ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಲೇಬೇಕಾದ 5 ಸುದ್ದಿಗಳು  

ನೀವು ನೋಡಲಿರುವ ಇಂದಿನ ಪ್ರಮುಖ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಸುದ್ದಿಗಳ ಸಂಕ್ಷಿಪ್ತ ನೋಟ  

ಮಧ್ಯಾಹ್ನದ ನಂತರ ಮೆಟ್ರೋ ಸಿಬ್ಬಂದಿ ಪ್ರತಿಭಟನೆ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೆಟ್ರೋ ಸಿಬ್ಬಂದಿ ಸೋಮವಾರ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿರುವ ಸರ್ಕಾರ, ಎಸ್ಮಾ ಜಾರಿ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಎಸ್ಮಾ ಜಾರಿ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಸಿಬ್ಬಂದಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಮದ್ಯಾಹ್ನದೊಳಗೆ ತೀರ್ಪು ಬರಲಿದೆ. ತೀರ್ಪಿನ ಬಳಿಕ ಸಿಬ್ಬಂದಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ

ನಗರದ ತಗ್ಗು ಪ್ರದೇಶದಲ್ಲಿ ಪ್ರವಾಹ ಸಾಧ್ಯತೆ, ಎಚ್ಚರಿಕೆ

ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ಇಂದು ನೆರೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ‌ಎಚ್ಚರಿಕೆ ನೀಡಿದೆ. ರಾಜ್ಯದ ಹಲವೆಡೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ತಗ್ಗುಪ್ರದೇಶಗಳಾದ ರಾಜರಾಜೇಶ್ವರಿ ನಗರ, ಪೂರ್ವ ಮತ್ತು ದಕ್ಷಿಣ ವಲಯ, ಮಹಾದೇವಪುರ, ಬೊಮ್ಮನಹಳ್ಳಿಯಲ್ಲಿ ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ಸಮ್ಮಿಶ್ರ ಸರ್ಕಾರದ ಸಚಿವರ ನಿರ್ಧಾರ ಇಂದು?

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟವು ಬುಧವಾರ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದರ ಭಾಗವಾಗಿ ಜೆಡಿಎಸ್‌, ಕಾಂಗ್ರೆಸ್‌ನ ಯಾವೆಲ್ಲ ನಾಯಕರಿಗೆ ಯಾವ್ಯಾವ ಸಚಿವ ಸ್ಥಾನ ಸಿಗಲಿದೆ ಎಂಬುದು ಸೋಮವಾರ ನಿರ್ಧಾರವಾಗಲಿದೆ ಎನ್ನಲಾಗಿದೆ. ಉಭಯ ಪಕ್ಷಗಳಲ್ಲಿ ಹಲವು ಹಿರಿಯ-ಕಿರಿಯ ನಾಯಕರು ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿಗಾಗಿ ವಿವಿಧ ರೀತಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಜೆಡಿಎಸ್‌ಗೆ ಮುಖ್ಯಮಂತ್ರಿ ಸೇರಿದಂತೆ ೧೨, ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಸೇರಿದಂತೆ ೨೨ ಸಚಿವ ಸ್ಥಾನ ಹಂಚಿಕೆಯಾಗಿವೆ.

ಶಿಮ್ಲಾದಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ; ಸರಕಾರಿ ಶಾಲೆಗಳಿಗೆ ಇಂದಿನಿಂದ ರಜೆ

ಶಿಮ್ಲಾದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಶಿಕ್ಷಣ ಇಲಾಖೆ ಇಂದಿನಿಂದ ಜೂನ್‌ ಎಂಟರತನಕ ಸರಕಾರಿ ಶಾಲೆಗಳಿಗೆ ರಜೆ ಘೋಷಿಸಿದೆ. ಜುಲೈನಲ್ಲಿ ನೀಡಲಾಗುವ ವಾರ್ಷಿಕ ಮಳೆಯ ರಜಾ ಅವಧಿಯಲ್ಲಿ ತರಗತಿಗಳು ನಡೆಯಲಿವೆ.

ಸ್ಟಾರ್ ಆಟಗಾರ್ತಿಯರ ಸೆಣಸಾಟ

ಟೆನಿಸ್ ಲೋಕದ ಸ್ಟಾರ್ ಆಟಗಾರ್ತಿಯರಾದ ಮರಿಯಾ ಶರಪೋವಾ ಹಾಗೂ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ಕಾದಾಟಕ್ಕೆ ರೊಲ್ಯಾಂಡ್ ಗ್ಯಾರೋಸ್ ಜತೆಗೆ ವಿಶ್ವ ಟೆನಿಸ್ ಪ್ರಿಯರೇ ಕಾತರದಿಂದ ಕಾಯುತ್ತಿದ್ದಾರೆ. ಸೋಮವಾರ (ಜೂನ್ ೪) ಸಂಜೆ ಸರಿಸುಮಾರು ೫.೩೦ಕ್ಕೆ ಶುರುವಾಗಲಿರುವ ಮಹಿಳೆಯರ ಸಿಂಗಲ್ಸ್ ವಿಭಾಗದ ೪ನೇ ಸುತ್ತಿನ ಪಂದ್ಯದಲ್ಲಿ ೨೩ ಗ್ರಾಂಡ್‌ಸ್ಲಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಹಾಗೂ ಐದು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಒಡತಿ ಮರಿಯಾ ಶರಪೋವಾ ಪರಸ್ಪರ ಸೆಣಸುತ್ತಿದ್ದಾರೆ. ೨೦೧೪ರಲ್ಲಿ ಕೊನೆಯ ಬಾರಿಗೆ ಸೆರೆನಾ ವಿರುದ್ಧ ಗೆದ್ದಿರುವ ಶರಪೋವಾ, ಕೃಷ್ಣಸುಂದರಿಯ ವಿರುದ್ಧ ಸೋತಿರುವುದೇ ಹೆಚ್ಚು. ಒಟ್ಟು ೨೧ ಮುಖಾಮುಖಿಯಲ್ಲಿ ಸೆರೆನಾ ೧೯ರಲ್ಲಿ ವಿಜೃಂಭಿಸಿದ್ದರೆ, ರಷ್ಯನ್ ರೂಪಸಿ ಗೆದ್ದಿರುವುದು ಕೇವಲ ೨ ಪಂದ್ಯಗಳಲ್ಲಷ್ಟೆ. ಹೀಗಾಗಿ, ಫ್ರೆಂಚ್ ಓಪನ್‌ ಪಂದ್ಯಾವಳಿಯಲ್ಲಿನ ಈ ಇಬ್ಬರ ಸೆಣಸಾಟ ಸಹಜವಾಗಿಯೇ ಕೌತುಕ ಕೆರಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More