ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ 10 ಇತರ ಪ್ರಮುಖ ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಐಸಿಐಸಿಐ ಬ್ಯಾಂಕ್‌ ಹಗರಣದಲ್ಲಿ ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್

ವೇಣುಗೋಪಾಲ್ ದೂತ್ ಒಡೆತನದ ವಿಡಿಯೋಕಾನ್ ಸಂಸ್ಥೆಗೆ 3,280 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಮತ್ತು ಸ್ವಜನ ಪಕ್ಷಪಾತ ಆರೋಪ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನೂ ಮಾತಾಡದೇ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಹಗರಣದ ಕುರಿತು ಯಾವುದೇ ಮಾತಿಲ್ಲ ಎಂದು ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರನ್ನು ಟೀಕೆ ಮಾಡಿದ್ದಾರೆ.

ಮಡಗಾಸ್ಕರ್ ಪ್ರಧಾನಿ ಒಲಿವಿಯರ್ ರಾಜಿನಾಮೆ

ಮಡಗಾಸ್ಕರ್ ದೇಶದ ಪ್ರಧಾನಿ ಒಲಿವಿಯರ್ ಮಹಾಫಲಿ ಸೊಲೊನನ್ಡ್ರಾಸಾನಾ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ವಿವಾದಾತ್ಮಕ ಚುನಾವಣಾ ಸುಧಾರಣೆಗಳಿಂದ ಉಂಟಾದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವುದಕ್ಕಾಗಿ ಒಮ್ಮತದ ಪ್ರಧಾನಿಯ ನೇಮಕವಾಗಬೇಕಿದೆ. :”ನಾನು ನನ್ನ ರಾಜಿನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಭವಿಷ್ಯಕ್ಕೆ ನಾನು ಅಡ್ಡಿಯಾಗುವುದಿಲ್ಲ,” ಎಂದು ಹೇಳಿಕೆ ನೀಡಿದ್ದಾರೆ.

ಭಾರತ ವನಿತಾ ತಂಡಕ್ಕೆ ಎರಡನೇ ಗೆಲುವು

ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ವನಿತೆಯರ ಏಷ್ಯಾ ಕಪ್ ಟಿ೨೦ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸತತ ಎರಡನೇ ಗೆಲುವು ದಾಖಲಿಸಿದೆ. ಸೋಮವಾರ (ಜೂನ್ ೪) ನಡೆದ ಎರಡನೇ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ನೀಡಿದ ಆಲ್ರೌಂಡ್ ಪ್ರದರ್ಶನದಿಂದ ಭಾರತ, ಥಾಯ್ಲೆಂಡ್ ವಿರುದ್ಧ ೬೬ ರನ್ ಜಯ ಪಡೆಯಿತು. ಹರ್ಮನ್‌ಪ್ರೀತ್ ೧೭ ಎಸೆತಗಳಲ್ಲಿ ಅಜೇಯ ೨೭ ರನ್ ಗಳಿಸಿದ್ದಲ್ಲದೆ, ೧೧ ರನ್‌ಗಳಿಗೆ ೩ ವಿಕೆಟ್ ಗಳಿಸಿದರು. ಮೋನಾ ಮೆಶ್ರಾಮ್ ೩೨ ರನ್ ಕೊಡುಗೆ ನೀಡಿದರು. ಭಾರತ ನೀಡಿದ್ದ ೧೩೩ ರನ್‌ಗಳಿಗೆ ಉತ್ತರವಾಗಿ ಥಾಯ್ಲೆಂಡ್ ವನಿತಾ ತಂಡ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೬೬ ರನ್ ಗಳಿಸಲಷ್ಟೇ ಶಕ್ತವಾಯಿತು. ಅಂದಹಾಗೆ, ಭಾನುವಾರ (ಜೂನ್ ೩) ನಡೆದ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನು ಭಾರತ ೧೪೨ ರನ್‌ಗಳಿಂದ ಮಣಿಸಿತ್ತು.

ಫ್ರೆಂಚ್ ಓಪನ್; ಹಿಮ್ಮೆಟ್ಟಿದ ಸೆರೆನಾ, ಶರಪೋವಾ ಕ್ವಾರ್ಟರ್‌ಗೆ

ಈ ಋತುವಿನ ಫ್ರೆಂಚ್ ಓಪನ್‌ ಟೆನಿಸ್ ಪಂದ್ಯಾವಳಿಯ ಕೇಂದ್ರಬಿಂದುವಾಗಿದ್ದ ಮರಿಯಾ ಶರಪೋವಾ ಮತ್ತು ಸೆರೆನಾ ವಿಲಿಯಮ್ಸ್ ನಡುವಣ ಪ್ರೀಕ್ವಾರ್ಟರ್‌ಫೈನಲ್ ಸೆಣಸಾಟ ಹಠಾತ್ ರದ್ದಾಯಿತು. ಸೋಮವಾರ (ಜೂನ್ ೪) ಸಂಜೆ ೫.೩೦ರ ಹೊತ್ತಿಗೆ ಆರಂಭವಾಗಬೇಕಿದ್ದ ಪಂದ್ಯವನ್ನು ನೋಡಲು ಟೆನಿಸ್‌ಪ್ರಿಯರು ಕಾತರದಿಂದ ಕೂಡಿದ್ದರು. ಆದರೆ, ಗಾಯದ ಸೆಳವಿಗೆ ಸಿಲುಕಿದ ಸೆರೆನಾ ಪಂದ್ಯದಿಂದ ಹಿಮ್ಮೆಟ್ಟಿದರು. ಇದರಿಂದ ಶರಪೋವಾ ಕ್ವಾರ್ಟರ್‌ಫೈನಲ್ ಹಾದಿ ಸುಗಮವಾಯಿತು. ಸೆರೆನಾ ವಿರುದ್ಧದ ಸತತ ೧೮ ಪಂದ್ಯಗಳ ಸೋಲಿನ ಸರಪಳಿಯನ್ನು ತುಂಡರಿಸಲು ಶರಪೋವಾ ಅಣಿಯಾಗಿದ್ದರೆ, ರಷ್ಯನ್ ಆಟಗಾರ್ತಿಯ ವಿರುದ್ಧ ೨೦ನೇ ಗೆಲುವಿನ ನಿರೀಕ್ಷೆಯಲ್ಲಿದ್ದರು ಸೆರೆನಾ. ಈ ಇಬ್ಬರು ಸ್ಟಾರ್ ಆಟಗಾರ್ತಿಯರ ಪಂದ್ಯ ರದ್ದಾಗಿದೆ ಎಂದು ಸಂಘಟಕರು ಘೋಷಿಸುತ್ತಿದ್ದಂತೆ ಒಂದರೆಕ್ಷಣ ರೊಲ್ಯಾಂಡ್ ಗ್ಯಾರೋಸ್ ಕೂಡ ಸಪ್ಪಗಾಯಿತು!

ರೈತರ ಪ್ರತಿಭಟನೆ ಗಿಮಿಕ್ ಎಂದ ಕೇಂದ್ರ ಕೃಷಿ ಸಚಿವರ ವಿರುದ್ಧ ಆಕ್ರೋಶ

ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಕಳೆದ ಒಂದು ವಾರದಿಂದ ದೇಶಾದ್ಯಂತ ರೈತರು ನಡೆಸುವ ಪ್ರತಿಭಟನೆಯನ್ನು ಕೇಂದ್ರ ಕೃಷಿ ಸಚಿವರು ಟೀಕೆ ಮಾಡಿದ್ದಾರೆ. ಕೇವಲ ‘ಪ್ರಚಾರ ಗಿಮಿಕ್' ಎಂದು ಹೇಳಿದ್ದ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪಾಟ್ನಾದಲ್ಲಿ ಇಂದು ಸುದ್ದಿಗಾರರೊಡನೆ ಮಾತನಾಡಿದ ಸಿಂಗ್, “ದೇಶದಲ್ಲಿ ಸುಮಾರು 12ರಿಂದ 14 ಕೋಟಿ ರೈತರಿರುವುದರಿಂದ ಯಾವುದಾದರೂ ರೈತ ಸಂಘಟನೆಯ ಬಳಿ 1000-2000 ರೈತರಿರುವುದು ಸಹಜ. ಮಾಧ್ಯಮದ ಗಮನ ಸೆಳೆಯಲು ಅವರು ಏನಾದರೂ ಅಸಾಮಾನ್ಯ ಕೆಲಸ ಮಾಡಬೇಕಾಗುತ್ತದೆ,'' ಎಂದಿದ್ದರು.

೨೦೧೯ರ ಚುನಾವಣೆಗೆ ಪ್ರಚಾರದ ಭಾಗವಾಗುವಂತೆ ರಾಮ್‌ದೇವ್ ಜೊತೆ ಶಾ ಮಾತುಕತೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂಬರುವ ರಾಷ್ಟ್ರೀಯ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಸಂಪರ್ಕ್ ಫಾರ್ ಸಮರ್ಥನ್ ಹೆಸರಿನ ಹೊಸ ಪ್ರಚಾರ ಕಾರ್ಯದಲ್ಲಿ ಬಿಜೆಪಿಯ ಭಾಗವಾಗುವಂತೆ ಮಾತುಕತೆ ನಡೆಸಿದ್ದಾರೆ. ಬಾಬಾ ರಾಮದೇವ್ ಅವರು ನಮ್ಮ ಜೊತೆ ಬಂದರೆ ಅವರ ಕೋಟ್ಯಂತರ ಅನುಯಾಯಿಗಳು ನಮ್ಮ ಪರ ಕೆಲಸ ಮಾಡುತ್ತಾರೆ ಎಂದು ಮಾಧ್ಯಮದೆದುರು ಶಾ ಹೇಳಿಕೊಂಡಿದ್ದಾರೆ.

ಸ್ಯಾಮ್ ಮಾಣಿಕ್‌ ಷಾ ಬಯೋಪಿಕ್

ಮೇಘನಾ ಗುಲ್ಜಾರ್ ನಿರ್ದೇಶನದ ‘ರಾಝಿ’ ಹಿಂದಿ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಮೇಘನಾ ಫೀಲ್ಡ್‌ ಮಾರ್ಷಲ್‌ ಸ್ಯಾಮ್ ಮಾಣಿಕ್ ಷಾ ಬಯೋಪಿಕ್‌ ನಿರ್ದೇಶಿಸಲು ಸಜ್ಜಾಗಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದವರು ಸ್ಯಾಮ್‌ ಮಾಣಿಕ್ ಶಾ. ಐದು ದಶಕಗಳ ಸೈನಿಕ ಬದುಕಿನಲ್ಲಿ ಅವರು ಐದು ಯುದ್ಧಗಳಲ್ಲಿ ಭಾಗವಹಿಸಿದ್ದಾರೆ. ಈಗಷ್ಟೇ ಚಿತ್ರಕತೆ ಹೆಣೆಯುವ ಕೆಲಸ ಶುರುವಾಗಿದ್ದು, ರಾನಿ ಸ್ಕ್ರ್ಯೂವಾಲಾ ಚಿತ್ರ ನಿರ್ಮಾಣದ ಹೊರೆ ಹೊತ್ತಿದ್ದಾರೆ.

ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳುವುದೇ ಆರ್‌ಬಿಐ?

ಸೋಮವಾರ ಬಂಡವಾಳ ಪೇಟೆಯಲ್ಲಿ ಆರ್ಬಿಐ ರೆಪೊದರದ್ದೆ ಚರ್ಚೆ. ಏರುತ್ತಿರುವ ಹಣದುಬ್ಬರ, ತೈಲದರದಿಂದಾಗಿ ಆರ್ಬಿಐ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಹಲವು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಬರುವ ದಿನಗಳಲ್ಲಿ ತೈಲದರ ಮತ್ತಷ್ಟು ಏರಿಕೆಯಿಂದಾಗಬಹುದಾದ ಹಣದುಬ್ಬರ, ರುಪಾಯಿ ಮೌಲ್ಯ ಕುಸಿತ ಮತ್ತಿತರ ಅಂಶಗಳನ್ನೆಲ್ಲ ಗಮನಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಳ್ಳಬಹುದು. ಆದರೆ, ಏಪ್ರಿಲ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಪೂರ್ಣ ಒಮ್ಮತವಾಗಿರಲಿಲ್ಲ. ಆರು ಸದಸ್ಯರ ಪೈಕಿ ಒಬ್ಬ ಸದಸ್ಯರು ಬಡ್ಡಿದರ ಶೇ.0.25ರಷ್ಟು ಏರಿಸಬೇಕು ಎಂದು ಪ್ರತಿಪಾದಿಸಿದ್ದರು. ಈ ಎರಡು ತಿಂಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೀಗಾಗಿ ಬಡ್ಡಿದರ ಏರಿಕೆ ಪರವಾಗಿ ಮತ್ತಷ್ಟು ಸದಸ್ಯರು ವಕಾಲತ್ತು ಹಾಕಬಹುದು. ದಿನವಿಡೀ ಬಂಡವಾಳ ಪೇಟೆಯ ಚರ್ಚೆ ಮುಗಿದಿದೆ. ಮಂಗಳವಾರ ಎಂಪಿಸಿ ಸಭೆ ಪ್ರಾರಂಭವಾಗಲಿದೆ. ಬುಧವಾರ ಆರ್ಬಿಐ ಬಡ್ಡಿದರ ಪ್ರಕಟಿಸಲಿದೆ. ಏರಿಸುತ್ತದೆಯೇ ಇಲ್ಲವೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

ಮೋದಿ ಸಿದ್ಧ ಉತ್ತರಗಳನ್ನು ಕೊಡುವ ಪ್ರಧಾನಿ: ರಾಹುಲ್ ಗಾಂಧಿ

ಪ್ರಧಾನಿ ಮೋದಿಯವರು ಮೊದಲೇ ಸಿದ್ಧಪಡಿಸಿದ ಉತ್ತರಗಳನ್ನು ಕೊಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. “ಮೋದಿ ಜೂ.೧ರಂದು ಸಿಂಗಾಪುರದ ವಿಶ್ವವಿದ್ಯಾಲಯದಲ್ಲಿ ಭಾಷಾಂತರಕಾರರು ಸಿದ್ಧಪಡಿಸಿದ ಉತ್ತರಗಳನ್ನು ಕೊಟ್ಟಿದ್ದಾರೆ. ಮೋದಿಯವರು ನಿಜವಾದ ಪ್ರಶ್ನೆಗಳನ್ನು ಎತ್ತಿಕೊಳ್ಳದೆ ಇರುವುದು ಉತ್ತಮ,” ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರು ಕೊಡುವ ಉತ್ತರದಲ್ಲಿ ಇರುವ ಅಂಕಿ-ಅಂಶಗಳು ವಾಸ್ತವಕ್ಕೆ ಹೋಲಿಕೆಯಾಗುವುದೇ ಇಲ್ಲ ಎಂದಿದ್ದಾರೆ.

‘ನೀಟ್’ ಪರೀಕ್ಷೆ: ಬಿಹಾರದ ಕಲ್ಪನಾ ಕುಮಾರಿಗೆ ಮೊದಲ ಸ್ಥಾನ

2018ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟಗೊಂಡಿದ್ದು ಬಿಹಾರದ ಕಲ್ಪನಾ ಕುಮಾರಿ ಮೊದಲ ಸ್ಥಾನ ಗಳಿಸಿದ್ದಾರೆ. ಕಲ್ಪನಾ ಕುಮಾರಿ 691 ಅಂಕ ಪಡೆದು ಶೇ.99.99 ಅಂಕ ಗಳಿಸಿದ್ದರೆ, ತೆಲಂಗಾಣದ ರೋಹನ್ ಪುರೋಹಿತ್ ಮತ್ತು ದಿಲ್ಲಿಯ ಹಿಮಾಂಶು ಶರ್ಮಾ ತಲಾ 690 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ದಿಲ್ಲಿಯ ಅರೋಶ್ ಧಮೀಜ ಮತ್ತು ರಾಜಸ್ಥಾನದ ಪ್ರಿನ್ಸ್ ಚೌಧರಿ ತಲಾ 686 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More