ಅಂದು ಜೆಪಿಯವರಿಂದ ಲಾಭ ಪಡೆದ ಆರೆಸ್ಸೆಸ್ ಇಂದು ಪ್ರಣಬ್‌ರಿಂದ ನಿರೀಕ್ಷಿಸುತ್ತಿರುವುದೇನು?

ಕಾಂಗ್ರೆಸ್‌ ಮುತ್ಸದ್ದಿ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಇಂದು ಆರೆಸ್ಸೆಸ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದೆ, 1970ರ ದಶಕದ ಕೊನೇ ಭಾಗದಲ್ಲಿ ಜೆಪಿಯವರು ಆರೆಸ್ಸೆಸ್ ಬಗ್ಗೆ ತೋರಿದ ಮೆದುಧೋರಣೆ ಐತಿಹಾಸಿಕ ಪ್ರಮಾದವಾಗಿತ್ತು ಎನ್ನಲಾಗುತ್ತದೆ. ನಿಜಕ್ಕೂ ಆಗ ನಡೆದದ್ದೇನು?

ಮಾಜಿ ರಾಷ್ಟಪತಿ ಪ್ರಣಬ್‌ ಮುಖರ್ಜಿಯವರು ಇಂದು ನಾಗಪುರದಲ್ಲಿ ಆರ್‌ಎಸ್‌ಎಸ್‌ನ ಸಮಾರಂಭವೊಂದರಲ್ಲಿ ಭಾಗವಹಿಸಲಿದ್ದಾರೆ. ಆರ್‌ಎಸ್‌‌ಎಸ್ ತನ್ನ‌‌ ಸ್ವಯಂಸೇವಕರಿಗಾಗಿ ಆಯೋಜಿಸಿರುವ ‘ತೃತೀಯ ಶಿಕ್ಷಾ ವರ್ಗ್’ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸುತ್ತಿದ್ದಾರೆ. ಪ್ರಣಬ್‌ ಮುಖರ್ಜಿಯವರು ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಬಗ್ಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಹಿಂದುತ್ವವಾದವನ್ನು ಪ್ರತಿಪಾದಿಸುವ ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಪ್ರಣಬ್‌ರಿಗೇನು ಕೆಲಸ ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ. ಮತ್ತೊಂದೆಡೆ, ಪ್ರಣಬ್‌ ಅವರು ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಭಾಗವಹಿಸಿದರೂ ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯಲಿದ್ದಾರೆ ಎನ್ನುವ ಅನಿಸಿಕೆಗಳೂ ವ್ಯಕ್ತವಾಗಿವೆ.

ಇದೇ ವೇಳೆ, ಈ ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರು (ಜೆಪಿ) ಮಾಡಿದ ತಪ್ಪನ್ನೇ ಪ್ರಣಬ್‌ ಮುಖರ್ಜಿಯವರು ಮಾಡುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಕಾಂಗ್ರೆಸ್‌ ವಿರೋಧಿ ರಾಜಕಾರಣವನ್ನು ಕಟ್ಟುವ ಭರದಲ್ಲಿ ಜೆಪಿಯವರು ಆರ್‌ಎಸ್‌ಎಸ್‌ ಅನ್ನು ಮುಖ್ಯವಾಹಿನಿಗೆ ತರುವ ತಪ್ಪನ್ನು ಮಾಡಿದರು. ಸಾರ್ವಜನಿಕವಾಗಿ ಅದಕ್ಕೆ ಒಪ್ಪಿಗೆ ಸಿಗುವಂತಹ ಅವಕಾಶವನ್ನು ಸೃಷ್ಟಿಸಿದರು. ಇದನ್ನು ಬಳಸಿಕೊಂಡೇ ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್‌ನ ತಾತ್ವಿಕತೆಯನ್ನು ಹೊಂದಿರುವ ಜನಸಂಘ ರಾಜಕೀಯ ಶಕ್ತಿಯನ್ನು ಪಡೆಯಲು ಸಾಧ್ಯವಾಯಿತು. ನಂತರ ಬಿಜೆಪಿಯ ರೂಪದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಅವಕಾಶವಾಯಿತು. ಇಂದು ಪ್ರಣಬ್‌ ಮುಖರ್ಜಿಯ ಮೂಲಕ ಆರ್‌ಎಸ್‌ಎಸ್‌ ಮತ್ತೊಂದು ಬಗೆಯ ರಾಜಕೀಯ ದಾಳವನ್ನು ಉರುಳಿಸುವ ಪ್ರಯತ್ನದಲ್ಲಿದೆ ಎನ್ನಲಾಗುತ್ತಿದೆ. ಇತಿಹಾಸವನ್ನೊಮ್ಮೆ ತಿರುಗಿ ನೋಡಿದರೆ, ಜೆಪಿಯವರಿಗೆ ಆರ್‌ಎಸ್‌ಎಸ್‌ ನಿಜಕ್ಕೂ ಎಷ್ಟು ಒಪ್ಪಿದ್ದರು? ಅವರು ಯಾವ ಒತ್ತಡಗಳ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ಅನ್ನು ತಮ್ಮ ಕಾಂಗ್ರೆಸ್‌ ವಿರೋಧಿ ಹೋರಾಟದ ಭಾಗವಾಗಿ ಒಳಗೊಳ್ಳಲು ಮುಂದಾದರು ಎನ್ನುವ ಕುತೂಹಲ ಮೂಡುತ್ತದೆ.

1977ರ ನವೆಂಬರ್ 3ರಂದು ಜೆಪಿಯವರು ಪಾಟ್ನಾದಲ್ಲಿ ಬೃಹತ್ ಆರ್‌ಎಸ್‌ಎಸ್‌ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದಿನ ಸಭೆಯನ್ನು ಉದ್ದೇಶಿಸಿದ್ದ ಜೆಪಿ ಅವರು, “RSS is a revolutionary organisation. No other organisation in the country comes anywhere near it. It alone has the capacity to transform society, end casteism and wipe the tears from the eyes of the poor. I believe you have a historic role to play.... I have great expectations from this revolutionary organisation which has taken up the challenge of creating a new India,” ಎಂದಿದ್ದರು. ಜೆಪಿಯವರು ಅಂದು ಆಡಿದ ಮಾತಿಗೆ ಹತ್ತಿರವಾದ ಇಂಗ್ಲಿಷ್ ಅನುವಾದ ಇದು.

ಹಾಗಾದರೆ, ಜೆಪಿಯವರಿಗೆ ಆರ್‌ಎಸ್‌ಎಸ್‌ ಬಗ್ಗೆ ಆತಂಕಗಳೇ ಇರಲಿಲ್ಲವೇ? ಅವರ ಮನಸ್ಸಿನಲ್ಲಿ ಈ ಕುರಿತು ಯಾವುದೇ ದ್ವಂದ್ವಗಳಿರಲಿಲ್ಲವೇ? ಒಂದು ದೊಡ್ಡ ಪರ್ಯಾಯ ರಾಜಕೀಯ ಭಿತ್ತಿಯನ್ನು ನಿರ್ಮಿಸುವ ಭರದಲ್ಲಿ ಅವರು ಆರ್‌ಎಸ್‌ಎಸ್‌ನೊಂದಿಗೆ ತಮಗಿದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಪಕ್ಕಕ್ಕೆ ಸರಿಸಬಯಸಿದರೇ? ಈ ಪ್ರಶ್ನೆಗಳು ಜೆಪಿಯವರ ವಿಚಾರಧಾರೆಗೆ ಎದುರಾದ ಎಲ್ಲರಿಗೂ ಕಾಡಿವೆ.

ಈ ಕುರಿತು ಇತಿಹಾಸವನ್ನು ಕೆದಕಿದರೆ, ಜೆಪಿಯವರು 1977ರ ನ.3ರಂದು ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಭಾಷಣ ಮಾಡುವುದಕ್ಕೂ ಕೆಲ ದಿನಗಳ ಮುಂಚೆಯಷ್ಟೇ ಆ ಸಂಘಟನೆ ಬಗ್ಗೆ ತಮಗಿದ್ದ ಆತಂಕವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿರುತ್ತಾರೆ. ಅವರ ಅಂಥ ಒಂದು ಕಟುವಿಮರ್ಶೆ 1977ರ ಅ.20ರಂದು ಎಕ್ಸ್‌ಪ್ರೆಸ್ ನ್ಯೂಸ್ ಸರ್ವಿಸ್‌ನಲ್ಲಿ ವರದಿಯಾಗುತ್ತದೆ. “The RSS should either open its doors to other communities or wind up its activities. I am clear that the RSS has no justification to exist now,” ಎಂದು ಸಂಘದೊಳಗಿನ ಜಾತೀಯ ವ್ಯವಸ್ಥೆಯ ಬಗ್ಗೆ ಕಿಡಿಕಿಡಿಯಾಗಿರುತ್ತಾರೆ.

ಇದು ಅಂದಿನ ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಜೆಪಿಯವರ ಸಂದರ್ಶನವೊಂದನ್ನು ಪಡೆಯುತ್ತಾರೆ. 1977 ಅ.30ರಂದು ಪ್ರಕಟವಾದ ಈ ಸಂದರ್ಶನದಲ್ಲಿ ಜೆಪಿಯವರು ಆರ್‌ಎಸ್‌ಎಸ್‌ ಬಗೆಗಿನ ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಪುನರಾವರ್ತಿಸುತ್ತಾರೆ. “RSS has no justification now,” ಎಂದು ಖಚಿತ ಪದಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜೆಪಿಯವರ ಈ ಹೇಳಿಕೆಯಿಂದಾಗಿ ಸ್ವತಃ ಕಾಂಗ್ರೆಸ್ ವಿರೋಧಿ ರಾಜಕಾರಣದ ಬೆಂಬಲಿಗರೂ, ಪತ್ರಿಕೋದ್ಯಮವೂ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹಾಗೂ ರಾಜಕಾರಣದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉದ್ಯಮಿ, ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕಾ ಸಮೂಹದ ರಾಮನಾಥ್ ಗೋಯಂಕಾ ಚಿಂತಿತರಾಗುತ್ತಾರೆ. ಜೆಪಿಯವರ ಈ ನಿಲುವಿನಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ, ಅದು ಸೃಷ್ಟಿಸಬಹುದಾದ ರಾಜಕೀಯ ಬಿಕ್ಕಟ್ಟುಗಳ ಬಗ್ಗೆ ಗೋಯಂಕಾ ಅಂದೇ ತಮ್ಮ ಅಭಿಪ್ರಾಯಗಳನ್ನು ಜೆಪಿಯವರಿಗೆ ಪತ್ರದ ಮೂಲಕ ಬರೆದು ತಿಳಿಸುತ್ತಾರೆ. ಅವರು ಜೆಪಿಯವರಿಗೆ ಬರೆದ ಅಂದಿನ ಪತ್ರದ ಸಾಲುಗಳು ಹೀಗಿವೆ:

“I am writing this regarding something much more urgent and has been worrying me since I saw your interview to Kuldip Nayyar published in 'The Indian Express' today. Your answer that “RSS has no justification now” raises a host of questions in the minds of many people. Whatever the shortcomings of RSS, and I am sure there are some, no one could accuse them of being unpatriotic. Our criticism of RSS has only added to the arguments of opposition and given them our own handle to beat us with. The RSS has produced, stable, dedicated, disciplined network of a cadre all over the country which is prepared to lay down their lives for the cause they believe in. At least for some time to come, a side-line organisation which if and necessary can speak to the Congress in the language it understands, is helpful. When the Janata party has neither developed a cadre of its own, nor a youth wing it will be unwise to destroy what is built up with great patience and hard work over years without developing an alternative. When such a one comes into existence, it may be time to talk of merger or dissolution.”

... ಹೀಗೆ ಸಾಗುವ ಪತ್ರದಲ್ಲಿ, ಆರ್‌ಎಸ್‌ಎಸ್‌ ವಿರುದ್ಧ ಜೆಪಿ ನೀಡಿರುವ ಹೇಳಿಕೆಗಳಿಂದಾಗಿ ಉಂಟಾಗಿರುವ ಗೊಂದಲವನ್ನು ನಿವಾರಿಸುವ ಸಲುವಾಗಿ ಜೆಪಿ ಹಾಗೂ ಬಾಳಾ ಸಾಹೇಬ್ (ಆರ್‌ಎಸ್‌ಎಸ್‌ನ ಸರಸಂಘಚಾಲಕರಾಗಿದ್ದವರು, ಮಧುಕರ್ ದತ್ತಾತ್ರೇಯ ದಿಯೋರ ಎನ್ನುವುದು ಅವರ ನಿಜನಾಮಧೇಯ) ಅವರು ಜಂಟಿ ಹೇಳಿಕೆಯೊಂದನ್ನು ತುರ್ತಾಗಿ ಹೊರಡಿಸುವುದು ಈ ಸಂದರ್ಭದಲ್ಲಿ ಬಹುಮುಖ್ಯ ಎಂದು ಗೋಯಂಕ ವಿವರಿಸುತ್ತಾರೆ. ಇದೆಲ್ಲದರ ಹಾಗೂ ಇಂಥದ್ದೇ ವಿವಿಧ ರಾಜಕೀಯ ಒತ್ತಡಗಳ ಫಲವೆನ್ನುವಂತೆ ಜೆಪಿಯವರ ಹೇಳಿಕೆ ನ.3ರಂದು ಪಾಟ್ನಾದಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರ ಸಭೆಯಲ್ಲಿ ಹೊರಬೀಳುತ್ತದೆ. ಅಂದು ಬಹುಶಃ ತಾತ್ಕಾಲಿಕ ರಾಜಕೀಯ ಗಣಿತಕ್ಕೆ ಒಗ್ಗಿಸಲೆಂದು ಜೆಪಿಯವರು ಹೇಳಿದ ಮಾತುಗಳು ಮುಂದೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ನಾಯಕರು ತಮಗೆ ಜೆಪಿಯವರಿಂದ ದೊರೆತ ಶಹಭಾಶ್‌ಗಿರಿ ಎನ್ನುವ ರೀತಿ ಬಳಸತೊಡಗುತ್ತಾರೆ. ಇಂದಿಗೂ ಅದು ಮುಂದುವರಿದಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸಮಾಜವಾದಿಗಳು ಸಹ ಜೆಪಿಯವರು ಅಂದು ಐತಿಹಾಸಿಕ ಪ್ರಮಾದವೆಸೆಗಿದರು ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ವಿಪರ್ಯಾಸವೆಂದರೆ, ಪಾಟ್ನಾದ ಸಭೆಯ ನಂತರ ಜೆಪಿಯವರೇನೂ ಆರ್‌ಎಸ್‌ಎಸ್‌ ಬಗೆಗಿನ ತಮ್ಮ ವಿಮರ್ಶಾತ್ಮಕ ನೋಟದಿಂದ ಹಿಂದೆಗೆಯುವುದಿಲ್ಲ. ತಮ್ಮ ರಾಜಕೀಯ ಚಳವಳಿಯ ಫಲವಾಗಿ ಅಧಿಕಾರಕ್ಕೆ ಬಂದ ಅಂದಿನ ಜನತಾ ಪಕ್ಷದ ಸರ್ಕಾರದ ಪ್ರಧಾನಿ ಮೊರಾರ್ಜಿ ಅವರಿಗೆ ಜೆಪಿ ರಾಜಧರ್ಮದ ಅರಿವನ್ನು ಪದೇಪದೇ ಮಾಡಿಕೊಡುತ್ತಾರೆ. ತಮ್ಮ ಸೆಕ್ಯುಲರ್ ದೃಷ್ಟಿಕೋನದಲ್ಲಿ ಒಂದಿಂಚೂ ಅವರು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅವರು 1979ರಲ್ಲಿ ಮೊರಾರ್ಜಿಯವರಿಗೆ ಬರೆದ ಐತಿಹಾಸಿಕ ಮಹತ್ವದ ಪತ್ರ ಇಲ್ಲಿ ಉಲ್ಲೇಖನೀಯ:

“The demon of communism is raising again. The riots that have taken place at Aligarh and other places are quite revealing. Some persons have again raised the phantom of RSS. We can brush aside Indira Gandhi’s accusations against RSS as motivated by Politics. However it is a serious matter if any member of Janata Party, whether belonging to the RSS or not, participates in communal riots. There should be no place for him in the Janata Party. There is no need to show any mercy towards him. He should be prosecuted in a law court and convicted. Only then can Janata Party and its governments can maintain secular image.”

ಇದನ್ನೂ ಓದಿ : ಆರೆಸ್ಸೆಸ್ ಕೇಂದ್ರ ಕಚೇರಿಗೆ ಪ್ರಣವ್ ಸಂಭಾವ್ಯ ಭೇಟಿ ಕುರಿತ ಎರಡು ಬಿಸಿ ಚರ್ಚೆ

ಹೀಗೆ ಜೆಪಿಯವರು ತಮಗಿರುವ ಆತಂಕಗಳನ್ನು ವ್ಯಕ್ತಪಡಿಸುತ್ತಲೇ, ಯಾವುದೇ ಕಾರಣಕ್ಕೂ ಸರ್ಕಾರವು ಜಾತ್ಯತೀತ ನಿಲುವಿನಿಂದ ವಿಮುಖವಾಗದಂತೆ ಎಚ್ಚರಿಸಿರುತ್ತಾರೆ.

ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿರುವ ಈ ಸಂಗತಿಗಳು ಪ್ರಣಬ್‌ ಮುಖರ್ಜಿಯವರಿಗೆ ಗೊತ್ತಿಲ್ಲದೆ ಇರುವುದೇನಲ್ಲ. ಅವರು ಸಹ ಇದೆಲ್ಲಕ್ಕೂ ಸಾಕ್ಷಿಯಾಗಿದ್ದವರು. ಅಂದು ಜೆಪಿಯವರ ಮೂಲಕ ತನ್ನ ರಾಜಕೀಯ ನಡೆಗೆ ಬಲ ತಂದುಕೊಂಡಿದ್ದ ಆರ್‌ಎಸ್ಎಸ್, ಇಂದು ಕಾಂಗ್ರೆಸ್‌ನ ಮುತ್ಸದ್ದಿ ರಾಜಕಾರಣಿಯಾದ ಪ್ರಣಬ್‌ರಿಂದ ಏನನ್ನು ನಿರೀಕ್ಷಿಸುತ್ತಿರಬಹುದು? ಜೆಪಿಯವರ ನಡೆಯನ್ನು ಕಂಡಿರುವ ಪ್ರಣಬ್‌ ಯಾವ ಹೆಜ್ಜೆ ಇರಿಸಬಹುದು? ಇದು ಸದ್ಯದ ಕುತೂಹಲ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More