒದಗಿಸಿದೆ.

ಇದನ್ನೂ ಓದಿ : ಸಂಕಲನ | ಕೆಪಿಎಸ್‌ಸಿ ಅಕ್ರಮಗಳ ಸುತ್ತ ‘ದಿ ಸ್ಟೇಟ್’ ಪ್ರಕಟಿಸಿದ ವರದಿಗಳು

ಬಡ್ತಿ ಹೊಂದಿರುವ ಅಧಿಕಾರಿಗಳು ೧೯೯೮, ೧೯೯೯ ಮತ್ತು ೨೦೦೪ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕವಾಗಿದ್ದರು. ಈ ನೇಮಕಾತಿಯಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿದ್ದವು ಎಂದು ಸಿಐಡಿ ಮತ್ತು ಹೈಕೋರ್ಟ್‌ ರಚಿಸಿದ್ದ ಸತ್ಯಶೋಧನಾ ಸಮಿತಿ ವಿಚಾರಣೆ ವರದಿಯಲ್ಲಿ ಹೇಳಲಾಗಿತ್ತು. ಈ ವರದಿ ಆಧರಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌, ಮೂರು ಸಾಲಿನ ಆಯ್ಕೆ ಪಟ್ಟಿಯನ್ನು ಪರಿಷ್ಕೃತಗೊಳಿಸಲು ತೀರ್ಪು ನೀಡಿತ್ತು.

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ್ದ ಎಚ್ ಎನ್ ಗೋಪಾಲಕೃಷ್ಣ ಸೇರಿದಂತೆ ಕೆಲ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಅವಧಿಯಲ್ಲೇ ಎಚ್ ಎನ್ ಗೋಪಾಲಕೃಷ್ಣ ಸೇರಿದಂತೆ ಒಟ್ಟು ೫೭ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಐಎಎಸ್‌ ಮತ್ತು ಐಪಿಎಸ್‌ಗೆ ಬಡ್ತಿ ನೀಡಿತ್ತು. ಆದರೆ, ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದಿತ್ತು. ವಿಶೇಷ ಮೇಲ್ಮನವಿ ವಜಾಗೊಳಿಸಿ ಮೂರ್ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರ ಬಡ್ತಿ ಆದೇಶವನ್ನು ಹಿಂಪಡೆದಿಲ್ಲ.

ಬಡ್ತಿ ಹೊಂದಿದ ಅಧಿಕಾರಿಗಳೆಲ್ಲರೂ ೧೯೯೮, ೯೯ ಮತ್ತು ೨೦೦೪ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕವಾಗಿದ್ದರು. ಈ ಮೂರೂ ಸಾಲಿನ ನೇಮಕಾತಿಯಲ್ಲಿ ಸ್ವಜನಪಕ್ಷಪಾತ, ನಿಯಮಬಾಹಿರ ಚಟುವಟಿಕೆ, ಅಕ್ರಮ ಸೇರಿದಂತೆ ಇನ್ನಿತರ ಹಲವು ಲೋಪಗಳು ಕಂಡುಬಂದಿದ್ದವು. ಈ ಬಗ್ಗೆ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿದ್ದ ಹೈಕೋರ್ಟ್, ಮೂರು ಸಾಲಿನಲ್ಲಿ ನೇಮಕವಾಗಿದ್ದ ಪಟ್ಟಿಯನ್ನು ಪರಿಷ್ಕೃತಗೊಳಿಸಿ ಎಂದು ಕೆಪಿಎಸ್‌ಸಿಗೆ ಸೂಚಿಸಿತ್ತು.

ಅಲ್ಲದೆ, ೧೯೯೮ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಅಧಿಕಾರಿಗಳ ಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದ ಕೆಪಿಎಸ್‌ಸಿ, ಹೈಕೋರ್ಟ್‌ ಮತ್ತು ಡಿಪಿಎಆರ್‌ಗೆ ಪಟ್ಟಿಯನ್ನು ಸಲ್ಲಿಸಿತ್ತು. ಈ ಪೈಕಿ ಎಚ್‌ ಬಸವರಾಜೇಂದ್ರ, ಎಚ್‌ ಎನ್ ಗೋಪಾಲಕೃಷ್ಣ, ಪಿ ವಸಂತಕುಮಾರ್‌, ಕರೀಗೌಡ, ಶಿವಾನಂದ ಕಾಪಸಿ, ಕವಿತಾ ಮನ್ನಿಕೇರಿ ಮತ್ತು ಜಿ ಸಿ ವೃಷಭೇಂದ್ರಮೂರ್ತಿ ಅವರು ಮೊದಲು ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿದ್ದ ಹುದ್ದೆಯನ್ನು ಕಳೆದುಕೊಂಡು, ಹಿಂಬಡ್ತಿ ಹೊಂದಿದ್ದರು. ಪರಿಷ್ಕೃತ ಪಟ್ಟಿ ಪ್ರಕಾರ ಮೂಲ ಹುದ್ದೆಯನ್ನು ಕಳೆದುಕೊಂಡಿದ್ದ ಈ ಅಧಿಕಾರಿಗಳಿಗೂ ಐಎಎಸ್‌ಗೆ ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಇದು ಹಲವರ ಆಕ್ಷೇಪಕ್ಕೂ ಗುರಿಯಾಗಿತ್ತು.

ಐಎಎಸ್‌ಗೆ ಬಡ್ತಿ ಪಡೆದಿರುವ ಅಧಿಕಾರಿಗಳು

ಬಿ ಸಿ ಸತೀಶ್‌ (ಉಪ ಕಾರ್ಯದರ್ಶಿ, ಕೈಗಾರಿಕೆ ವಾಣಿಜ್ಯ ಇಲಾಖೆ, ಗಣಿ), ಎಚ್ ಬಸವರಾಜೇಂದ್ರ (ಉಪ ಕಾರ್ಯದರ್ಶಿ), ಎಚ್‌ ಎನ್ ಗೋಪಾಲಕೃಷ್ಣ (ನಗರಾಭಿವೃದ್ಧಿ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ), ಎನ್‌ ಶಿವಶಂಕರ (ಯುವ ಸಬಲೀಕರಣ ಇಲಾಖೆ ಆಯುಕ್ತ), ಅರುಂಧತಿ ಚಂದ್ರಶೇಖರ್‌ (ಆಯುಕ್ತರು, ಆಹಾರ ನಾಗರಿಕ ಸರಬರಾಜು ಇಲಾಖೆ), ಎಂ ಆರ್‌ ರವಿ (ದಕ್ಷಿಣ ಕನ್ನಡ ಜಿ ಪಂ ಸಿಇಒ), ಪಿ ಎನ್ ರವೀಂದ್ರ (ಸಿಇಓ ಚಿತ್ರದುರ್ಗ ಜಿ ಪಂ), ಕೆ ಜ್ಯೋತಿ (ನಿರ್ದೇಶಕರು, ಉದ್ಯೋಗ ತರಬೇತಿ ಇಲಾಖೆ), ಸಿ ಎನ್ ಮೀನಾ ನಾಗರಾಜ್‌ (ನಿರ್ದೇಶಕರು, ಖಜಾನೆ ಇಲಾಖೆ), ಅಕ್ರಂ ಪಾಶಾ (ನಿರ್ದೇಶಕರು, ಅಲ್ಪಸಂಖ್ಯಾತರ ಇಲಾಖೆ), ಕೆ ಲೀಲಾವತಿ (ಜಂಟಿ ನಿರ್ದೇಶಕರು, ಪಶು ಸಂಗೋಪನೆ), ಪಿ ವಸಂತಕುಮಾರ್‌ (ಮುಖ್ಯ ಆಡಳಿತಾಧಿಕಾರಿ, ವೈದ್ಯಕೀಯ ಶಿಕ್ಷಣ ಇಲಾಖೆ), ಕರೀಗೌಡ (ಆಯುಕ್ತರು, ಹಂಪಿ ವಿಶ್ವ ಪರಂಪರೆ ಅಭಿವೃದ್ಧಿ ಪ್ರಾಧಿಕಾರ), ಶಿವಾನಂದ ಕಾಪಸಿ (ಸಿಇಓ, ಉಡುಪಿ ಜಿ ಪಂ), ಗಂಗೂಬಾಯಿ ರಮೇಶ್‌ ಮಾನಕರ್‌ (ಹೆಚ್ಚುವರಿ ವಿಭಾಗೀಯ ಆಯುಕ್ತರು, ಬೆಳಗಾವಿ ವಿಭಾಗ), ಕವಿತಾ ಎಸ್‌ ಮನ್ನಿಕೇರಿ (ಕಾರ್ಯದರ್ಶಿ, ರಾಜ್ಯ ಮಹಿಳಾ ಆಯೋಗ), ಆರ್‌ ಎಸ್‌ ಪೆದ್ದಪ್ಪಯ್ಯ (ನಿರ್ದೇಶಕರು, ಸಮೂಹ ಶಿಕ್ಷಣ), ಜಿ ಸಿ ವೃಷಭೇಂದ್ರಮೂರ್ತಿ (ಉಪ ಆಯುಕ್ತರು, ಬಿಬಿಎಂಪಿ), ಕೆ ಹರೀಶ್‌ಕುಮಾರ್‌ (ಸಿಇಒ, ಚಾಮರಾಜನಗರ ಜಿ ಪಂ), ಎಂ ಆರ್‌ ರವಿಕುಮಾರ್‌ (ಪ್ರಾಥಮಿಕ ಶಿಕ್ಷಣ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ), ಎಂ ಬಿ ರಾಜೇಶ್‌ಗೌಡ (ನಿರ್ದೇಶಕರು, ಕೃಷಿ ಮಾರುಕಟ್ಟೆ), ಮಹಾಂತೇಶ್‌ ಬೀಳಗಿ (ಕರ್ನಾಟಕ ಮೂಲಸೌಕರ್ಯ ನಿಗಮದ ಯೋಜನೆ ನಿರ್ದೇಶಕ), ಕೆ ಎನ್ ರಮೇಶ್‌ (ಜಂಟಿ ಮುಖ್ಯ ಚುನಾವಣಾಧಿಕಾರಿ), ಪಾಟೀಲ್ ಯಲಗೌಡ ಶಿವನಗೌಡ (ನಿರ್ದೇಶಕರು, ತೋಟಗಾರಿಕೆ ಇಲಾಖೆ), ಎಸ್‌ ಹೊನ್ನಾಂಬ (ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ), ಆರ್‌ ಲತಾ (ಸಿಇಒ, ಬೆಂಗಳೂರು ಗ್ರಾಮಾಂತರ ಜಿ ಪಂ), ಕೆ ಶ್ರೀನಿವಾಸ (ನಿರ್ದೇಶಕರು, ಕೆಎಸ್‌ಆರ್‌ಟಿಸಿ), ಎಂ ಎಸ್‌ ಅರ್ಚನಾ (ಸಿಇಒ, ಬೆಂಗಳೂರು ನಗರ ಜಿ.ಪಂ), ಕೆ ಎ ದಯಾನಂದ (ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ), ಜಿ ಜಗದೀಶ (ಹುದ್ದೆ ನೀಡಿಲ್ಲ), ಕೆ ಎಂ ಜಾನಕಿ (ಸಿಇಒ, ಹಾಸನ ಜಿ ಪಂ), ಸಿ ಸತ್ಯಭಾಮ (ಸಿಇಒ, ಚಿಕ್ಕಮಗಳೂರು ಜಿ ಪಂ), ಕೆ ಎಸ್‌ ಲತಾಕುಮಾರಿ (ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ)

ಐಪಿಎಸ್‌ಗೆ ಬಡ್ತಿ ಪಡೆದ ಅಧಿಕಾರಿಗಳು

ಸಿ ಬಿ ವೇದಮೂರ್ತಿ, ಕೆ ಎಂ ಶಾಂತರಾಜು, ಹನುಮಂತರಾಯ, ಡಿ ದೇವರಾಜು, ಡಿ ಆರ್‌ ಸಿರಿಗೌರಿ, ಧರಣಿದೇವಿ, ಎಸ್‌ ಸವಿತಾ, ಸಿ ಕೆ ಬಾಬಾ, ಅಬ್ದುಲ್‌ ಅಹಾದ್‌, ಎಸ್‌ ಗಿರೀಶ್‌, ಎಂ ಪುಟ್ಟಮಾದಯ್ಯ, ಟಿ ಶ್ರೀಧರ, ಎಂ ಅಶ್ವಿನಿ, ಎ ಎನ್‌ ಪ್ರಕಾಶ್‌ ಗೌಡ, ಜಿನೇಂದ್ರ ಕಣಗಾವಿ, ಜೆ ಕೆ ರಶ್ಮಿ, ಟಿ ಪಿ ಶಿವಕುಮಾರ್‌, ಎನ್ ವಿಷ್ಣವರ್ಧನ್‌, ಸಂಜೀವ್‌ ಎಂ ಪಾಟೀಲ್‌, ಕೆ ಪರಶುರಾಮ್, ಎಚ್‌ ಡಿ ಆನಂದಕುಮಾರ್‌, ಕಲಾ ಕೃಷ್ಣಮೂರ್ತಿ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More